*ಒಂದು ಮೊಟ್ಟೆಯ ಕತೆಯಂಥ ಸಿನಿಮಾದಿಂದ ಗರುಡಗಮನದತ್ತ!
*ಭೂಗತ ಜಗತ್ತನ್ನು ತೋರಿಸುವ ಅತ್ಯುತ್ತಮ ಚಲನಚಿತ್ರ
*ರಾಜ್‌ಬಿಶೆಟ್ಟಿ ಮೇಲೆ ಗೌರವ ಹುಟ್ಟುವಂತೆ ಮಾಡುತ್ತದೆ ಸಿನಿಮಾ
*ಗರುಡಗಮನ ವೃಷಭವಾಹನ ರಿವ್ಯೂವ್ By ಜೋಗಿ!
ಬೆಂಗಳೂರು(ನ.20): ತಾನು ಯಾರೆಂಬುದು ಗೊತ್ತಿಲ್ಲದ ಶಿವ (Shiva). ತಾನು ಏನೆಂಬುದು ಗೊತ್ತಿಲ್ಲದ ಹರಿ (Hari). ಒಬ್ಬನು ಕಡುಪಾಪಿ, ಮತ್ತೊಬ್ಬ ಸುಡುಕೋಪಿ. ಇಬ್ಬರು ಜೀವದ ಗೆಳೆಯರು, ಜೀವ ತೆಗೆಯುವ ಕಾಯಕದಲ್ಲಿ ತೊಡಗಿಸಿಕೊಂಡವರು. ಮಂಗಳೂರಿನ ಭೂಗತ ಜಗತ್ತನ್ನು ಯಥಾವತ್ತಾಗಿ ಕಟ್ಟಿಕೊಟ್ಟಿರುವ ‘ಗರುಡಗಮನ ವೃಷಭವಾಹನ’ (Garuda Gamana Vrishabha Vahana) ಭೂಗತ ಜಗತ್ತನ್ನು ತೋರಿಸುವ ಅತ್ಯುತ್ತಮ ಸಿನಿಮಾಗಳ ಸಾಲಿನಲ್ಲಿ ತಲೆಯೆತ್ತಿ ನಿಲ್ಲುತ್ತದೆ.
ಬೆಂಗಳೂರಿನ (Bengaluru) ಪಾಪಿಗಳ ಲೋಕವೇ ಅಂತಿಮ ಅಂತ ಕನ್ನಡ ಸಿನಿಮಾಗಳು ತೋರಿಸಿಕೊಟ್ಟಿರುವ ಹೊತ್ತಿಗೇ, ಬೆಂಗಳೂರಿನಾಚೆಗೆ (Mangaluru) ಇರುವ ಭೂಗತ ಜಗತ್ತಿನ ವ್ಯವಹಾರ, ಕ್ರೌರ್ಯ, ಅಪಾಯ ಮತ್ತು ಅಬ್ಬೇಪಾರಿತನವನ್ನು ರಾಜ್‌ಬಿ ಶೆಟ್ಟಿ ಅಚ್ಚುಕಟ್ಟಾಗಿ ಕತೆಯಾಗಿಸಿದ್ದಾರೆ. ಕದ್ರಿ (Kadri) ದೇವಸ್ಥಾನದ ಕಟ್ಟೆಯಲ್ಲಿ ಕುಳಿತುಕೊಂಡು, ತನ್ನ ಗೆಳೆಯ ಹರಿ ಶುದ್ಧ ಸ್ನಾನ ಮಾಡುವುದನ್ನು ತಣ್ಣಗೆ ನೋಡುವ ಶಿವನ ಹಾಗೆ, ನಾವೂ ಮಂಗಳೂರಿನ ಜಗಲಿಯಲ್ಲಿ ಕುಳಿತು ಈ ಪಾತಕಿಗಳ ಜಗತ್ತನ್ನು ನೋಡುತ್ತಿರುವಂತೆ ಭಾಸವಾಗುತ್ತದೆ. ಅಷ್ಟರ ಮಟ್ಟಿಗೆ ಈ ಚಿತ್ರಕ್ಕೆ ಪ್ರಾದೇಶಿಕತ ಮೈಗೂಡಿದೆ.
undefined
Mugilpete Movie Review: ಮೋಡಿ ಮಾಡಿದ ಮನುರಂಜನ್-ಕಯಾದು ಜೋಡಿ
ಭಾಷೆ, ಸನ್ನಿವೇಶ, ಮೌನ, ಉಡುಗೆ, ನಡಿಗೆ- ಎಲ್ಲವೂ ಸೊಗಸಾಗಿ ಕಲೆತಿರುವ ಚಿತ್ರದಲ್ಲಿ ಹುಲಿವೇಷದ ರಾಜಕೀಯ, ಹೂವಿನಂಗಡಿಯ ವ್ಯವಹಾರದಿಂದ ಹಿಡಿದು ಭೂಗತ ಜಗತ್ತು ಕೈ ಚಾಚಬಹುದಾದ ಎಲ್ಲ ಸಂಗತಿಗಳನ್ನೂ ರಾಜ್ ಎಳೆಯೆಳೆಯಾಗಿ ತೋರಿಸುತ್ತಾ ಹೋಗುತ್ತಾರೆ. ಶಿವನಿಗೊಂದು ಹಳೆಯ ಕತೆಯಿದೆ. ಹರಿಯ ಕತೆ ಆಮೇಲೆ ಶುರುವಾಗುತ್ತದೆ. ಇಬ್ಬರ ಕತೆಯನ್ನು ಹೇಳುವ ಮೂರನೆಯ ವ್ಯಕ್ತಿಯ ವ್ಯಥೆಯೇ ಬೇರೆ. ಇವರೆಲ್ಲರನ್ನೂ ಆಡಿಸುವ ಕರಾವಳಿಯ (Coastak Karnataka) ರಾಜಕಾರಣದ ನೆರಳೂ ಚಿತ್ರದ ಮೇಲೆ ಬಿದ್ದಿದೆ. ಹತ್ಯೆ, ಜೈಲು, ಬಿಡುಗಡೆ, ಕ್ರಿಕೆಟ್ಟು, ಪಿತೂರಿ, ಗುಮಾನಿಗಳಲ್ಲಿ ಇಬ್ಬರ ನಡುವಿನ ಸಂಬಂಧ ಬೆಳೆಯುತ್ತದೆ, ಅಳಿಯುತ್ತದೆ.ಇಂಥದ್ದೊಂದು ಕತೆಯನ್ನು ಇಷ್ಟು ಸಂಯಮದಿಂದ ಹೇಳಿರುವುದು ರಾಜ್ ಬಿ ಶೆಟ್ಟಿಯ ಪ್ರತಿಭೆ ಮತ್ತು ಪರಿಶ್ರಮವನ್ನು ತೋರುತ್ತದೆ.
ರಾಜ್ ಬಿ ಶೆಟ್ಟಿ (Raj B Shetty) ತಾನು ಆರಿಸಿಕೊಂಡಿರುವ ಕತೆಯನ್ನು ಸಮರ್ಥವಾದ ರೂಪಕಗಳ ಮೂಲಕ ಕಟ್ಟಿಕೊಡುತ್ತಾರೆ. ದೃಶ್ಯಮಾಧ್ಯಮದ ಮೂಲತತ್ವವನ್ನು ಅವರು ಒಂದರೆಕ್ಷಣವೂ ಮರೆಯುವುದಿಲ್ಲ. ಇಡೀ ಚಿತ್ರ ಒಂದೇ ಒಂದು ಕ್ಷಣವೂ ವಾಚ್ಯವಾಗುವುದಿಲ್ಲ. ಶಿವ ಹಾಕಿಕೊಳ್ಳುವ ಚಪ್ಪಲಿ, ಹರಿ ಮಾಡುವ ಶುದ್ಧಸ್ನಾನ, ಕೊನೆಯಲ್ಲಿ ಥಟ್ಟನೆ ಪ್ರತ್ಯಕ್ಷವಾಗುವ ಪುಟ್ಟ ಮಕ್ಕಳು- ಎಲ್ಲವೂ ಸಿನಿಮಾವನ್ನು ಆಪ್ತಗೊಳಿಸುತ್ತಾ ಹೋಗುತ್ತವೆ. ರಾಜ್‌ಬಿಶೆಟ್ಟಿ ಕೆಲಸದ ಮೇಲೆ ಗೌರವ ಹುಟ್ಟುವಂತೆ ಮಾಡುತ್ತವೆ.
ಭೂಗತ ಜಗತ್ತಿನ 'ಗರುಡಗಮನ ವೃಷಭವಾಹನ' ಸಿನಿಮಾ ಮೆಚ್ಚಿದ ಸಿನಿರಸಿಕರು
ಒಂದು ಮೊಟ್ಟೆಯ ಕತೆಯಂಥ (Ondu Motteya Kathe) ಹಾಸ್ಯಮಯ ಸಿನಿಮಾದಿಂದ ಗರುಡಗಮನ..ದತ್ತ ಹೊರಳಿಕೊಂಡ ರಾಜ್ ಬಿಶೆಟ್ಟಿ, ಪ್ರತಿಯೊಂದು ಪಾತ್ರವನ್ನೂ ಶಿಲ್ಪಿಯ ತನ್ಮಯತೆಯಿಂದ ಕೆತ್ತಿದ್ದಾರೆ. ಒಂದೇ ದೃಶ್ಯದಲ್ಲಿ ಬಂದು ಹೋಗುವ ಪಾತ್ರದಿಂದ ಹಿಡಿದು, ಪ್ರಮುಖ ಪಾತ್ರಗಳ ತನಕ ಪ್ರತಿಯೊಂದು ಪಾತ್ರಕ್ಕೂ ಒಂದು ವ್ಯಕ್ತಿತ್ವ ಕಟ್ಟಿಕೊಟ್ಟಿದ್ದಾರೆ. ಇಲ್ಲಿ ವಿನಾಕಾರಣ ಯಾರೂ ಬರುವುದಿಲ್ಲ, ವಿನಾಕಾರಣ ತೆರಳುವುದೂ ಇಲ್ಲ. ಕೊಲೆಯೆಂದರೆ ಕತ್ತಿ, ಮಚ್ಚುಗಳ ಝಳಪಿಸುವಿಕೆಯೂಅಲ್ಲ.
ಮಿಥುನ್ ಮುಕುಂದನ್ (Midhun Mukundhan) ಚಿತ್ರದುದ್ದಕ್ಕೂ ಮೈನವಿರೇಳಿಸುವ ಮೌನದಲ್ಲೇ ಕ್ರೌರ್ಯವನ್ನು ಕಟ್ಟಿಕೊಟ್ಟಿದ್ದಾರೆ. ಒಂದು ಮೋಟರ್ ಬೈಕ್ ಸದ್ದು, ಹುಲಿಕುಣಿತದ ತಾಸೆಯ ರಿಂಗಣ, ಶಿವನ ಕುಣಿತದ ಸ್ಮಶಾನಮೌನ- ಹೀಗೆ ಸಿನಿಮಾವನ್ನು ಒಂದು ಮೆಟ್ಟಿಲು ಮೇಲೆತ್ತಿರುವುದು ಮಿಥುನ್ ಮುಕುಂದನ್ ಹಿನ್ನೆಲೆ ಸಂಗೀತ. ಹಗಲು ರಾತ್ರಿಗಳನ್ನು ಭಯ ಆತಂಕ ಭರವಸೆಗಳನ್ನು ಕಟ್ಟಿಕೊಡುವ ಕ್ಯಾಮರಾ ಕಣ್ಣು ಕೂಡ ಕತೆಯನ್ನು ಮತ್ತೊಂದು ಆಯಾಮಕ್ಕೆ ಒಯ್ದಿದೆ. ಛಾಯಾಗ್ರಾಹಕ ಮತ್ತು ಸಂಕಲನಕಾರ ಪ್ರವೀಣ್ ಶ್ರೀಯಾನ್ ವಿಶೇಷ ಮನ್ನಣೆಗೆ ಅರ್ಹರು.
ದ್ವೇಷದಲ್ಲಿ ತಾಳ್ಮೆ ಇಷ್ಟ ಪಡುವ Madhagaja: ಟ್ರೇಲರ್‌ನಲ್ಲಿ ಅಬ್ಬರಿಸಿದ ಶ್ರೀಮುರಳಿ
ರಿಷಭ್ (Rishab Setty) ಮತ್ತು ರಾಜ್ ಬಿ ಶೆಟ್ಟಿ- ಇವರಿಬ್ಬರ ವಿನಹಾ ಯಾರೇ ನಟಿಸಿದ್ದರೂ ಈ ಕತೆ ನಮ್ಮನ್ನು ತಟ್ಟುತ್ತಿರಲಿಲ್ಲ ಎಂಬಷ್ಟರ ಮಟ್ಟಿಗೆ ಆಯಾ ಪಾತ್ರವೇ ಆಗಿಹೋಗಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆಯ ಪಾತ್ರ ವಿಶಿಷ್ಟವಾಗಿದೆ ಮತ್ತು ಅದನ್ನವರು ಅತಿವಿಶಿಷ್ಟವಾಗಿ ನಿಭಾಯಿಸಿದ್ದಾರೆ. ಪ್ರತಿಯೊಂದು ಪಾತ್ರವೂ ಅಲ್ಲೇ ಹುಟ್ಟಿ, ಅಲ್ಲೇ ಬೆಳೆದಂತೆ ಕಾಣುವುದರಿಂದ ಚಿತ್ರಕ್ಕೊಂದು ಕಡುವಾದ ನೇಟಿವಿಟಿ ಪ್ರಾಪ್ತವಾಗಿದೆ. ಅದೇ ಈ ಚಿತ್ರದ ಶಕ್ತಿ. ಎರಡು ಗಂಟೆ ಮೂವತ್ತೊಂದು ನಿಮಿಷಗಳ ಈ ಸಿನಿಮಾ ಹೋಗುತ್ತಾ ಹೋಗುತ್ತಾ ನಮ್ಮನ್ನು ಮೌನವಾಗಿಸುತ್ತಾ ಹೋಗುತ್ತದೆ. ಬಲಿಗಾಗಿ ಕಾಯುವ ಮಂಗಳೂರಿನ ನೆಲದಂತೆ ಮನಸ್ಸು ಕೂಡ ಕಣ್ಣುನೆಟ್ಟು ಕಾದು ಕೂರುತ್ತದೆ.
ಹೀಗೆ ಒಂದು ಕತೆಯನ್ನು ಅಚ್ಚುಕಟ್ಟಾಗಿ ಹೇಳುವ ಹೊತ್ತಿಗೇ, ಇಂಥ ಕತೆಗೊಂದು motif ಬೇಕಾಗಿತ್ತೇನೋ ಅಂತ ಚಿತ್ರ ನೋಡಿದ ನಂತರ ಅನ್ನಿಸುತ್ತದೆ. ಅಷ್ಟರ ಮಟ್ಟಿಗೆ ಇದೊಂದು ಪರ್ಪಸ್ ಇಲ್ಲದ ಕತೆ. ಇಲ್ಲಿ ಯಾರಿಗೂ ಗುರಿಮುಟ್ಟುವ ಆಸೆಯೇ ಇಲ್ಲ. ಒಂದಾನೊಂದು ಕಾಲದಲ್ಲಿ, ಒಂದಾನೊಂದು ಊರಲ್ಲಿ ಹೀಗೊಂದು ಕತೆ ನಡೆಯಿತು ಎಂಬಂತೆ ಈ ಕತೆಯನ್ನು ನಿರೂಪಿಸಿದಂತೆ ಅನ್ನಿಸುತ್ತದೆ. ಇಂಥ ಚೆಂದದ ಕತೆಗೊಂದು ಆಶಯ ಇರಬಾರದಿತ್ತೇ ಅಂತ ಸಿನಿಮಾ ನೋಡಿ ಹೊರಬಂದ ನಂತರ ಆಸೆಯಾಗುತ್ತದೆ.
-ಜೋಗಿ