
ನವದೆಹಲಿ(ಜೂ.02): ಮದುಮಗಳು ಮದುವೆ ಮಂಟಪದಲ್ಲಿ ಕುಳಿತ್ತಿದ್ದಳು, ವರ ಆಕೆಯ ಹಣೆಗೆ ಸಿಂಧೂರ ಇಡುವವನಿದ್ದ ಆದರೆ ಅಷ್ಟರಲ್ಲೇ ವರನ ಮೊಬೈಲ್'ಗೆ 'ನೀನು ಮದುವೆ ಆಗುವ ಹುಡುಗಿಯೊಂದಿಗೆ ನಾನಾಗಲೇ ಮದುವೆಯಾಗಿದ್ದೇನೆ' ಎಂಬ ಮೆಸೇಜ್ ಬರುತ್ತದೆ. ಈ ಮೆಸೇಜ್'ನಿಂದ ಅದೆಷ್ಟು ಅಲ್ಲೋಲ ಕಲ್ಲೋಲವಾಗುತ್ತದೆ ಎಂದರೆ ವರನ ಕಡೆಯವರು ಮದುಮಗಳಿಲ್ಲದೆ ವಾಪಾಸಾಗುತ್ತಾರೆ. ಇಂತಹುದ್ದೊಂದು ಸಿನಿಮೀಯ ಘಟನೆ ನಡೆದದ್ದು ಉತ್ತರ ಪ್ರದೇಶದ ಮವೂ ಜಿಲ್ಲೆಯಲ್ಲಿ. ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಯನ್ವಯ ವಧು ವರರಿಬ್ಬರೂ ಅಕೌಂಟೆಟ್'ಗಳಾಗಿ ಕೆಲಸ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ಅಲ್ಲದೇ ಮೆಸೇಜ್ ಮಾಡಿದ ವ್ಯಕ್ತಿಯೂ ಇದೇ ವೃತ್ತಿ ಮಾಡಿಕೊಂಡಿದ್ದ ಎನ್ನಲಾಗಿದೆ.
ಈ ಮೆಸೇಜ್ ನೋಡಿದ ಬಳಿಕವಂತೂ ಮದುವೆ ಮಂಟಪದಲ್ಲಿ ಜಗಳವೇರ್ಪಟ್ಟಿದ್ದು, ಎರಡೂ ಕುಟುಂಬದ ಸದಸ್ಯರು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ ಎಂದು ತಿಳಿದು ಬಂದಿದೆ. ಯಾವ ರೀತಿಯಲ್ಲಿ ಅರ್ಥೈಸಿದರೂ ವರ ಮಾತ್ರ ಮದುವೆಯಾಗಲು ತಯಾರಾಗಲಿಲ್ಲ ಹೀಗಾಗಿ ವಧುವಿನ ಬಳಿಯೇ ಈ ಸಂದೇಶದ ಹಿಂದಿನ ಸತ್ಯವನ್ನು ತಿಳಿದುಕೊಳ್ಳುವ ನಿರ್ಧಾರ ಕೈಗೊಂಡಿದ್ದಾರೆ. ಬಳಿಕ ತಂದೆ ತನ್ನ ಮಗಳ ಬಳಿ ಈ ಮೆಸೇಜ್ ಹಿಂದಿನ ನಿಜಾಂಶದ ಕುರಿತಾಗಿ ಕೆಳಿದಾಗ ಮೇ 26ರಂದು ತಾನು ತನ್ನ ಗೆಳೆಯನೊಂದಿಗೆ ಕೋರ್ಟ್ ಮ್ಯಾರೇಜ್ ಆಗಿದ್ದೇನೆ ಎಂದು ಸತ್ಯ ಬಿಚ್ಚಿಟ್ಟಾಳೆ. ವಧುವಿನ ಈ ಮಾತುಗಳನ್ನು ಕೇಳಿದ ಕುಟುಂಬಸ್ಥರು ಸ್ತಬ್ಧರಾಗಿದ್ದಾರೆ. ಮದುವೆಯಾಗಿದ್ದರೆ ಮೊದಲೇ ಒಂದು ಮಾತು ತಿಳಿಸಲಿಲ್ಲವೇಕೆ? ಎಂಬುವುದಷ್ಟೇ ಅವರ ಪ್ರಶ್ನೆಯಾಗಿತ್ತು. ವರನ ಕಡೆಯವರಿಗೂ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂದು ತೋಚುತ್ತಿರಲಿಲ್ಲ. ಕೊನೆಗೆ ಬೇರೆ ವಿಧಿ ಇಲ್ಲದೇ ಅವರು ಮರಳಿದ್ದಾರೆ.
ಈ ಘಟನೆಯ ಬಳಿಕ ಸಾಮಾಜಿಕ ಜಾಲಾತಾಣಗಳು ನಮಗೆ ಸಹಾಯ ಮಾಡುತ್ತವೆ ನಿಜ ಆದರೆ ಕೆಲವೊಮ್ಮೆ ಇದು ಒಳ್ಳೆಯ ಕೆಲಸವನ್ನು ಕೆಡಿಸುತ್ತದೆ. ಅಲ್ಲದೇ ಹಲವಾರು ಬಾರಿ ಒಳ್ಳೆಯ ಸಂಬಂಧವನ್ನು ಕೆಡಿಸಿ ಮುರಿದು ಬೀಳುವಂತೆ ಮಾಡುತ್ತದೆ ಎಂಬುವುದು ನೆರೆದವರ ಅಭಿಪ್ರಾಯವಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.