ಯೋಗದಿಂದ ಆರೋಗ್ಯ ರಕ್ಷಣೆ ಹೇಗೆ? ಮೂಲ ಅಂಶಗಳು ಇಲ್ಲಿವೆ

By Kannadaprabha News  |  First Published Jun 17, 2019, 10:06 PM IST

ಪ್ರತಿಯೊಂದು ಜೀವಿಗೂ ಅದರ ಉಳಿವು, ಬೆಳೆವಿಗೆ ಬೇಕಾದ ವ್ಯವಸ್ಥೆ ಪ್ರಕೃತಿಯಲ್ಲಿಯೇ ಇದೆ. ಇದನ್ನೇ ಭಾರತೀಯ ಶಾಸ್ತ್ರ, ಪುರಾಣಗಳೂ ಹೇಳಿವೆ. ಹಾಗಾಗಿಯೇ ಪ್ರಾಣಿ ಪಕ್ಷಿಗಳು ಪ್ರತಿದಿನ ಸ್ನಾನಾದಿ ಕ್ರಿಯೆಗಳನ್ನು ಮಾಡದಿದ್ದರೂ ಪ್ರತಿದಿನ ಶುದ್ಧವಾಗಿಯೇ ಇರುತ್ತವೆ. ಮಾನವನಿಗೂ ಹಾಗೆಯೇ ತನ್ನ ದೇಹಕ್ಕೆ ಕಾಯಿಲೆಗಳು ಬಾರದಂತೆ, ಬಂದರೂ ಪ್ರಾಕೃತಿಕವಾಗಿಯೇ ಅವುಗಳನ್ನು ನಿವಾರಿಸಿಕೊಳ್ಳಬಹುದಾದ ದಾರಿಗಳು ಹುಟ್ಟಿನಿಂದಲೇ ಲಭ್ಯವಿವೆ. ಆದರೆ ದುರದೃಷ್ಟವಶಾತ್‌ ನಮ್ಮ ಅನವಧಾನತೆಯಿಂದ ಅದೆಷ್ಟೋ ವಿಧಾನಗಳು ಇಂದು ಕಣ್ಮರೆಯಾಗಿವೆ. ಕೆಲವೇ ಕೆಲವು ಅಲ್ಪಸ್ವಲ್ಪ ಬದಲಾವಣೆಯೊಂದಿಗೆ ಚಲಾವಣೆಯಲ್ಲಿದೆ. ಅವುಗಳಲ್ಲಿ ಯೋಗವೂ ಒಂದು.


ಧ್ಯಾನ, ಆಸನ, ಪ್ರಾಣಾಯಾಮದಿಂದ ಪೂರ್ಣಾರೋಗ್ಯ: ಆರೋಗ್ಯವೆಂದರೆ ಕೇವಲ ದೇಹಕ್ಕೆ ಸಂಬಂಧಿಸಿದ್ದು ಮಾತ್ರವಲ್ಲ, ಮನಸ್ಸಿಗೂ ಸಂಬಂಧಿಸಿದ್ದು. ದೇಹ ಮನಸ್ಸು ಎರಡೂ ಆರೋಗ್ಯದಿಂದ ಇದ್ದರೆ ಮಾತ್ರ ವ್ಯಕ್ತಿಯ ವ್ಯಕ್ತಿತ್ವ ವಿಕಸನ ಉಂಟಾಗುತ್ತದೆ. ಹೀಗೆ ದೇಹ ಮತ್ತು ಮನಸ್ಸು ಎರಡನ್ನೂ ಏಕಕಾಲದಲ್ಲಿ ಆರೋಗ್ಯವಾಗಿ ಇಡಲು ಯೋಗ ಸಹಕಾರಿ. ಸುಮಾರು ಕ್ರಿ.ಶ.200ರಲ್ಲಿ ಪತಂಜಲಿಯ ಅಷ್ಟಾಂಗಯೋಗದಲ್ಲಿ ಯಮ, ನಿಯಮ, ಆಸನ, ಪ್ರಾಣಾಯಾಮ ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ ಎಂಬ ಎಂಟು ವಿಧಾನಗಳನ್ನು ಹೇಳಲಾಗಿದೆ. ಇದರಲ್ಲಿ ಆಸನ, ಪ್ರಾಣಾಯಾಮ, ಧ್ಯಾನಯೋಗಗಳು ಇಂದೂ ಚಾಲ್ತಿಯಲ್ಲಿದೆ. ಇವುಗಳಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಮಾತ್ರವಲ್ಲದೇ ದೇಹವೂ ಸದೃಢವಾಗಿ ಇರುತ್ತದೆ. ‘ಯೋಗೇನ ಚಿತ್ತಸ್ಯ ಪದೇನ ವಾಚಾಂ, ಮಲಂ ಶರೀರಸ್ಯ ಚ ವೈದ್ಯಕೇನ, ಯೋಪಾಕರೋತ್ತಮ್‌ ಪ್ರವರಂ ಮುನೀನಾಂ ಪತಂಜಲಿಂ ಪ್ರಾಂಜಲಿರಾನತೋಸ್ಮಿ’ ಎಂದು ಯೋಗದಿಂದ ಚಿತ್ತವನ್ನೂ, ಪದಗಳಿಂದ ಮಾತನ್ನೂ, ವೈದ್ಯಕೀಯದಿಂದ ಶರೀರದ ಕಲ್ಮಶಗಳನ್ನು ಶುಚಿಗೊಳಿಸುವ ವಿವರಗಳನ್ನು ತಿಳಿಸಿಕೊಟ್ಟಪತಂಜಲಿ ಮುನಿಗೆ ಕೈ ಮುಗಿಯುವೆ ಎಂಬ ಶ್ಲೋಕವೊಂದಿದೆ.

ಅಂದರೆ ಯೋಗ ದೇಹಾರೋಗ್ಯಕ್ಕೆ ಮಾತ್ರವಲ್ಲ ಮಾನಸಿಕ ಆರೋಗ್ಯಕ್ಕೂ ಸಹಕಾರಿ ಎಂಬುದು ಇಲ್ಲಿ ತಿಳಿಯುತ್ತದೆ. ಮನುಷ್ಯನೊಬ್ಬ ಪೂರ್ಣ ಆರೋಗ್ಯವಂತ ಎಂದರೆ ಅವನಲ್ಲಿ ವಾತ, ಪಿತ್ತ, ಕಫಗಳೆಂಬ ಮೂರು ದೋಷಗಳು, ರಕ್ತ, ಮಜ್ಜೆ ಇತ್ಯಾದಿ ಸಪ್ತಧಾತುಗಳು, ಅಗ್ನಿ, ಮಲಕ್ರಿಯೆಗಳು ಸಮವಾಗಿದ್ದು, ಇಂದ್ರಿಯಗಳು, ಮನಸ್ಸು ಮತ್ತು ಆತ್ಮವು ಪ್ರಸನ್ನವಾಗಿ ಅಂದರೆ ಸಂತೃಪ್ತವಾಗಿರುತ್ತದೆ. ಮನುಷ್ಯನ ಆರೋಗ್ಯ ಎಂದರೆ ಕೇವಲ ದೇಹದ ಆರೋಗ್ಯವಲ್ಲದೆ, ಅದು ಮನಸ್ಸು ಇತ್ಯಾದಿಗಳನ್ನು ಒಳಗೊಂಡ ಒಂದು ಸ್ಥಿತಿ. ಇವೆಲ್ಲವನ್ನೂ ಏಕಕಾಲದಲ್ಲಿ ಸಂತೃಪ್ತಗೊಳಿಸಲು ಯೋಗ ಸಹಕಾರಿ.

Tap to resize

Latest Videos

undefined

ಯೋಗದ ದೃಷ್ಟಿಯಲ್ಲಿ ದೇಹವು ಅನ್ನಮಯ ಕೋಶ, ಪ್ರಾಣಮಯ ಕೋಶ, ಮನೋಮಯ ಕೋಶ, ವಿಜ್ಞಾನಮಯ ಕೋಶ ಮತ್ತು ಆನಂದಮಯ ಕೋಶಗಳಿಂದ ಕೂಡಿದೆ. ಈ ಐದು ಕೋಶಗಳು ತಾಳ ತಪ್ಪದಂತೆ ಕೆಲಸ ನಿರ್ವಹಿಸಲು ಯೋಗದ ಅವಶ್ಯಕತೆಯಿದೆ. ಅನæೕಕ ಶತಮಾನಗಳ ಅನುಭವದಿಂದ ದೇಹದ ಪ್ರತಿಯೊಂದು ಅಂಗಕ್ಕೂ, ಮಾಂಸಖಂಡಗಳಿಗೂ, ನರಗಳಿಗೂ ವ್ಯಾಯಾಮ ಸಿಗುವಂತೆ ಆಸನಗಳನ್ನು ನಿಯೋಜಿಸಲಾಗಿದೆ. ಅವು ದೇಹವನ್ನು ಸದೃಢಗೊಳಿಸುತ್ತವೆ. ದೇಹ, ಮನಸ್ಸು ಮತ್ತು ಆತ್ಮಗಳ ಸಾಮರಸ್ಯದಿಂದ ಉಂಟಾಗುವುದೇ ನಿಜವಾದ ಆರೋಗ್ಯವಾಗಿದೆ. ಇದನ್ನು ಶರೀರದ ಶುದ್ಧಿಯಿಂದ ಮಾತ್ರ ಪಡೆಯಬಹುದು. ಅಸಮರ್ಪಕ ತಿನ್ನುವಿಕೆ, ಅಸಮಂಜಸವಾಗಿ ಕ್ರಿಯೆಗಳನ್ನು ನಡೆಸುವುದರಿಂದ ಆರೋಗ್ಯ ಕೆಡುತ್ತದೆ. ಆರೋಗ್ಯವನ್ನು ಯಾವುದೇ ವೈಜ್ಞಾನಿಕ ಉಪಾಯದಿಂದ ಅಥವಾ ಸಂಪತ್ತುಗಳಿಂದ ಪಡೆದುಕೊಳ್ಳಲು ಸಾಧ್ಯವಿಲ್ಲ. ಇದು ಮಂತ್ರ, ಜಪ, ತಪಗಳಿಂದಲೂ ಸಿಗುವುದಿಲ್ಲ. ಉತ್ತಮ ಆರೋಗ್ಯ ಪಡೆಯಲು ಯೋಗಮಾರ್ಗ ಒಂದೇ ಸರಿಯಾದ ಉಪಾಯ.

ಪ್ರಾಣಾಯಾಮ: ಪ್ರಾಣಿಗಳ ಶರೀರ ಪೃಥ್ವಿ, ಅಪ್‌, ತೇಜಸ್ಸು, ವಾಯು, ಆಕಾಶಗಳೆಂಬ ಪಂಚಭೂತಗಳ ಜೊತೆಗೆ ಕಾಲ ದಿಕ್‌, ಆತ್ಮ, ಮನಸ್ಸುಗಳಿಂದಲೂ ಕೂಡಿದೆ. ಇದರಲ್ಲಿ ಶರೀರದ ಹಾಗೂ ಮನಸ್ಸಿನ ನಡುವೆ ಇರುವ ಕೊಂಡಿಯೇ ಉಸಿರಾಟ. ಇದರಲ್ಲಿ ಪ್ರಾಣ, ಅಪಾನ ಎಂದು ಎರಡು ವಿಧ. ಪ್ರಾಣ ಎಂಬುದು ಉನ್ನತ ಮಟ್ಟದ್ದಾಗಿದೆ. ಮುಂಡಕ ಉಪನಿಷತ್ತಿನ ಪ್ರಕಾರ ಪ್ರಜ್ಞೆಯ ಕೇಂದ್ರ ಸ್ಥಾನವಾದ ಆತ್ಮದಿಂದ ಹರಿದು ಬರುವ ಚೈತನ್ಯವೇ ಪ್ರಾಣ. ಪ್ರಾಣವಾಯು ನಮ್ಮ ದೇಹವನ್ನು ಸೇರಿದರೆ, ದೇಹದಿಂದ ಹೊರಹೋಗುವ ವಾಯುವಿಗೆ ಅಪಾನ ವಾಯು ಎನ್ನುತ್ತಾರೆ. ಹೀಗೆ ನಮ್ಮ ನಿರಂತರ ಉಸಿರಾಟದ ಕ್ರಿಯೆಯನ್ನು ಸರಿಯಾಗಿ ಮಾಡುವುದೇ ಪ್ರಾಣಾಯಾಮ. ಇದೂ ಒಂದು ಯೋಗದ ವಿಧ. ಪ್ರಾಣ ಎಂಬುದು ಬಹಳ ಶಕ್ತಿಯುತವಾದ ಮೂಲಭೂತ ವಿಷಯ. ಪ್ರಾಣದ ಮೇಲೆ ನಮಗೆ ಹಿಡಿತ ಇದ್ದರೆ ಸಾವಿನ ಮೇಲೂ ನಮಗೆ ಹಿಡಿತ ಇರುತ್ತದೆ. ಮನುಷ್ಯ ತನ್ನ ಜೀವನ, ಬಾಲ್ಯ, ವೃತ್ತಿ, ಆಸ್ತಿ, ಐಶ್ವರ್ಯ ಮುಂತಾದುವನ್ನು ಕುರಿತು ಆಲೋಚಿಸುತ್ತಾನೆಯೇ ಹೊರತು ತನ್ನ ಉಸಿರಾಟದ ಬಗ್ಗೆಯಲ್ಲ. ಉಸಿರಾಟವು ಸರಿಯಾಗಿ ಆಗುತ್ತಿಲ್ಲವೆಂದರೆ ಉಸಿರಾಟವನ್ನು ನಿಗ್ರಹಿಸಿಲ್ಲ ಎಂದರ್ಥ. ಶ್ವಾಸಕೋಶಗಳನ್ನು ಸ್ವಸ್ಥವಾಗಿಟ್ಟುಕೊಂಡು ಆ ಮೂಲಕ ರಕ್ತಸಂಚಾರ, ನರಮಂಡಲವನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಬೇಕು. ಶ್ವಾಸಕೋಶಗಳ ವ್ಯಾಯಾಮ, ಅಂದರೆ ಸರಿಯಾದ ರೀತಿಯ ಉಚ್ಛಾ$್ವಸ ನಿಃಶ್ವಾಸಗಳನ್ನು ಅಭ್ಯಾಸ ಮಾಡಬೇಕು. ಇದೇ ಪ್ರಾಣಾಯಾಮ. ಇದರಿಂದ ಆಯಸ್ಸು ವೃದ್ಧಿಸುವುದು ಖಚಿತ.

ಧ್ಯಾನ : ಧ್ಯಾನವೆಂದರೆ ಮನಸ್ಸನ್ನು ಒಂದೆಡೆ ಕೇಂದ್ರೀಕರಿಸುವುದು ಎಂದರ್ಥ. ಧ್ಯಾನ ಮಾಡುವಾಗ ಮನಸ್ಸು ಉಸಿರಾಟದ ಗತಿಯನ್ನು ಗಮನಿಸಬೇಕು. ಆದ್ದರಿಂದಲೇ ಧ್ಯಾನ ಮತ್ತು ಪ್ರಾಣಾಯಾಮಕ್ಕೆ ಅವಿನಾಭಾವ ಸಂಬಂಧವಿದೆ. ಬ್ರಹ್ಮಸೂತ್ರದಲ್ಲಿ ಈ ಧ್ಯಾನಯೋಗದ ಕುರಿತು ಹೇಳಲಾಗಿದೆ. ಜೀವನದ ಮೊದಲ ಹಂತದಿಂದಲೂ ಕೊನೆಯವರೆಗೂ ಧ್ಯಾನ ಯೋಗವನ್ನು ಮಾಡುತ್ತಲೇ ಇರಬೇಕು. ಇದರಿಂದಾಗಿ ಯಾವಾಗ ದೇಹದ ಬಾಧೆಗಳೆಲ್ಲ ತೀರಿ ಆಸೆ ಆಕಾಂಕ್ಷೆಗಳು ನಾಶವಾಗುತ್ತದೋ ಆಗ ವ್ಯಕ್ತಿಯು ಜೀವನ್ಮುಕ್ತನಾಗುತ್ತಾನೆ ಎಂದು ಧ್ಯಾನವನ್ನೇ ಇಲ್ಲಿ ಯೋಗವನ್ನಾಗಿ ಹೇಳಲಾಗಿದೆ. ಧ್ಯಾನದಲ್ಲಿ ಎರಡು ಪ್ರಕಾರ. ಸಾಕಾರ ಅಥವಾ ಸಬೀಜ (ಸಗರ್ಭ) ಧ್ಯಾನ. ಇಲ್ಲಿ ಧ್ಯಾನಕ್ಕೆ ಪೂರಕವಾಗಿ ವಸ್ತು, ದೇವಾನುದೇವತೆ, ನೆಚ್ಚಿನ ಗುರು, ಸೂರ್ಯ, ಚಂದ್ರ, ನಕ್ಷತ್ರ ಹೀಗೆ ಪ್ರಿಯವಾದುದರ ಮೇಲೆ ಮನಸ್ಸನ್ನು ಕೇಂದ್ರೀಕರಿಸಿ ಅದರ ರೂಪ, ಆಕಾರ, ಗುಣ, ಸಾಧನೆಗಳನ್ನು ಮನನ ಮಾಡಿಕೊಳ್ಳುತ್ತಾ ಅಥವಾ ಮಂತ್ರ (ಶ್ಲೋಕ ಪಠಣ) ಸಾಧನದ ಮೂಲಕ ಏಕಾಗ್ರತೆಯನ್ನು ಪಡೆಯುವುದು. ನಿರಾಕಾರ ಅಥವಾ ನಿರ್ಬೀಜ (ಅಗರ್ಭ) ಧ್ಯಾನ ಇನ್ನೊಂದು ವಿಧ. ಇಲ್ಲಿ ಧಾರಣಗೊಂಡ ದೇಹದ ಉಸಿರಾಟ ಪ್ರಕ್ರಿಯೆಯ ಮೇಲೆ ಮನಸ್ಸನ್ನು ಕೇಂದ್ರೀಕರಿಸಿ ಕ್ರಮೇಣ ನಿರಾಕಾರವಾದ ಅನಂತಾತೀತವಾದ ಶೂನ್ಯದತ್ತ ಮನಸ್ಸನ್ನು ಉನ್ನತ ಸ್ಥಿತಿಯತ್ತ ಕೊಂಡೊಯ್ಯುವುದು. ಇಂತಹ ಧ್ಯಾನಯೋಗದಿಂದಾಗಿ ಮನಸ್ಸು ಉದ್ವೇಗಗೊಳ್ಳದೇ ಆರಾಮವಾಗಿ ವಿಶ್ರಮಿಸುತ್ತದೆ. ದೇಹ, ಮನಸ್ಸಿನ ದ್ವಂದ್ವ ದೂರವಾಗುತ್ತದೆ. ಏಕಾಗ್ರತೆ ಲಭಿಸುತ್ತದೆ. ಇದರಿಂದಾಗಿ ನೆನಪಿನ ಶಕ್ತಿ ಹೆಚ್ಚುತ್ತದೆ. ಧ್ಯಾನಾಭ್ಯಾಸದ ವೇಳೆ ದೇಹದ ನವ ದ್ವಾರಗಳು ನಿಯಂತ್ರಿಸಲ್ಪಡುವುದರಿಂದ ಪ್ರಚೋದನೆಗೆ ತಡೆಯೊಡ್ಡುತ್ತದೆ. ಮೆದುಳನ್ನು ಪ್ರಚೋದಿಸುವ ಕರುಳಿನ ಸಂಕೋಚ, ಉಸಿರಾಟ ಪ್ರಕಿಯೆ, ಹೃದಯದ ಬಡಿತ ಸೇರಿದಂತೆ ಹಲವು ಶಾರೀರಿಕ ಸ್ವಾಭಾವಿಕ ಕ್ರಿಯೆಗಳು ನಿಯಂತ್ರಣದಲ್ಲಿರುತ್ತವೆ. ಹೀಗಾಗಿ ಮಾನವನ ಆರೋಗ್ಯ ದೀರ್ಘಕಾಲ ಬಾಳಿಕೆ ಬರುತ್ತದೆ.

ಆಸನ:  ಪತಂಜಲಿಯ ಯೋಗಶಾಸ್ತ್ರದಲ್ಲಿರುವ ಆಸನ ಎಂಬ ಅಂಗ ಇಂದು ಯೋಗಾಸನ ಎಂಬುದಾಗಿಯೇ ಪ್ರಸಿದ್ಧವಾಗಿದೆ. ಯೋಗ ಎಂದರೆ ಕೇವಲ ಆಸನ ಮಾತ್ರ ಎಂಬ ತಪ್ಪು ಗ್ರಹಿಕೆಯೂ ಇದೆ. ಇದೊಂದು ದೈಹಿಕ ಸಾಮರ್ಥ್ಯಕ್ಕಾಗಿ ನಡೆಸುವ ಕಸರತ್ತು ಮಾತ್ರವಲ್ಲ. ಆಸನಗಳು ಸಾಮಾನ್ಯವಾಗಿ ಸ್ಥಿರ ಭಂಗಿಗಳು ಮತ್ತು ಸ್ನಾಯುಗಳ ಸಡಿಲಿಕೆಗೆ ಹೆಚ್ಚಿನ ಅನುಕೂಲ ಮಾಡಿಕೊಡುತ್ತವೆ. ಪತಂಜಲಿ ಆಸನವು ಒಂದು ಸ್ಥಿರ ಹಾಗೂ ಆರಾಮದಾಯಕ ಹಂತವನ್ನು ಪ್ರತಿಪಾದಿಸುತ್ತದೆ. ಇದರ ಚಲನೆ ನಿಧಾನ ಮತ್ತು ನಿಯಂತ್ರಿತವಾಗಿ ಇರುತ್ತದೆ. ಉಸಿರಾಟ ಕೂಡ ಸಮತೋಲಿತವಾಗಿರುತ್ತದೆ. ಇಂದು ಕೆಲವರನ್ನು ಆಸನವನ್ನೇ ವ್ಯಾಯಾಮ ಎಂದೂ ಗ್ರಹಿಸಿದ್ದಾರೆ. ಸಾಮಾನ್ಯವಾಗಿ ವ್ಯಾಯಾಮದಲ್ಲಿ ಪುನರಾವರ್ತಿತ ಚಲನೆಗೆ ಒತ್ತು ನೀಡುವುದರೊಂದಿಗೆ ನಿರಾಳ ಉಸಿರಾಟಕ್ಕೆ ಆಸ್ಪದ ಇರುವುದಿಲ್ಲ. ಆದರೆ ಆಸನದಲ್ಲಿ ಉಸಿರಾಟವೂ ಮುಖ್ಯವಾಗಿರುತ್ತದೆ. ಯೋಗಾಸನದಿಂದ ಮೂಳೆಯ ಮೇಲ್ಪದರದ ಸ್ನಾಯುಗಳ ಬೆಳವಣಿಗೆಯೊಂದಿಗೆ ಮನಸ್ಸಿನ ಚೈತನ್ಯ ಕೂಡ ವೃದ್ಧಿಸುತ್ತದೆ. ಯೋಗದಲ್ಲಿ ಒಮ್ಮೆ ಆಸನವನ್ನು ಮಾಡಿದರೆ ಶರೀರವು ಹಗುರಾಗುತ್ತದೆ. ಅಲ್ಲದೇ ರಕ್ತದ ಅವಶ್ಯಕತೆಯೂ ಕಡಿಮೆಯಾಗುತ್ತದೆ. ಇದು ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಶರೀರವು ಆರಾಮದ ಸ್ಥಿತಿಯಲ್ಲಿ ಇರುತ್ತದೆ. ಇದರ ಪರಿಣಾಮ ಉಸಿರಾಟದ ವ್ಯವಸ್ಥೆ ನಿರಾಳವಾಗಿರುತ್ತದೆ. ಒಟ್ಟಿನಲ್ಲಿ ಇದು ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ.

ನೀವೂ ಯೋಗಾಸನ ಕಲಿಯಿರಿ
ಭುಜಂಗಾಸನ:  ಮುಖವನ್ನು ನೆಲಕ್ಕೆ ಮಾಡಿ ಮಲಗಿ ಸೊಂಟದ ಮೇಲ್ಭಾಗವನ್ನು ಸರ್ಪದ ಆಕೃತಿಯಲ್ಲಿ ಮೇಲೆತ್ತುವುದು. ಈ ಆಸನವು ಮೈಯಲ್ಲಿರುವ ಕೊಬ್ಬು ಕರಗಿಸುವುದರೊಂದಿಗೆ ಬುದ್ಧಿಶಕ್ತಿಯನ್ನು ಹೆಚ್ಚಿಸುತ್ತದೆ. ಬಾಯಿ, ಗಂಟಲು, ಸಣ್ಣಕರುಳು, ದೊಡ್ಡಕರುಳು ಮತ್ತು ಮಲಕೋಶ ಶುದ್ಧಿಯಾಗುತ್ತದೆ. ಈ ಅಭ್ಯಾಸದಿಂದ ಸೊಂಟ ತೆಳ್ಳಗಾಗುವುದು, ಎದೆ ವಿಸ್ತಾರವಾಗುವುದು ಮ್ತತು ದೇಹದಲ್ಲಿರುವ ಕೊಬ್ಬಿನ ಅಂಶ ಕಡಿಮೆಯಾಗುವುದು.

ಹಲಾಸನ: ಅಂಗಾತ ಮಲಗಿ ಬೆನ್ನನ್ನು ಹಿಂದಕ್ಕೆ ಬಾಗಿಸಿ ಎರಡೂ ಕಾಲಿನ ಹೆಬ್ಬೆರಳುಗಳನ್ನು ನೆಲಕ್ಕೆ ತಾಗಿಸುವುದು. ಈ ಆಸನವನ್ನು ಅಭ್ಯಾಸ ಮಾಡುವುದರಿಂದ ದೇಹದ ಕಠಿಣತೆ ಕಡಿಮೆಯಾಗಿ ಸೊಂಟ ಬಲಯುತವಾಗುತ್ತದೆ. ಈ ಅಭ್ಯಾಸದಿಂದ ಬೆನ್ನುಮೂಳೆಗೆ ಒಳ್ಳೆಯ ವ್ಯಾಯಾಮವಾಗುತ್ತದೆ. ಅಲ್ಲಿನ ದೋಷಗಳು ನಿವಾರಣೆಯಾಗುತ್ತವೆ. ಹೀಗಾಗಿ ಬೆನ್ನು ನೋವು ನಿವಾರಣೆಗೆ ಈ ಆಸನ ರಾಮಬಾಣವಾಗಿದೆ.

click me!