ತೂಕ ಇಳಿಸಿಕೊಳ್ಳೋದು ಕಷ್ಟ ಎನ್ನೋರಿಗೆ ಇಲ್ಲಿವೆ ಟಿಪ್ಸ್...

By Web DeskFirst Published May 7, 2019, 1:36 PM IST
Highlights

ತೂಕ ಇಳಿಸೋದೇನು ಸುಲಭವಲ್ಲ. ತೂಕ ಇಳಿಸಿ ಫಿಟ್  ಆಗುವ ಕನಸು ಕಂಡ 10ರಲ್ಲಿ ಒಬ್ಬರು ಮಾತ್ರ ಅದನ್ನು ಸಾಧಿಸಿ ತೋರಿಸಿಯಾರು. ಬೊಜ್ಜು ನಿಮ್ಮನ್ನು ಪೂರ್ತಿ ನುಜ್ಜುಗುಜ್ಜಾಗಿಸುವ ಮೊದಲೇ ಎಚ್ಚೆತ್ತುಕೊಳ್ಳಿ. 

ವರ್ಕೌಟ್ ಮಾಡಬೇಕೆಂದು ದಿನಕ್ಕೆ 10 ಬಾರಿ ಹೇಳಿಕೊಳ್ಳುತ್ತಿದ್ದೀರಿ ಅಲ್ಲವೇ? ನಾಳೆಯಿಂದ ಡಯಟ್ ಶುರು ಮಾಡುವುದು ಪಕ್ಕಾ ಎಂದುಕೊಳ್ಳುತ್ತಲೇ ನೂರಾರು ನಾಳೆಗಳು ಕಳೆದುಹೋದವು. ವಾರಕ್ಕೆ 1 ಕೆಜಿ ಇಳಿಯಬೇಕೆಂದು ಗುರಿ ಹಾಕಿಕೊಂಡ ಮೇಲೆ ಇದುವರೆಗೆ 6 ಕೆಜಿ ಹೆಚ್ಚಾಗಿದ್ದೀರಿ. ಇಷ್ಟು ದಿನ ಟೈಂ ಪಾಸ್ ಮಾಡಿದ್ದು ಸಾಕು. ಆರೋಗ್ಯ ಹಾಗೂ ಸೌಂದರ್ಯಕ್ಕಾಗಿ ಇಂದೇ ತೂಕ ಇಳಿಸಲು ಆರಂಭಿಸಿ. ಇದಕ್ಕಾಗಿ ರಿಯಾಲಿಟಿ ಟಿವಿ ಪ್ರೊಡ್ಯೂಸರ್ ಜೆ.ಡಿ.ರೊತ್ ಹೇಳಿರುವ ಕೆಲವು ಸಿಂಪಲ್ ಟ್ರಿಕ್ಸ್ ಗಳು ಇಲ್ಲಿವೆ. ಟ್ರೈ ಮಾಡಿ ನೋಡಿ. 

ವಾಕ್ ವಾಕ್ ವಾಕ್
ಪ್ರತಿ ರಾತ್ರಿ ಊಟವಾದ ಬಳಿಕ 30 ನಿಮಿಷ ವಾಕ್ ಮಾಡಲು ಆರಂಭಿಸಿ.  ದೂರ, ವೇಗ ಯಾವುದರ ಗೊಡವೆಯೂ ಬೇಡ. ಸುಮ್ಮನೇ ನಡೆಯುತ್ತಿರಿ. ಇದೊಂದು ನಿಮ್ಮ ಹವ್ಯಾಸವಾಗಿ ಅಳವಡಿಕೆಯಾಗುತ್ತಿದ್ದಂತೆಯೇ  ನಿಧಾನವಾಗಿ ಕಾರ್ಡಿಯೋ ವರ್ಕೌಟ್ ಆರಂಭಿಸಿ. 

ಗ್ರೋಸರಿ ಪಟ್ಟಿ ಬದಲಾಗಲಿ
ಸೂಪರ್ ಮಾರ್ಕೆಟ್‌ನಿಂದ ಮನೆಗೆ ಬಂದ ಬಳಿಕ ನೀವು ತಂದ ಹಣ್ಣು ತರಕಾರಿ, ಆಹಾರ ಪದಾರ್ಥಗಳ ಪಟ್ಟಿ ಮಾಡಿ. ಅವುಗಳಲ್ಲಿ ಹಣ್ಣು ತರಕಾರಿ ಪ್ಯಾಕೆಟ್ ಎಷ್ಟಿದೆ, ಎಣ್ಣೆತಿಂಡಿಗಳ ಪ್ಯಾಕೆಟ್ ಎಷ್ಟಿದೆ, ಟೈಂಪಾಸ್ ಜಂಕ್‌ಗಳು ಎಷ್ಟಿವೆ ಎಂದು ಬರೆದಿಡಿ. ಈ  ಬಾರಿ ಜಂಕ್ ತಿಂಡಿ ಪ್ಯಾಕೆಟ್ ಗಳು 20 ಇದ್ದು, ಹಣ್ಣು ತರಕಾರಿ ಪ್ಯಾಕ್ 4 ಇದ್ದರೆ, ಮುಂದಿನ ಬಾರಿ ತಿಂಡಿ ಪ್ಯಾಕ್‌ಗಳ ಸಂಖ್ಯೆ 15ಕ್ಕೆ ಇಳಿಯುವಂತೆ, ಹಣ್ಣು ತರಕಾರಿ ಕಾಳು ಕಡಿ ಪ್ಯಾಕೆಟ್‌ಗಳ ಸಂಖ್ಯೆ 10ಕ್ಕೇರುವಂತೆ ನೋಡಿಕೊಳ್ಳಿ. ಅದರ ಮುಂದಿನ ಸಲ ಈ ಸಂಖ್ಯೆಯಲ್ಲಿ ಮತ್ತೈದರಷ್ಟು ಬದಲಾವಣೆ ಬರಲಿ. 

ಐ ಕ್ಯಾನ್ ಮಂತ್ರ ಪಠಿಸಿ
ದಿನವೊಂದರಲ್ಲಿ ಅದೆಷ್ಟು ಬಾರಿ ನನ್ನಿಂದಾಗುವುದಿಲ್ಲ ಎಂದು ಹೇಳುತ್ತೀರೆಂಬುದನ್ನು ಲೆಕ್ಕ ಹಾಕಿ ಬರೆದಿಡಿ. ಅದೇನು ಆಹಾರ ಇಲ್ಲವೇ ವರ್ಕೌಟ್‌ಗೆ ಬಂಧಿಸಿದ್ದಾಗಿರಬೇಕೆಂದಿಲ್ಲ. ಇದು ಬರೆಯೋಕಾಗಲ್ಲ, ಬಟ್ಟೆ ಒಗೆಯೋಕಾಗಲ್ಲ, ಬೇಗ ಏಳೋಕಾಗಲ್ಲ, ಇವತ್ತು ನನ್ನಿಂದ ಆತನನ್ನು ಫೇಸ್ ಮಾಡಲು ಸಾಧ್ಯವಿಲ್ಲ ಹೀಗೆ.... ಇಂದು ನೀವು 8 ಬಾರಿ ಆಗಲ್ಲ ಎಂದಿದ್ದೀರಾದರೆ, ಮರುದಿನ ಈ 'ಆಗಲ್ಲ'ವನ್ನು 6ಕ್ಕಿಳಿಸಲು ನೋಡಿ. ಆಗಲ್ಲ ಎಂಬಲ್ಲಿ ಆಗುತ್ತೆ ಎಂದು ಹೇಳಿಕೊಳ್ಳಿ. ಹಾಗೆ ನಿಮ್ಮ ಮೆದುಳನ್ನು ಐ ಕ್ಯಾನ್ ಎಂದು ಯೋಚಿಸಲು ಟ್ರೇನ್ ಮಾಡುತ್ತಾ ಹೋಗಿ. ಬರ್ತ್‌ಡೈ ಪಾರ್ಟಿಯಲ್ಲಿ ಕೇಕ್ ತಿನ್ನಬೇಕೆನಿಸಿದಾಗ, ನಾನದನ್ನು ತಿನ್ನದೇ ಇರಬಲ್ಲೆ ಎಂದು ಹೇಳಿಕೊಳ್ಳಿ. ಖಂಡಿತಾ ಗೆದ್ದೇ ಗೆಲ್ಲುತ್ತೀರಿ.

ಪಾರ್ಟ್ನರ್ ಹುಡುಕಿಕೊಳ್ಳಿ 
ವರ್ಕೌಟ್ ಮಾಡಲು ಜೊತೆ ಸಿಕ್ಕರೆ, ಖುಷಿಯೂ ಆಗುತ್ತದೆ. ಜೊತೆಗೆ, ಅವರೇನೆಂದುಕೊಳ್ಳುವರೋ ಎಂದಾದರೂ ಎದ್ದು ತಯಾರಾಗುವಿರಿ. ಹೀಗಾಗಿ, ಸಂಗಾತಿಯೋ, ಮಗನೋ, ಪಕ್ಕದ ಮನೆಯವರೋ, ಗೆಳೆಯರೋ ಯಾರಾದರೂ ಸರಿ, ಸಮಾನ ಆಸಕ್ತಿ ಉಳ್ಳವರನ್ನು ಜೊತೆ ಮಾಡಿಕೊಂಡು ವರ್ಕೌಟ್ ಮಾಡಿ. 

ಹಸಿವಾದಾಗ ಮಾತ್ರ ತಿನ್ನಿ
ಬಹುಷಃ ನೀವಂದುಕೊಂಡಷ್ಟು ಹಸಿವು ನಿಮಗಾಗುವುದಿಲ್ಲ. ಹೊಟ್ಟೆಗಿಂತಾ ಕಣ್ಣೇ ದೊಡ್ಡದಿರುತ್ತದೆ. ಏಕೆಂದರೆ, ನಿಮ್ಮ ಹೊಟ್ಟೆ ತುಂಬಿದೆ ಎಂದು ಹೇಳಲು ಮೆದುಳು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ, ದಿನಾ ಊಟ ಮಾಡುವಷ್ಟನ್ನೇ ಪ್ಲೇಟ್‌ಗೆ ಹಾಕಿಕೊಂಡು ಅದರ ಅರ್ಧದಷ್ಟನ್ನು ಮಾತ್ರ ತಿಂದು ಅರ್ಧ ಗಂಟೆ ವಾಕ್ ಮಾಡಿ. ಈಗಲೂ ನಿಮಗೆ ಹೊಟ್ಟೆ ತುಂಬಿಲ್ಲ ಎನಿಸಿದರೆ ಮಾತ್ರ ಉಳಿದ ಊಟ ತಿನ್ನಿ. ಇಲ್ಲದಿದ್ದಲ್ಲಿ, ಅರ್ಧದಷ್ಟು ಊಟವೇ ನಿಮಗೆ ಸಾಕಾಗುತ್ತದೆ ಎಂದರ್ಥ. 

ಸಣ್ಣ ಗೆಲುವುಗಳನ್ನು ಬರೆದಿಡಿ
ಡೈರಿಯಲ್ಲಿ ಪ್ರತಿದಿನ ಸಣ್ಣಪುಟ್ಟ ಗೆಲವುಗಳನ್ನು ಬರೆದಿಡಿ. ಅದು ನೀವು ಇಂದು ಜಿಮ್‌ಗೆ ಹೋಗಿದ್ದರಿಂದ ಹಿಡಿದು ನಿಮ್ಮಿಷ್ಟದ ಸ್ವೀಟೊಂದು ಕಣ್ಣೆದುರೇ ಇದ್ದರೂ ಅವಾಯ್ಡ್ ಮಾಡಿದ್ದರವರೆಗೆ ಯಾವುದೇ ಆಗಿರಬಹುದು.

ಲಂಚನ್ನು ಬ್ರೇಕ್ ಮಾಡಿಕೊಳ್ಳಿ.
ಹೊಟೇಲೊಂದರಲ್ಲಿ ಊಟ ಮಾಡಿ, ಜ್ಯೂಸ್ ಕುಡಿದು, ಪಾನ್ ತಿಂದು ಹೋಗುತ್ತೀರೆಂದಾದರೆ, ಹೊಟೇಲ್‌ವರೆಗೆ ನಡೆದು ಅಲ್ಲಿ ಊಟ ತೆಗೆದುಕೊಳ್ಳಿ. ನಂತರ ಜ್ಯೂಸ್ ಗೆ 2 ಕಿ.ಮೀ. ದೂರದ ಫೇಮಸ್ ಜ್ಯೂಸ್ ಸೆಂಟರ್‌ವರೆಗೆ ನಡೆದು ಹೋಗಿ ಜ್ಯೂಸ್ ತೆಗೆದುಕೊಳ್ಳಿ. ಅಲ್ಲಿಂದ ಮತ್ತೆ ಹಿಂದಿರುಗಿ ಊಟ ಮಾಡಿದ ಹೊಟೇಲ್ ಎದುರಿನ ಬೀಡಾ ಸ್ಟಾಲ್‌ನಲ್ಲೇ ಪಾನ್ ತೆಗೆದುಕೊಳ್ಳಿ. 

ಆಫೀಸ್ ನಲ್ಲಿ ವಿಲ್ ಪವರ್ ತೋರಿಸಿ
ಆಫೀಸ್ ಮೀಟಿಂಗ್‌ಗಳಲ್ಲಿ ಕೊಡುವ ಸ್ನ್ಯಾಕ್ಸ್, ಗೆಳೆಯರೆಲ್ಲ ಸೇರಿ ಆರ್ಡರ್ ಮಾಡುವ ಫಾಸ್ಟ್ ಫುಡ್‌ಗಳು ಎಲ್ಲವೂ ಮಜಾ ಕೊಡುತ್ತವೆ. ಆದರೆ, ನೀವು ಮಾತ್ರ ಡ್ರಾದಲ್ಲಿ ಸೇಬು, ಕಿತ್ತಳೆಯಂಥ ಉತ್ತಮ ಆಹಾರ ಇಟ್ಟುಕೊಂಡು ಅದನ್ನೇ ತಿನ್ನಿ. ನಿಮ್ಮ ಸಹೋದ್ಯೋಗಿಗಳಿಗೆ ನಿಮ್ಮ ವಿಲ್ ಪವರ್ ಮೇಲೆ ಹೊಟ್ಟೆಕಿಚ್ಚಾಗದಿದ್ದರೆ ಕೇಳಿ.

ಚಿಕ್ಕ ಸೈಜ್ ಬಟ್ಟೆ ತೆಗೆದುಕೊಳ್ಳಿ
ನಿಮಗೆ ಎಷ್ಟು ಸಣ್ಣ ಆಗಬೇಕೆಂಬ ಆಸೆ ಇದೆಯೋ, ಆ ಸೈಜ್ ಬಟ್ಟೆಯೊಂದನ್ನು ತೆಗೆದಿಟ್ಟುಕೊಳ್ಳಿ. ಅದನ್ನು ಫ್ರಿಡ್ಜ್ ಎದುರು ಇಲ್ಲವೇ ಅಡುಗೆ ಕೋಣೆ ಪಕ್ಕದಲ್ಲಿ ಕಾಣುವಂತೆ ನೇತು ಹಾಕಿಟ್ಟುಕೊಳ್ಳಿ. ಪ್ರತಿ ಬಾರಿ ಫ್ರಿಡ್ಜ್‌ನ ಬಾಗಿಲು ತೆರೆದಾಗಲೂ, ಅಡುಗೆ ಮನೆಯ ಡಬ್ಬಗಳಲ್ಲಿ ಇಣುಕುವಾಗಲೂ ನಿಮಗೆ ಆ ಬಟ್ಟೆ ಕಂಡು ಗುರಿಯನ್ನು ನೆನಪಿಸುತ್ತದೆ. ಹೀಗಾಗಿ ಅನಗತ್ಯ ತಿನ್ನುವುದಕ್ಕೆ ಬ್ರೇಕ್ ಬೀಳುತ್ತದೆ.

ನಡೆದಾಟ ಎಂದು ದಾಖಲಿಸಿ
ಫಿಟ್ನೆಸ್ ಟ್ರ್ಯಾಕರ್ ನಲ್ಲಿ ವರ್ಕೌಟ್ ಅಲ್ಲದೆ, ಸುಮ್ಮನೆ ಆ ಕಡೆ ಈ ಕಡೆ ಎಂದು ದಿನವೊಂದಕ್ಕೆ ಎಷ್ಟು ನಡೆದಾಡುತ್ತೀರಾ ಎಂದು ದಾಖಲಾದುದನ್ನು ಬರೆದಿಟ್ಟುಕೊಳ್ಳಿ. ನಿಮಗೆ ನೀವೇ ಕಾಂಪಿಟೇಟರ್ ಆಗಿ. ಮುಂದಿನ ವಾರಕ್ಕೆ ನಿಮ್ಮ ನಡಿಗೆ ಎಷ್ಟು ಹೆಚ್ಚಾಗಿದೆ ಎಂಬುದನ್ನು ನೋಡಿಕೊಳ್ಳಿ. 

ಸೋಷಿಯಲ್ ಮೀಡಿಯಾದಲ್ಲಿ ಶೋ ಆಫ್ ಮಾಡಿ
ನೀವು ಫೇಸ್ ಬುಕ್‌ನಲ್ಲಿ ಸಕ್ರಿಯವಾಗಿದ್ದರೆ, ಕ್ಯಾಂಡಿಯೊಂದನ್ನು ಎದುರಿಗಿಟ್ಟುಕೊಂಡ ಫೋಟೋ ತೆಗೆದು ನಾನಿದನ್ನು ಮುಂದಿನ 24 ಗಂಟೆಗಳ ಕಾಲವೂ ಮುಟ್ಟಲಾರೆ. ಇದು ವಿಲ್ ಪವರ್‌ಗೆ ಸವಾಲು ಎಂದು ಹಾಕಿ ಫೋಟೋ ಅಪ್ ಲೋಡ್ ಮಾಡಿ. 2 ಗಂಟೆ ಬಳಿಕ ಕ್ಯಾಂಡಿಯನ್ನು ಕಸದ ಬುಟ್ಟಿಗೆ ಹಾಕುತ್ತಿರುವ ಫೋಟೋ ಹಾಕಿ  ನಿಮ್ಮ ಗೆಲುವನ್ನು ಸಾರಿ. ನಂತರ ನೀವು ನಿಮ್ಮ ಗೆಳೆಯರಿಗೂ ಟ್ಯಾಗ್ ಮಾಡಿ ಈ ವಿಲ್ ಪವರ್ ಸವಾಲೆಸೆದು ಮಜಾ ನೋಡಬಹುದು. 

ತಟ್ಟೆ ಬದಲಿಸಿ
ಊಟಕ್ಕೆ ಸ್ನ್ಯಾಕ್ಸ್ ತಟ್ಟೆ ಬಳಸಿ ನೋಡಿ. ತಟ್ಟೆ ಪುಟ್ಟದಾದಷ್ಟೂ ನಿಮ್ಮ ಊಟದ ಗಾತ್ರ ತಗ್ಗುತ್ತದೆ. ತಟ್ಟೆ ಖಾಲಿಯಾಗುತ್ತಲೇ ಹೊಟ್ಟೆ ತುಂಬಿದ ಫೀಲಿಂಗ್ ಬರದಿದ್ದರೆ ಕೇಳಿ.

ಜಾಹಿರಾತು ಸಮಯ ಸದುಪಯೋಗವಾಗಲಿ
ಭಾನುವಾರ ಇಡೀ ದಿನ ಟಿವಿ ಮುಂದೆ ನ್ಯಾಚೋಸ್ ತಿಂತಾ ಟೈಂಪಾಸ್ ಮಾಡುತ್ತೀರಾದರೆ ಅದೆಷ್ಟು ಕ್ಯಾಲೋರಿಗಳು ಒಳ ಹೋದವೆಂದೇ ಅರಿವಿಗೆ ಬಾರದು. ಬದಲಿಗೆ  ಜಾಹಿರಾತು ಬಂದಾಗೆಲ್ಲ ಎದ್ದು ಪುಶಪ್ ಅಥವಾ ಸ್ಕಿಪ್ಪಿಂಗ್ ಮಾಡಿ. ಮೂವಿಯೊಂದು ಮುಗಿಯುವ ಹೊತ್ತಿಗೆ ನೀವದೆಷ್ಟು ವರ್ಕೌಟ್ ಮಾಡಿರುತ್ತೀರಾ ಎಂಬುದು ನಿಮ್ಮ ಗಮನಕ್ಕೇ ಬಂದಿರದು. 

click me!