
ದ್ವಿತೀಯ ಸೆಮಿಸ್ಟರ್ ಪರೀಕ್ಷೆಯ ನಂತರ ಮನೆಯಲ್ಲಿ ವಿನಾಕಾರಣ ಕಾಲಹರಣ ಮಾಡಲು ಯಾರೊಬ್ಬರಿಗೂ ನಮ್ಮಲ್ಲಿ ಮನಸಿರಲಿಲ್ಲ. ಏನೇ ಆಗಲೀ, ಈ ಬಾರಿ ಬೆಂಗಳೂರಿನಲ್ಲಿ ಒಂದು ಇಂಟರ್ನ್‌ಪ್ ಮಾಡಿ ಬರೋಣವೆಂದು ನಿರ್ಧರಿಸಿದೆವು. 10 ಜನ ವಿದ್ಯಾರ್ಥಿಗಳಿದ್ದ ತಮ್ಮ ತರಗತಿಯಲ್ಲಿ ಪ್ರತಿಯೊಬ್ಬರೂ ಸಹ ಒಂದೊಂದು ಮೀಡಿಯಾ ಮನೆಯನ್ನು ಸೇರಿಕೊಂಡರು. ಅದೂ ಬೆಂಗಳೂರಿನಲ್ಲೇ. ನಾನು ಮತ್ತು ನನ್ನ ಗೆಳತಿ ಒಂದು ಸುದ್ದಿ ವಾಹಿನಿ ಸೇರಿದೆವು. ಪುತ್ತೂರಿನಲ್ಲಿ ಬೆಳೆದ ನಮಗೆ ಬೆಂಗಳೂರಿನ ಗಂಧಗಾಳಿಯೂ ತಿಳಿದಿರಲಿಲ್ಲ. ಮಾಯಾನಗರಿ ಎಂದಾಗಲೇ ಹೇಗಪ್ಪ ಅಲ್ಲಿ ಇರೋದು ಎಂದು ಗೊಣಗುತ್ತಲೇ ಪ್ರಯಾಣ ಬೆಳೆಸಿದ್ದೆವು.
ದಾಡಿ ಹುಡುಗರ ನಾಡಿಮಿಡಿತ;ಕಾರಿಡಾರ್ ಗಡ್ಡಧಾರಿಗಳಿಗೆ ಭಾರಿ ಡಿಮ್ಯಾಂಡು! ...
ಪತ್ರಿಕೋದ್ಯಮದಲ್ಲಿ ನಡೆಯುವ ಕಾರ್ಯವೈಖರಿಯ ಬಗ್ಗೆ ಕೇಳಿ ಗೊತ್ತಿತ್ತು. ಕೊಂಚ ಮಟ್ಟಿನ ಪ್ರಾಕ್ಟಿಕಲ್ ಅನುಭವ ಕೂಡಾ ಇತ್ತು. ಆದರೆ ಒಂದು ಮಾಧ್ಯಮ ಯಾವೆಲ್ಲಾ ರೀತಿಯಲ್ಲಿ ಶ್ರಮಿಸುತ್ತದೆ ಎಂಬ ನಿಜ ಸ್ವರೂಪ ಗೊತ್ತಾಗಿದ್ದು ಇಂಟರ್ನ್‌ಶಿಪ್ ವೇಳೆಯಲ್ಲೇ. ಮೊದಮೊದಲು ಡೆಸ್ಕ್‌ನಲ್ಲಿ ಕೇಳೋ ಗದ್ದಲವನ್ನು ಕಂಡು ಇವರಾರಯಕಿಷ್ಟುಜೋರಾಗಿ ವಿಚಿತ್ರವಾಗಿ ಮಾತಾಡ್ತಾರಪ್ಪಾ ಎಂದುಕೊಂಡಿದ್ದೆವು. ಮತ್ತೆ ಅರಿವಾಯಿತು, ಅದು ಬ್ರೇಕಿಂಗ್ ನ್ಯೂಸ್‌ನ ಕಾರಣಕ್ಕೆ ಎಂದು.
ಒಬ್ಬ ಪತ್ರಕರ್ತನಾದವ ಜನರಿಗೆ ಮಾಹಿತಿಯನ್ನು ನೀಡುವ ಭರದಲ್ಲಿ ಎಷ್ಟೋ ಹರಸಾಹಸಗಳನ್ನು, ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅವೆಲ್ಲದರ ನಡುವೆ ಧೈರ್ಯದಿಂದ ಮುನ್ನುಗ್ಗಬೇಕಾದ ಧೈರ್ಯ ಪತ್ರಕರ್ತನಲ್ಲಿರಬೇಕು. ನಾಲ್ಕು ಗೋಡೆಗಳ ನಡುವೆ ಕುಳಿತು ಕೆಲಸ ನಿರ್ವಹಿಸುವುದಕ್ಕೂ 4 ಜನರ ನಡುವೆ ಹೋಗಿ ಸುದ್ದಿ ಪಡೆದುಕೊಂಡು ಬರುವುದಕ್ಕೂ ಸಾಕಷ್ಟುವ್ಯತ್ಯಾಸವಿದೆ. ಕಾಲದ ಮಿತಿ ಇಲ್ಲದೆ, ಊಟ ನೀರು ಬಿಟ್ಟುಸುದ್ದಿ ಸಂಗ್ರಹಿಸಬೇಕೆಂದರೆ ಅದು ಸುಲಭದ ಮಾತಲ್ಲ. ಪತ್ರಿಕೋದ್ಯಮದ ನಿಜವಾದ ಸ್ವರೂಪ, ವರದಿಗಾರನ ನೋವಿನ ನಡುವೆಯೂ ದುಡಿಯುವ ಮನೋಭಾವ ಅರಿವಾಗಿದ್ದು ಇಲ್ಲಿಯೇ.
ರಿಪೋರ್ಟರ್ ಡೈರಿ;ಬಾತ್‌ರೂಮ್‌ನಲ್ಲಿ ನೀರು ಇಲ್ಲ, ಸಾಂಬರ್‌ನಲ್ಲಿ ನೀರು ಇದೆ! ...
ಘಟನೆ 1
ಬೆಳ್ಳಂಬೆಳಗ್ಗೆ ಎದ್ದು ಆಫೀಸ್‌ಗೆ ಹೋದಾಗ ರಿರ್ಪೋಟರ್ ಐಎಂಎ ಜ್ಯುವೆಲ್ಲರ್ಸ್ ಹಗರಣದ ವರದಿಗಾರಿಕೆಗೆ ಕರೆದೊಯ್ದರು. ಅದಾಗಲೇ ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಘಟನೆಯದು. ಕ್ಷಣಕ್ಕೊಂದು ಹೊಸರೂಪವನ್ನು ಪಡೆಯುತ್ತಿದ್ದ ಈ ಘಟನೆಯ ನಿಜರೂಪವನ್ನು ಭೇದಿಸುವುದು ಕಠಿಣವಾಗಿತ್ತು. ಒಂದೆಡೆ ಜನರ ಆಕ್ರಂದನ, ಇನ್ನೊಂದೆಡೆ ಕಾವೇರಿದ ಮುಷ್ಕರ. ಎಲ್ಲಿ ನೋಡಿದರಲ್ಲಿ ಗೋಳಾಟದ ಬಿಸಿ, ಇದರ ನಡುವೆ ವರದಿಗಾರ ಸುದ್ದಿಗಾಗಿ ಹೋರಾಡಬೇಕಿತ್ತು. ಜನರ ನಡುವೆ ಹೋಗಿ ಅವರ ಮಾತುಗಳನ್ನು ಆಲಿಸುತ್ತಾ ಅವರ ಮಿಡಿತಗಳಿಗೆ ಸ್ಪಂದಿಸಬೇಕಿತ್ತು. ಎಷ್ಟೋ ಬಾರಿ ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ದಿನವಿಡೀ ಅಲ್ಲೇ ಕುಳಿತು ಪತ್ರಕರ್ತರು ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದರು. ಇವೆಲ್ಲದರ ನಡುವೆಯೂ ಕ್ಷಣಕ್ಷಣಕ್ಕೂ ಸುದ್ದಿಮನೆಗೆ ವಿಷಯವನ್ನುರವಾನಿಸಬೇಕಾದ ಸವಾಲು.
ಘಟನೆ 2
ಮಾಡರ್ನ್ ದೇವದಾಸನ ವಿಫಲ ಪ್ರೇಮ ಪ್ರಸಂಗ!...
ಮೀಸಲಾತಿಗೆಂದು ನಡೆದ ಇನ್ನೊಂದು ಪ್ರತಿಭಟನೆಯ ಸಂದರ್ಭವದು. ಜನರು ರೊಚ್ಚಿಗೆದ್ದು ಪತ್ರಕರ್ತರ ಮೇಲೆಯೇ ಹೌಹಾರಿದ್ದರು. ಕೊಂಚ ಎಚ್ಚರ ತಪ್ಪಿದರೂ ಏಟು ಕಟ್ಟಿಟ್ಟಬುತ್ತಿ ಅನ್ನುವ ಸನ್ನಿವೇಶ. ಒಂದು ನಿಮಿಷ ಕಣ್ಣು ಮಿಟುಕಿಸುವಷ್ಟರಲ್ಲಿ ಅಲ್ಲಿನ ಚಿತ್ರಣವೇ ಬದಲಾಗಿ ಹೋಗಿತ್ತು. ಜನ ವಿಧಾನಸೌಧವನ್ನು ಮುತ್ತಿಗೆ ಹಾಕಲು ದೌಡಾಯಿಸಿದ್ದರು. ಈ ಎಲ್ಲಾ ಸಂದರ್ಭದಲ್ಲೂ ಒಂದು ಹೆಣ್ಣು ಮಗಳು ಮುನ್ನುಗ್ಗಿ ಹೋಗಿ ವರದಿ ಮಾಡಿದ್ದನ್ನು ಕಂಡಾಗ ಬೆರಗಾಗಿ ಹೋಗಿದ್ದೆ. ಕಿಲೋಮೀ ಗಟ್ಟಲೇ ಪ್ರತಿಭಟನೆಗಾರರ ಹಿಂದೆ ಓಡಿ ಅವರು ಏನೇ ಅಂದರೂ ಅದೇನೇ ಮಾಡಿದರೂ ಅವೆಲ್ಲವನ್ನು ಸೆರೆಹಿಡಿಯಬೇಕಾದರೆ ಒಂದು ಕೈ ಮುಂದೆ ಇರಲೇಬೇಕು.
ಮೊದಲೇ ನಾನು ಮಂಗಳೂರಿನವಳು, ಬೆಂಗಳೂರಿನ ಸುಳಿವೇ ಇಲ್ಲದಿದ್ದರಿಂದ ಇವೆಲ್ಲವನ್ನು ಕಂಡು ದಂಗಾಗಿ ಹೋಗಿದ್ದೆ. ಅರೆಕ್ಷಣ ಬೇಡಪ್ಪಾ ಈ ಕ್ಷೇತ್ರ ಎಂದು ಭಾವಿಸಿದ್ದೆ. ಆದರೆ ಆ ಕ್ಷಣ ನನ್ನನ್ನು ಹುರಿದುಂಬಿಸಿ ಗಟ್ಟಿಗೊಳಿಸಿದವರು ರಕ್ಷಾ ಮೇಡಂ. ಇತರ ಚಾನೆಲ್ ರಿಪೋರ್ಟರ್ಸ್ ಜೊತೆ ಸೇರಿ ಮುನ್ನುಗ್ಗಿದಾಗ ನಾನು ಈ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬಹುದು ಎಂಬ ನವಚೈತನ್ಯ ಮೂಡಿಸಿದ್ದು ಅವರೇ. ಮಾಧ್ಯಮ ಲೋಕ ಹೊರಜಗತ್ತಿಗೆ ಬಣ್ಣ ಬಣ್ಣವಾಗಿ ಕಂಡರೂ ತೆರೆ ಹಿಂದಿನ ರಿಯಲ್ ಹೀರೋಗಳ ಶ್ರಮ ಮೆಚ್ಚಲೇಬೇಕು.
ತಪ್ಪು ನಿಂದಲ್ಲ! ಹಾಸ್ಟೆಲಿನ ಬೆಸ್ಟ್ ಸಿಂಗರ್ ಬರೆದ ಸ್ನೇಹ ನಿವೇದನೆ ...
ಬೆಂಗಳೂರಿನಲ್ಲಿ ಇದ್ದ ಅಷ್ಟೂದಿನವೂ ಮೀಡಿಯಾದ ಕುರಿತು ಕಲಿಯುದರ ಜೊತೆಗೆ ಜೀವನ ಪಾಠವನ್ನೂ ಕಲಿತೆವು. ಸಾಮಾನ್ಯವಾಗಿ ಮಂಗಳೂರಿನವರಿಗೆ ಎಲ್ಲೇ ಹೋದರೂ ಆಹಾರ ಸಮಸ್ಯೆ ಎದ್ದು ಕಾಡುತ್ತದೆ, ನಮಗೂ ಕೂಡಾ. ಒಂದು ತಿಂಗಳು ಕುಚಲಕ್ಕಿಯ ಸಹವಾಸವಿಲ್ಲದೆ ಬೆಂಗಳೂರು ದಿನಗಳು ಬಿಕೋ ಅನ್ನುತ್ತಿತ್ತು. ತುಳುವಿನವರು ಸಿಕ್ಕರಂತೂ ನಮ್ಮವರು ಎಂಬ ಗತ್ತು ಬೇರೆ. ಹಾಗೋ-ಹೀಗೋ ಒಂದು ತಿಂಗಳು ಬೆಂಗಳೂರಿನ ಆಹಾರವನ್ನು ಸಂಭಾಳಿಸುವುದರ ಜೊತೆಗೆ ಜೀವನಾನುಭವವನ್ನು, ಕ್ಯಾಮರಾ ಹಿಂದಿನ ನೋವು ನಲಿವುಗಳನ್ನು ಅರಿತುಕೊಂಡೆವು ಎಂಬ ಖುಷಿಯಿದೆ.
ಸುಷ್ಮಾ ಸದಾಶಿವ್
ವಿವೇಕಾನಂದ ಕಾಲೇಜು, ಪುತ್ತೂರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.