
'ಮಗು ಇದ್ದಲ್ಲಿ ನಗು ಇರುತ್ತದೆ' ಎನ್ನುವುದು ಜನರ ನಂಬಿಕೆ. ಆದರೆ, ರಿಯಾಲಿಟಿಗೆ ಬಂದಾಗ ಮಗು ಅಂದ್ರೆ ಮಂಡೆಬಿಸಿ ಅನ್ನುತ್ತಿದ್ದಾರಂತೆ ಹೊಸ ತಲೆಮಾರಿನ ತಂದೆತಾಯಿ. ಕಳೆದ ವಾರದ 'ಡೆಮೋಗ್ರಫಿ' ಜರ್ನಲ್‌ನಲ್ಲಿ ಪ್ರಕಟವಾಗಿರುವ ಈ ಅಧ್ಯಯನ ವರದಿಯು, ಮಗು ಹುಟ್ಟುವವರೆಗೆ ಉತ್ಸಾಹದಿಂದಿರುವ ತಂದೆತಾಯಿ, ಬಳಿಕ ಸಾಕಪ್ಪಾ ಸಾಕು ಈ ಬಾಳು ಎಂದು ಗೋಳಾಡುತ್ತಿರುವುದನ್ನು ತಿಳಿಸಿದೆ.
ಮಕ್ಕಳ ಸಿಟ್ಟನ್ನು ನಿಭಾಯಿಸುವುದು ಹೇಗೆ?
ಆರಂಭದಲ್ಲಿ ಎರಡರಿಂದ ಮೂರು ಮಕ್ಕಳ ಕನಸ ಕಾಣುವ ದಂಪತಿಯು, ಒಂದು ಮಗುವಾದ ಬಳಿಕ, ಇನ್ನು ಮಕ್ಕಳ ಸಹವಾಸ ಬೇಡಪ್ಪಾ ಎನ್ನುತ್ತಿದ್ದಾರಂತೆ. ಮಗುವಿನ ಜನನದ ಬಳಿಕ ಸಂತೋಷ ಕಣ್ಮರೆಯಾಗಿದೆ ಎಂಬುದು ಬಹುತೇಕ ನವ ಪೋಷಕರ ಅಳಲು ಎಂದು ಅಧ್ಯಯನ ತಿಳಿಸಿದೆ.
ಅಧ್ಯಯನದಲ್ಲಿ ಈ ಕುರಿತು ನೇರ ಪ್ರಶ್ನೆ ಕೇಳದೆ, ಕಳೆದ ಐದು ವರ್ಷಗಳ ಜೀವನದ ಸಂತೋಷದ ಬಗ್ಗೆ ಪ್ರಶ್ನಿಸಲಾಗಿತ್ತು. ಅದರಲ್ಲಿ ಬಹುತೇಕರು ಮಗು ಹುಟ್ಟಿದ ವರ್ಷದ ಬಳಿಕ ತಾವು ಸಂತೋಷ ಕಳೆದುಕೊಂಡಿರುವುದನ್ನು ತಿಳಿಸಿದ್ದಾರೆ. ಹೊಸ ಪೋಷಕರು ನಿರೀಕ್ಷೆಗೂ ಮೀರಿ ತಾವು ಜೀವನದಲ್ಲಿ ಸಂತೋಷ, ಉತ್ಸಾಹ ಕಳೆದುಕೊಂಡಿರುವುದಾಗಿ ಹೇಳಿದ್ದಾರೆ. ನಿದ್ರೆಯಿಲ್ಲದ ರಾತ್ರಿಗಳು, ಪದೇ ಪದೆ ಶೌಚದಿಂದ ಕೊಳಕಾಗುವ ಬಟ್ಟೆಗಳು, ಸಂಗಾತಿಯೊಂದಿಗೆ ಕಳೆಯಲು ಸಿಗದ ಸಮಯ ಇವೆಲ್ಲವೂ ತಮ್ಮನ್ನು ಹೈರಾಣಾಗಿಸಿವೆ ಎಂಬುದು ಅವರ ಗೋಳು.
ಮಕ್ಕಳನ್ನು ಗೆಳೆಯರನ್ನಾಗಿ ಮಾಡಿಕೊಳ್ಳುವುದು ಹೇಗೆ?
ಈ ಹಿಂದೆ 'ವಾಷಿಂಗ್ಟನ್ ಪೋಸ್ಟ್' ನಡೆಸಿದ ಸರ್ವೆಯೂ ಇದಕ್ಕೆ ಪೂರಕ ಫಲಿತಾಂಶವನ್ನೇ ನೀಡಿತ್ತು. ಸಂಗಾತಿಯ ಸಾವು, ನಿರುದ್ಯೋಗ, ವಿಚ್ಚೇದನ ಎಲ್ಲಕ್ಕಿಂತ ಹೆಚ್ಚಾಗಿ ಮೊದಲ ಮಗುವಿನ ಜನನ ಜನರನ್ನು ಕಂಗೆಡಿಸಿದೆ ಎಂಬ ಅಚ್ಚರಿಯ ಫಲಿತಾಂಶ ವಾಷಿಂಗ್ಟನ್ ಪೋಸ್ಟ್‌ಗೆ ಸಿಕ್ಕಿತ್ತು. ಪ್ರೆಗ್ನೆನ್ಸಿ, ಆರೋಗ್ಯ ಸಮಸ್ಯೆಗಳು, ಬಂಜೆತನ ಎಲ್ಲಕ್ಕಿಂತ ಹೆಚ್ಚಾಗಿ ಮಗು ಹುಟ್ಟಿದ ಮೊದಲ ವರ್ಷ ತಾವು ಖಿನ್ನತೆ, ಮನೆಯಲ್ಲಿ ಏಕಾಂಗಿತನ, ಸಂಬಂಧದಲ್ಲಿ ಬಿರುಕು ಮುಂತಾದ ಸಮಸ್ಯೆಗಳನ್ನು ಎದುರಿಸಿದ್ದಾಗಿ ಸರ್ವೆಯಲ್ಲಿ ಪಾಲ್ಗೊಂಡಿದ್ದ ಹೊಸ ಪೋಷಕರು ತಿಳಿಸಿದ್ದರು.
ಹಾಗಿದ್ದರೆ, ಇನ್ನು ಮುಂದೆ ನವದಂಪತಿಯು ಮಗುವಿನ ಕನಸು ಕಾಣುವ ಮೊದಲು ಈ ಎಲ್ಲ ನಕಾರಾತ್ಮಕ ಘಟನೆಗಳನ್ನು ಅನುಭವಿಸಲು ಮಾನಸಿಕವಾಗಿ ಸಿದ್ಧರಾಗಿ ಮುಂದಡಿಯಿಡಬೇಕಾದೀತು. ಆದರೆ, ಈ ಸರ್ವೆಗಳು ಕೇವಲ ಮಗುವಿನ ಜನನದ ಮೊದಲೆರಡು ವರ್ಷಗಳನ್ನು ಒಳಗೊಂಡಿವೆಯೇ ಹೊರತು ನಂತರದ ಘಟ್ಟಗಳನ್ನಲ್ಲ ಎಂಬುದೂ ನೆನಪಿಡಬೇಕಾದ ಸಂಗತಿ.
ಮಕ್ಕಳ ತಪ್ಪಿಗೆ ಶಿಕ್ಷೆ, ಹೇಗಿರಬೇಕು ಪೋಷಕರ ನಿರೀಕ್ಷೆ?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.