
ಕೇಶವ
ಗಯ್ಯಾಲಿ ಅಮ್ಮ, ಪ್ರೀತಿನೇ ಮುಖ್ಯ ಅಂದುಕೊಂಡಿರೋ ನಾಯಕಿ, ಪ್ರೀತಿ ಮಾಡೋದು ದೊಡ್ಡ ಸಾಧನೆ ಎಂದುಕೊಂಡ ನಾಯಕನ ಜೀವನದಲ್ಲಿ ಏನಾಗುತ್ತದೆ ಎನ್ನುವುದೇ ‘ಓಂ ಶಿವಂ’ ಚಿತ್ರದ ಕತೆ. ಇದಿಷ್ಟೇ ಇದ್ದರೆ ಸಾಲದು ಎನ್ನುವಂತೆ ಒಂದಿಷ್ಟು ಕೊಲೆಗಳನ್ನು ಮಾಡಿಸುತ್ತಾರೆ. ಅದೂ ಸಾಲದು ಅಂತ ಹನಿ ಟ್ರ್ಯಾಪು, ಡ್ರಗ್ಸು ತಂದಿಡುತ್ತಾರೆ ನಿರ್ದೇಶಕ ಅಲ್ವಿನ್. ಕೊಲೆಗಳು ಪ್ರೇಮ ಕತೆಗೂ ಏನು ಸಂಬಂಧ ಅನ್ನೋ ಲಾಜಿಕ್ ಅನ್ನು ನಿರ್ದೇಶಕರಿಗೇ ಬಿಟ್ಟುಬಿಡಿ.
ಪರಿಪೂರ್ಣತೆ ಅಥವಾ ಪಕ್ವತೆ ಕತೆಯನ್ನೋ, ಚಿತ್ರಕಥೆಯ ನಿರೀಕ್ಷೆಯ ಆಚೆಗೆ ಹೊಸಬರ ಸಿನಿಮಾ ಅಂತ ನೋಡಿದರೆ ಚಿತ್ರತಂಡವೇ ಹೇಳಿಕೊಂಡಿರುವಂತೆ ‘ರೊಮ್ಯಾಂಟಿಕ್ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ’ ನೋಡಿದ ಅನುಭವಕ್ಕೆ ನೀವು ಖಂಡಿತ ಪಾತ್ರರಾಗುತ್ತೀರಿ! ನಾಯಕನಾಗಿ ಭಾರ್ಗವ ಕೃಷ್ಣ, ನಾಯಕಿಯಾಗಿ ವಿರಾನಿಕ ಶೆಟ್ಟಿ ಹಾಗೂ ಮುಖ್ಯ ಪಾತ್ರಗಳಲ್ಲಿ ರವಿ ಕಾಳೆ, ಕಾಕ್ರೋಜ್ ಸುಧೀ, ಯಶ್ ಶೆಟ್ಟಿ, ಬಲ ರಾಜ್ವಾಡಿ, ಲಕ್ಷ್ಮೀ ಸಿದ್ದಯ್ಯ, ಅಪೂರ್ವ, ಉಗ್ರಂ ಹೀಗೆ ಕಲಾವಿದರ ದೊಡ್ಡ ದಂಡೇ ಚಿತ್ರದಲ್ಲಿ ನಿರ್ದೇಶಕರ ಅಣತಿ ಮೇರೆಗೆ ದಂಡಯಾತ್ರೆ ಮಾಡಿದ್ದಾರೆ.
ಚಿತ್ರ : ಓಂ ಶಿವಂ
ತಾರಾಗಣ: ಭಾರ್ಗವ ಕೃಷ್ಣ, ವಿರಾನಿಕ ಶೆಟ್ಟಿ, ರವಿಕಾಳೆ, ಕಾಕ್ರೋಜ್ ಸುಧೀ, ಯಶ್ ಶೆಟ್ಟಿ, ಬಲರಾಜ್ವಾಡಿ, ಲಕ್ಷ್ಮೀ ಸಿದ್ದಯ್ಯ, ಅಪೂರ್ವ, ಉಗ್ರಂ ರವಿ
ನಿರ್ದೇಶನ: ಅಲ್ವಿನ್
ಮಗಳ ಪ್ರೀತಿಗೆ ಅಡ್ಡಿ ಪಡಿಸುವ ಅಮ್ಮನಿಗೆ ಕಾರಣ ಇದೆ. ಆದರೆ, ಪ್ರೀತಿಸಿದವನನ್ನೇ ಮದುವೆಯಾಗುತ್ತೇನೆ ಎನ್ನುವ ಮಗಳಿಗೆ ಆ ಕಾರಣವೇ ಅಡ್ಡಿ ಆಗಿ ಎಂಥ ಅನಾಹುತಗಳಿಗೆ ದಾರಿ ಮಾಡಿಕೊಡುತ್ತದೆ ಎಂಬುದು ಚಿತ್ರದ ಒಂದು ಸಾಲಿನ ಕತೆ. ಉಳಿದ ವಿವರಗಳಿಗೆ ನೀವು ಸಿನಿಮಾ ನೋಡಿ. ಮತ್ತು ನಟನೆ, ಚಿತ್ರಕತೆ, ತಾಂತ್ರಿಕತೆ, ಸಂಭಾಷೆಗಳ ಪರಿಪಕ್ವತೆ ಇತ್ಯಾದಿ ಸಮಗ್ರ ಮಾಹಿತಿಗಾಗಿ ಸಿನಿಮಾ ನೋಡುವುದೇ ಲೇಸು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.