Sharukh Khan's Dunki Movie Review: ಡಂಕಿ ಎಂಬ ಕಳ್ಳದಾರಿ

By Suvarna News  |  First Published Apr 6, 2024, 1:02 PM IST

ಹಿಂದಿ ಚಿತ್ರರಂಗದಲ್ಲಿ ತ್ರೀ ಈಡಿಯಟ್ಸ್‌ನಂಥ ಚಿತ್ರ ನೀಡಿ, ತಮ್ಮ ಛಾಪು ಮೂಡಿಸಿರುವ ನಿರ್ದೇಶಕ ರಾಜಕುಮಾರ್ ಹಿರಾನಿ ಅವರ ಚಿತ್ರ, ಶಾರುಖ್ ಖಾನ್ ನಟನೆಯ ಡಂಕಿ ಹೇಗಿದೆ. ಇಲ್ಲಿದೆ ರಿವ್ಯೂ. 
 


- ವೀಣಾ ರಾವ್, ಕನ್ನಡ ಪ್ರಭ

ಚಿತ್ರ: ಡಂಕಿ
ನಿರ್ದೇಶನ: ರಾಜಕುಮಾರ್ ಹಿರಾನಿ
ಪಾತ್ರವರ್ಗ: ಶಾರುಖ್ ಖಾನ್, ತಾಪ್ಸ್ ಪನ್ನು, ವಿಕ್ಕಿ ಕೌಶಲ್, ಬೊಮ್ಮನ್ ಇರಾನಿ
ಒಟಿಟಿ:Netflix

Tap to resize

Latest Videos

undefined

ಡಂಕಿ ಎಂದರೆ ಪಂಜಾಬಿ ಭಾಷೆಯಲ್ಲಿ ಡಾಂಕಿ ರೂಟ್ ಎನುವುದರ ಅಪಭ್ರಂಶ. ಡಾಂಕಿ ರೂಟ್ ಎಂದರೆ ವೀಸಾ ಪಾಸ್ ಪೋರ್ಟ್ ಯಾವುದೂ ಇಲ್ಲದೆ ಕಾನೂನು ಬಾಹಿರವಾಗಿ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೋಗುವ ಪ್ರಯಾಣ ಮಾರ್ಗ.

ಎರಡನೇ ಮಹಾಯುದ್ಧ ಮುಗಿದ ಸಂದರ್ಭದಲ್ಲಿ ಇಂಗ್ಲೆಂಡಿನಲ್ಲಿ ನಾಲ್ಕನೇ ದರ್ಜೆಯ ಕೆಲಸಗಾರರ ಅಗತ್ಯಕ್ಕಾಗಿ ಹೊರ ದೇಶ ಅದರಲ್ಲೂ ಬಡದೇಶಗಳಿಂದ ಜನರನ್ನು ತಮ್ಮ ಅಗತ್ಯಕ್ಕಾಗಿ ಕರೆಸಿಕೊಳ್ಳುತ್ತಿದ್ದರು. ಇಲ್ಲಿ ಕೂಲಿಯವರಾಗಿ  ಕೆಲಸ ಮಾಡಬೇಕಿತ್ತು. ರೂಪಾಯಿಗಿಂತ ಪೌಂಡುಗಳ ಬೆಲೆ ಹೆಚ್ಚು ಇರುವ ಕಾರಣ ಭಾರತದಿಂದಲೂ ಜನ ಅಲ್ಲಿ ದುಡಿಯಲು ಹೋಗುತ್ತಿದ್ದರು. ಅದಕ್ಕೆ ಆಗ ವಿಸಾ ಪಾಸ್ ಪೋರ್ಟ್ ಏನೂ ಬೇಕಾಗಿರಲಿಲ್ಲ. ಕಾಲಾಂತರದಲ್ಲಿ ಈ ಪ್ರಯಾಣಕ್ಕೆ ಕೆಲವು ನಿಯಮಗಳು ಜಾರಿಯಾದವು. ವೀಸಾ ಪಾಸ್ ಪೋರ್ಟ್ ಕಡ್ಡಾಯವಾಯಿತು. ಬರೀ ನಾಲ್ಕನೇ ದರ್ಜೆಯ ಕೂಲಿ ಕೆಲಸಕ್ಕಾಗಿ ಹೋಗುವ ಅವಿದ್ಯಾವಂತ ಜನರಿಗೆ ವೀಸಾ ಸಿಗುವುದು ಕಷ್ಟವಾಗಿತ್ತು. ಇಂಗ್ಲಿಷ್ ಕಲಿಯುವುದು ಕಡ್ಡಾಯವಾಗಿತ್ತು. ಹೀಗೆ ಯಾವ ರಹದಾರಿಯೂ ಇಲ್ಲದೆ ಪೌಂಡುಗಳಲ್ಲಿ ದುಡಿಯಬೇಕೆಂಬ ಆಸೆ ತಮ್ಮ ಅಗತ್ಯಗಳಿಗಾಗಿ ಜನ ಡಾಂಕಿ ಮಾರ್ಗ ಅಂದರೆ ಕಳ್ಳದಾರಿಯಲ್ಲಿ ಇಂಗ್ಲೆಂಡಿಗೆ ಹೋಗಲು ಪ್ರಾರಂಭಿಸಿದರು. ಡಂಕಿ ಮಾರ್ಗವೆಂದರೆ ಯಾವುದಾದರೂ ಪ್ರಯಾಣ ಬಸ್ಸು, ಟ್ರಕ್ಕು, ಹಡಗು, ಮೋಟಾರ್ ಬೋಟ್, ಕಾಲ್ನಡಿಗೆ ಹೀಗೆ ಯಾವುದು ಸಿಕ್ಕಿದರೆ ಅದರಲ್ಲಿ ಹೋಗುವುದು. ಚಿತ್ರದಲ್ಲಿ ಈ ಕತೆ 1995 ರಿಂದ ಪ್ರಾರಂಭವಾಗಿ 2020ಕ್ಕೆ ಮುಗಿಯುತ್ತದೆ.

ಮನು ರಂಧಾವ (ತಾಪ್ಸಿ ಪನ್ನು) ಬುಗ್ಗು, ಬಾಲಿ, ಗುಲಾಬ್, ಚಮೇಲಿ, ಸುಖಿ (ವಿಕ್ಕಿ ಕೌಶಲ್) ಇವರೆಲ್ಲ ಪಂಜಾಬಿನ ಲಾಲ್ಟು ಎಂಬ ಹಳ್ಳಿಯವರು. ತಮ್ಮ ಬಡತನದ ಬದುಕಿನಿಂದ ಬೇಸತ್ತು,ಇಂಗ್ಲೆಂಡಿಗೆ ಹೋಗಿ ಕೈತುಂಬಾ ಸಂಪಾದಿಸಿ ತಮ್ಮ ಹುಟ್ಟೂರಿಗೆ ವಾಪಸಾಗಿ ಒಳ್ಳೆಯ ಜೀವನ ನಡೆಸಬೇಕೆಂದು ಆಶಿಸಿರುತ್ತಾರೆ. ಇಂಗ್ಲೆಂಡಿಗೆ ಹೋಗಲು ವಿದ್ಯಾವಂತರಾಗಿ ವೀಸಾ ಪಾಸ್ ಪೋರ್ಟ್ (Visa Passport) ಇರಬೇಕು ಅಥವಾ ಅಲ್ಲಿನ ಯಾರನ್ನಾದರೂ ಮದುವೆಯಾಗಬೇಕು ಅಥವಾ ಆಸ್ತಿಪಾಸ್ತಿ ಬ್ಯಾಂಕ್ ಬ್ಯಾಲೆನ್ಸ್ ಇರಬೇಕು ಅಥವಾ ಡಂಕಿ ಮಾರ್ಗದಲ್ಲಿ ಕಳ್ಳತನವಾಗಿ ಹೋಗಬೇಕು. ಇವರೆಲ್ಲ ಅವಿದ್ಯಾವಂತರು. ಇವರಿಗೆ ಡಂಕಿ ಮಾರ್ಗ ಬಿಟ್ಟು ಬೇರೆ ದಾರಿಯಿಲ್ಲ. ಆದರೂ ಇಂಗ್ಲಿಷ್ ಕಲಿಯಲು ಬಹಳವಾಗಿ ಪ್ರಯತ್ನಿಸುತ್ತಾರೆ. ಅವರು ಇಂಗ್ಲಿಷ್ ಕಲಿಯುವ ಪಡಿಪಾಟಲು ನಗೆಯುಕ್ಕಿಸುತ್ತದೆ. ಅವೆಲ್ಲ ತೆರೆಯ ಮೇಲೆ ನೋಡಿಯೇ ಆಸ್ವಾದಿಸಬೇಕು. ಇವರಿಗೆಲ್ಲ ಲೀಡರ್ ಹಾರ್ಡಿ ಸಿಂಗ್ ಧಿಲ್ಲೋನ್ (ಶಾರುಖ್ ಖಾನ್). ಹಾರ್ಡಿ ರೈತ ಮನೆತನದವನಾದರೂ ಅವನು ಸೈನಿಕನಾಗಿ ಸೇವೆ ಸಲ್ಲಿಸಿರುತ್ತಾನೆ. ಹಾಗಾಗಿ ಅವನಿಗೆ ವೀಸಾ ಜಂಜಾಟಿವಿಲ್ಲ. ಸುಲಭವಾಗಿ ಸಿಗುತ್ತದೆ. ಆದರೆ ಬಾಕಿಯವರಿಗೆ ಅಷ್ಟು ಸುಲಭವಲ್ಲ. ಆದರೆ ಎಲ್ಲರಿಗೂ ಏಕಮೇವಾದ್ವಿತೀಯ ಆಸೆ ಎಂದರೆ ಇಂಗ್ಲೆಂಡಿಗೆ ಹೋಗಬೇಕು, ಪೌಂಡುಗಳಲ್ಲಿ ಹಣ ಸಂಪಾದಿಸಬೇಕು ಅದಕ್ಕಾಗಿ ಅವರು ಎಂಥಹುದೇ ರಿಸ್ಕ್ ತೆಗೆದುಕೊಳ್ಳಲು ತಯಾರಾಗಿರುತ್ತಾರೆ.

Sukhee Movie Reveiw: ಆಕರ್ಷಕ ಹಾಗೂ ತುಂಟತನದ ಸುಖೀ ನಿಮ್ಮನ್ನು ಆವರಿಸುತ್ತಾಳೆ!

ಇವರಲ್ಲಿ ಸುಖಿ ಪ್ರೇಯಸಿ. ಈಗಾಗಲೇ ಒಬ್ಬ ಇಂಗ್ಲೆಂಡಿನವನನ್ನು ಮದುವೆಯಾಗಿ ಲಂಡನ್‌ಗೆ ಹೋಗಿರುತ್ತಾಳೆ. ಅಲ್ಲಿ ಆ ಪತಿ ಅವಳನ್ನು ಹೊಡೆದು ಬಡಿದು ಹಿಂಸಿಸುತ್ತಿರುತ್ತಾನೆ. ಅದಕ್ಕಾಗಿ ಸುಖಿಗೆ ಲಂಡನ್‌ಗೆ ಹೋಗಿ ಅವಳನ್ನು ಭಾರತಕ್ಕೆ ಮರಳಿ ಕರೆ ತರಬೇಕಾದ ಜರೂರು ಇರುತ್ತದೆ. ಆದರೆ ಇಂಗ್ಲಿಷ್ ಕಲಿಯುವ ಪರೀಕ್ಷೆಯಲ್ಲಿ ಇವರೆಲ್ಲರೂ ಫೇಲಾಗಿ ಬಿಡುತ್ತಾರೆ. ಬಾಲಿಯೊಬ್ಬ ಹೇಗೋ ಪಾಸಾಗಿ ಲಂಡನ್‌ಗೆ ಹೋಗುತ್ತಾನೆ. ಅಲ್ಲಿ ಸುಖಿಯ ಪ್ರೇಯಸಿ ತನ್ನ ಗಂಡನ ಕಾಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಸುಖಿಗೆ ಕರೆಮಾಡಿ ಹೇಳುತ್ತಾನೆ. ಇದರಿಂದ ಆಘಾತವಾಗುವ ಸುಖಿ ದುಃಖ ತಾಳಲಾರದೆ ತಾನೂ ಅತ್ಮಹತ್ಯೆ ಮಾಡಿಕೊಂಡು ಬಿಡುತ್ತಾನೆ. ಸುಖಿ ಪಾತ್ರಧಾರಿ ವಿಕ್ಕಿ ಕೌಶಲ್ ಪುಟ್ಟ ಪಾತ್ರವಾದರೂ ಪರಿಣಾಮಕಾರಿಯಾದ ತನ್ನ ಅಭಿನಯದಿಂದ ನೋಡುಗರ ಕಣ್ಣಲ್ಲಿ ನೀರು ಬರಿಸಿ ಬಿಡುತ್ತಾನೆ.

ಸುಖಿ ಸಾವು, ಇಂಗ್ಲೆಂಡ್ ಪಯಣಕ್ಕೆ ಗಟ್ಟಿ ನಿರ್ಧಾರ:
ಸುಖಿಯ ಸಾವಿನಿಂದ ಕಂಗಾಲಾಗುವ ಈ ಗೆಳೆಯರ ಬಳಗದ ಇಂಗ್ಲೆಂಡ್ ಪ್ರಯಾಣದ ನಿರ್ಧಾರ ಇನ್ನೂ ಗಟ್ಟಿಯಾಗುತ್ತದೆ. ಬೊಮ್ಮನ್ ಇರಾನಿಯ ನೆರವಿನಿಂದ ಹಾರ್ಡಿಯ ನಾಯಕತ್ವದಲ್ಲಿ ಆರು ಜನ ಇಂಗ್ಲೆಂಡಿಗೆ ಡಂಕಿ ಮಾರ್ಗದಲ್ಲಿ ಪ್ರಯಾಣ ಮಾಡಲು ತಯಾರಾಗುತ್ತಾರೆ. ಪಂಜಾಬಿನ ಗಡಿಯಲ್ಲಿರುವ ಪಾಕಿಸ್ತಾನ ಹಾದು, ಅಫಘನಿಸ್ತಾನ ಮೂಲಕ ಇರಾನಿಗೆ ಬಂದು, ಇರಾನಿಂದ ರೈಲಿನಲ್ಲಿ ಟರ್ಕಿಗೆ ಬಂದು ಅಲ್ಲಿಂದ ಹಡಗಿನಲ್ಲಿ ಲಂಡನ್ ತಲುಪಬೇಕು. ಈ ಮಾರ್ಗದಲ್ಲಿ ಯಾವ ಪ್ರಯಾಣವಾದರೂ ಮಾಡಲೇ ಬೇಕು. ಹಿಂಜರೆಯುವ ಹಾಗಿಲ್ಲ. ನಡಿಗೆ, ಸರಕು ಸಾಮಾನುಗಳನ್ನು ಸಾಗಿಸುವ ಟ್ಯಾಂಕರ್ಸ್, ಮೋಟರ್ ಬೋಟ್, ಸಮುದ್ರದಲ್ಲಿ ಈಜುತ್ತಾ, ಟ್ರೈನ್  ಮೇಲೆ ಕುಳಿತು ಹೀಗೆ ಪ್ರಾಣವನ್ನು ಒತ್ತೆ ಇಟ್ಟು ಜೀವ ಭಯದಲ್ಲಿ ಪ್ರಯಾಣಿಸಬೇಕು. ಹೀಗೆ ಪ್ರಯಾಣ ಮಾಡುವಾಗ ಪ್ರಕೃತಿ ವಿಕೋಪಕ್ಕೆ ಸಿಕ್ಕಿ ಸಾಯಬಹುದು ಅಥವಾ ಯಾವುದಾದರೂ ದೇಶದ ಗಡಿ ಕಾಯುವ ಯೋಧರಿ ಕೈಗೆ ಸಿಕ್ಕೂ ಸಾಯಬಹುದು, ಅಪಘಾತ ಆಗಬಹುದು ಎಲ್ಲದಕ್ಕೂ ರೆಡಿ ಇರಬೇಕು. ಎದೆ ಗಟ್ಟಿ ಇರಬೇಕು. ದೇಹಬಲ, ಮಾನಸಿಕ ಬಲ ಎರಡೂ ಇರಬೇಕು.

ಈ ಪ್ರಯಾಣದಲ್ಲಿ ಮೂರು ಜನ ಆಫಘಾನಿಸ್ತಾನದಲ್ಲಿ ಯೋಧರ ಗುಂಡಿಗೆ ಸಿಕ್ಕು ಮರಣಿಸುತ್ತಾರೆ. ಮಿಕ್ಕವರು ಹಾರ್ಡಿ, ಮನ್ನು ಮತ್ತು ಬುಗ್ಗು ಬದುಕುಳಿದು ತಪ್ಪಿಸಿಕೊಂಡು ಓಡುತ್ತಾರೆ. ಈ ಪ್ರಯಾಣವೇ ಅತ್ಯಂತ ರೋಚಕ ಅನುಭವ ಕೊಡುತ್ತದೆ. ಕುರ್ಚಿ ತುದಿಯಲ್ಲಿ ಕುಳಿತು ನೋಡುವಂತೆ ಮಾಡುತ್ತದೆ. ಅಂತೂ ಇಂತೂ ಲಂಡನ್ ಸೇರುವ ಈ ಮೂವರೂ ಅಲ್ಲಿಯೂ ಸಿಕ್ಕಿ ಬೀಳುತ್ತಾರೆ. ವೀಸಾ ಇಲ್ಲದೆ ಬಂದವರೆಂದು ಅಲ್ಲಿನ ಪೊಲೀಸರು ಇವರನ್ನು ಅರೆಸ್ಟ್ ಮಾಡುತ್ತಾರೆ. ತಪ್ಪಿಸಿಕೊಳ್ಳಬೇಕಾದರೆ ಒಂದೇ ಮಾರ್ಗ 'ನನ್ನ ದೇಶದಲ್ಲಿ ನನಗೆ ಪ್ರಾಣಭಯ ಇದೆ ನನ್ನ ದೇಶಕ್ಕೆ ನಾನು ಹೋಗಲಾರೆ,' ಎಂದು ಅವರ ಮುಂದೆ ಮಂಡಿ Tರಬೇಕು. ಹಾರ್ಡಿ ಭಾರತೀಯ ಸೈನಿಕ ಅವನು ಇದಕ್ಕೆ ಸುತರಾಂ ಒಪ್ಪುವುದಿಲ್ಲ. ಮನ್ನು ಹಾಗೂ ಬುಗ್ಗು ಇಂಗ್ಲಿಷ್ ಅಧಿಕಾರಿಗಳ ಮಾತಿಗೆ ಒಪ್ಪಿ, ಅಲ್ಲೇ ಉಳಿದು ಬಿಡುತ್ತಾರೆ. ಹಾರ್ಡಿ ಭಾರತಕ್ಕೆ ವಾಪಸಾಗುತ್ತಾನೆ.

Merry Christmas Movie Review: ಸುಂದರ ಮೊಗದ ಹಿಂದಿನ ಕ್ರೂರತೆ ಇಷ್ಟಿರುತ್ತಾ?

25 ವರ್ಷದ ನಂತರ ಮನ್ನು, ಬಾಲಿ ಮತ್ತು ಬುಗ್ಗು ಮತ್ತೆ ತಮ್ಮ ತಾಯ್ನಾಡಿಗೆ ಮರಳಲು ಆಸೆ ಪಡುತ್ತಾರೆ. ಟ್ಯೂಮರ್‌ನಿಂದ ನರಳುತ್ತಿರುವ ಮನ್ನು ತಾನು ತನ್ನ ತಾಯಿ ನೆಲದಲ್ಲೇ ಕೊನೆಯುಸಿರೆಳೆಯಬೇಕೆಂದು ಹಂಬಲಿಸುತ್ತಾಳೆ. ಭಾರತವನ್ನು ಹೀಗಳೆದು ಲಂಡನ್ ಪ್ರಜೆಗಳಾಗಿ ಪೌರತ್ವ ಗಿಟ್ಟಿಸಿಕೊಂಡ ಅವರು ಭಾರತಕ್ಕೆ ಹೇಗೆ ಬರುತ್ತಾರೆ? ಯಾರು ಸಹಾಯ ಮಾಡುತ್ತಾರೆ? ಭಾರತದಲ್ಲಿ ಅವರ ಆಸ್ತಿತ್ವವೇ ಇರುವುದಿಲ್ಲ, ಹಾಗಾಗಿ ಅವರು ಭಾರತಕ್ಕೆ ಮರಳಲು ಯಾವ ಉಪಾಯ ಮಾಡುತ್ತಾರೆ? ಮತ್ತು ಎಂಥ ರಿಸ್ಕ್ ತೆಗೆದುಕೊಳ್ಳುತ್ತಾರೆ? ಇವನ್ನೆಲ್ಲ ತೆರೆಯ ಮೇಲೇ ನೋಡಿ ರೋಮಾಂಚನ ಪಡಬೇಕು.

ಇಲ್ಲಿ ಮನ್ನುವನ್ನು ಪ್ರೀತಿಸುವ ಹಾರ್ಡಿ ಮನ್ನುವನ್ನು ಲಂಡನ್‌ನಲ್ಲಿಯೇ ಬಿಟ್ಟು ಬರುವಾಗ ಪಡುವ ಯಾತನೆ, ಕಣ್ಣೀರು ನಮ್ಮನ್ನೂ ವಿಚಲಿತಗೊಳಿಸುತ್ತದೆ. ಹಾರ್ಡಿಯಾಗಿ ಶಾರುಖ್‌ನದ್ದು ಅದ್ಭುತ ನಟನೆ. ಚಿತ್ರವೆಲ್ಲ ಅವನೇ ಆವರಿಸಿಕೊಂಡಿದ್ದಾನೆ. ಮನ್ನುವಾಗಿ ತಾಪ್ಸಿಯೂ ಶಾರುಖ್ ಸಮಕ್ಕೆ ಅಭಿನಯಿಸಿದ್ದಾಳೆ. ಮನ್ನು ಸತ್ತಾಗ ಹಾರ್ಡಿಯ ದುಃಖವನ್ನು ಶಾರುಖ್ ತನ್ನ ಮುಖದ ಕವಳಿಕೆಗಳಲ್ಲಿ ಅಮೋಘವಾಗಿ ಅಭಿನಯಿಸಿದ್ದಾನೆ. ಉಳಿದ ಎಲ್ಲ ಪಾತ್ರಗಳು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಬೊಮ್ಮನ್ ಇರಾನಿಯ ಪಾತ್ರ ನೆನಪಲ್ಲಿ ಉಳಿಯುತ್ತದೆ. ರಾಜ್ ಕುಮಾರ್ ಹಿರಾನಿಯ ಬಿಗಿ ನಿರ್ದೇಶನ ಗಟ್ಟಿ ಕಥೆ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಸಫಲವಾಗಿದೆ. ತ್ರೀ ಈಡಿಯಟ್ಸ್ ನೋಡಿವರಿಗೆ ರಾಜಕುಮಾರ್ ಹಿರಾನಿಯ ದೈತ್ಯ ಪ್ರತಿಭೆಯ ಅರಿವಿರುತ್ತದೆ.

click me!