
ಒಂದು ಕಾಲದಲ್ಲಿ ಮದುವೆ ಎಂದರೆ ಕೂಡಿಟ್ಟ ಹಣದಲ್ಲಿ ಮಾಡುವ ಶುಭಕಾರ್ಯವಾಗಿತ್ತು. ಆದರೆ ಇಂದಿನ ಯುವ ಪೀಳಿಗೆಯ ಆಲೋಚನೆ ಬದಲಾಗಿದೆ. ಡೆಸ್ಟಿನೇಶನ್ ವೆಡ್ಡಿಂಗ್, ವಿದೇಶಿ ಹನಿಮೂನ್, ಪ್ರಿ-ವೆಡ್ಡಿಂಗ್ ಮತ್ತು ಪೋಸ್ಟ್-ವೆಡ್ಡಿಂಗ್ ಫೋಟೋಶೂಟ್ ಹೀಗೆ ಮದುವೆಯ ಪ್ರತಿ ಕ್ಷಣವೂ ಅದ್ದೂರಿಯಾಗಿರಬೇಕೆಂದು ಬಯಸುತ್ತಾರೆ. ಇದಕ್ಕಾಗಿ ಕೈಯಲ್ಲಿ ಹಣವಿಲ್ಲದಿದ್ದರೂ ಚಿಂತೆಯಿಲ್ಲ, ಇತ್ತೀಚಿನ ದಿನಗಳಲ್ಲಿ ಬ್ಯಾಂಕ್‌ಗಳು ಮದುವೆಗಾಗಿಯೇ ವಿಶೇಷ 'ವೆಡ್ಡಿಂಗ್ ಲೋನ್' (Wedding Loan) ಸೌಲಭ್ಯವನ್ನು ನೀಡುತ್ತಿವೆ.
ಮದುವೆಗೆ ಸಾಲ ಪಡೆಯುವುದು ಸುಲಭ, ಆದರೆ ಅದನ್ನು ಮರುಪಾವತಿಸುವ ಸಾಮರ್ಥ್ಯ ನಿಮಗಿದೆಯೇ ಎಂಬುದು ಮುಖ್ಯ. ನಿಮ್ಮ ಬಳಿ ಸ್ಥಿರವಾದ ಮಾಸಿಕ ಆದಾಯವಿದ್ದರೆ ಮತ್ತು ಸಮಯಕ್ಕೆ ಸರಿಯಾಗಿ ಕಂತುಗಳನ್ನು (EMI) ಪಾವತಿಸುವ ಶಕ್ತಿ ಇದ್ದರೆ ಮಾತ್ರ ಸಾಲಕ್ಕೆ ಕೈ ಹಾಕುವುದು ಉತ್ತಮ. ಹಬ್ಬದ ಸಂಭ್ರಮದ ಮದುವೆ, ನಂತರ ಆರ್ಥಿಕ ಹೊರೆಯಾಗಿ ನಿಮ್ಮ ನೆಮ್ಮದಿ ಕೆಡಿಸದಂತೆ ಎಚ್ಚರಿಕೆಯ ನಿರ್ಧಾರ ತೆಗೆದುಕೊಳ್ಳುವುದು ಅವಶ್ಯಕ.
ಪ್ರಮುಖ ಬ್ಯಾಂಕ್‌ಗಳು ಗ್ರಾಹಕರಿಗೆ ದೊಡ್ಡ ಮೊತ್ತದ ಸಾಲದ ಸೌಲಭ್ಯವನ್ನು ನೀಡುತ್ತಿವೆ. ಎಚ್‌ಡಿಎಫ್‌ಸಿ ಬ್ಯಾಂಕ್ 50 ಸಾವಿರದಿಂದ 40 ಲಕ್ಷದವರೆಗೆ 10.9% ರಿಂದ 21% ಬಡ್ಡಿದರದಲ್ಲಿ ಸಾಲ ನೀಡಿದರೆ, ಐಸಿಐಸಿಐ ಬ್ಯಾಂಕ್ 50 ಲಕ್ಷದವರೆಗೆ 1 ರಿಂದ 6 ವರ್ಷದ ಮರುಪಾವತಿ ಅವಧಿಯೊಂದಿಗೆ ಹಣ ಒದಗಿಸುತ್ತದೆ. ಆಕ್ಸಿಸ್ ಬ್ಯಾಂಕ್ 9.99% ರಷ್ಟು ಕಡಿಮೆ ಬಡ್ಡಿದರದಿಂದ ಸಾಲದ ಸೌಲಭ್ಯ ಆರಂಭಿಸಿದರೆ, ಕೋಟಕ್ ಮಹೀಂದ್ರಾ ಬ್ಯಾಂಕ್ ಗರಿಷ್ಠ 40 ಲಕ್ಷದವರೆಗೆ ಸಾಲ ನೀಡುತ್ತದೆ. ಇನ್ನು ಬಂಧನ್ ಬ್ಯಾಂಕ್ 25 ಲಕ್ಷದವರೆಗಿನ ಸಾಲಕ್ಕೆ 9.47% ರಿಂದ ಬಡ್ಡಿದರವನ್ನು ವಿಧಿಸುತ್ತಿದೆ.
ಸಾಲ ಪಡೆಯಲು ಇರಬೇಕಾದ ಅರ್ಹತೆ ಮತ್ತು ಅರ್ಜಿ ಸಲ್ಲಿಸುವ ವಿಧಾನ
ಮದುವೆ ಸಾಲ ಪಡೆಯಲು ಅಭ್ಯರ್ಥಿಯ ವಯಸ್ಸು ಕನಿಷ್ಠ 21 ರಿಂದ 60 ವರ್ಷದೊಳಗಿರಬೇಕು. ಪ್ರಸ್ತುತ ಕಂಪನಿಯಲ್ಲಿ ಕನಿಷ್ಠ 2 ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಮತ್ತು ನಿಗದಿತ ಮಾಸಿಕ ಆದಾಯವಿರುವುದು ಕಡ್ಡಾಯ. ಆಸಕ್ತರು ಸಂಬಂಧಪಟ್ಟ ಬ್ಯಾಂಕ್‌ಗಳ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ವೈಯಕ್ತಿಕ ಸಾಲದ ವಿಭಾಗದಲ್ಲಿ ಅರ್ಜಿ ಸಲ್ಲಿಸಬಹುದು. ಅಗತ್ಯ ದಾಖಲೆಗಳನ್ನು ಸಲ್ಲಿಸಿದ ನಂತರ ಬ್ಯಾಂಕ್ ಅಧಿಕಾರಿಗಳು ಎಲ್ಲವನ್ನೂ ಪರಿಶೀಲಿಸಿ ಕೇವಲ 72 ಗಂಟೆಗಳ ಒಳಗೆ ಸಾಲದ ಮೊತ್ತವನ್ನು ನಿಮ್ಮ ಖಾತೆಗೆ ವರ್ಗಾಯಿಸುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.