ಉತ್ತರ ಪತ್ರಿಕೆ ಬದಲಾಗಿದೆ ಎಂದು ಬರುವ ವಿದ್ಯಾರ್ಥಿನಿಯ ಪ್ರಕರಣ ಕೈಗೆತ್ತಿಕೊಂಡ ವಕೀಲೆಯೊಬ್ಬಳಿಗೆ ಎದುರಾಗುವ ಚಾಲೆಂಜಸ್ ಹಾಗೂ ಅದನ್ನು ಎದುರಿಸುವ ದಿಟ್ಟೆಯ ಕಥೆ ಪಾಟ್ನಾ ಶುಕ್ಲಾ.
- ವೀಣಾ ರಾವ್, ಕನ್ನಡಪ್ರಭ
ಚಿತ್ರ: ಪಾಟ್ನಾ ಶುಕ್ಲಾ
ಒಟಿಟಿ: ಡಿಸ್ನಿ ಹಾಟ್ ಸ್ಟಾರ್
ಮುಖ್ಯ ಪಾತ್ರದಲ್ಲಿ ರವೀನಾ ಟಂಡನ್, ಮಾನವ್ ವಿಜ್, ಜತಿನ್ ಗೋಸ್ವಾಮಿ ಹಾಗೂ ಸತಿಶ್ ಕೌಶಿಕ್
ನಿರ್ದೇಶನ: ವಿವೇಕ್ ಬುಡಾಕೋಟಿ
undefined
ತನ್ವಿ ಶುಕ್ಲಾ ಪಾಟ್ನಾದಲ್ಲಿ ನೆಲೆಸಿರುವ ಒಬ್ಬ ವಕೀಲೆ ಮತ್ತು ಗೃಹಿಣಿ. ಗಂಡ ಸರ್ಕಾರಿ ಇಲಾಖೆಯಲ್ಲಿ ಸೀನಿಯರ್ ಇಂಜಿನಿಯರ್. ಸಾಕಷ್ಟು ಅನುಕೂಲವಂತರು, ಇರಲು ಮನೆ, ಅರಿತು ನಡೆಯುವ ಗಂಡ, ಮುದ್ದಾದ ಏಳೆಂಟು ವರ್ಷದ ಮಗ, ಉಟ್ಟುತೊಟ್ಟು ಸಂತೋಷವಾಗಿರುವ ಸಂಸಾರ. ತನ್ವಿಗೆ ಚಿಕ್ಕಂದಿನಿಂದಲೂ ವಕೀಲಳಾಗಬೇಕೆನ್ನುವ ಹಪಾಹಪಿ. ಅದೇ ಅವಳ ಗುರಿ ಕನಸು. ಅದಕ್ಕೆ ತಕ್ಕಂತೆ ವಕೀಲಳಾದರೂ ದೊಡ್ಡ ಕೇಸುಗಳು ಯಾವುದೂ ಬಾರದೆ ಸಣ್ಣಪುಟ್ಟ ಕೇಸುಗಳಿಗೆ ವಕಾಲತ್ತು ಹಾಕುತ್ತಾ ಅದರೊಂದಿಗೆ ಗುದ್ದಾಡುತ್ತಾ ಸಾಗುತ್ತಿರುತ್ತಾಳೆ. ಕೇಸುಗಳಿಲ್ಲದಿದ್ದಲ್ಲಿ ಜನರಿಗೆ ಅಫಡೆವಿಟ್ ಮಾಡಿಕೊಡುವ ಕಾಯಕ. ಚಿಕ್ಕಪುಟ್ಟ ಕೇಸುಗಳೆ ಸಿಕ್ಕರೂ ಅದನ್ನು ಆಪ್ಯಾಯಮಾನವಾಗಿ ಮತ್ತು ಪ್ರಾಮಾಣಿಕವಾಗಿ ನಿರ್ವಹಿಸುತ್ತಿರುತ್ತಾಳೆ. ಮನೆಯಲ್ಲಿ ಗಂಡಮಗನ ಬೇಕು ಬೇಡಗಳನ್ನು ತಾಳ್ಮೆಯಿಂದ ಗಮನಿಸಿ ಗೃಹಿಣಿಯಾಗಿಯೂ ಸೈ ಅನಿಸಿಕೊಂಡಿರುತ್ತಾಳೆ. ಕೋರ್ಟಿನಲ್ಲಿಯೂ ತನ್ನ ಲವಲವಿಕೆಯಿಂದ ಮಾತುಗಾರಿಕೆಯಿಂದ ಎಲ್ಲರ ಅದರಲ್ಲೂ ಜಡ್ಜ್ ಗಮನವನ್ನೂ ಸೆಳೆದಿರುತ್ತಾಳೆ.
ಒಮ್ಮೆ ಒಂದು ತೀರಾ ಸಾಧಾರಣ ಅನಿಸುವ ಪ್ರಕರಣ ಇವಳ ಬಳಿ ಬರುತ್ತದೆ. ಒಬ್ಬ ವಿದ್ಯಾರ್ಥಿನಿ ತನ್ನ ಡಿಗ್ರಿ ಅಂಕಪತ್ರ ಅದಲಿ ಬದಲಿಯಾಗಿದೆ. ನಾನು ನಿರೀಕ್ಷೆ ಮಾಡಿದ ಅಂಕಗಳು ಬಂದಿಲ್ಲ, ಪುನಃ ಮೌಲ್ಯಮಾಪನಕ್ಕೆ ಹಾಕಿದರೂ ಪ್ರಯೋಜನ ವಾಗಲಿಲ್ಲ ನನಗೆ ನನ್ನ ಉತ್ತರಪತ್ರಿಕೆಗಳನ್ನು ಕೊಡಿಸಿ, ಅದರಲ್ಲೇ ಏನೋ ಯಡವಟ್ಟಾಗಿದೆ ಎಂದು ಹೇಳುತ್ತಾಳೆ. ಮೇಲ್ನೋಟಕ್ಕೆ ಇದೊಂದು ಸಾಧಾರಣ ಪ್ರಕರಣ. ಇದರ ಆಳ ವ್ಯಾಪ್ತಿಯ ಅರಿವಿಲ್ಲದ ತನ್ವಿ ತಾನೇ ಈ ಹುಡುಗಿಗೆ ನ್ಯಾಯ ಕೊಡಿಸಲು ನಿರ್ಧರಿಸುತ್ತಾಳೆ. ವಿಶ್ವವಿದ್ಯಾಲಯಕ್ಕೆ ನೊಟೀಸ್ ಕೊಡುತ್ತಾಳೆ. ವಿಶ್ವವಿದ್ಯಾಲಯದ ಪರವಾಗಿ ಅತ್ಯಂತೆ ಪ್ರತಿಷ್ಠಿತ ವಕೀಲ ಈ ಕೇಸಿನ ಪರವಾಗಿ ಹೋರಾಡಲು ಬಂದಾಗ ಸಹಜವಾಗಿ ಆಶ್ಚರ್ಯವಾಗುತ್ತದೆ. ಸವಾಲುಗಳು ಪಾಟಿ ಸವಾಲುಗಳು ನಡೆಯುತ್ತವೆ. ತನ್ವಿಯ ಹೋರಾಟದಲ್ಲಿ ಯಾವುದೇ ಶಕ್ತಿ ಇಲ್ಲದೆ ಕೇಸ್ ದುರ್ಬಲವಾದಂತೆ ಅನಿಸುತ್ತದೆ. ಆದರೆ ವಿಶ್ವವಿದ್ಯಾಲಯವರು ಮಾತ್ರ ಆ ವಿಧ್ಯಾರ್ಥಿನಿಗೆ ಅವಳ ಉತ್ತರ ಪತ್ರಿಕೆಗಳನ್ನು ತೋರಿಸಲು ತಯಾರಿಲ್ಲ. ವಿಧ್ಯಾರ್ಥಿನಿಯದೇ ತಪ್ಪು ಅವಳೇ ಸುಳ್ಳು ಹೇಳುತ್ತಿದ್ದಾಳೆ ಎಂಬಂತೆ ವಿವಿ ಪರ ಲಾಯರ್ ವಾದಿಸುತ್ತಾನೆ. ಆದರೆ ವಿದ್ಯಾರ್ಥಿನಿಯದು ಒಂದೇ ಹಠ ತನ್ನ ಉತ್ತರಪತ್ರಿಕೆ ಅದಲಿಬದಲಿಯಾಗಿದೆ, ನನಗೆ ಅಂಕಗಳು ಇಷ್ಟು ಕಡಿಮೆ ಬರಲು ಸಾಧ್ಯವೇ ಇಲ್ಲ. ತನ್ವಿಯ ತಲೆ ಕೆಡುತ್ತದೆ. ಆದರೆ ಆ ವಿದ್ಯಾರ್ಥಿನಿಯನ್ನು ನೋಡಿದರೆ ಸುಳ್ಳು ಹೇಳುತ್ತಿದ್ದಾಳೆ ಎನಿಸುವುದಿಲ್ಲ.
Appa I Love You Review: ಅಪ್ಪನ ಕಣ್ಣೀರಲ್ಲಿ ಮಗನ ಜೀವನ ಜೋಕಾಲಿ
ಉತ್ತರ ಪತ್ರಿಕೆ ಮಹಾಕಾಂಡ:
ವಿಧ್ಯಾರ್ಥಿನಿಯ ಬಗ್ಗೆ ನಿಜವಾದ ಕಾಳಜಿಯಿಂದ ತನ್ವಿ ಪ್ರಾಮಾಣಿಕವಾಗಿ ಹೋರಾಡುತ್ತಾಳೆ. ಈ ಉತ್ತರಪತ್ರಿಕೆಗಳ ಮಹಾಕಾಂಡ ತಾನು ತಿಳಿದಷ್ಟು ಸುಲಭವಲ್ಲ ಎಂದು ಅರ್ಥವಾಗುತ್ತಾ ಹೋಗುತ್ತದೆ. ಇದರ ಹಿಂದ ಸಮಾಜದ ದೊಡ್ಡದೊಡ್ಡ ಶಕ್ತಿಗಳು ಕೆಲಸ ಮಾಡುತ್ತಿದೆ ಎಂಬ ಅನುಮಾನ ಮೂಡುತ್ತದೆ. ಒಂದು ಹಂತದಲ್ಲಿ ನ್ಯಾಯಾಧೀಶರು ಕೂಡ ತನ್ವಿಯ ಈ ಪ್ರಕರಣಕ್ಕೆ ಮುಕ್ತಾಯ ಹಾಡಲು ಹೇಳುತ್ತಾರೆ. ಸರಿಯಾದ ಸಾಕ್ಷ್ಯ ಒದಗಿಸದಿದ್ದರೆ ತಾನು ಈ ಕೇಸನ್ನು ಮುಗಿಸಬೇಕಾಗುತ್ತದೆಂದೂ ಹೇಳಿ ಬಿಡುತ್ತಾರೆ. ನ್ಯಾಯಾಧೀಶರಿಗೆ ತನ್ವಿ ಬಗ್ಗೆ ಒಂದು ನಿಜವಾದ ಕಾಳಜಿ ಇರುತ್ತದೆ. ಅವಳು ಸ್ವಾರ್ಥಕ್ಕಾಗಿ ಏನನ್ನೂ ಮಾಡುವುದಿಲ್ಲ. ಅವಳಿಗೆ ತನ್ನ ವೃತ್ತಿ ಬಗ್ಗೆ ಪ್ರೀತಿ ಕಾಳಜಿ ಇದೆ ಎಂದು ಅವರಿಗೆ ಗೊತ್ತಿರುತ್ತದೆ. ಹಾಗಾಗಿ ಅನೇಕ ಬಾರಿ ಅವರು ಅವಳಿಗೆ ಅವಕಾಶ ಕೊಡುತ್ತಾರೆ.
ಈ ಪ್ರಕರಣ ಆ ನಗರದ ಪ್ರತಿಷ್ಠಿತ ರಾಜಕೀಯ ನಾಯಕನವರೆಗೂ ಹೋಗುತ್ತದೆ. ತನ್ವಿ ಏನು ಮಾಡಿದರೂ ಸೋಲೊಪ್ಪಲು ಸಿದ್ಧಳಿಲ್ಲ. ಆ ರಾಜಕೀಯ ನಾಯಕನನ್ನೂ ಭೇಟಿ ಮಾಡಿ, ಈ ಪ್ರಕರಣದಲ್ಲಿ ತನಗೆ ಸಹಾಯ ಮಾಡೆಂದು ಕೇಳಿಕೊಳ್ಳುತ್ತಾಳೆ. ಆದರೆ ಆ ನಾಯಕನಿಂದ ಒಂದು ಆಘಾತಕಾರಿ ಸುದ್ದಿ ತಿಳಿಯುತ್ತದೆ. ಅವನೇ ಆ ವಿದ್ಯಾರ್ಥಿನಿಯ ಉತ್ತರಪತ್ರಿಕೆಯನ್ನು ಬದಲಿಸಿರುತ್ತಾನೆ. ಆದರೆ ತಾನು ಆ ಹುಡುಗಿಗೆ ಆರ್ಥಿಕವಾಗಿ ಸಹಾಯ ಮಾಡುತ್ತೇನೆ ನನ್ನದೇ ಖರ್ಚಿನಲ್ಲಿ ಅವಳು ಎಷ್ಟು ಓದಿದರೂ ಓದಿಸುತ್ತೇನೆ ಈ ಪ್ರಕರಣ ಕೈಬಿಡು ಎಂದು ಹೇಳುತ್ತಾನೆ. ಬೆದರಿಸುತ್ತಾನೆ. ಗಂಡನ ಕೆಲಸದ ಬಗ್ಗೆ ಧಮಕಿ ಹಾಕುತ್ತಾನೆ. ಏನೇ ಆದರೂ ತನ್ವಿ ಸೋಲೊಪ್ಪಲಿಕ್ಕೆ ಸಿದ್ಧಳಿಲ್ಲ. ಆ ವಿದ್ಯಾರ್ಥಿನಿಯೂ ತನಗೆ ತನ್ನ ನ್ಯಾಯವಾಗಿ ಸಿಗಬೇಕಾದ ಅಂಕಗಳು ಬೇಕೇಬೇಕು ಎಂದು ಪಟ್ಟು ಹಿಡಿಯುತ್ತಾಳೆ.
ರಾಜಕಾರಣಿಯನ್ನೂ ಎದುರು ಹಾಕ್ಕೊಂಡ ತನ್ವಿ
ರಾಜಕೀಯ ಧುರೀಣನನ್ನು ಎದುರು ಹಾಕಿಕೊಂಡ ತನ್ವಿ ಬಹಳಷ್ಟು ಕಿರುಕುಳಗಳನ್ನು ಎದುರಿಸಬೇಕಾಗುತ್ತದೆ. ಗಂಡನ ಕೆಲಸ ಹೋಗಿ ಅವನ ಮೇಲೆ ತನಿಖೆಯ ಆದೇಶವಾಗುತ್ತದೆ. ಅವರ ಮನೆ ಅರ್ಧ ಅಡಿ ಮುಂದೆ ಬಂದಿದೆಯೆಂದು ಬುಲ್ಡೋಜರ್ ಬಿಟ್ಟು ಮನೆಯನ್ನು ಧ್ವಂಸ ಮಾಡಿಸುತ್ತಾರೆ. ಆದರೂ ತನ್ವಿ ಅಂಜುವುದಿಲ್ಲ ಗಂಡ ಕೂಡ ತನ್ವಿಗೆ ಬೆಂಬಲವಾಗಿ ನಿಲ್ಲುತ್ತಾನೆ, ನ್ಯಾಯವಾದ ಕೆಲಸ ಮಾಡುವುದಕ್ಕೆ ಯಾರಿಗೂ ಅಂಜಬೇಕಿಲ್ಲ ಎಂದು ಹೇಳುತ್ತಾನೆ. ಆದರೆ ತನ್ವಿ ತಂದೆ ಇದನ್ನು ಕಟುವಾಗಿ ವಿರೋಧಿಸುತ್ತಾನೆ. ಈ ಕೇಸನ್ನು ಕೈಬಿಡು, ಸಾಕುಮಾಡು ಎಂದು ಗದರಿಸುತ್ತಾನೆ. ಆದರೆ ತನ್ವಿ ಕಿಂಚತ್ತೂ ತನ್ನ ಹೆಜ್ಜೆಯನ್ನು ಹಿಂದೆ ಸರಿಸುವುದಿಲ್ಲ. ಆಗ ತನ್ವಿ ತಂದೆ ಒಂದು ಆಘಾತಕಾರಿ ಸುದ್ದಿ ಹೇಳುತ್ತಾನೆ. ಇದನ್ನು ಕೇಳಿ ತನ್ವಿ ಕುಸಿದೇ ಹೋಗುತ್ತಾಳೆ. ಅವಳಿಗೆ ಏನು ಮಾಡಬೇಕೆಂದು ತೋಚದೆ ಬ್ಲಾಂಕ್ ಆಗಿಬಿಡುತ್ತಾಳೆ. ಈ ಕೇಸಿನಲ್ಲಿ ತಾನು ಆ ವಿದ್ಯಾರ್ಥಿನಿಗೆ ನ್ಯಾಯ ಒದಗಿಸ ಬಲ್ಲೆನೇ ನನ್ನ ಹೋರಾಟ ವ್ಯರ್ಥವೇ ಎನಿಸಿ ಅವಳ ತಲೆ ಕೆಟ್ಟು ಹೋಗುತ್ತದೆ.
Silence Movie Review: ಸಿರಿವಂತ ಅವಿವಾಹಿತ ಸುಂದರಿಯ ಸಾವಿನ ಸುತ್ತೊಂದು ಥ್ರಿಲ್ಲರ್ ಚಿತ್ರ
ತನ್ವಿಯ ತಂದೆ ಹೇಳಿದ ಆ ಆಘಾತಕಾರಿ ಸುದ್ದಿ ಏನು? ಅದನ್ನು ಕೇಳಿ ತನ್ವಿ ಯಾಕೆ ಹತಾಶಳಾಗುತ್ತಾಳೆ? ತನ್ವಿ ಮುಂದೆ ಏನು ಮಾಡುತ್ತಾಳೆ? ಆ ವಿದ್ಯಾರ್ಥಿನಿಗೆ ನ್ಯಾಯ ಸಿಗುತ್ತದೆಯೇ? ವಿಶ್ವವಿದ್ಯಾಲಯದ ಕರ್ಮ ಕಾಂಡವನ್ನು ತನ್ವಿ ಹೊರಗೆಳೆಯಲು ಶಕ್ತಳಾಗುತ್ತಾಳೆಯೇ? ಒಂದು ಸಣ್ಣದು ಎಂಬಂತಿದ್ದ ಪ್ರಕರಣ ಬೃಹತ್ತಾಕಾರ ತಾಳಿ ತನ್ವಿಯ ನಂಬಿಕೆ ಅವಳ ಬುದ್ಧಿಮತ್ತೆಯನ್ನೇ ಅಲುಗಾಡಿಸುವ ಮಟ್ಟಕ್ಕೆ ಹೋಗುವುದು ಹೇಗೆ ಇವೆಲ್ಲವೂ ತಿಳಿಯಬೇಕಾದರೆ ಡಿಸ್ನಿ ಹಾಟ್ ಸ್ಟಾರ್ ನಲ್ಲಿ ಸ್ಕ್ರೀಂ ಆಗುತ್ತಿರುವ ಪಾಟನಾ ಶುಕ್ಲಾ ಚಿತ್ರವನ್ನು ನೋಡಿ.
ತನ್ವಿಯಾಗಿ ರವೀನಾ ಟಂಡನ್ ಬಹಳ ಪ್ರಬುದ್ಧ ಅಭಿನಯ ನೀಡಿದ್ದಾರೆ. ಮೊದಲೇ ಚೆಲುವೆಯಾದ ರವೀನಾ ಈ ಚಿತ್ರದಲ್ಲಿ ಪ್ರಬುದ್ಧ ಚೆಲವೆಯಾಗಿ ಕಾಣುತ್ತಾರೆ. ನ್ಯಾಯಾಧೀಶರಾಗಿ ಸತೀಶ್ ಕೌಶಿಕ್ ಅಭಿನಯ ಮನಸ್ಸಿಗೆ ತಟ್ಟುತ್ತದೆ. ರಾಜಕೀಯ ಧುರೀಣನಾಗಿ ಜತಿನ್ ಗೋಸ್ವಾಮಿ, ತನ್ವಿಯ ಪತಿಯಾಗಿ ಮಾನವ್ ವಿಜ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ವಿದ್ಯಾರ್ಥಿನಿಯಾಗಿ ಅನುಷ್ಕಾ ಕೌಶಿಕ್ ಚುರುಕಿನ ಅಭಿನಯದಿಂದ ಗಮನ ಸೆಳೆಯುತ್ತಾರೆ. ಒಬ್ಬ ಸಾಧಾರಣ ವಕೀಲೆ ಒಂದು ಅಸಾಧಾರಣ ಪ್ರಕರಣವನ್ನು ಭೇದಿಸಿ ಹೋರಾಡುವ ಕಥೆ ಪಾಟನಾ ಶುಕ್ಲಾ.
Sharukh Khan's Dunki Movie Review: ಡಂಕಿ ಎಂಬ ಕಳ್ಳದಾರಿ