ಈಗಲೂ ನೆನಪಿದೆ ಬಾಲ್ಯದ ಬಾಸುಂಡೆ!

By Web DeskFirst Published Aug 22, 2019, 10:24 AM IST
Highlights

ಆಗ ನನ್ನ ನಾಲ್ಕನೇ ಕ್ಲಾಸಿನ ಬೇಸಿಗೆ ರಜೆ ಮುಗಿಯುತ್ತಾ ಬಂದಿತ್ತು. ಹಾಗಾಗಿ ಇದ್ದ ಕೆಲವೇ ದಿನಗಳ ರಜೆ ಕಳೆಯಲು ಮನೆಯಿಂದ ಒಂದು ಕಿ.ಮೀ ದೂರವಿರುವ ಮತ್ತೊಬ್ಬರ ಮನೆಗೆ ಅಣ್ಣ ನಾನು ಹೋಗಿದ್ದೆವು. ಅಮ್ಮನಿಗೆ ಹೇಳಿ ಹೋಗಿದ್ದರೆ ಏನು ತಪ್ಪಾಗುತ್ತಿರಲಿಲ್ಲ. ಆದರೆ ಅಮ್ಮನಿಗೆ ಹೇಳದೆ ಹೋದದ್ದು ನಮ್ಮ ಮೈ ಮೇಲೆ ಬಿದ್ದ ಬಾಸುಂಡೆಗೆ ಕಾರಣವಾಗಿತ್ತು.

ಮಾವು ಹರಸಿ ಹೊರಟೆವು

ಮಲೆನಾಡಾಗಿದ್ದರಿಂದ ದಟ್ಟಕಾಡು ಜೊತೆಗೆ ಮಾವಿನ ಹಣ್ಣಿನ ಸೀಸನ್‌ ಬೇರೆ ಅದು. ಆದರೆ ನಮ್ಮ ಮನೆಯಲ್ಲಿ ಮಾವಿನ ಹಣ್ಣುಗಳಿರಲಿಲ್ಲ. ಹಾಗಾಗಿ ನಾನು ಅಣ್ಣ ಇಬ್ಬರೂ ಅಮ್ಮನಿಗೆ ಹೇಳದೆ ಮಾವಿನ ಹಣ್ಣನ್ನು ತರಲು ಹೋಗಿದ್ದೆವು. ಹೋದವರು ಬೇಗ ಮನೆಗೂ ಬರಲಿಲ್ಲ. ಹೋದವರ ಮನೆಯಲ್ಲಿ ಸಾಕಷ್ಟುಹರಟುತ್ತಾ, ಮಾವಿನ ಹಣ್ಣನ್ನು ಕೊಯ್ದುಕೊಂಡು ಅಲ್ಲೆ ಆಟ ಆಡುತ್ತಾ ಕೂತಿದ್ದ ನಮಗೆ ಸಮಯವಾಗಿದ್ದೇ ಗೊತ್ತಾಗಲಿಲ್ಲ. ಮನೆಯಲ್ಲಿ ನಾವಿಬ್ಬರು ಇಲ್ಲದನ್ನು ಕಂಡು ಅಮ್ಮ ಗಾಬರಿಗೊಂಡಿದ್ದಳು. ಕೊಯ್ದಿಟ್ಟಮಾವಿನ ಹಣ್ಣುಗಳನ್ನು ಅಣ್ಣ ನನಗೆ ಕೊಟ್ಟು ಇವನ್ನು ಅಮ್ಮನಿಗೆ ಕೊಟ್ಟು ಬಾ, ನಾವು ಆಮೇಲೆ ಇಬ್ಬರು ಮನೆಗೆ ಹೋಗೋಣ ಎಂದು ಕಳುಹಿಸಿದ್ದ.

ತಪ್ಪು ನಿಂದಲ್ಲ! ಹಾಸ್ಟೆಲಿನ ಬೆಸ್ಟ್‌ ಸಿಂಗರ್‌ ಬರೆದ ಸ್ನೇಹ ನಿವೇದನೆ

ಅಣ್ಣ ಕೊಟ್ಟಮಾವಿನ ಹಣ್ಣನ್ನು ತೆಗೆದುಕೊಂಡು ಮನೆಗೆ ಬಂದೆ. ಮನೆಗೆ ಬರುತಿದ್ದಂತೆ ಅಮ್ಮ ನಮಗೆ ಬಾಸುಂಡೆ ಬರಿಸಲು ಎಲ್ಲಾ ಸಿದ್ಧತೆ ಮಾಡಿದ್ದಳು. ಆದರೆ ಮನೆಗೆ ಬರುವಾಗ ಒಬ್ಬನೆ ಬಂದಿದ್ದೆ ಹಾಗಾಗಿ ನಿಧಾನವಾಗಿ ‘ಎಲ್ಲಿಗೆ ಹೋಗಿದ್ರಿ, ಅಣ್ಣ ಎಲ್ಲಿ’ ಎಂದು ಬಾಯಿ ಬಿಡಿಸಿದಳು. ಹಾಗಾದ್ರೆ ಮತ್ತಷ್ಟುಮಾವಿನ ಹಣ್ಣುಗಳನ್ನು ತೆಗೆದುಕೊಂಡು ಬರೋಣ ಎಂದು ನನ್ನನ್ನು ಮತ್ತೆ ಕರೆದುಕೊಂಡು ಹೋದಳು. ನಾನೂ ಖುಷಿಯಲೇ ಅಮ್ಮನೊಟ್ಟಿಗೆ ಹೆಜ್ಜೆ ಹಾಕಿದೆ. ಆದರೆ ಅಲ್ಲಿ ನಡೆದದ್ದೆ ಬೇರೆಯಾಗಿತ್ತು.

ಹುಣಸೆ ಕೋಲಿನ ಕಚ್ಚಾಯ

ಅಮ್ಮನ ಮನದಲ್ಲಿ ಸಿಟ್ಟು ಕೊತ ಕೊತಾ ಅಂತ ಕುದಿಯುತ್ತಿತ್ತು. ಹೊರ ಮುಖದಿಂದ ನಗುನಗುತ್ತಲೇ ಇಬ್ಬರನ್ನು ಹತ್ತಿರ ಕರೆದು ಕೈ ಹಿಡಿದುಕೊಂಡಳು. ಅದಾಗಲೇಅಮ್ಮನ ವರಸೆ ನಮಗೆ ಗೊತ್ತಾಗಿ ಹೋಗಿತ್ತು. ಇಬ್ಬರ ಕೈಯನ್ನು ಅವಳ ಒಂದೇ ಕೈಯಲ್ಲಿ ಹಿಡಿದು ಹುಣಸೆ ಕೋಲನ್ನು ಮುರಿದು ಎಷ್ಟುಸಾಧ್ಯವೋ ಅಷ್ಟುಜೋರಾಗಿ ಬೆನ್ನಿಗೆ ‘ಫಟ್‌ ಫಟ್‌’ ಎಂದು ಬಾರಿಸಿದಳು. ಆ ಉರಿಯನ್ನು ತಾಳಲಾರದೆ ಅದೆಷ್ಟುಅಳುತ್ತಾ ಕುಣಿದಿದ್ದೆವೋ ನಮಗೆ ಗೊತ್ತಿಲ್ಲ. ಅಮ್ಮನೂ ಅಲ್ಲಿಂದ ಮನೆಯವರೆಗೂ ಎಮ್ಮೆಗೆ ಬಾರಿಸಿದಂತೆ ಹೊಡೆದುಕೊಂಡೇ ಬರಲು ನಿಶ್ಚಯಿಸಿದ್ದಳು. ಅದಕ್ಕಾಗಿ ಐದಾರು ಕೋಲನ್ನು ಮುರಿದಿಟ್ಟುಕೊಂಡಿದ್ದಳು. ಅಮ್ಮನ ಕೈಯಿಂದ ತಪ್ಪಿಸಿಕೊಳ್ಳಲು ಸಾಕಷ್ಟುಪ್ರಯತ್ನಿಸಿ ಕೊನೆಗೆ ಸಫಲರಾಗಿ ಅಮ್ಮನ ಮುಷ್ಠಿಯಿಂದ ತಪ್ಪಿಸಿಕೊಡು ಓಡಲು ಶುರು ಮಾಡಿದೆವು. ಆದರೂ ಬೆನ್ನಿಗೆ ಹತ್ತಿದ ಬೇತಾಳನಂತೆ ಬಿಡದೆ ಅಟ್ಟಿಸಿಕೊಂಡು ನಮ್ಮ ಬೆನ್ನು ಬಿದ್ದಳು. ಓಡೊಡಿ ಸುಸ್ತಾಗಿ ನಿಂತಲೆಲ್ಲಾ ಹಿಂದಿನಿಂದ ಹುಣಸೆ ಕೋಲಿನ ಕಜ್ಜಾಯ ಬೀಳುತ್ತಲೇ ಇದ್ದವು.

ಮಾಡರ್ನ್‌ ದೇವದಾಸನ ವಿಫಲ ಪ್ರೇಮ ಪ್ರಸಂಗ!

ತಪ್ಪಾಯ್ತು ಎಂದಾಗಲೇ ಬಿಟ್ಟಿದ್ದು

ಮನೆಗೆ ಬರುವತನಕ ಅಮ್ಮ ನಮಗೆ ಹೊಡೆದಿದ್ದರು ಅಮ್ಮನ ಸಿಟ್ಟು ತಣಿದಿರಲಿಲ್ಲ. ಮನೆಗೆ ಬಂದು ಬಾಗಿಲ ಚಿಲಕ ಹಾಕಿಕೊಂಡು ಅಮ್ಮ ಹೊಡೆಯುತ್ತಲೇ ಇದ್ದಳು. ನಾವು ಉರಿಯನ್ನ ತಡೆಯಲಾರದೆ ಕುಣಿಯುತ್ತಲೇ ಇದ್ದೆವು. ಕೊನೆಗೆ ‘ತಪ್ಪಾಯ್ತಮ್ಮ ಇನ್ನು ಹೇಳದೆ ಎಲ್ಲಿಗೂ ಹೋಗುವುದಿಲ್ಲ’ ಎಂದು ಪರಿಪರಿಯಾಗಿ ಕೇಳಿಕೊಂಡ ನಂತರವೇ ಅಮ್ಮನ ಕೈಯಿಂದ ಕೋಲು ನೆಲಕ್ಕೆ ಬಿತ್ತು. ಒಮ್ಮೆ ಬೆನ್ನು ಏನಾಯಿತೆಂದು ಅಂಗಿ ಬಿಚ್ಚಿ ನೋಡಿದರೆ ಕೆಂಬಣ್ಣದ ಬಾಸುಂಡೆಗಳು ಜಾಗವಿಲ್ಲದಂತೆ ಎದ್ದು ಕಾಣುತ್ತಿದ್ದವು. ಅದನ್ನು ನೋಡಿದವರೆಗೆ ಕಣ್ಣಲ್ಲಿ ನೀರು ಜಾರತೊಡಗಿದವು. ಕೊನೆಗೆ ಅಮ್ಮನೇ ಬಂದು ಅದರ ಮೇಲೆ ಕೊಬ್ಬರಿ ಎಣ್ಣೆ ಸವರಿದಳು. ಅದೇ ಕೊನೆ ಅಂದಿನಿಂದ ಇಂದಿಗೂ ಎಲ್ಲೇ ಹೋಗುವುದಾದರೂ ಅಮ್ಮನಿಗೆ ಪೂರ್ಣ ಮಾಹಿತಿ ನೀಡಿಯೇ ಹೊರಗೆ ಕಾಲಿಡುತ್ತೇವೆ. ಆದರೆ ಆ ದಿನ ನನ್ನಮ್ಮ ಕಾಳಿ ರೂಪ ತಾಳಿದ್ದಂತೂ ಮರೆಯಲು ಸಾಧ್ಯವಿಲ್ಲ.

ಒಂದು ಮುತ್ತಿನ ಕತೆ ; ಅರ್ಧ ಮುಗಿದ ದಾರಿ

click me!