
ವಿಶ್ವದ ಅತ್ಯಂತ ಚಿಕ್ಕ ಹಾವು ಬಾರ್ಬಡೋಸ್ ಥ್ರೆಡ್ ಸ್ನೇಕ್ (Barbados Threadsnake). ಆದ್ರೆ ಅನೇಕ ವರ್ಷಗಳಿಂದ ಈ ಹಾವಿನ ಪತ್ತೆ ಇರಲಿಲ್ಲ. ಹಾಗಾಗಿ ಹಾವು ಈ ಭೂಮಿ ಮೇಲೆ ಇಲ್ಲ, ಅದ್ರ ಸಂತತಿ ನಶಿಸಿದೆ ಅಂತ ವಿಜ್ಞಾನಿಗಳು ಭಾವಿಸಿದ್ರು. ಈಗ ಅದಕ್ಕೆ ಸಂಬಂಧಿಸಿದ ಹೊಸ ಅಪ್ ಡೇಟ್ ಬಂದಿದೆ.
20 ವರ್ಷಗಳ ನಂತ್ರ ಮತ್ತೆ ಕಾಣಿಸಿಕೊಂಡ ಬಾರ್ಬಡೋಸ್ ಥ್ರೆಡ್ಸ್ನೇಕ್ : ಯಸ್, 20 ವರ್ಷಗಳ ನಂತ್ರ ಮತ್ತೆ ಬಾರ್ಬಡೋಸ್ ಥ್ರೆಡ್ಸ್ನೇಕ್ ಕಾಣಿಸಿಕೊಂಡಿದೆ. ಈ ಹಾವು ಸಂಪೂರ್ಣವಾಗಿ ಬೆಳೆದಾಗ 10 ಸೆಂಟಿಮೀಟರ್ಗಳಿಗಿಂತ ಉದ್ದ ಇರೋದಿಲ್ಲ. ಇದನ್ನು ಹಾವು ಅಂತ ಹೇಳೋದು ಕಷ್ಟ. ಜನರು ಇದನ್ನು ಹುಳು ಅಂತ ಭಾವಿಸ್ತಾರೆ. ಅಷ್ಟು ಚಿಕ್ಕದಿರುತ್ತದೆ ಈ ಬಾರ್ಬಡೋಸ್ ಥ್ರೆಡ್ಸ್ನೇಕ್. ಇದನ್ನು 20 ವರ್ಷಗಳಿಂದ ಯಾರ ಕಣ್ಣಿಗೂ ಕಂಡಿರಲಿಲ್ಲ. ಮಾರ್ಚ್ನಲ್ಲಿ ಬಾರ್ಬಡೋಸ್ನ ಪರಿಸರ ಸಚಿವಾಲಯ ಮತ್ತು ಸಂರಕ್ಷಣಾ ಸಂಸ್ಥೆ ರೆ: ವೈಲ್ಡ್ ನೇತೃತ್ವದ ಪರಿಸರ ಸಮೀಕ್ಷೆಯ ಸಮಯದಲ್ಲಿ ದ್ವೀಪದ ಮಧ್ಯದಲ್ಲಿರುವ ಬಂಡೆಯ ಕೆಳಗೆ ಅಪರೂಪದ ಈ ಹಾವು ಕಂಡುಬಂದಿದೆ.
ವಿಜ್ಞಾನಿಗಳು ಅಳಿವಿನಂಚಿನಲ್ಲಿರುವ 4,800 ಪ್ರಭೇದಗಳ ಪಟ್ಟಿ ಮಾಡಿದ್ದರು. ಅದ್ರಲ್ಲಿ ಈ ಬಾರ್ಬಡೋಸ್ ಥ್ರೆಡ್ಸ್ನೇಕ್ ಸ್ಥಾನ ಪಡೆದಿತ್ತು. ಸುಮಾರು 2000 ನೇ ಇಸವಿಯಿಂದ್ಲೂ ಈ ಹಾವನ್ನು ಯಾರೂ ಅಧಿಕೃತವಾಗಿ ನೋಡಿರಲಿಲ್ಲ.
ಹಾವು ಹೇಗೆ ಪತ್ತೆ ಆಯ್ತು? : ರಿ: ವೈಲ್ಡ್ನ ಕೆರಿಬಿಯನ್ (Re: Wild Caribbean) ಕಾರ್ಯಕ್ರಮ ಅಧಿಕಾರಿ ಜಸ್ಟಿನ್ ಸ್ಪ್ರಿಂಗರ್ ಇದನ್ನು ಮತ್ತೆ ಪತ್ತೆ ಮಾಡಿದ್ದಾರೆ. ಗಿಡದ ಬೇರಿಗೆ ಕಲ್ಲು ಬಂಡೆ ಸಿಕ್ಕಿಕೊಂಡಾಗ ಅದನ್ನು ತೆಗೆಯಲು ಸ್ನೇಹಿತರ ಜೊತೆ ಜಸ್ಟಿನ್ ಸ್ಪ್ರಿಂಗರ್ ಮುಂದಾಗಿದ್ದರು. ಈ ವೇಳೆ ಬಾರ್ಬಡೋಸ್ ಥ್ರೆಡ್ ಸ್ನೇಕ್ ವಾಸನೆ ಬರ್ತಿದೆ ಎಂದಿದ್ದರು. ನಿಜವಾಗ್ಲೂ ಅಲ್ಲಿ ಈ ಹಾವು ಪತ್ತೆಯಾಯ್ತು. ಯಾವುದೇ ಸುಳಿವಿಲ್ಲದೆ, ಕೇವಲ ವಾಸನೆ ಮೂಲಕ ಹಾವನ್ನು ಪತ್ತೆ ಮಾಡಿದಾಗ ನನಗೆ ಖುಷಿಯಾಯ್ತು, ಈ ಆವಿಷ್ಕಾರ ರೋಚಕವಾಗಿತ್ತು ಎಂದು ಜಸ್ಟಿನ್ ಸ್ಪ್ರಿಂಗರ್ ಹೇಳಿದ್ದಾರೆ.
ಜಸ್ಟಿನ್ ಸ್ಪ್ರಿಂಗರ್ ಜೊತೆ ಪರಿಸರ ಸಚಿವಾಲಯದ ಯೋಜನಾ ಅಧಿಕಾರಿ ಕಾನರ್ ಬ್ಲೇಡ್ಸ್ ಕೂಡ ಈ ಆವಿಷ್ಕಾರದಲ್ಲಿ ಭಾಗಿಯಾಗಿದ್ದರು. ಅವರು ಜಸ್ಟಿನ್ ಸ್ಪ್ರಿಂಗರ್ ಅವರೊಂದಿಗೆ ಹಾವು ಮತ್ತು ಇತರ ಅಪರೂಪದ ಬಾರ್ಬಡೋಸ್ ಸರೀಸೃಪಗಳನ್ನು ಹುಡುಕಲು ಒಂದು ವರ್ಷಕ್ಕೂ ಹೆಚ್ಚು ಕಾಲ ಕಳೆದಿದ್ದರು. ಸದ್ಯ ಬಾರ್ಬಡೋಸ್ ಥ್ರೆಡ್ಸ್ನೇಕ್ ಸಂಖ್ಯೆ ಹೆಚ್ಚಾಗಿಲ್ಲ. ಅಲ್ಲಿ ಇಲ್ಲಿ ಅವು ಕಾಣಿಸುತ್ತವೆ.
ಯಾವಾಗ ಬಾರ್ಬಡೋಸ್ ಥ್ರೆಡ್ ಸ್ನೇಕ್ ಪತ್ತೆ ಆಗಿತ್ತು? : ವಿಶ್ವದ ಅತ್ಯಂತ ಚಿಕ್ಕ ಹಾವೆಂದೇ ಪ್ರಸಿದ್ಧಿ ಪಡೆದಿರುವ ಈ ಬಾರ್ಬಡೋಸ್ ಥ್ರೆಡ್ ಸ್ನೇಕನ್ನು 1889ರಲ್ಲಿ ಮೊದಲ ಬಾರಿ ಪತ್ತೆ ಮಾಡಲಾಗಿತ್ತು. ಆದ್ರೆ ಅದ್ರ ನಂತ್ರ ಈ ಸ್ನೇಕ್ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಈ ಸ್ನೇಕ್ ಲೈಂಗಿಕವಾಗಿ ಸಂತಾನೋತ್ಪತ್ತಿ ಮಾಡುತ್ತದೆ. ಹೆಣ್ಣು ಹಾವು ಒಂದು ಬಾರಿಗೆ ಒಂದು ಮೊಟ್ಟೆ ಇಡುತ್ತದೆ. ಬಾರ್ಬಡೋಸ್ ವಾಸಸ್ಥಾನವಾಗಿದ್ದ ಕಾಡುಗಳಲ್ಲಿ ಶೇಕಡಾ 98ರಷ್ಟು ಜಾಗ ಕೃಷಿ ಭೂಮಿಯಾಗಿ ಬದಲಾಗಿದೆ. ಅದಕ್ಕೆ ವಾಸಸ್ಥಾನ ಇಲ್ಲದೆ ಇರುವುದು ಹಾಗೂ ಬೇರೆ ಪ್ರಭೇದಗಳ ದಾಳಿಯಿಂದ ಅವು ಮತ್ತಷ್ಟು ಅಳಿವಿನಂಚಿನಲ್ಲಿವೆ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.