
ಭಾರತದ ವಿಮಾನಯಾನ ಕ್ಷೇತ್ರ ಇಂದು ಅತಿ ವೇಗವಾಗಿ ಬೆಳೆಯುತ್ತಿದೆ. ಏರ್ ಇಂಡಿಯಾ ಮತ್ತು ಇಂಡಿಗೋ ನಂತಹ ಸಂಸ್ಥೆಗಳು ನೂರಾರು ಹೊಸ ವಿಮಾನಗಳನ್ನು ಆರ್ಡರ್ ಮಾಡಿದ್ದು, ಬೆಂಗಳೂರು, ದೆಹಲಿಗಳಿಂದ ವಿದೇಶಕ್ಕೆ ಹಾರುವವರ ಸಂಖ್ಯೆ ದಾಖಲೆ ಮಟ್ಟ ತಲುಪಿದೆ. ಆದರೆ ನೀವು ಎಂದಾದರೂ ಫ್ಲೈಟ್ ರಾಡಾರ್ ಆಪ್ ಗಮನಿಸಿದ್ದೀರಾ? ಅಮೆರಿಕಾದಿಂದ ಯುರೋಪ್ ಅಥವಾ ಏಷ್ಯಾ ಕಡೆಗೆ ಬರುವ ನೂರಾರು ವಿಮಾನಗಳು ಹೆಚ್ಚಾಗಿ ರಾತ್ರಿ ವೇಳೆಯೇ ಹಾರಾಡುತ್ತವೆ. ಇದು ಕೇವಲ ಕಾಕತಾಳೀಯವಲ್ಲ; ಇದರ ಹಿಂದೆ ವಿಮಾನ ಕಂಪನಿಗಳ ಬ್ಯುಸಿನೆಸ್ ಟ್ರಿಕ್ ಮತ್ತು ಭೌತಶಾಸ್ತ್ರದ ಅದ್ಭುತ ರಹಸ್ಯಗಳಿವೆ!
ಭೂಮಿಯಿಂದ ಸುಮಾರು 30,000 ಅಡಿ ಎತ್ತರದಲ್ಲಿ ಗಂಟೆಗೆ 400 ಕಿ.ಮೀ ವೇಗದಲ್ಲಿ ಚಲಿಸುವ ಪ್ರಬಲ ಗಾಳಿಯ ಪ್ರವಾಹವಿದೆ. ಇದನ್ನು ವಿಜ್ಞಾನಿಗಳು 'ಜೆಟ್ ಸ್ಟ್ರೀಮ್' (Jet Stream) ಎಂದು ಕರೆಯುತ್ತಾರೆ. ಈ ಗಾಳಿಯು ಪಶ್ಚಿಮದಿಂದ ಪೂರ್ವಕ್ಕೆ (ಅಮೇರಿಕಾದಿಂದ ಯುರೋಪ್ ಕಡೆಗೆ) ಬೀಸುತ್ತದೆ.
ಪ್ರಯೋಜನ: ರಾತ್ರಿ ಮತ್ತು ಮುಂಜಾನೆ ವೇಳೆ ಈ ಗಾಳಿ ಅತ್ಯಂತ ಬಲವಾಗಿರುತ್ತದೆ. ವಿಮಾನವು ಈ ಗಾಳಿಯ ದಿಕ್ಕಿನಲ್ಲೇ ಹಾರುವುದರಿಂದ, ಗಾಳಿಯು ವಿಮಾನವನ್ನು ಹಿಂದಿನಿಂದ ತಳ್ಳುತ್ತದೆ.
ಸಮಯ ಉಳಿತಾಯ: ಇದರಿಂದ ಸುಮಾರು 7.5 ಗಂಟೆಯ ಪ್ರಯಾಣವು ಕೇವಲ 6 ಗಂಟೆ 15 ನಿಮಿಷಕ್ಕೆ ಇಳಿಯುತ್ತದೆ. ಅಂದರೆ ಒಂದೂವರೆ ಗಂಟೆ ಸಮಯ ಉಳಿತಾಯ!
ದೊಡ್ಡ ವಿಮಾನಗಳು ಗಂಟೆಗೆ ಸರಾಸರಿ 5 ರಿಂದ 6 ಟನ್ ಇಂಧನವನ್ನು ಕುಡಿಯುತ್ತವೆ. ಜೆಟ್ ಸ್ಟ್ರೀಮ್ ಸಹಾಯದಿಂದ ಕೇವಲ ಒಂದು ಗಂಟೆ ಸಮಯ ಉಳಿಸಿದರೂ, ಪ್ರತಿ ಹಾರಾಟಕ್ಕೆ ವಿಮಾನ ಕಂಪನಿಗಳಿಗೆ 15 ರಿಂದ 20 ಲಕ್ಷ ರೂಪಾಯಿ ಉಳಿತಾಯವಾಗುತ್ತದೆ. ವರ್ಷ ಪೂರ್ತಿ ಲೆಕ್ಕ ಹಾಕಿದರೆ ಇದು ಕೋಟ್ಯಾಂತರ ರೂಪಾಯಿ ಲಾಭ ತಂದುಕೊಡುತ್ತದೆ.
ಅಮೆರಿಕಾದಿಂದ ಯುರೋಪ್‌ಗೆ ಹೋಗುವವರು ಹೆಚ್ಚಾಗಿ ಉದ್ಯಮಿಗಳಾಗಿರುತ್ತಾರೆ. ರಾತ್ರಿ 10 ಗಂಟೆಗೆ ವಿಮಾನ ಹತ್ತಿ ಆರಾಮಾಗಿ ನಿದ್ದೆ ಮಾಡಿ, ಬೆಳಗ್ಗೆ 6 ಗಂಟೆಗೆ ಯುರೋಪ್ ತಲುಪಿದರೆ, ಅವರು ಫ್ರೆಶ್ ಆಗಿ ಅಂದಿನ ಮೀಟಿಂಗ್‌ಗಳಿಗೆ ಹಾಜರಾಗಬಹುದು. ಹಗಲಿನಲ್ಲಿ ಪ್ರಯಾಣಿಸಿದರೆ ಇಡೀ ದಿನ ವ್ಯರ್ಥವಾಗುತ್ತದೆ. ಇದನ್ನೇ ಗಮನದಲ್ಲಿಟ್ಟುಕೊಂಡು ಏರ್ ಲೈನ್ಸ್ ಕಂಪನಿಗಳು ಸ್ಲೀಪ್ ಕಿಟ್‌ಗಳು ಮತ್ತು ಫ್ಲಾಟ್ ಬೆಡ್‌ಗಳನ್ನು ವಿನ್ಯಾಸಗೊಳಿಸಿವೆ.
ಅಟ್ಲಾಂಟಿಕ್ ಮಹಾಸಾಗರದ ಮಧ್ಯಭಾಗದಲ್ಲಿ ರಾಡಾರ್ ಸಂಪರ್ಕ ಇರುವುದಿಲ್ಲ. ಅಲ್ಲಿ ವಿಮಾನಗಳು 'ಉತ್ತರ ಅಟ್ಲಾಂಟಿಕ್ ಟ್ರಾಕ್ ಸಿಸ್ಟಮ್' ಎಂಬ ಅದೃಶ್ಯ ಹೆದ್ದಾರಿಗಳನ್ನು ಬಳಸುತ್ತವೆ. ಈ ಹೆದ್ದಾರಿಗಳು ಸಂಜೆ 6 ರಿಂದ ರಾತ್ರಿ 1 ಗಂಟೆಯವರೆಗೆ ಅತ್ಯಂತ ಸಕ್ರಿಯವಾಗಿರುತ್ತವೆ. ಈ ಸಮಯವನ್ನು ತಪ್ಪಿಸಿಕೊಂಡರೆ ಪೈಲಟ್‌ಗಳು ಸುದೀರ್ಘ ಮಾರ್ಗದಲ್ಲಿ ಹೋಗಬೇಕಾಗುತ್ತದೆ, ಇದು ಹೆಚ್ಚಿನ ಇಂಧನ ವ್ಯಯಕ್ಕೆ ಕಾರಣವಾಗುತ್ತದೆ.
ಲಂಡನ್, ಪ್ಯಾರಿಸ್ ನಂತಹ ನಗರಗಳ ವಿಮಾನ ನಿಲ್ದಾಣಗಳಲ್ಲಿ ತಡರಾತ್ರಿಯಿಂದ ಬೆಳಗ್ಗೆ 5:30 ರವರೆಗೆ ವಿಮಾನ ಇಳಿಯಲು ನಿಷೇಧವಿರುತ್ತದೆ (Night Curfew). ಒಂದು ವೇಳೆ ನಿಯಮ ಮೀರಿ ಇಳಿದರೆ ಕೋಟ್ಯಾಂತರ ರೂಪಾಯಿ ದಂಡ ತೆರಬೇಕಾಗುತ್ತದೆ. ಹಾಗಾಗಿ, ಯುರೋಪ್‌ನಲ್ಲಿ ಬೆಳಗ್ಗೆ 5:30ರ ನಂತರವೇ ಇಳಿಯುವಂತೆ ವಿಮಾನಗಳು ಅಮೆರಿಕಾದಿಂದ ರಾತ್ರಿ 9 ರಿಂದ 11 ಗಂಟೆಯ ನಡುವೆ ಹೊರಡುತ್ತವೆ.
ಹಗಲಿನಲ್ಲಿ ಸೂರ್ಯನ ಶಾಖದಿಂದ ಶಬ್ದದ ಅಲೆಗಳು ಆಕಾಶದ ಕಡೆಗೆ ಚಲಿಸುತ್ತವೆ. ಆದರೆ ರಾತ್ರಿ ಭೂಮಿ ತಣ್ಣಗಾದಾಗ, ಶಬ್ದದ ಅಲೆಗಳು ಕೆಳಮುಖವಾಗಿ ಬಾಗಿ ನೇರವಾಗಿ ನಮ್ಮ ಕಿವಿಗೆ ಅಪ್ಪಳಿಸುತ್ತವೆ. ಈ ಕಾರಣದಿಂದಲೇ ರಾತ್ರಿ ವಿಮಾನದ ಸದ್ದು ಜೋರಾಗಿ ಕೇಳಿಸುತ್ತದೆ. ಜನರಿಗೆ ತೊಂದರೆಯಾಗಬಾರದು ಎಂದು ಪೈಲಟ್‌ಗಳು ರಾತ್ರಿ ವೇಳೆ 'ಇಂಜಿನ್ ಪವರ್' ಕಡಿಮೆ ಮಾಡಿ ಹಾರಿಸುವ ವಿಶೇಷ ತಂತ್ರಗಳನ್ನು ಬಳಸುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.