ಅವಧಿಪೂರ್ವ ಜನಿಸಿದ ಮಕ್ಕಳ ಮೆದುಳಿಗೆ ಪುಂಗಿ ಚಿಕಿತ್ಸೆ!

By Web DeskFirst Published May 30, 2019, 11:20 AM IST
Highlights

ಅವಧಿಪೂರ್ವ ಜನಿಸಿದ ಮಕ್ಕಳ ಮೆದುಳಿಗೆ ಪುಂಗಿ ಚಿಕಿತ್ಸೆ!| ಭಾರತೀಯ ಹಾವಾಡಿಗರ ಪುಂಗಿ ಬಳಸಿ ಸಂಗೀತ ಸಂಯೋಜನೆ| ಮಕ್ಕಳ ಮೆದುಳು ಬೆಳವಣಿಗೆಗೆ ಇದು ಸಹಕಾರಿ: ಸಂಶೋಧನೆ

ಜಿನೆವಾ[ಮೇ.30]: ಹಾವುಗಳನ್ನು ಆಡಿಸಲು ಹಾವಾಡಿಗರು ಪುಂಗಿಯನ್ನು ಊದುವುದು ಭಾರತದಲ್ಲಿ ತಲೆತಲಾಂತರಗಳಷ್ಟುಹಳೆಯ ವಿಚಾರ. ಇದೀಗ ಸ್ವಿಜರ್ಲೆಂಡ್‌ ವಿಜ್ಞಾನಿಗಳು ಈ ಪುಂಗಿಯನ್ನೇ ಬಳಸಿ ಹೊಸದೊಂದು ಸಂಗೀತ ಸೃಷ್ಟಿಸುವ ಮೂಲಕ ಅವಧಿಪೂರ್ವ ಜನಿಸಿ, ಮೆದುಳಿನ ಬೆಳವಣಿಗೆ ಕಾಣದೇ ಮಾನಸಿಕ ನ್ಯೂನತೆಗೆ ತುತ್ತಾಗುವ ಮಕ್ಕಳ ಸಮಸ್ಯೆಗೆ ಪರಿಹಾರ ಕಂಡುಹಿಡಿದಿದ್ದಾರೆ.

ನಂಬಲು ತುಸು ಕಷ್ಟವಾದರೂ ಇದು ನಿಜ. ಗರ್ಭಿಣಿಯರಿಗೆ ಕೆಲವೊಂದು ಸಂದರ್ಭಗಳಲ್ಲಿ ಅವಧಿಗೆ ಮುಂಚಿತವಾಗಿಯೇ ಮಕ್ಕಳು ಜನಿಸಿಬಿಡುತ್ತವೆ. ವೈದ್ಯಕೀಯ ಕ್ಷೇತ್ರ ಮುಂದುವರಿದಿರುವುದರಿಂದ ಅಂತಹ ಮಕ್ಕಳನ್ನು ಬದುಕಿಸಿಕೊಳ್ಳುವ ಅವಕಾಶ ಹೆಚ್ಚಿದೆ. ಆದರೆ, ಇಂತಹ ಮಕ್ಕಳ ಮೆದುಳು ಬೆಳವಣಿಗೆ ಹೊಂದಿರುವುದಿಲ್ಲ. ತುರ್ತು ನಿಗಾ ಘಟಕ, ಇನ್‌ಕ್ಯುಬೇಟರ್‌ನಲ್ಲಿಟ್ಟು ಮಕ್ಕಳನ್ನು ಸಲುಹಿದರೂ ತಾಯಿ ಗರ್ಭದಲ್ಲಿಷ್ಟುವ್ಯವಸ್ಥಿತವಾಗಿ ಮೆದುಳು ಬೆಳವಣಿಗೆ ಹೊಂದುವುದಿಲ್ಲ. ಅಂತಹ ಮಕ್ಕಳ ಮೆದುಳು ಬೆಳವಣಿಗೆಗಾಗಿ ಸಂಶೋಧಕರು ಪುಂಗಿ ಸಂಗೀತ ಬಳಸುವ ವಿಧಾನ ಕಂಡುಕೊಂಡಿದ್ದಾರೆ.

ಜಿನೆವಾ ವಿಶ್ವವಿದ್ಯಾಲಯ, ಜಿನೆವಾ ಆಸ್ಪತ್ರೆ ವಿಶ್ವವಿದ್ಯಾಲಯದ ಸಂಶೋಧಕರು ಪುಂಗಿ ಬಳಸಿ ಹೊಸದೊಂದು ಸಂಗೀತ ಸೃಷ್ಟಿಸಿದ್ದಾರೆ. ಈ ಸಂಗೀತವನ್ನು ಕೇಳಿದ ಮಕ್ಕಳಲ್ಲಿ ಮೆದುಳಿನ ಬೆಳವಣಿಗೆ ಉತ್ತಮವಾಗಿ ಕಂಡುಬಂದಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಭಾರತೀಯ ಹಾವಾಡಿಗರ ಪುಂಗಿಯನ್ನೇ ಬಳಸಿದ್ದೇಕೆ?

ಮೆದುಳಿನ ಬೆಳವಣಿಗೆಗೆ ಸಂಗೀತ ಚಿಕಿತ್ಸೆ ಬಳಸಲು ಮುಂದಾದ ಸಂಶೋಧಕರು ಇದಕ್ಕಾಗಿ ಖ್ಯಾತ ಸಂಗೀತಗಾರ ಆ್ಯಂಡಿಯಾಸ್‌ ವಾಲೆನ್‌ವೀಡರ್‌ ಅವರ ನೆರವು ಪಡೆದಿದ್ದಾರೆ. ಅವರು ವಿವಿಧ ಸಂಗೀತ ಪರಿಕರಗಳನ್ನು ಮಕ್ಕಳ ಮುಂದೆ ಪ್ರಯೋಗಿಸಿದ್ದಾರೆ. ಭಾರತೀಯ ಹಾವಾಡಿಗರ ಪುಂಗಿ ಊದಿದಾಗ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಪ್ರತಿಕ್ರಿಯೆ ನೀಡಿವೆ. ಅಳುತ್ತಿದ್ದ ಮಕ್ಕಳೂ ಸುಮ್ಮನಾಗಿವೆ. ಸಂಗೀತದತ್ತ ಗಮನಹರಿಸಿವೆ. ಹೀಗಾಗಿ ಪುಂಗಿಯನ್ನೇ ಬಳಸಿ ಹೊಸ ಸಂಗೀತ ಸಂಯೋಜನೆ ಮಾಡಲಾಗಿದೆ.

click me!