ಹಾರಾಟದ ವೇಳೆ ವಿಮಾನದ ಹೊರಗಿನಿಂದ ಪೈಲಟ್ ಸೆಲ್ಫೀ...!

By Suvarna Web DeskFirst Published Sep 9, 2017, 8:49 PM IST
Highlights

ಇನ್ನು ಕೆಲವರು ನಿಜಕ್ಕೂಇದು ಸಾಹಸವೇ ಸರಿ ಎಂದು ಅಭಿಪ್ರಾಯಪಟ್ಟಿದ್ದಾರೆ

ಇದು ನಿಜ ಎನ್ನಿಸುವಂಥ ಸುದ್ದಿಯೊಂದು ಇದೀಗ ಎಲ್ಲೆಡೆ ಭರ್ಜರಿ ಹರಿದಾಡುತ್ತಿದೆ. ಜೊತೆಗೆ ಈ ಸುದ್ದಿ ಕೂಡಾ ಜಗತ್ತನ್ನೇ ಆವರಿಸಿರುವ ಮಾಯಾವಿ ಸೆಲ್ಫಿಗೆ ಸಂಬಂಧಿಸಿದ್ದು ಎನ್ನುವುದು ಮತ್ತೊಂದು ವಿಶೇಷ. ಇತ್ತೀಚಿನ ದಿನಗಳಲ್ಲಿ ಪ್ರವಾಸಿ ತಾಣಗಳಲ್ಲಿ ಸೆಲ್ಫಿ ತೆಗೆದುಕೊಳ್ಳದವರೇ ಅಪರೂಪ. ಇಂಥ ಸಮಯದಲ್ಲಿ ಪೈಲಟ್ ಒಬ್ಬರು ವಿಮಾನ ಚಲಾಯಿಸುವಾಗಲೇ ಸೆಲ್ಫಿ ತೆಗೆದುಕೊಂಡು ಸುದ್ದಿಯಾಗಿದ್ದಾರೆ.

ಬಸ್, ಲಾರಿ, ಕಾರು, ಬೈಕ್ ಚಾಲಕರು ಚಾಲನೆ ವೇಳೆ ಸೆಲ್ಫಿ ತೆಗೆದುಕೊಳ್ಳುವುದು ಹೊಸದೇನಲ್ಲ. ಆದರೆ ವಿಮಾನ ಹಾರಾಟ ನಡೆಸುವಾಗಲೇ ಪೈಲಟ್ ತನ್ನ ಪಕ್ಕದ ಕಿಟಕಿ ಬಾಗಿಲು ತೆರೆದು, ಅದರ ಹೊರಗೆ ತಲೆ ಹಾಕಿ ಸೆಲ್ಫಿ ತೆಗೆದುಕೊಂಡಿದ್ದಾನೆ. ದುಬೈ, ನ್ಯೂಯಾರ್ಕ್ ಸೇರಿ ತಾನು ಎಲ್ಲೆಲ್ಲಿ ವಿಮಾನ ಹಾರಾಟ ನಡೆಸಿದ್ದಾನೋ ಅಲ್ಲೆಲ್ಲಾ ಸೆಲ್ಫಿ ತೆಗೆದುಕೊಂಡು ಇಡೀ ಜಗತ್ತನ್ನೇ ದಂಗುಬಡಿಸಿದ್ದಾನೆ. ಪೈಲಟ್ ಗ್ಯಾನ್ಸೋ ಹೆಸರಿನಲ್ಲಿ ಇಂಥದ್ದೊಂದು ಫೋಟೋ ಇನ್‌ಸ್ಟಾಗ್ರಾಮ್‌ನಲ್ಲಿ ಹರಿದಾಡುತ್ತಿದೆ. ಈ ಫೋಟೋ ನೋಡಿದ್ದೇ ತಡ, ಜನ, ಅಯ್ಯೋ ಹೀಗೆಲ್ಲಾ ಯಾಕೆ ಮಾಡುತ್ತೀರಿ. ಜೀವಕ್ಕಿಂತ ಸೆಲ್ಫಿ ಮುಖ್ಯವೇ.

ನಿಮ್ಮ ಸೆಲ್ಫಿ ಭರದಲ್ಲಿ ವಿಮಾನದಲ್ಲಿ ಪ್ರಯಾಣಿಸುವವರ ಜೀವಕ್ಕೆ ಅಪಾಯ ತಂದುಬಿಟ್ಟೀರಾ ಎಂದೆಲ್ಲಾ ಆತಂಕಭರಿತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ನಿಜಕ್ಕೂ ಇದು ಸಾಹಸವೇ ಸರಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ವಾಸ್ತವ ಸಂಗತಿ ಎಂದರೆ ವಿಮಾನ ಚಲಿಸುವಾಗ ಯಾವುದೇ ಕಾರಣಕ್ಕೂ ಅದರ ಕಿಟಕಿ ಅಥವಾ ಬಾಗಿಲನ್ನು ತೆರೆಯುವುದಿಲ್ಲ. ಹಾಗೇನಾದರೂ ಆದರೆ ಅದು ವಿಮಾನ ಪತನಕ್ಕೇ ಕಾರಣವಾಗುತ್ತದೆ. ಈ ರೀತಿ ಯಾವುದೇ ಪೈಲಟ್ ಫೋಟೋ ತೆಗೆದುಕೊಳ್ಳುವುದು ಸಾಧ್ಯವೇ ಇಲ್ಲ.

(ಕನ್ನಡಪ್ರಭ ವಾರ್ತೆ)

click me!