
ರಾಜೇಶ್ ಶೆಟ್ಟಿ
ಒಬ್ಬರು ನಿರ್ದೇಶಕ ರಾಘವೇಂದ್ರ. ಜಗತ್ತೇ ಒಂದು ದಾರಿಯಲ್ಲಿ ಹೋಗುತ್ತಿದ್ದರೆ ತಾವು ಮಾತ್ರ ಪರಿಶುದ್ಧವಾದ ಪ್ರೇಮವನ್ನು ಸಾರುತ್ತೇನೆ, ತಾಳ್ಮೆಯಿಂದ ಸಹನೆಯಿಂದ ಕತೆ ಹೇಳುತ್ತೇನೆ ಎಂದು ಬಂದಿದ್ದಾರೆ. ಈ ಸಿನಿಮಾದ ಪ್ರತೀ ಫ್ರೇಮಲ್ಲೂ ಅವರ ಸಹನೆ ಮಡುಗಟ್ಟಿದೆ. ಅಪಾರ ಪ್ರೇಮವಿದೆ. ಅದನ್ನು ಗಾಢ ತಾಳ್ಮೆಯಿಂದ ಆಸ್ವಾದಿಸಬೇಕಿದೆ.
ಇನ್ನೊಬ್ಬರು ಈ ಚಿತ್ರದ ಛಾಯಾಗ್ರಾಹಕ ನವೀನ್‌ಕುಮಾರ್. ಅತಿ ಸಾಮಾನ್ಯವಾದ ವಸ್ತುವನ್ನೂ ಅವರು ತಮ್ಮ ಕ್ಯಾಮೆರಾ ಕಣ್ಣುಗಳಿಂದ ನೋಡಿ ಅದಕ್ಕೊಂದು ಮ್ಯಾಜಿಕ್ ಟಚ್ ಕೊಟ್ಟು ಅಸಾಧಾರಣವೆಂಬಂತೆ ಕಾಣಿಸುತ್ತಾರೆ. ಇವರು ಕಟ್ಟಿಕೊಡುವ ದೃಶ್ಯಗಳು ನಿರ್ದೇಶಕರ ಸಾವಧಾನವನ್ನು ಮರೆಸುವಂತಿವೆ.
"
ತಾರಾಗಣ: ನೆನಪಿರಲಿ ಪ್ರೇಮ್, ಬೃಂದಾ ಆಚಾರ್ಯ, ಮಾ. ಆನಂದ್, ಸಾಧು ಕೋಕಿಲ
ನಿರ್ದೇಶನ: ಡಾ. ರಾಘವೇಂದ್ರ ಬಿ.ಎಸ್.
ರೇಟಿಂಗ್: 3
ಮತ್ತೊಬ್ಬರು ಪ್ರೇಮ್. ಸಿನಿಮಾ ಪೂರ್ತಿ ಇರುವ ಒಳ್ಳೆಯ ಹುಡುಗ. ಅತಿ ಒಳ್ಳೆಯತನವನ್ನು, ಅಸಾಧ್ಯ ಪ್ರೇಮವನ್ನು, ಅಸಹನೀಯ ನೋವನ್ನು, ಯಾವುದೋ ಒಂದು ಕ್ಷುಲ್ಲಕ ಗಳಿಗೆಯಲ್ಲಿ ಒಂದು ಹನಿ ಕಣ್ಣೀರನ್ನು ಪ್ರೇಮ್ ಅದ್ಭುತವಾಗಿ ದಾಟಿಸುತ್ತಾರೆ. ಅವರು ಕುಸಿದು ಕುಳಿತಾಗ ನೋಡುಗನೂ ಮನಸ್ಸಲ್ಲೇ ಮಂಡಿಯೂರಿ ಕೂರಬೇಕು. ಒಂದು ಸುದೀರ್ಘ ನಿಟ್ಟುಸಿರನ್ನು ಆಚೆ ಹಾಕಬೇಕು.
ತುಂಬಾ ಗಂಭೀರ ಅನ್ನಿಸಿದಾಗ ಹಗುರ ಮಾಡುವ ಕೆಲಸವನ್ನು ಮಾಡುವುದು ಮಾ.ಆನಂದ್ ಮತ್ತು ಸಾಧು ಕೋಕಿಲ. ಅವರಿಬ್ಬರೂ ಮೆಚ್ಚುಗೆಗೆ ಅರ್ಹರು. ನಾಯಕಿ ಬೃಂದಾ ತುಂಬಾ ಚೆಂದ ಕಾಣಿಸುತ್ತಾರೆ. ಅವರ ಮೇಲೆ ಸಿಟ್ಟಾಗುವಂತೆ, ಪ್ರೀತಿಯಾಗುವಂತೆ, ಅಯ್ಯೋ ಅನ್ನಿಸುವಂತೆ ನಿರ್ದೇಶಕರೇ ಕತೆ ಹೆಣೆದಿದ್ದರಿಂದ ಅವರ ಕೈಯಲ್ಲಿ ಏನೂ ಇಲ್ಲ. ಇಡೀ ಜಗತ್ತು ವೇಗದ ಹಿಂದೆ ಬಿದ್ದಿದೆ, ಸ್ಟೋರಿಗಳಲ್ಲಿ ಸ್ಟೇಟಸ್‌ಗಳಲ್ಲಿ ಪ್ರೀತಿ ಕ್ಷಣಕ್ಷಣಕ್ಕೂ ಅರಳುತ್ತದೆ ಅಥವಾ ಒಡೆದುಹೋಗುತ್ತದೆ. ಇಂಥಾ ಹೊತ್ತಲ್ಲಿ ನಿರ್ದೇಶಕರು ಪರಿಶುದ್ಧ ಪ್ರೇಮದ ಕತೆಯನ್ನು ಒಂದೊಂದು ನಿಟ್ಟುಸಿರೂ ಕೇಳುವಂತೆ ನಿರಾಳವಾಗಿ ಸಾವಧಾನವಾಗಿ ಹೇಳಿರುವುದೇ ಈ ಚಿತ್ರದ ವಿಶೇಷತೆ.
ಈ ಕ್ರಮ ಯಾರನ್ನು ಹೇಗೆ ತಾಕುತ್ತದೆ ಎಂದು ಥಟ್ ಅಂತ ಹೇಳಲಾಗುವುದಿಲ್ಲ. ಕಾಡಿನ ಪಕ್ಕದಲ್ಲಿ ಕೂತಿದ್ದಾಗ ಮರದ ಎಲೆಯೊಂದು ತೊಟ್ಟು ಕಳಚಿ ನೆಲ ಸೇರುವುದನ್ನು ಅತ್ಯಂತ ಜತನದಿಂದ ನೋಡುವಷ್ಟುಶಾಂತಿ ನಿಮ್ಮಲ್ಲಿ ನೆಲೆಸಿದೆ ಎಂದಾದರೆ ಪ್ರೇಮಂ ಪೂಜ್ಯಂ ಮನಸ್ಸಲ್ಲಿ ಉಳಿಯುತ್ತದೆ. ಪ್ರೀತಿ, ಪ್ರೇಮವನ್ನು ದಾಟಿ ಬೇರೊಂದು ಜಗತ್ತಲ್ಲಿ ಧಾವಂತದಿಂದ ಸಾಗುವವರಾಗಿದ್ದರೆ ಕುಳಿತುಕೊಳ್ಳುವ ಸೀಟೇ ಶತ್ರುವಾಗುತ್ತದೆ. ಹಾಗಿದ್ದರೂ ಪ್ರೇಮ್ ಯಾವುದೋ ಒಂದು ಗಳಿಗೆಯಲ್ಲಿ ಮಂಡಿಯೂರಿ ಕುಳಿತಾಗ ಎದೆಯಲ್ಲೊಂದು ಚಿಟ್ಟೆಓಡಿದಂತೆ ಅನ್ನಿಸುವುದೇ ಈ ಸಿನಿಮಾದ ಸಾರ್ಥಕತೆ.
"
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.