
ಬೆಂಗಳೂರು (ಮಾ. 07): ನಂಬಿಕಾರ್ಹ ಮೂಲಗಳಲ್ಲಿ ಉಳಿತಾಯ ಮಾಡುವ ಬಯಕೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಆದರೆ ಎಲ್ಲಿ? ಹೇಗೆ? ಹೂಡಿಕೆ ಮಾಡಬೇಕು ಎನ್ನುವುದೇ ದೊಡ್ಡ ಗೊಂದಲ.
ಇತ್ತೀಚಿನ ದಿನಗಳಲ್ಲಿ ಮ್ಯುಚುವಲ್ ಫಂಡ್ಸ್ ಷೇರು ಮಾರುಕಟ್ಟೆ, ಕಂಪನಿ ಷೇರ್ಸ್ ಮೊದಲಾದವುಗಳ ಬಗ್ಗೆ ಮಧ್ಯಮ ವರ್ಗದ ಉಳಿತಾಯಗಾರರಿಗೂ ಗೊತ್ತಾಗಿದೆ. ಜೊತೆಗೆ ಇವೆಲ್ಲವುಗಳಲ್ಲಿ ಉಳಿತಾಯದ
ಪ್ರಮಾಣವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದು ಸ್ವಾಗತಾರ್ಹ ಬೆಳವಣಿಗೆಯಾದರೂ ಇನ್ನೂ ಅಸಂಖ್ಯಾತ ಉಳಿತಾಯ ಪ್ರಿಯರಿಗೆ ಈ ಬಗ್ಗೆ ಸಾಕಷ್ಟು ಗೊಂದಲಗಳು ಹಾಗೆಯೇ ಉಳಿದಿವೆ.
ಹೂಡಿಕೆ, ಉಳಿತಾಯಕ್ಕೆ ಮುಂದಾಗುವವರು ಪ್ರಾರಂಭದಲ್ಲಿ ಹೆಚ್ಚು ಆಲೋಚಿಸಿ, ತಜ್ಞರ ಸಲಹೆ ಪಡೆದು ಮುಂದಡಿ ಇಡುವುದು ಸೂಕ್ತ. ಅದರ ಜೊತೆಗೆ ಉಳಿತಾಯ ಅದರಲ್ಲಿಯೂ ಮುಖ್ಯವಾಗಿ ಮ್ಯೂಚುವಲ್ ಫಂಡ್ಸ್‌ಗಳಲ್ಲಿ ಹೂಡಿಕೆ
ಮಾಡಬಯಸುವವರು ಕೆಲವೊಂದಿಷ್ಟು ಕನಿಷ್ಟ ಮಾಹಿತಿಗಳನ್ನು ತಿಳಿದಿದ್ದರೆ ಸೂಕ್ತ.
ದೀರ್ಘಾವಧಿ ಉಳಿತಾಯ ಮ್ಯುಚುವಲ್ ಫಂಡ್ಸ್‌ನಲ್ಲಿ ದೀರ್ಘಾವಧಿ, ಅಲ್ಪಾವಧಿ ಹೂಡಿಕೆ ಎನ್ನುವ ಎರಡು ವಿಧಗಳಿರುತ್ತವೆ. ನಮ್ಮ ಮುಂದಿನ ಅಗತ್ಯ, ಹಣಕಾಸಿನ ಅನುಕೂಲವನ್ನು ನೋಡಿಕೊಂಡು ಹೂಡಿಕೆ ಮಾಡುವುದು ಸೂಕ್ತ. ಉದಾಹರಣೆಗೆ ಮಕ್ಕಳ ಮದುವೆಯ ಉದ್ದೇಶಕ್ಕಾಗಿ ಐದು ಲಕ್ಷ ರುಪಾಯಿಯನ್ನು ಹೂಡಿಕೆ ಮಾಡುತ್ತಿದ್ದೀರಿ ಎಂದರೆ ಅದನ್ನು ದೀರ್ಘಾವಧಿಯಲ್ಲಿ ಹೂಡಿಕೆ ಮಾಡುವುದು ಸೂಕ್ತ. ಇದರಲ್ಲಿಯೂ
ಇನ್ನೊಂದು ಸೂಕ್ಷ್ಮ ವಿಚಾರವಿದೆ. ಅದೆಂದರೆ, ಐದು ಲಕ್ಷ ರುಪಾಯಿಗಳನ್ನು ಒಂದೇ ಕಂಪನಿ ಅಥವಾ ಒಂದೇ ಕಡೆ ಹೂಡಿಕೆ ಮಾಡುವುದರ ಬದಲಿಗೆ ವಿವಿಧ ಐದು ನಂಬಿಕಾರ್ಹ ಕಂಪನಿಗಳಲ್ಲಿ ಹೂಡಿಕೆ ಮಾಡಬಹುದು. ಇದರಿಂದ ಒಂದು ಕಂಪನಿಗೆ ದೀರ್ಘಾವಧಿಯಲ್ಲಿ ನಷ್ಟವಾದರೂ ಕೂಡ ಇನ್ನೊಂದು ಕಂಪನಿಗೆ ಲಾಭವಾಗುತ್ತದೆ. ಇದರಿಂದ ಹೆಚ್ಚಿನ ನಷ್ಟವಾಗುವ ಸಾಧ್ಯತೆ ತೀರಾ ಕಡಿಮೆ ಇರುತ್ತದೆ. ಅಲ್ಪಾವಧಿ ಉಳಿತಾಯ ಪ್ರತಿ ತಿಂಗಳು ನಿಗದಿತ ಪ್ರಮಾಣದ ಹೂಡಿಕೆ ಮಾಡಬಯಸುವವರು ಅಲ್ಪಾವಧಿ ಹೂಡಿಕೆಗೆ ಮುಂದಾಗುವುದು ಒಳ್ಳೆಯದು. ನಿಗದಿತ ಪ್ರಮಾಣದ ಆದಾಯ ಹೊಂದಿರುವ ವರ್ಗವಾದರೆ ದೀರ್ಘಾವಧಿಯಲ್ಲೂ ಮುಂದುವರೆಯಬಹುದು. ಇದರ ಜೊತೆಗೆ ಗಮನಿಸಬೇಕಾದ
ಇನ್ನೊಂದು ಸಂಗತಿ ಎಂದರೆ ದೀರ್ಘಾವಧಿಯಂತೆ ಇಲ್ಲಿಯೂ ಮೂರ್ನಾಲ್ಕು ಮ್ಯುಚುವಲ್ ಫಂಡ್‌ಗಳ ಹೂಡಿಕೆ ಒಳ್ಳೆಯದು.
ಉದಾಹರಣೆಗೆ ತಿಂಗಳಿಗೆ ಹತ್ತು ಸಾವಿರ ರುಪಾಯಿ ಉಳಿತಾಯ ಮಾಡುವ ಉದ್ದೇಶವಿದೆ ಎಂದುಕೊಂಡರೆ ಅದನ್ನು ವಿವಿಧ ಮೆಚುರಿಟಿ ಡೇಟ್‌ಗಳಲ್ಲಿ ಐದು ಕಡೆಗಳಲ್ಲಿ ಹೂಡಿಕೆ ಮಾಡಿ. ಹೀಗೆ ಮಾಡುವುದರಿಂದ ಬೇರೆ ಬೇರೆ ಸಮಯಕ್ಕೆ ಕೈಗೆ ಹಣ ಸಿಗುತ್ತದೆ. ಐದು ಕಡೆಗಳಲ್ಲಿ ಮಾಡುವ ಹೂಡಿಕೆಯಿಂದ ಒಂದು ಕಡೆ ಆದ ನಷ್ಟ ಇನ್ನೊಂದು ಕಡೆ ತುಂಬಿಕೊಳ್ಳುತ್ತದೆ. ಆಗ ಹೂಡಿಕೆ ಮಾಡಿದ ಹಣಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.