ಮಗ ಮತ್ತು ಅಮ್ಮನ ಬಾಂಧವ್ಯ, ಹಳ್ಳಿಯ ಜನರ ಮುಗ್ಧತೆಯನ್ನು ಸಾರುವುದರ ಜೊತೆಗೆ ನಾಯಕನ ಅಹಿಂಸಾ ತತ್ವ, ಜನಪರ ಕಾಳಜಿ ಇತ್ಯಾದಿಯನ್ನೂ ಮನಮುಟ್ಟುವಂತೆ ತೋರಿಸಿದ್ದಾರೆ.
ಆರ್.ಎಸ್.
ಒಂದು ಊರಿನಲ್ಲಿ ಒಬ್ಬಳು ತಾಯಿ ಚಿಕ್ಕಂದಿನಿಂದಲೇ ಮನೆಯಿಂದ ದೂರಾದ ಮನೆ ಮಗನಿಗಾಗಿ ಕಾಯುತ್ತಿದ್ದಾಳೆ. ಕಣ್ಣೀರಲ್ಲೇ ಕೈತೊಳೆಯುತ್ತಿದ್ದಾಳೆ. ಆಕೆಯ ಕಣ್ಣೀರಿನ ಬಿಸಿ ಪ್ರೇಕ್ಷಕನ ಎದೆಗೂ ಹಾಯುತ್ತಿದೆ. ಇಂಥಾ ಒಂದು ವಿಷಾದಮಯ ಸಂದರ್ಭದಲ್ಲಿ ಆ ದೊಡ್ಮನೆಯನ್ನು ಹುಡುಕುತ್ತಾ ಊರಿಗೊಬ್ಬ ನವ ತರುಣ ಎಂಟ್ರಿ ಕೊಡುತ್ತಾನೆ.
ಆ ಮನೆಯ ಕಷ್ಟಗಳು ತೀರಿದುವು ಎಂದು ಪ್ರೇಕ್ಷಕರು ಭಾವಿಸಿಕೊಳ್ಳುವ ಹೊತ್ತಿಗೆ ನಿರ್ದೇಶಕರು ಅದರ ಮಧ್ಯೆಯೇ ಒಂದು ಟ್ವಿಸ್ಟ್ ಇಟ್ಟಿದ್ದಾರೆ. ಆ ಟ್ವಿಸ್ಟ್ ಏನು ಎಂಬುದು ಸದ್ಯದ ಮಟ್ಟಿಗೆ ನಿರ್ದೇಶಕರು ಹೇಳಿಲ್ಲ. ಇಲ್ಲಿನ ಬರವಣಿಗೆ ಎಷ್ಟು ಸೊಗಸಾಗಿದೆ ಎಂದರೆ ಆ ತರುಣ ಊರಿಗೆ ಬಂದ ಕೂಡಲೇ ಅವನನ್ನು ಮನೆಗೆ ಕರೆದುಕೊಂಡು ಹೋಗುವ ನೆಪದಲ್ಲಿ ಬೆಟ್ಟ, ಗುಡ್ಡ, ನದಿ, ಕಣಿವೆ, ಜಲಪಾತ, ದಟ್ಟಾರಣ್ಯ ಎಲ್ಲವನ್ನೂ ತೋರಿಸುತ್ತಾರೆ. ಅಷ್ಟೂ ಹೊತ್ತು ಪ್ರೇಕ್ಷಕನೂ ಆ ಎಲ್ಲಾ ಜಾಗದಲ್ಲೇ ನಡೆದುಕೊಂಡೇ ಹೋದಂತಹ ಅನುಭವ ಗಳಿಸಿಕೊಳ್ಳುತ್ತಾನೆ.
ಚಿತ್ರ: ನಿಂಬಿಯಾ ಬನಾದ ಮ್ಯಾಗ ಪುಟ 1
ನಿರ್ದೇಶನ: ಅಶೋಕ ಕಡಬ
ತಾರಾಗಣ: ಷಣ್ಮುಖ ಗೋವಿಂದರಾಜ, ಸಂಗೀತಾ ಅನಿಲ್, ತನುಶ್ರೀ, ಸುನಾದ್ ರಾಜ್, ಮೂಗು ಸುರೇಶ್
ಮಗ ಮತ್ತು ಅಮ್ಮನ ಬಾಂಧವ್ಯ, ಹಳ್ಳಿಯ ಜನರ ಮುಗ್ಧತೆಯನ್ನು ಸಾರುವುದರ ಜೊತೆಗೆ ನಾಯಕನ ಅಹಿಂಸಾ ತತ್ವ, ಜನಪರ ಕಾಳಜಿ ಇತ್ಯಾದಿಯನ್ನೂ ಮನಮುಟ್ಟುವಂತೆ ತೋರಿಸಿದ್ದಾರೆ. ನಾಯಕ ನಟ ಷಣ್ಮುಖ ಗೋವಿಂದರಾಜ್ ಬೆಳ್ಳಿತೆರೆ ಪ್ರವೇಶಿಸಿದ್ದು, ಅವರ ನಟನೆ ರಾಘವೇಂದ್ರ ರಾಜ್‌ಕುಮಾರ್ ಅವರನ್ನು ನೆನಪಿಸುತ್ತದೆ. ಕ್ಲೈಮ್ಯಾಕ್ಸ್‌ನಲ್ಲಿಯೂ ನಿರ್ದೇಶಕರು ಚಾತುರ್ಯ ಮೆರೆದಿದ್ದು, ಕುತೂಹಲಕರ ಘಟ್ಟದಲ್ಲಿ ಕತೆ ನಿಲ್ಲಿಸಿದ್ದಾರೆ. ಸದ್ಯ ಪುಟ 1 ಮಾತ್ರ ಆಗಿದೆ. ಪುಟ 2 ತೆರೆಯಲು ಸಹೃದಯ ಪ್ರೇಕ್ಷಕರು ಸ್ವಲ್ಪ ದಿನ ಕಾಯಬೇಕಿದೆ.