ಮೇ 31, 2019- ಉತ್ತರ ಕೊರಿಯಾಕ್ಕೆ ಲೆಕ್ಸೀ ಆಲ್ಫರ್ಡ್ ಎಂಬ 21 ವರ್ಷದ ಯುವತಿ ಭೇಟಿ ಇಟ್ಟಿದ್ದೇ ತಡ, ಜಗತ್ತಿನ ಎಲ್ಲ ದೇಶಗಳಿಗೂ ಕಾಲಿಟ್ಟ ಅತಿ ಕಿರಿಯ ವ್ಯಕ್ತಿ ಎಂಬ ವಿಶ್ವದಾಖಲೆಯ ಕಿರೀಟ ಲೆಕ್ಸೀ ಮುಡಿಗೇರಿತು. 21 ವರ್ಷಕ್ಕೆ 196 ದೇಶಗಳನ್ನು ನೋಡುವುದು ಸುಲಭದ ಮಾತಲ್ಲ. ಇಷ್ಟಕ್ಕೂ ಲೆಕ್ಸೀಗೆ ಇದೆಲ್ಲ ಹೇಗೆ ಸಾಧ್ಯವಾಯಿತು?
ನಾವೆಲ್ಲ ಸಾಮಾನ್ಯವಾಗಿ ಹುಟ್ಟಿ 21 ವರ್ಷವಾಗುವ ಹೊತ್ತಿಗೆ ಡಿಗ್ರಿ ಮುಗಿಸಿಕೊಳ್ಳಲು ಹೆಣಗಾಡುತ್ತಿರುತ್ತೇವೆ. ಹುಟ್ಟಿದೂರು ಹೋಗು ಹೋಗು ಎಂದರೆ ಬೆಂಗಳೂರು ಬಾ ಬಾ ಎನ್ನುವ ವಯಸ್ಸು. ಚೆನ್ನಾಗಿ ದುಡಿದಿಟ್ಟುಕೊಂಡು ಸಾಯುವುದರೊಳಗೆ ಒಮ್ಮೆಯಾದರೂ ವಿದೇಶಕ್ಕೆ ಹೋಗಬೇಕು ಎಂಬ ಕನಸೊಂದು ಸಣ್ಣಗೆ ಕನವರಿಸುತ್ತಿರುತ್ತದೆ. ಒಂದು ವೇಳೆ ಯಾವುದೋ ದೇಶಕ್ಕೆ ಹೋಗಿ ಬಂದೆವಾದರೂ, ಒಳಗಿಂದೊಳಗೇ ಸೆಲೆಬ್ರಿಟಿ ಫೀಲಿಂಗ್. ಅಂಥದರಲ್ಲಿ 21 ವರ್ಷಕ್ಕೇ ಜಗತ್ತಿನ ಎಲ್ಲ 196 ದೇಶ ನೋಡುವುದೆಂದರೆ ಹುಡುಗಾಟವಲ್ಲ. ಇಂಥದೊಂದು ಸಾಧನೆ ಮಾಡಿದ ಭೂಮಿ ಮೇಲಿನ ಅತಿ ಕಿರಿಯ ವ್ಯಕ್ತಿ ಎಂಬ ದಾಖಲೆಗೆ ಪಾತ್ರವಾಗಿದ್ದಾಳೆ ಲೆಕ್ಸೀ ಆಲ್ಫರ್ಡ್.
ಹುಡುಗಿಯರು ಸೋಲೋ ಟ್ರಿಪ್ ಹೋಗುವುದು ಹೇಗೆ?
ಮೊನ್ನೆ ಮೇ 31ಕ್ಕೆ ಉತ್ತರ ಕೊರಿಯಾಕ್ಕೆ ಲೆಕ್ಸಿ ಕಾಲಿಡುತ್ತಲೇ ಹೊಸದೊಂದು ದಾಖಲೆ ಅವಳ ಹೆಸರಿನಲ್ಲಿ ಸೃಷ್ಟಿಯಾಯಿತು. ಲೆಕ್ಸಿಯ ಪೋಷಕರು ಟ್ರಾವೆಲ್ ಏಜೆನ್ಸಿ ಹೊಂದಿದ್ದು, ತಿರುಗಾಟ ಅವಳಿಗೆ ಮಗುವಾಗಿದ್ದ ಸಮಯದಿಂದಲೇ ಬಯಸದೇ ಬಂದ ಭಾಗ್ಯ. ಆಕೆಗೆ ತಿಳಿವಳಿಕೆ ಬರುವ ಹೊತ್ತಿಗಾಗಲೇ ಈಜಿಪ್ಟ್‌ನಿಂದ ಕಾಂಬೋಡಿಯಾವರೆಗೂ ಅದಾಗಲೇ ಸುತ್ತಿಯಾಗಿತ್ತು. ತನ್ನ ವಿಶ್ವ ಪರ್ಯಟನೆ ಕುರಿತು ಮಾತನಾಡುವ ಲೆಕ್ಸೀ, 'ವಿಶ್ವದ ಎಲ್ಲ ರೀತಿಯ ಜೀವನಕ್ಕೆ ನಾನು ತೆರೆದುಕೊಳ್ಳುವಂತೆ ಮಾಡಲು ನನ್ನ ಪೋಷಕರು ಬಹಳಷ್ಟು ಪ್ರಾಮುಖ್ಯತೆ ನೀಡಿದ್ದರು. ಇದು ಇಂದು ನಾನು ಏನಾಗಿರುವೆನೋ ಅದರ ಮೇಲೆ ಗಾಢ ಪರಿಣಾಮ ಬೀರಿದೆ. ನನಗೆ ಯಾವಾಗಲೂ ಇನ್ನೊಬ್ಬರ ಬದುಕಿನ ರೀತಿನೀತಿ ಬಗ್ಗೆ, ಅವರು ಖುಷಿ ಕಂಡುಕೊಳ್ಳುವ ಬಗ್ಗೆ ಬಹಳ ಕುತೂಹಲ ಇತ್ತು,' ಎನ್ನುತ್ತಾಳೆ.
undefined
'ಆರಂಭದಲ್ಲಿ ನಾನು ಜೀವನದಲ್ಲಿ ಏನು ಮಾಡಬಹುದೆಂದು ನನ್ನ ಮಿತಿಯನ್ನು ನಾನು ಹಿಗ್ಗಿಸುವ ಸಲುವಾಗಿ ಸಾಧ್ಯವಾದಷ್ಟು ದೇಶಗಳನ್ನು ಸುತ್ತಬೇಕೆಂದುಕೊಂಡೆ. ಆದರೆ, ಯಾವಾಗ ನಾನು ಇತರರಿಗೆ, ಅದರಲ್ಲೂ ಯುವತಿಯರಿಗೆ ಪ್ರೇರಣೆಯಾಗುತ್ತಿದ್ದೇನೆಂಬ ಅರಿವಾಯಿತೋ ಆಗ ಎಷ್ಟೇ ಕಷ್ಟ ಬಂದರೂ ನಾನು ಮುನ್ನುಗ್ಗಬೇಕೆಂಬ ಛಲ ಮೂಡಿತು. ಜಗತ್ತು ಮಾಧ್ಯಮಗಳು ತೋರಿಸುವಷ್ಟು ಭಯಂಕರವಾಗಿ ಇಲ್ಲ, ರಾಜಕೀಯ ಅಸ್ಥಿರತೆ ಏನೇ ಇರಲಿ, ಎಲ್ಲ ಸಂಸ್ಕೃತಿಯಲ್ಲೂ ಕರುಣೆ ತುಂಬಿದೆ ಎಂಬುದನ್ನು ನಾನು ತೋರಿಸಲು ಉತ್ಸುಕಳಾಗಿದ್ದೆ,' ಎಂದು ಲೆಕ್ಸೀ ತನ್ನ ಈ ಹಾದಿಯ ಹಿಂದಿನ ಮನೋಬಲವನ್ನು ಬಿಚ್ಚಿಡುತ್ತಾಳೆ.
ವಿದೇಶ ಪ್ರವಾಸದಲ್ಲಿ ಇವುಗಳನ್ನು ಧರಿಸದಿದ್ದರೆ ಒಳಿತು!
ಈಗಿನ ದಿನಗಳಲ್ಲಿ ಟ್ರಾವೆಲಿಂಗ್ ಎನ್ನುವುದು ಅಷ್ಟೇನೂ ದುಬಾರಿಯಲ್ಲದಿದ್ದರೂ, ಆಕೆ ಅಷ್ಟು ಚಿಕ್ಕ ವಯಸ್ಸಿನಲ್ಲಿ ಇದನ್ನು ಹೇಗೆ ಸಾಧಿಸಿದಳು ಎಂದು ಆಶ್ಚರ್ಯವಾಗದಿರದು. ಆಕೆ ಸರಳವಾಗಿ ತಾನು ಹೇಗೆ ದೇಶಗಳನ್ನು ಸುತ್ತಿದೆ, ಖರ್ಚುಗಳನ್ನು ನಿಭಾಯಿಸಿದೆ ಎಂಬ ಬಗ್ಗೆ ಕೆಲ ಹೊಳಹುಗಳನ್ನು ನೀಡಿದ್ದು, ಕಾಲಿಗೆ ಚಕ್ರ ಸುತ್ತಿಕೊಂಡವರಿಗೆ ಇದು ಖಂಡಿತಾ ಉತ್ತಮ ಟಿಪ್ಸ್.
ಎಲ್ಲಿಯೇ ಹೋಗುವುದಾದರೂ ಮುಂಚಿತವಾಗಿಯೇ ಆ ಬಗ್ಗೆ ಹೆಚ್ಚು ರಿಸರ್ಚ್ ಮಾಡಿ, ಬೆಸ್ಟ್ ಡೀಲ್ಸ್, ಆಫರ್ಸ್ ಎಲ್ಲವನ್ನೂ ನೋಡಿ ಬುಕ್ ಮಾಡಿಕೊಳ್ಳುತ್ತೇನೆ. ಇನ್ನು ಲಕ್ಷುರಿ ಹೋಟೆಲ್‌ಗಿಂತ ಹಾಸ್ಟೆಲ್‌ಗಳಲ್ಲಿ ಉಳಿಯುತ್ತೇನೆ. ಒಂದು ವೇಳೆ ಹೋಟೆಲ್‌ಗಳಲ್ಲಿ ಉಳಿದರೆ, ಅದರ ಬದಲಾಗಿ, ಆ ಹೋಟೆಲ್ ಸಂಬಂಧ ಕಂಟೆಂಟ್ ಬರೆದು ಖರ್ಚು ಸರಿದೂಗಿಸುತ್ತಿದ್ದೆ. ಅಲ್ಲದೆ, ಉಳಿದ ದಿನಗಳಲ್ಲಿ ಆದಷ್ಟು ಮನೆಯಲ್ಲೇ ಇದ್ದು ನನ್ನ ಖರ್ಚನ್ನು ಉಳಿಸುತ್ತಿದ್ದೆ. ಇನ್ನು ಕಾರ್ ಲೋನ್, ಸ್ಟಡಿ ಲೋನ್ ಯಾವುದೂ ಮಾಡಿಲ್ಲ. ಅಲ್ಲದೆ, ಸಾಧ್ಯವಾದಷ್ಟು ಕಡಿಮೆ ಶಾಪಿಂಗ್ ಮಾಡುತ್ತೇನೆ. ಬೇಡದ ಯಾವ ವಸ್ತುವಿನ ಮೇಲೂ ಖರ್ಚು ಮಾಡುವುದಿಲ್ಲ ಎಂದು ಲೆಕ್ಸೀ ವಿವರಿಸಿದ್ದಾಳೆ.
ಇಷ್ಟು ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಮುದಾಯಕ್ಕೆ ಪ್ರೇರಣೆಯಾಗುವುದು ಸುಲಭದ ಮಾತಲ್ಲ ಅಲ್ಲವೇ?