
ಇದೊಂದು ಪೋಸ್ಟ್ ಈಗ (Social Media) ಸೋಷಿಯಲ್ ಮೀಡಿಯಾಗಳಲ್ಲಿ, ಅಂದರೆ ಫೇಸ್‌ಬುಕ್ (Facebook) ಹಾಗೂ ವಾಟ್ಸ್‌ಅಪ್ (WhatApp)ಸ್ಟೇಟಸ್‌ಗಳಲ್ಲಿ ಬಹಳಷ್ಟು ಹರಿದಾಡುತ್ತಿದೆ. ಇದು, ಈಗ ತಾನೇ ಮದುವೆಯಾಗಿ ಗಂಡನಮನೆಗೆ ಹೋದ ಹೆಣ್ಣುಮಗಳೊಬ್ಬಳು ತನ್ನ ಸ್ವಂತ ಅನುಭವವನ್ನು ಹೇಳಿಕೊಂಡಂತಿದೆ. ಒಮ್ಮೆ ಇದು ಸ್ವತಃ ಅನುಭವದ ಮೂಲಕ ಯಾರೋ ಒಬ್ಬರು ಬರೆದಿದ್ದು ಅಲ್ಲದಿದ್ದರೂ, ಅದನ್ನು ಕಲ್ಪಿಸಿಕೊಂಡು ಅಥವಾ ಇನ್ನೊಬ್ಬರ ಅನುಭವದ ಮಾತನ್ನು ಮತ್ತೊಬ್ಬರು ಬರೆದಿದ್ದರೂ ಈ ಮಾತುಗಳು 'ಚಿಂತನೆ'ಗೆ ದೂಡುವಂತಿವೆ ಎನ್ನಬಹುದು.
ವೈರಲ್ ಆಗಿರೋ ಈ ಮೆಸೇಜ್ ಕಾರ್ಡ್‌ನಲ್ಲಿ ಬರೆದಿದ್ದು ಹೀಗಿದೆ:-
*****
ತವರು ಮನೆಗೆ ನಾನು ಅತಿಥಿ ಅದಾಗ...
ನಾನೇ ಆಡಿ ಬೆಳೆದ ಮನೆಗೆ ಇಂದು ಅತಿಥಿಯಾಗಿ ಹೋಗುವೆ..
ಅಪ್ಪ ಬಂದ ತಕ್ಷಣ ನೀರು ತರಲು ಹೋದವಳು ಅಂದು,
ಇಂದು ಅದೇ ಅಪ್ಪ 'ಮಗಳು ಬಂದಳು, ನೀರು ಕೊಡು' ಅನ್ನುತ್ತಾನೆ.
ಕೆಲಸ ಮಾಡದೇ ಇರುವಾಗ ಗದರುತ್ತಾ ಹೇಳುತ್ತಿದ್ದ ನನ್ನ ಅಮ್ಮ,
ಇಂದು 'ಯಾವ ಕೆಲಸ ಮಾಡಬೇಡ ಮಗಳೇ,
ನಾಲ್ಕು ದಿನ ಆರಾಮಾಗಿದ್ದು ಹೋಗು' ಅನ್ನುತ್ತಾಳೆ.
ನಾನೇ ಆಡಿ ಬೆಳೆದ ಮನೆಗೆ ಇಂದು ನಾನೇ ನಾಲ್ಕು ದಿನದ ಅತಿಥಿ..
*****
ಹಲವರ ಮೊಬೈಲಿನಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ಇರುವ, ಶೇರ್ ಅಗುತ್ತಿರುವ ಈ ಮೆಸೇಜ್ ಇದೀಗ ಬಹಳಷ್ಟು ಲೈಕ್ಸ್ ಹಾಗೂ ಶೇರ್ಸ್ ಪಡೆಯುತ್ತಿವೆ. ಕೆಲವರು ತಮ್ಮ ಅನಿಸಿಕೆಯಂತೆ ಇದಕ್ಕೆ ಕಾಮೆಂಟ್ ಕೂಡ ಹಾಕುತ್ತಿದ್ದಾರೆ. ಹೆಚ್ಚಿನವರು 'ಸತ್ಯ ಸಂಗತಿ' ಎಂದೇ ಹೇಳುತ್ತಿದ್ದರೆ ಇನ್ನೂ ಕೆಲವರು ವಿಭಿನ್ನವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಅಂತಹ ಕಾಮೆಂಟ್‌ಗಳಲ್ಲಿ ಗಮನಸೆಳೆಯುತ್ತಿರುವ ಒಂದು ಕಾಮೆಂಟ್ ಹೀಗಿದೆ...
'ಹೆಣ್ಣುಮಕ್ಕಳೇ ಯಾಕೆ ಗಂಡನ ಮನೆಗೆ ಹೋಗಬೇಕು? ಅವರೇ ಇಲ್ಲಿ ಬರಬಹುದಲ್ಲ?' ಈ ಕಾಮೆಂಟ್‌ಗೆ ಸಾಕಷ್ಟು ರಿಪ್ಲೈ ಕೂಡ ಬಂದಿವೆ. ಅದಕ್ಕೆ ಒಬ್ಬರು 'ಒಂದು ತಪ್ಪಿಗೆ ಇನ್ನೊಂದು ತಪ್ಪು ಉತ್ತರ ಅಗಲಾರದು' ಎಂದಿದ್ದರೆ ಇನ್ನೂ ಕೆಲವರು 'ಕೆಲವು ಕಡೆ ಆ ಪದ್ಧತಿ ಕೂಡ ಇವೆ. ಆದರೆ ಅಲ್ಲೂ ಕೂಡ ಸಂಸಾರದಲ್ಲಿ ನೆಮ್ಮದಿ ಅನ್ನೋದೇನೂ ಇಲ್ಲ' ಎಂದಿದ್ದಾರೆ. ಮತ್ತೊಬ್ಬರು 'ಏನೇ ಮಾಡಿದರೂ ಅಷ್ಟೇ, ಎಲ್ಲರ ಮನೆ ದೋಸೆನೂ ತೂತೇ' ಎಂದಿದ್ದಾರೆ.
ಮಗದೊಬ್ಬರು 'ಅಂದಿನ ಕಾಲಕ್ಕೆ, ಸಮಾಜಕ್ಕೆ ಈ ಮದುವೆ ಎಂಬ ಪದ್ಧತಿ ಒಪ್ಪಿಗೆ ಆಗಿತ್ತು, ಅನುಕೂಲ ಸಹ ಆಗುತ್ತಿತ್ತು. ಆದರೆ ಇಂದು ಈ ಮದುವೆ ಎಂಬ ಪದ್ಧತಿ ಅಪ್ರಸ್ತುತ ಎನ್ನಿಸುತ್ತದೆ. ಆದರೆ ಅದಕ್ಕಿಂತ ಬೆಟರ್ ಆಯ್ಕೆ ನಮ್ಮಲ್ಲಿ ಇನ್ನೂ ಹುಟ್ಟಿಕೊಂಡಿಲ್ಲ. ಹೀಗಾಗಿ ಅದೇ ಮದುವೆ ಎಂಬ ಸಂಪ್ರದಾಯದಲ್ಲೇ ಸಮಾಜ ಮುಂದುವರೆಯುತ್ತಿದೆ' ಎಂದು ಕಾಮೆಂಟ್ ಮಾಡಿದ್ದಾರೆ. ಯಾರು ಏನೇ ಅಂದರೂ ಎಲ್ಲದಕ್ಕೂ 'ಲೋಕೋ ಭಿನ್ನ ರುಚಿಃ' ಎನ್ನಬೇಕಷ್ಟೇ.
ಒಟ್ಟಿನಲ್ಲಿ ಹೇಳಬೇಕು ಎಂದರೆ, ಈ ಸೋಷಿಯಲ್ ಮೀಡಿಯಾ ಮೂಲಕ ಸಮಾಜಕ್ಕೆ ಅದೇನೇನು ಸಂಗತಿಗಳು ಬರುತ್ತವೆ ಅನ್ನೋದನ್ನ ಊಹಿಸಲಿಕ್ಕೂ ಅಸಾಧ್ಯ. ಇದೊಂಥರಾ ಪೋಸ್ಟ್ ಡಬ್ಬಿ ಇದ್ದ ಹಾಗೇ. ಹಲವು ತರದ ಭಾವನೆ ಹೊತ್ತ ಲೆಟರ್‌ಗಳು ಇಲ್ಲಿ ಬಂದು ಬೀಳುತ್ತವೆ. ಅಲ್ಲಿ ಲೆಟರ್ ತಲುಪಬೇಕಾದ ಅಡ್ರೆಸ್ ಇರುತ್ತೆ.. ಆದರೆ, ಇಲ್ಲಿ ಎಲ್ಲರೂ ನೋಡಬಹುದು, ಬೇಕಾದವರು ತೆಗೆದುಕೊಳ್ಳಬಹುದು ಎಂಬಂತಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.