ಸಾಹಿತ್ಯ ಅಕಾಡೆಮಿಗೂ ಜ್ಞಾನಪೀಠ ಪ್ರಶಸ್ತಿಗೂ ಸಂಬಂಧ ಇಲ್ಲ: ಚಂದ್ರಶೇಖರ ಕಂಬಾರ

By Kannadaprabha NewsFirst Published Oct 10, 2021, 5:31 PM IST
Highlights

ಮಹಮ್ಮದ್‌ ಗವಾನನ ಬಳಿಕ ರಂಗ ನಟಿ ಚಾಂದ್‌ ಬೀ ಸರ್ಕಾರ್‌ ಕುರಿತ ಹೊಸ ಕಾದಂಬರಿಯೊಂದಿಗೆ ಬಂದಿದ್ದಾರೆ ಚಂದ್ರಶೇಖರ ಕಂಬಾರ. ಇಲ್ಲಿ ಅವರ ಕಾದಂಬರಿಯ ನಾಯಕಿ ಚಾಂದ್‌ ಬೀ ಒಂದು ತಲೆಮಾರನ್ನು ಆವರಿಸಿದ್ದ ಬಗೆಯನ್ನು ಹೇಳುತ್ತಲೇ, ಸಮಕಾಲೀನ ಸಂಗತಿಗಳ ಬಗೆಗೂ ಮಾತನಾಡಿದ್ದಾರೆ.

ಪ್ರಿಯಾ ಕೆರ್ವಾಶೆ

1. ನಿಮ್ಮ ಹೊಸ ಕಾದಂಬರಿಯ ನಾಯಕಿ ಚಾಂದ ಬೀ ಸರಕಾರ. ಆಕೆ ರಂಗನಟಿ. ಆಕೆಯ ಬಗ್ಗೆ ಬರೆಯಬೇಕು ಅನ್ನಿಸಿದ್ದಕ್ಕೆ ಕಾರಣ?

ಈ ಸಂಗತಿ ಬಹಳ ಕಾಲದಿಂದ ತಲೆಯಲ್ಲಿ ಇತ್ತು. ಬರೆಯಬೇಕು ಅನ್ನುವ ತುಡಿತ ಈವರೆಗೆ ಬಂದಿರಲಿಲ್ಲ. ಹೆಣ್ಣುಮಕ್ಕಳ ಬಗೆಗಿನ ಅನಾದರ, ನಿರ್ಲಕ್ಷ್ಯ ಹೆಚ್ಚಾಗುತ್ತಿರುವ ಈ ದಿನಮಾನದಲ್ಲಿ ಚಾಂದ್‌ ಬೀಯಂಥಾ ಒಬ್ಬ ಗಟ್ಟಿವ್ಯಕ್ತಿತ್ವದ ಹೆಣ್ಣುಮಗಳ ಬಗ್ಗೆ ಬರೆಯಬೇಕು ಅನಿಸಿತು. ಚಾಂದ್‌ ಬೀ ದಲಿತ ಹೆಣ್ಣುಮಗಳು, ದೇವದಾಸಿ ಪರಂಪರೆಯವಳು. ಸಾಕಿದ್ದು ಬ್ರಾಹ್ಮಣರ ಮನೆಯವರು. ಅವಳು ಮದುವೆಯಾಗಿದ್ದು ಮುಸ್ಲಿಂ ವ್ಯಕ್ತಿಯನ್ನು. ಶಾಲೆ ಕಲಿತವಳಲ್ಲ. ಆದರೆ ತನ್ನೂರಿನ ಮಕ್ಕಳಿಗಾಗಿ ಶಾಲೆ ಕಟ್ಟಿಸಿ ದೊಡ್ಡವಳಾದಳು. ಅವಳ ಬಗ್ಗೆ ಬರೆಯಲು ಇದು ಸಕಾಲ ಅನಿಸಿ ಬರೆದೆ.

2. ನಿಮ್ಮ ಎಲ್ಲಾ ಕಾದಂಬರಿಗಳಲ್ಲೂ ಒಂದಲ್ಲ ಒಂದು ರೂಪದಲ್ಲಿ ಶಿವಾಪುರ ಬಂದೇ ಬರುತ್ತದೆ. ಆ ಊರಿನಿಂದ ನೀವು ಬಿಡಿಸಿಕೊಳ್ಳಲು ಯತ್ನಿಸಿದ್ದೀರಾ, ಬಿಡಿಸಿಕೊಳ್ಳಬೇಕು ಅನ್ನಿಸಿದೆಯಾ?

ಶಿವಾಪುರ ಎಲ್ಲೋ ಇಲ್ಲ. ದೇಶದ ಯಾವುದೇ ಹಳ್ಳಿ ಶಿವಾಪುರ ಆಗಬಹುದು, ನನ್ನ ಶಿವಾಪುರ ಅಂತಲ್ಲ. ವಿದ್ಯೆಯಲ್ಲಿ, ಯೋಚನೆಗಳಲ್ಲಿ, ಭಾಷೆಯಲ್ಲಿ ಪ್ರತಿಯೊಂದರಲ್ಲೂ ಇಂಗ್ಲೀಷ್‌ ತರ್ತಿದ್ದೀವಲ್ಲ, ಅದು ತಪ್ಪು. ನಾವು 5000 ವರ್ಷಗಳಿಂದ ಸಾವಿರಾರು ಭಾಷೆ, ದೇವರು, ಜಾತಿ, ಪಂಗಡಗಳು, ಕ್ಯಾಲೆಂಡರ್‌ಗಳನ್ನೆಲ್ಲ ಇಟ್ಟುಕೊಂಡು ಜೊತೆಯಾಗಿ ಬಾಳಿದವರು. ಇದರಲ್ಲಿರುವ ಸತ್ವವೇ ಶಿವಾಪುರ. ಹೀಗಿರುವಾಗ ಬಿಡಿಸಿಕೊಳ್ಳಬೇಕು ಅಂತ ಯಾಕನಿಸುತ್ತೆ..

SPBಗೆ ಪದ್ಮವಿಭೂಷಣ, ಕಂಬಾರರಿಗೆ ಪದ್ಮಭೂಷಣ, ಮಂಜಮ್ಮ ಜೋಗತಿಗೆ ಪದ್ಮಶ್ರೀ

3. ಬಹಳಷ್ಟುವರುಷಗಳಿಂದ ಬೆಂಗಳೂರಿನಲ್ಲಿದ್ದೀರಿ. ಬೆಂಗಳೂರಿನ ಕುರಿತು ನೀವು ಬರೆದೇ ಇಲ್ಲ. ಈ ನಗರ ಒಂದು ಕಾದಂಬರಿಯನ್ನೋ ನಾಟಕವನ್ನೋ ಹುಟ್ಟಿಸುವಷ್ಟುಸಮೃದ್ಧವಾಗಿಲ್ಲವೇ?

ಇಲ್ಲಿ ಬೆಂಗಳೂರಿನಲ್ಲಿ ಸೇರಿದ ಹೆಚ್ಚಿನವರು ಹಳ್ಳಿಗಳನ್ನು ನಿರಾಕರಿಸಿ ಬಂದವರು. ಇವರಿಗೆ ಕನಸುಗಳಿಲ್ಲ, ಪಾಸ್ಟ್‌ ಇಲ್ಲ. ಶಹರಗಳಲ್ಲಿ ನಮ್ಮತನ ಇಲ್ಲ, ಛಲ ಇಲ್ಲ. ಹಳ್ಳಿಗಳಲ್ಲಿ ಇದೆ. ಅದನ್ನು ಮಾದರಿಯಾಗಿ ಇಟ್ಟುಕೊಂಡೇ ಇದು ಬೆಳೆಯಬೇಕು ಎನ್ನುವುದು ನನ್ನ ಆಸೆ.

4. ಈಗ ಸಾಕಷ್ಟುಕೃತಿಗಳು ಇಂಗ್ಲೀಷಿಗೆ ಅನುವಾದ ಆಗುತ್ತಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಅನುವಾದಿತ ಕೃತಿಗಳ ಚರ್ಚೆ ನಡೆಯುತ್ತಿರುವಂತೆ ಕಾಣುವುದಿಲ್ಲ. ನೀವು ಬರೆಯುತ್ತಿರುವ ಕಾಲಕ್ಕೆ ಕನ್ನಡದ ಕೃತಿಗಳೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕುತ್ತಿದ್ದವು. ಯಾಕೆ ಹೀಗೆ?

ನಮ್ಮಲ್ಲಿ ಸರ್ಕಾರ ಗುರುತಿಸಿದ ಭಾಷೆಗಳೇ ಇಪ್ಪತ್ತನಾಲ್ಕು ಇದ್ದಾವೆ. ನಾವು ನಾವು ಏನು ಮಾಡ್ತಾ ಇದ್ದೇವೆ ಎಂಬುದು ಮೊದಲು ನಮಗೆ ತಿಳಿಯಬೇಕು. ನಮಗೆ ಈಗ ಇಂಗ್ಲೆಂಡ್‌ನ, ಅಮೆರಿಕಾದ ಸಾಹಿತ್ಯದಲ್ಲಿ ಏನಾಗ್ತಿದೆ ಅನ್ನೋದು ಗೊತ್ತಾಗ್ತಿದೆ. ಆದರೆ ಪಕ್ಕದ ಮಹಾರಾಷ್ಟ್ರದಲ್ಲಿ ಯಾವ ಒಳ್ಳೆಯ ಪುಸ್ತಕ ಬಂದಿದೆ ಅಂತ ಗೊತ್ತಿಲ್ಲ. ತಮಿಳ್ನಾಡಿನಲ್ಲಿ ಏನಾಗಿದೆ ಅಂತ ಗೊತ್ತಿಲ್ಲ. ಹೀಗಾದ್ರೆ ಹೇಗೆ? ನಮ್ಮಲ್ಲೂ ಭಿನ್ನವಾಗಿ ಆಲೋಚನೆ ಮಾಡುವವರಿದ್ದಾರೆ. ನಮ್ಮ ನಮ್ಮಲ್ಲೇ ಮೊದಲು ಒಂದು ಡೈಲಾಗ್‌ ಇರಲಿ. ತಿಳುವಳಿಕೆಯನ್ನು ಪರಸ್ಪರ ಅರಿಯುವ ಕಾರ್ಯ ಶುರುವಾಗಲಿ. ಈಡಿಪಸ್‌ನ ಪಾಪ ತಟ್ಟಿದೆಯಪ್ಪಾ ಅಂತ ನಮ್ಮ ಕಾವ್ಯ ಕೂತುಬಿಟ್ಟರೆ ನಾವು ನಮ್ಮ ಸಂಸ್ಕೃತಿಗೆ ದ್ರೋಹ ಮಾಡಿದ ಹಾಗೆ ಅಲ್ವಾ? ಮೊದಲು ನಮ್ಮನ್ನು ನಾವಾಗಿ ತಿಳ್ಕೊಳ್ಳೋಣ. ಆಮೇಲೆ ಆ ಕಡೆ ಗಮನ ಕೊಡೋಣ. ಹೀಗಾಗಿ ಮೊದಲು ನಾವು ನಮ್ಮೊಳಗಿನ ಕೃತಿಗಳ ಬಗ್ಗೆ ಚರ್ಚಿಸೋಣ. ಒಂದು ಹೊತ್ತಲ್ಲಿ ಇಂಗ್ಲೀಷ್‌ನವರಿಗೂ ನಮ್ಮ ಕೃತಿಗಳಲ್ಲಿರುವ ಸತ್ವದ ಅರಿವಾಗಬಹುದು. ಆಗ ಅವರು ಚರ್ಚಿಸಿಯೇ ಚರ್ಚಿಸುತ್ತಾರೆ.

ಮಾತೃಭಾಷೆಯಲ್ಲೇ ಶಿಕ್ಷಣ ನೀಡಿ: ಸರಕಾರಕ್ಕೆ ಕಸಾಪ ಪತ್ರ

6. ಮಹಮ್ಮದ್‌ ಗವಾನ್‌ ಕೃತಿ ಗುಲ್ಬರ್ಗಾದ ಐತಿಹಾಸಿಕ ವ್ಯಕ್ತಿಯನ್ನು ಆಧರಿಸಿದ್ದು, ಇದು ರಂಗನಟಿ ಚಾಂದಬಿಯನ್ನು. ಹೀಗೆ ನೀವು ಕಂಡ ವ್ಯಕ್ತಿಗಳು ಕೃತಿಯಲ್ಲಿ ಬರುತ್ತಿರುತ್ತಾರೆ. ಇನ್ನೂ ಯಾರೆಲ್ಲ ನಿಮ್ಮ ಭಂಡಾರದಲ್ಲಿ ಇದ್ದಾರೆ?

ಬಹಳ ಮಂದಿ. ಇಷ್ಟೆಲ್ಲ ವೈವಿಧ್ಯತೆ ಇಟ್ಟುಕೊಂಡೇ ಇವರೆಲ್ಲ ಒಂದಾಗಿದ್ದಾರಲ್ಲಾ.. ಇದು ಹೇಗೆ? ಅನ್ನುವ ಪ್ರಶ್ನೆಯನ್ನು ಒಳಗಿಟ್ಟುಕೊಂಡು ಬಂದವ ಮಹಮ್ಮದ್‌ ಗವಾನ್‌. ಕುದುರೆ ಮಾರಾಟಕ್ಕೆ ಬಂದವ, ಇಲ್ಲೇ ಮಂತ್ರಿಯಾದ. ಎಲ್ಲ ತಿಳ್ಕೊಳಲಿಕ್ಕೆ ಶುರು ಮಾಡಿದ. ಆತ ಮುಸ್ಲಿಮ್‌. ಇಲ್ಲಿಯ ಮುಸ್ಲಿಮರೇ ಅವನ ವಿರುದ್ಧ ನಿಂತರು. ಅವನ ಬಗ್ಗೆ ಚಾಡಿ ಹೇಳಿ ಅವನ ಕೊಲೆಗೆ ಕಾರಣರಾದರು. ಅದಾಗಿದ್ದು ಹೀಗೆ.. ಗವಾನ್‌ ಯಾವುದೋ ಪ್ರಾಂತ್ಯಕ್ಕೆ ಟ್ಯಾಕ್ಸ್‌ ವಸೂಲಿಗೆ ಹೋಗಿದ್ದಾಗ ಅಲ್ಲಿ ಬರ ಪರಿಸ್ಥಿತಿ. ಅವರಾರ‍ಯರೂ ಕಂದಾಯ ಕಟ್ಟುವ ಸ್ಥಿತಿಯಲ್ಲಿ ಇರಲಿಲ್ಲ. ಅವರ ಬಗ್ಗೆ ಮರುಕಪಟ್ಟು ಗವಾನ್‌ ತಾನೇ ಅವರಿಗೆ ಒಂದಿಷ್ಟುಸಹಾಯ ಮಾಡಿ ವಾಪಾಸು ಬರುತ್ತಾನೆ. ಅದಕ್ಕಾಗಿ ಈತ ಹಿಂದೂ ಪಕ್ಷಪಾತಿ ಅಂತ ಮುಸ್ಲಿಮರು ಚಾಡಿ ಹೇಳಿದರು. ರಾಜ ಇವನ ಬಳಿಯೇ ಪ್ರಶ್ನೆ ಕೇಳುತ್ತಾನೆ, ‘ಇಂಥಾ ದ್ರೋಹ ಮಾಡಿದವನಿಗೆ ಏನು ಶಿಕ್ಷೆ ಕೊಡಬೇಕು’ ಅಂತ. ‘ದ್ರೋಹ ಮಾಡಿದ್ದೇ ಆದಲ್ಲಿ ತಲೆದಂಡ ಶಿಕ್ಷೆ’ ಅಂತ ಆತ ಹೇಳುತ್ತಾನೆ. ಕೂಡಲೇ ರಾಜ ತಲೆ ತೆಗೆಯುತ್ತಾನೆ. ಅಷ್ಟರಲ್ಲಿ ಆ ಭಾಗದಿಂದ ಒಬ್ಬ ದುಡ್ಡು ತಗೊಂಡು ಬಂದು ಕೊಟ್ಟ. ಆ ಬರದ ಭಾಗದಿಂದ ಹಣ ತಂದು ಕೊಟ್ಟವನ್ಯಾರು ಅಂತ ನೋಡಿದರೆ ಆತ ವಿಠಲ. ಒಬ್ಬ ದಲಿತನಾದ ವಿಠಲ, ಒಬ್ಬ ಮುಸ್ಲಿಮನಿಗಾಗಿ ಹಣ ತೆಗೆದುಕೊಂಡು ಬಂದಿದ್ದ. ಈಗಲೂ ಕೂಡ ಆ ಊರಿನಲ್ಲಿ ವಿಠಲ ಬಂದು ನಿಂತ ಜಾಗ ತೋರಿಸ್ತಾರೆ. ಪ್ರತೀವರ್ಷ ಆ ದಿನ ಆಚರಿಸುತ್ತಾರೆ. ಅಂದರೆ ಈ ದೇಶದಲ್ಲಿ ಇಂಥದ್ದೆಲ್ಲ ಇದೆ. ಆದರೆ ನಾವು ಬರೀ ಜಾತೀಯತೆ ಅಂತೀವಿ. ಅದನ್ನೆಲ್ಲ ಮೀರಬಲ್ಲೆವು ನಾವು. ಅಂಥ ಸಂಸ್ಕೃತಿ ಇದೆ ಇಲ್ಲಿ.

ಇನ್ನೊಂದು ಕಡೆ ಚಾಂದ್‌ ಬೀ. ಆಕೆ ಶ್ರೀಕೃಷ್ಣ ಪಾರಿಜಾತವನ್ನು ಅದೆಷ್ಟುಚೆನ್ನಾಗಿ ನಟನೆ ಮಾಡುತ್ತಿದ್ದಳು ಅಂದರೆ ನಾನು ನೋಡಿದ್ದೀನಿ, ಆಟ ಮುಗಿದ ತಕ್ಷಣ ಜನ ಕಾಲಿಗೆ ಬೀಳೋರು, ಸಾಕ್ಷಾತ್‌ ಕೃಷ್ಣನನ್ನು ನೋಡಿದವಳು ಇವಳು ಅಂತ. ದಲಿತ ಹಿನ್ನೆಲೆಯವಳು, ಮುಸ್ಲಿಮನನ್ನು ಮದುವೆಯಾಗಿ ಮುಸ್ಲಿಮ್‌ ಹೆಸರಿಟ್ಟುಕೊಂಡಾಕೆ ಈ ಚಾಂದ್‌ ಬೀ. ಆದರೆ ನಾಟಕ ಮುಗಿದ ಬಳಿಕ ಕಣ್ಣೀರು ಹಾಕುತ್ತಾ ಆಕೆಯ ಕಾಲು ಮುಗಿಯುವವರಲ್ಲಿ ಹಿಂದೂಗಳ ಜೊತೆಗೆ ಮುಸ್ಲಿಮರೂ ಇದ್ದರು. ಮುದುಕರು ಮುದುಕಿಯರ ಥರ ಅಳೋರು, ಆ ಥರದ ಆ್ಯಕ್ಟಿಂಗ್‌ ಅವಳದು. ಇದಕ್ಕೆ ಏನಂತೀರಿ. ಅವಳನ್ನು ಸಾಕಿದವರು ಬ್ರಾಹ್ಮಣರು. ಮನೆ ಮಗಳಂತೆ ಅವಳನ್ನು ಸಾಕಿದರು. ಕೊನೆಗೆ ತಮಗೆ ವಯಸ್ಸಾಗುತ್ತಾ ಬಂದಾಗ ಆಕೆಯನ್ನು ಇಷ್ಟಪಡುತ್ತಿದ್ದ ಈ ಮುಸ್ಲಿಮ್‌ ಹುಡುಗನಿಗೆ ಮದುವೆ ಮಾಡಿಕೊಟ್ಟರು. ರಾಣಿ ಥರ ನಡೆಸಿಕೊಳ್ಳಬೇಕು ಅನ್ನುವ ಕರಾರಿನೊಂದಿಗೆ. ಆತ ಹಾಗೇ ನಡೆಸಿಕೊಂಡ. ಇವೆಲ್ಲ ನಡೆಯೋದು ನಮ್ಮ ದಲಿತರು, ಮುಸ್ಲಿಮ, ಹಿಂದೂಗಳ ನಡುವೆ. ಇಲ್ಲಿ ಏನೋ ಒಂದಿದೆ. ಹೌದಲ್ಲೋ.. ಅದನ್ನು ತಿಳ್ಕೊಳ್ಳಲಿಕ್ಕೆ ಬಂದಿದ್ದ ಆ ಗವಾನ್‌. ಯಾವುದೋ ಹೊತ್ತಲ್ಲಿ ಸಾಕ್ಷಾತ್‌ ವಿಠಲನೂ ಬಂದ. ಈಗಲೂ ಪಂಡರಾಪುರದ ವಿಠಲನ ಭಜನೆಯಲ್ಲಿ ಈ ಕತೆಯ ಉಲ್ಲೇಖ ಬರುತ್ತದೆ. ನಾನು ಹಂಪಿಯಲ್ಲಿದ್ದಾಗ ಅಲ್ಲಿಗೆ ಭೇಟಿಕೊಟ್ಟಿದ್ದೆ. ಆ ಗವಾನ್‌ ತನ್ನ ಸಂಬಳದ ಹಣವನ್ನೆಲ್ಲ ಒಟ್ಟು ಹಾಕಿ ಒಂದು ಲೈಬ್ರೆರಿ ಕಟ್ಟುತ್ತಾನೆ. ಜಗತ್ತಿನಾದ್ಯಂತದ ಪುಸ್ತಕಗಳನ್ನೆಲ್ಲ ತಂದು ಇಲ್ಲಿ ಇಟ್ಟಿದ್ದ. ಇಡೀ ಜಗತ್ತಿನಲ್ಲಿ ಆ ಲೈಬ್ರೆರಿ ಖ್ಯಾತವಾಗಿತ್ತು. ಹಲವು ವಿದ್ವಾಂಸರು ಇಲ್ಲಿ ಭೇಟಿ ಕೊಡುತ್ತಿದ್ದರು. ರಾಜನಿಗೆ ಇದೆಲ್ಲ ಗೊತ್ತಾದದ್ದು ಆತ ಸತ್ತಮೇಲೆ.

ವಾಲ್ಮೀಕಿಯಷ್ಟೇ ಭೈರಪ್ಪ ಜನಪ್ರಿಯ: ಕಂಬಾರ

ಇಂಥಾ ಒಳ್ಳೊಳ್ಳೆ ವ್ಯಕ್ತಿಗಳು ಇದ್ದಾರೆ. ಇನ್ನೊಬ್ಬರು ಸಾವಳಗಿ ಶಿವಲಿಂಗ ಸ್ವಾಮೀಜಿಗಳು. ಆತ ಪುಟ್ಟಹುಡುಗ. ಊರ ಗೌಡರ ಮಗ. ಆತ ಎಲ್ಲರನ್ನೂ ಸಮನಾಗಿ ನೋಡುತ್ತಿದ್ದ. ತನ್ನ ಬಳಿ ಇರುವುದನ್ನು ದಲಿತರು, ಮುಸ್ಲಿಮರು, ಹಿಂದುಳಿದವರು ಎಲ್ಲರಿಗೂ ಕೊಡುತ್ತಿದ್ದ. ಮನಸ್ಸು, ಬುದ್ಧಿ ಪಕ್ವವಾಗಿತ್ತು. ಆಗ ದಿಲ್ಲಿಯಲ್ಲಿ ಔರಂಗಜೇಜನ ಜೊತೆಗಿದ್ದ ಬಂದೇ ನವಾಜ್‌ ದಕ್ಷಿಣ ಭಾರತಕ್ಕೆ ಪ್ರವಾಸಕ್ಕೆ ಬಂದ. ಶಿವಲಿಂಗೇಶ್ವರನನ್ನು ಭೇಟಿಯಾಗಲು ಹೊರಟ. ಆತ ತನ್ನ ಭೇಟಿಗೆ ಬರುತ್ತಾನೆ ಅನ್ನೋದನ್ನು ಅರಿತ ಶಿವಲಿಂಗ ತಾನೇ ಅವರನ್ನು ಭೇಟಿಯಾಗಲು ಹೊರಟ. ಗುಲ್ಬರ್ಗಾ ಹಾಗೂ ಸಾವಳಗಿ ಮಧ್ಯ ಅವರಿಬ್ಬರೂ ಸಂಧಿಸಿದರು. ಅನೇಕ ವಿಚಾರಗಳ ಬಗ್ಗೆ ಚರ್ಚೆಗೆ ಮುಂದಾದರು. ಹದಿಮೂರು ದಿನಗಳ ಕಾಲ ಅವರ ನಡುವೆ ವಾದ-ಚರ್ಚೆ ನಡೆಯಿತು. ಹದಿಮೂರನೇ ದಿನ ಬಂದೇ ನವಾಜ್‌ ಹೇಳಿದ, ‘ಏ ತಮ್ಮಾ, ನಾನು ಹೇಳಿದ್ದನ್ನೇ ನೀನು ಹೇಳ್ತಾ ಇದ್ದೀ.’ ಶಿವಲಿಂಗನೂ, ‘ಇಲ್ಲಾ ನವಾಜರೇ, ನೀವೇ ನಾನು ಹೇಳಿದ್ದನ್ನು ರಿಪೀಟ್‌ ಮಾಡ್ತಾ ಇದ್ದೀರಿ’ ಅಂದ. ಆವಾಗ ಇಬ್ಬರಿಗೂ ಗೊತ್ತಾಯ್ತು, ಧರ್ಮ ಎರಡಲ್ಲ, ಒಂದೇ. ಅದು ಮಾನವ ಧರ್ಮ ಅಂತ. ಆ ತಿಳಿವಳಿಕೆ ಬಂದ ತಕ್ಷಣವೇ ಇಬ್ಬರೂ ಸ್ನೇಹಿತರಾಗಿ ಇರಲು ತೀರ್ಮಾನಿಸುತ್ತಾರೆ. ಸ್ನೇಹದ ಸಂಕೇತವಾಗಿ ಪರಸ್ಪರರ ಬಟ್ಟೆಯನ್ನು ಬದಲಿಸಿಕೊಳ್ಳುತ್ತಾರೆ. ನವಾಜರು ತನ್ನ ಹಸಿರು ಬಟ್ಟೆಯನ್ನು ಶಿವಲಿಂಗೇಶ್ವರರಿಗೆ ಕೊಟ್ಟರು. ಕಾವಿ ಬಟ್ಟೆತಾನು ತೊಟ್ಟುಕೊಂಡರು. ಈ ಸಾಮರಸ್ಯದ ಬಗ್ಗೆ ಜನರಲ್ಲಿ ತಿಳಿವಳಿಕೆ ಬಿತ್ತುತ್ತಾ ಸುಮಾರು 360 ಶಾಖಾ ಮಠವನ್ನು ಗುರು ಶಿವಲಿಂಗೇಶ್ವರರು ತೆರೆಯುತ್ತಾರೆ. ಈ ಮಠದ ಮೇಲುಗಡೆ ಬಂದೇ ನವಾಬರ ಸಮಾಧಿ. ಕೆಳಗಡೆ ಸಾವಳಗಿ ಶಿವಲಿಂಗೇಶ್ವರ ಸಮಾಧಿ. ಈಗಲೂ ಎಂಟು ದಿನ ಇಲ್ಲಿ ಜಾತ್ರೆ ಮಾಡ್ತಾರೆ. ಆಗ ಸ್ವಾಮಿಗಳು ಹಸಿರು ಬಟ್ಟೆತೊಟ್ಟುಕೊಳ್ತಾರೆ, ನವಾಬರ ಸಮಾಧಿಯನ್ನು ಪೂಜಿಸುವ ಮುಸ್ಲಿಂ ಬಾಂಧವರು ಕಾವಿ ಬಟ್ಟೆತೊಡುತ್ತಾರೆ. ನಾನು ಆ ಮಠದಲ್ಲಿ ಓದಿದವನು. ಇದೆಲ್ಲ ನೋಡಿದರೆ ಏನೋ ಒಂದಿದೆ ಅನಿಸುತ್ತದೆ.

7. ಕಾಲ ಬದಲಾಗುತ್ತಿದ್ದಂತೆ ಶಿವಾಪುರ ಎಂಬ ಮಿಥ್‌ ಕೂಡ ಆಧುನಿಕವಾಗುತ್ತಾ ಹೋಗುತ್ತದೆ. ಆಧುನಿಕ ಮಿಥ್‌ ಒಂದನ್ನು ಸೃಷ್ಟಿಸಿದವರು ನೀವು. ಭಾರತೀಯ ಸಂದರ್ಭದಲ್ಲಿ ಮಿಥ್‌ ಬಹಳ ಮುಖ್ಯ ಅನ್ನಿಸುತ್ತದೆಯಾ?

ಇದು ಬಹಳ ಮುಖ್ಯ. ನನ್ನಂಥವರು ಮಾತ್ರ ಅಲ್ಲ ನಮ್ಮ ಹಳ್ಳಿಯ ಜನಗಳೂ ಅದನ್ನು ಸಮಕಾಲೀನಗೊಳಿಸುತ್ತಾ ಹೋಗುತ್ತಾರೆ. ಅವರಿಗೇನೂ ಗೊತ್ತಿಲ್ಲ ಅಂದುಕೊಳ್ಳಬೇಡಿ. ಅವರು ಪರಂಪರೆ ಜೊತೆಗೆ ಕಮ್ಯುನಿಸ್ಟ್‌ನಂಥಾ ಸಿದ್ಧಾಂತಗಳನ್ನೂ ಜೀರ್ಣಿಸಿಕೊಂಡು ಮುಂದೆಹೋಗಬಲ್ಲ ಪ್ರಬಲರು. ಹೊಸ ವಿಚಾರಗಳನ್ನು ಸ್ವೀಕರಿಸಿ, ನಮ್ಮತನವನ್ನೂ ಉಳಿಸಿಕೊಂಡು ಸಮನ್ವಯ ಸಾಧಿಸುತ್ತಾ ತಮ್ಮಲ್ಲಿ ಅಳವಡಿಸಿಕೊಳ್ತಾ ಹೋಗ್ತಾರೆ. ಇಂಥಾ ಸಂಸ್ಕೃತಿ ನಮಗೆ ಬೇಕು. ಇದರಲ್ಲೇ ನಾವು ಬದುಕಬೇಕು.

ಕೃಷ್ಣಮೂರ್ತಿಗೆ ನ್ಯಾಯ ಕೊಡಿ, ಇಲ್ಲಾ ಹೋರಾಟ ಎದುರಿಸಿ.. ಅಕಾಡೆಮಿಗೆ ಚಿಂತಕರ ಪತ್ರ

8. ಇತ್ತೀಚೆಗೆ ವೀರಪ್ಪ ಮೊಯಿಲಿಯವರಿಗೆ ಜ್ಞಾನಪೀಠ ಕೊಡಿಸಬೇಕು ಎಂಬ ಶಿಫಾರಸು ಮಾಡಲಾಗಿದೆ ಎಂದೂ, ಅದರಲ್ಲಿ ನಿಮ್ಮ ಪಾತ್ರವಿದೆ ಎಂದೂ ಆರೋಪಗಳಿವೆ. ನಿಮ್ಮ ಪ್ರತಿಕ್ರಿಯೆ ಏನು?

ಸಾಹಿತ್ಯ ಅಕಾಡೆಮಿಗೂ ಜ್ಞಾನಪೀಠ ಪ್ರಶಸ್ತಿಗೂ ಸಂಬಂಧ ಇಲ್ಲ. ಜ್ಞಾನಪೀಠ ಕೊಡುವುದು ಸರ್ಕಾರಿ ಸಂಸ್ಥೆ ಅಲ್ಲ. ಅಕಾಡೆಮಿ ಸರ್ಕಾರಿ ಸಂಸ್ಥೆ. ವೀರಪ್ಪ ಮೊಯಿಲಿ ಅವರಿಗೆ ಆ ವರ್ಷ ಬಂದ ಕೃತಿಗಳಲ್ಲೇ ಒಳ್ಳೆಯ ಕೃತಿ ಅಂತ ಅವಾರ್ಡ್‌ ಕೊಟ್ಟಿದ್ದೇವೆ. ಹಾಗಂತ ಈ ಪ್ರಶಸ್ತಿಗೂ ನಮಗೂ ಸಂಬಂಧ ಇರೋದಿಲ್ಲ. ಎರಡು ಕಮಿಟಿಗಳಿರುತ್ತವೆ, ಆ ಕಮಿಟಿಯವರು ತೀರ್ಮಾನ ಮಾಡುತ್ತಾರೆ. ಹಾಗೆ ತೀರ್ಮಾನ ಮಾಡಿದ್ದು ಎಲ್ಲರಿಗೂ ಯಾವ ದಿವಸ ಗೊತ್ತಾಗುತ್ತೋ ಆಗಲೇ ಅಧ್ಯಕ್ಷನಾದ ನನಗೂ ತಿಳಿಯುವುದು. ಹೀಗಾಗಿಯೇ ಅಕಾಡೆಮಿಯ ಪ್ರಶಸ್ತಿಗೆ ಆ ಮಟ್ಟಿನ ಬೆಲೆ ಇರುವುದು. ಆದ್ದರಿಂದ ನಾವು ಕೊಟ್ಟೀವಿ, ನಾವು ರೆಫರ್‌ ಮಾಡಿದ್ದೀವಿ ಅನ್ನೋದು ತಪ್ಪು. ಅವರು ಪ್ರಶಸ್ತಿ ಕೊಡುವ ಮುಂಚೆ ಸಭೆ ಕರೆದು ಚರ್ಚಿಸುತ್ತಾರೆ ಅನ್ನೋದು ಬಿಟ್ಟರೆ ನಮಗೂ ಅದಕ್ಕೂ ಸಂಬಂಧ ಇಲ್ಲ.

9. ಸಾಮಾಜಿಕ ಜಾಲತಾಣದ ಚರ್ಚೆಗಳು ಸಾಹಿತ್ಯಕ್ಕೆ ಪೂರಕವೇ?

ಇಲ್ಲ.

10. ಮತ್ತೆ ನಿಮ್ಮಿಂದ ಇನ್ನೊಂದು ನಾಟಕ ನಿರೀಕ್ಷೆ ಮಾಡಬಹುದೇ?

ನಾಟಕ ಬರೀತಿದ್ದೀನಿ. ಶಿವಾಪುರವನ್ನೇ ಕೇಂದ್ರವಾಗಿಟ್ಟುಕೊಂಡಿರುವ ಮತ್ತೊಂದು ನಾಟಕ ಇದು. ಇನ್ನೂ ಹೆಸರಿಟ್ಟಿಲ್ಲ.
 

click me!