ಸಿನಿಮಾಗಳಲ್ಲಿ ತೋರಿಸುವಂತೆ ಅರಮನೆಯಲ್ಲಿ ದಿನವೂ ನೂರಾರು ಬಗೆಯ ಭಕ್ಷ್ಯ-ಭೋಜನಗಳು ತಯಾರಾಗುತ್ತವೆಯೇ? ಚಪ್ಪಾಳೆ ತಟ್ಟಿದರೆ ಓಡಿಬರುವ ಸೇವಕರು ಈಗಲೂ ಇದ್ದಾರೆಯೇ? ರಾಜಮನೆತನದ ಬದುಕಿಗೂ ಸಾಮಾನ್ಯ ಜನರ ಬದುಕಿಗೂ ಇರುವ ವ್ಯತ್ಯಾಸವೇನು? ಎಂಬ ಹತ್ತಾರು ಕುತೂಹಲಗಳಿಗೆ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರು ಅತ್ಯಂತ ಸರಳವಾಗಿ ಉತ್ತರಿಸಿದ್ದಾರೆ.
ಅರಮನೆಯ ಊಟದ ಬಗ್ಗೆ ಮಾತನಾಡಿದ ಪ್ರಮೋದಾ ದೇವಿ ಅವರು, "ಸಿನಿಮಾಗಳಲ್ಲಿ ತೋರಿಸುವಂತೆ ಅರಮನೆಯಲ್ಲಿ ಪ್ರತಿದಿನ ಭೂರಿ ಭೋಜನ, ಹತ್ತಾರು ಬಗೆಯ ಸಿಹಿ-ತಿಂಡಿಗಳು ತಯಾರಾಗುವುದಿಲ್ಲ. ನನ್ನ ಪತಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರಿಗೆ ಊಟದಲ್ಲಿ ಯಾವುದೇ ಆಡಂಬರ ಇಷ್ಟವಿರಲಿಲ್ಲ. ಅವರು ಕೇಳುತ್ತಿದ್ದದ್ದು ಕೇವಲ ಅನ್ನ, ಬೇಳೆ ಸಾರು, ಹಪ್ಪಳ ಮತ್ತು ಸಂಡಿಗೆ ಮಾತ್ರ! ಅಷ್ಟು ಸಿಂಪಲ್ ಆಗಿದ್ದರು ಅವರು. ಅರಮನೆಯಲ್ಲಿ ಅಂತಹ ಭರ್ಜರಿ ಭಕ್ಷ್ಯಗಳು ತಯಾರಾಗುವುದು ಕೇವಲ ನವರಾತ್ರಿ (ದಸರಾ) ಹಬ್ಬದ ಸಮಯದಲ್ಲಿ ಮಾತ್ರ. ದೇವರಿಗೆ ನೈವೇದ್ಯ ಮಾಡಿದ ಪ್ರಸಾದವನ್ನೇ ನಾವು ಊಟಕ್ಕೆ ಬಳಸಿಕೊಳ್ಳುತ್ತೇವೆ. ಉಳಿದ ದಿನಗಳಲ್ಲಿ ಎಲ್ಲರ ಮನೆಯಂತೆ ಸಾಮಾನ್ಯ ಊಟವೇ ಇರುತ್ತದೆ" ಎಂದರು.
ರಾಜಮನೆತನದ ಜೀವನಶೈಲಿ ಬಗ್ಗೆ ಮಾತನಾಡುತ್ತಾ, "ಅರಮನೆಯ ಬದುಕಿಗೂ ಸಾಮಾನ್ಯ ಜನರ ಬದುಕಿಗೂ ಯಾವುದೇ ವ್ಯತ್ಯಾಸವಿಲ್ಲ. ಇದು ಕೇವಲ ನೋಡುವ ದೃಷ್ಟಿಯ ವ್ಯತ್ಯಾಸ ಅಷ್ಟೇ. ನೀವು ಇದನ್ನು ‘ಅರಮನೆ’ ಎಂದು ನೋಡ್ತೀರಿ, ಆದರೆ ನಾವಿದನ್ನು ನಮ್ಮ ‘ಮನೆ’ ಎಂದು ಭಾವಿಸಿ ವಾಸಿಸುತ್ತಿದ್ದೇವೆ. ನಿಜ ಜೀವನದಲ್ಲಿ ಯಾವುದೇ ಭಿನ್ನತೆ ಇಲ್ಲ" ಎಂದು ಸರಳತೆಯನ್ನು ಮೆರೆದರು.
ಸಿನಿಮಾಗಳಲ್ಲಿ ರಾಜರು ಚಪ್ಪಾಳೆ ತಟ್ಟಿದರೆ ದಾಸಿಯರು ಬರುವ ದೃಶ್ಯಗಳ ಕುರಿತ ಪ್ರಶ್ನೆಗೆ ಉತ್ತರಿಸಿ, "ಹಿಂದಿನ ಕಾಲದಲ್ಲಿ ಆ ಪದ್ಧತಿ ಇತ್ತೇನೋ, ಆದರೆ ಈಗ ಕಾಲ ಬದಲಾಗಿದೆ. ಆ ತರಹ ಇರಲು ಈಗ ಸಾಧ್ಯವೂ ಇಲ್ಲ. ಬೆಂಗಳೂರು ಮತ್ತು ಮೈಸೂರು ಅರಮನೆ ಎರಡೂ ಸೇರಿ ಸುಮಾರು 70 ರಿಂದ 100 ಜನ ಸಿಬ್ಬಂದಿ ಇದ್ದಾರೆ. ನಾವು ಅವರನ್ನು ಸಿಬ್ಬಂದಿ ಎಂದು ಭಾವಿಸಿಲ್ಲ, ಅವರೆಲ್ಲರೂ ನಮ್ಮ ಕುಟುಂಬದ ಸದಸ್ಯರಂತೆ. ಅರಮನೆಯ ಖರ್ಚನ್ನು ನಿಭಾಯಿಸಿಕೊಂಡು ಹೋಗುವಷ್ಟರ ಮಟ್ಟಿಗೆ ಆದಾಯವನ್ನು ಸರಿದೂಗಿಸಿಕೊಂಡಿದ್ದೇವೆ" ಎಂದರು.
ಅಡುಗೆ ಹವ್ಯಾಸ: "ನನಗೂ ಅಡುಗೆ ಮಾಡುವ ಹವ್ಯಾಸವಿದೆ. ನಮ್ಮ ಮನೆಯಲ್ಲಿ ಯಾರು ಬೇಕಾದರೂ ಏನು ಬೇಕಾದರೂ ಮಾಡಿಕೊಳ್ಳಬಹುದು. ಯಾವುದೇ ಕಟ್ಟುಪಾಡುಗಳಿಲ್ಲ. ದೇವರ ನೈವೇದ್ಯ ಹೊರತುಪಡಿಸಿ, ನಮಗೆ ಬೇಕಾದ ಅಡುಗೆಯನ್ನು ನಾವೇ ಮಾಡಿಕೊಳ್ಳುತ್ತೇವೆ."
ದಿನಚರಿ & ಫಿಟ್ನೆಸ್: "ನನ್ನ ದಿನಚರಿಗೆ ಯಾವುದೇ ಫಿಕ್ಸೆಡ್ ರೂಟೀನ್ ಇಲ್ಲ. ಬೆಳಗ್ಗೆ 4:30ಕ್ಕೆ ದಿನ ಆರಂಭವಾಗುತ್ತದೆ. ಕೆಲಸಗಳು ಮುಗಿಯುವುದು ಕೆಲವೊಮ್ಮೆ ಸಂಜೆ 6 ಗಂಟೆಗೆ, ಇನ್ನು ಕೆಲವೊಮ್ಮೆ ರಾತ್ರಿ 12 ಗಂಟೆಗೂ ಆಗಬಹುದು. ಯಾವುದೇ ಜಿಮ್ ಟ್ರೈನರ್ ಇಲ್ಲದೆ, ಫ್ಲೆಕ್ಸಿಬಿಲಿಟಿಗಾಗಿ ನಾನೇ ಸ್ವತಃ ವ್ಯಾಯಾಮ ಮಾಡಿಕೊಳ್ಳುತ್ತೇನೆ" ಎಂದು ತಮ್ಮ ಸ್ವಾವಲಂಬಿ ಜೀವನವನ್ನು ಹಂಚಿಕೊಂಡರು.
ವಿಶಾಲವಾದ ಅರಮನೆಯಲ್ಲಿ ನಿಮಗೆ ಅತ್ಯಂತ ಇಷ್ಟವಾದ ಜಾಗ ಯಾವುದು ಎಂದು ಕೇಳಿದಾಗ, "ಅಂತಹ ಜಾಗಗಳು ಒಂದಲ್ಲ, ಬೇಕಾದಷ್ಟಿವೆ!" ಎಂದು ಹೇಳುವ ಮೂಲಕ ಅರಮನೆಯ ಪ್ರತಿಯೊಂದು ಮೂಲೆಗೂ ತಮಗಿರುವ ಬಾಂಧವ್ಯವನ್ನು ವ್ಯಕ್ತಪಡಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.