
ಬಾಲ್ಯವನ್ನು ಯಾರು ತಾನೇ ಮರೆಯಲು ಸಾಧ್ಯ. ಹಳೆ ಸ್ನೇಹಿತರು ಸಿಕ್ಕರೆ ಕಳೆದು ಹೋದ ತಮ್ಮ ಶಾಲಾ ದಿನಗಳನ್ನು ನೆನಪು ಮಾಡಿಕೊಳ್ಳಲು ಎಲ್ಲರೂ ಬಯಸುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಬಾಲ್ಯದ ಗೆಳೆಯರು ಜೊತೆಯಾಗಿ ಸೇರಿ ತಮ್ಮ ಬಾಲ್ಯವನ್ನು ನೆನಪು ಮಾಡಿಕೊಳ್ಳಲು ಮುಂದಾಗಿದ್ದರು. 70 ರಿಂದ 90ರ ದಶಕದಲ್ಲಿ ಬಾಲ್ಯ ಕಳೆದವರು ತಮ್ಮ ಶಾಲಾ ದಿನಗಳನ್ನು ಮತ್ತೆ ನೆನಪು ಮಾಡಿಕೊಂಡರೆ ಅಲ್ಲಿ ಬೆನ್ನು ಹುಡಿಹಾರಿಸುತ್ತಿದ್ದ ಶಿಕ್ಷಕರಿಗೂ ದೊಡ್ಡಸ್ಥಾನವಿದೆ. ಅವರ ಏಟುಗಳಿಲ್ಲದೇ ಅಂದಿನ ಶಾಲಾ ದಿನಗಳು ಪೂರ್ಣಗೊಳ್ಳುತ್ತಲೇ ಇರಲಿಲ್ಲ, ಇದೇ ಕಾರಣಕ್ಕೆ ಮತ್ತೆ ಸೇರಿದ ಹಳೇ ವಿದ್ಯಾರ್ಥಿಗಳು ತಮ್ಮ ಶಾಲಾ ದಿನಗಳನ್ನು ವಿಭಿನ್ನವಾಗಿ ನೆನಪು ಮಾಡಿಕೊಳ್ಳಲು ತಮ್ಮ ಶಾಲೆಯ ಮಾಜಿ ಪ್ರಾಂಶುಪಾಲರ ಕೈಯಲ್ಲಿರುವ ಕೋಲಿನಲ್ಲಿ ಮತ್ತೆ ಏಟು ತಿಂದು ಖುಷಿ ಪಟ್ಟಿದ್ದಾರೆ. ಆ ಹಳೆಯ ನೆನಪುಗಳನ್ನು ಮೆಲುಕು ಹಾಕುವ ಹಳೇ ವಿದ್ಯಾರ್ಥಿಗಳ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಈಗ ಸಖತ್ ವೈರಲ್ ಆಗ್ತಿದೆ.
ಹೀಗೆ ಶಾಲೆಯ ಪ್ರಾಂಶುಪಾಲರಿಂದ ಏಟುಗಳನ್ನು ತಿಂದ ಹಳೇ ವಿದ್ಯಾರ್ಥಿಗಳಲ್ಲಿ, ಡಿಸಿ, ವಕೀಲ, ಪೊಲೀಸ್ ಅಧಿಕಾರಿ, ಶಾಲೆಗಳ ಮುಖ್ಯಸ್ಥರು, ವೈದ್ಯರು, ಪ್ರಾಂಶುಪಾಲರು, ಶಿಕ್ಷಕರು, ಉದ್ಯಮಿಗಳು ಹೀಗೆ ಸಮಾಜದ ಉನ್ನತಸ್ತರದಲ್ಲಿರುವ ಅನೇಕರು ಇದ್ದರು. ಅವರೆಲ್ಲರೂ ಅಂದು ತಾವು ಆ ರೀತಿ ಪ್ರಾಂಶುಪಾಲರ ಕೈಯಲ್ಲಿದ್ದ ಬೆತ್ತದ ಭಯ, ಹಾಗೂ ಏಟಿನಿಂದಲೇ ಇಂದು ಇಂತಹ ಉನ್ನತ ಹುದ್ದೆಗೆ ಏರಲು ಸಾಧ್ಯವಾಯ್ತು ಎಂದು ನಂಬಿದ್ದು, ಇದೇ ಕಾರಣಕ್ಕೆ ಅವರು ಬೆತ್ತದ ಮಹಿಮೆಗೆ ಹಾಗೂ ಶಿಕ್ಷಕರಿಗೆ ವಿಶೇಷ ಗೌರವ ನೀಡಲು ಹೀಗೆ ವಿಭಿನ್ನವಾದ ಪುನರ್ಮಿಲನ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಅಂದಹಾಗೆ ಇದು ಎಲ್ಲಿ ನಡೆದಿದೆ ಎಂಬ ಬಗ್ಗೆ ವೀಡಿಯೋದಲ್ಲಿ ಉಲ್ಲೇಖವಿಲ್ಲ. ಈ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ @Atheist_Krishna ಎಂಬುವವರು ಪೋಸ್ಟ್ ಮಾಡಿದ್ದಾರೆ. 1.28 ನಿಮಿಷದ ಈ ವಿಡಿಯೋದಲ್ಲಿ ಶಾಲಾ ಸಮವಸ್ತ್ರದಂತೆ ಬಿಳಿ ಪ್ಯಾಂಟ್ ಬಿಳಿ ಶರ್ಟ್ ಧರಿಸಿರುವ ಹಳೆ ವಿದ್ಯಾರ್ಥಿಗಳು ಒಬ್ಬೊಬ್ಬರಾಗಿಯೇ ಪ್ರಿನ್ಸಿಪಾಲ್ ಮುಂದೆ ಬೆನ್ನು ತೋರಿಸಿ ನಿಂತು ಬೆತ್ತದಿಂದ ಏಟು ತಿಂದು ಹೋಗುವುದನ್ನು ನೋಡಬಹುದಾಗಿದೆ. ಹೀಗೆ ಏಟು ತಿನ್ನುತ್ತಿರುವವರಲ್ಲಿ ಶಿಕ್ಷಕರು, ಜಿಲ್ಲಾಧಿಕಾರಿ, ವೈದ್ಯರು, ವಕೀಲ, ಪೊಲೀಸ್ ಅಧಿಕಾರಿಗಳು, ಉದ್ಯಮಿಗಳು ಎಲ್ಲರೂ ಇದ್ದಾರೆ. ಪ್ರಾಂಶುಪಾಲರ ಕೈಯಲ್ಲಿದ್ದ ಬೆತ್ತದ ಮಹಿಮೆಯಿಂದಲೇ ತಾವು ಇಂದು ಸಮಾಜದಲ್ಲಿ ಉನ್ನತಸ್ತರಕ್ಕೆ ಏರಲು ಸಾಧ್ಯವಾಯ್ತು ಎಂಬುದು ಅವರ ನಂಬಿಕೆಯಾಗಿದೆ ಎಂದು ವೀಡಿಯೋ ಪೋಸ್ಟ್ ಮಾಡಿದವರು ಬರೆದುಕೊಂಡಿದ್ದಾರೆ.
30 ವರ್ಷಗಳ ಬಳಿಕ ಜೀವದ ಗೆಳತಿ ಹುಡುಕಿಕೊಟ್ಟ ಫೇಸ್‌ಬುಕ್!
ಇಲ್ಲಿ ಏಟು ತಿನ್ನುತ್ತಿರುವವರೆಲ್ಲರೂ ಕೂಡ ದೊಡ್ಡವರೇ ಆದರೂ ಕೂಡ ಪ್ರಾಂಶುಪಾಲರು ಬೆತ್ತದಿಂದ ಹಿಂಭಾಗಕ್ಕೆ ಬಾರಿಸುತ್ತಿದ್ದಂತೆ ಕೆಲವರು ಸಣ್ಣ ಮಕ್ಕಳಂತೆ ಕುಣಿದಾಡುವುದನ್ನು ಕಾಣಬಹುದಾಗಿದೆ. ಕೆಲವರದ್ದು ನೋ ರಿಯಾಕ್ಷನ್, ಹೀಗೆ ಈ ವೀಡಿಯೋ ಸಖತ್ ವೈರಲ್ ಆಗಿದ್ದು, ಬಹುತೇಕ 70 ರಿಂದ 90ರದಶಕದವರೆಗಿನ ಮಕ್ಕಳ ಬಾಲ್ಯ, ಶಾಲಾದಿನಗಳನ್ನು ಕಣ್ಣಿಗೆ ರಾಚುವಂತೆ ಕಟ್ಟಿಕೊಡುತ್ತಿದೆ. ಈ ವೀಡಿಯೋ ಇಂಟರ್‌ನೆಟ್‌ನಲ್ಲಿಂದು ಹಲವರ ಫೇವರೇಟ್ ಆಗಿದ್ದು, ವೀಡಿಯೋ ನೋಡಿದ ಅನೇಕರು ತಮ್ಮ ಬಾಲ್ಯವನ್ನು ನೆನಪು ಮಾಡಿಕೊಂಡಿದ್ದಾರೆ. ಈ ವೀಡಿಯೋ ನಮಗೆ ತುಂಬಾ ಇಷ್ಟವಾಯ್ತು ಈ ಸ್ಕೂಲ್ ಗ್ಯಾಂಗ್ ಅನ್ನು ನನಗೆ ಭೇಟಿಯಾಗಬೇಕು ಎಂದು ಅನಿಸುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನಾನು ಈಗ ಶಿಕ್ಷಕನಾಗಿದ್ದೇನೆ ಆದರೆ ಈಗ ಎಲ್ಲೂ ಇಂತಹ ನೋಟ ಕಾಣಲು ಸಿಗುವುದಿಲ್ಲ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಬಾಲ್ಯದ ನೆನಪನ್ನು ಮತ್ತೆ ಕೆದಕುವಂತೆ ಮಾಡಿ ನೋಡುಗರನ್ನು ಗತಕ್ಕೆ ಜಾರಿಸಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.