ಪ್ರೀತಿಯ ಇನ್ನೊಂದು ಹೆಸರೇ ಅಮೃತಾ ಪ್ರೀತಮ್

Published : Aug 31, 2025, 11:44 AM IST
Why did Amrita Pritam leave her husband

ಸಾರಾಂಶ

ಅಮೃತಾ ಪ್ರೀತಂ ಅವರ ಬದುಕಿನಲ್ಲಿ ಪ್ರೀತಿಯ ಹುಡುಕಾಟ, ಸಾಹಿರ್ ಜೊತೆಗಿನ ವಿಫಲ ಪ್ರೇಮ, ಇಮ್ರೋಜ್ ಜೊತೆಗಿನ ಬದುಕು, ಮತ್ತು ಅವರ ಸಾಹಿತ್ಯ ಸಾಧನೆಯನ್ನು ಈ ಲೇಖನ ವಿವರಿಸುತ್ತದೆ.

  • ರೇಣುಕಾ ನಿಡಗುಂದಿ

ಮತ್ತೆ ಸಿಗುವೆ ಆದರೆ ಎಲ್ಲಿ? ಹೇಗೆ ನನಗೂ ತಿಳಿಯದು, ಈ ನಶ್ವರ ಲೋಕದ ಹಂಗು ಆತ್ಮಕ್ಕಿಲ್ಲ ನಾ ಯಾವ ಸ್ವರೂಪದಲ್ಲಾದರೂ ಮತ್ತೆ ಸಿಗುವೆ' ಎಂದು ತಮ್ಮ ಸಂಗಾತಿ ಇಸ್ರೋಜ್‌ರಿಗೆ ಮಾತುಕೊಟ್ಟುಹೋದ ಅಮೃತಾ ಪ್ರೀತಂ ಹೆಸರು ಯಾರಿಗೆ ಗೊತ್ತಿಲ್ಲ !

ಸಮಕಾಲೀನ ಭಾರತದಶ್ರೇಷ್ಠಕವಿಯತ್ರಿ, ಕಾದಂಬರಿಕಾರ್ತಿ, ಕತೆಗಾರ್ತಿಯಾಗಿ ಅಮೃತಾ ಪ್ರೀತಂ ಅಗ್ರಗಣ್ಯರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ ಪಡೆದ ಪಂಜಾಬಿನ ಮೊದಲ ಬರಹಗಾರ್ತಿ. ಭಾರತ ಹಾಗೂ ಪಾಕಿಸ್ತಾನದ ಸರಹದ್ದಿನಾಚೆ, ಸಪ್ತಸಾಗರದಾಚೆಗೂ, ಸಮಾನವಾಗಿ ಅಪಾರ ಮೆಚ್ಚುಗೆಯನ್ನು, ಕೀರ್ತಿ- ಗೌರವಗಳನ್ನು ಪಡೆದವರು.

ಸ್ವಾತಂತ್ರ್ಯಪೂರ್ವದ ಪಂಜಾಬಿನ ಗುಜರನ್‌ವಾಲಾದಲ್ಲಿ ಅಗಸ್ಟ್ 31, 1919 ರಲ್ಲಿ ಹುಟ್ಟಿದ ಅಮೃತಾ ಚಿಕ್ಕಂದಿನಲ್ಲೇ ತಾಯಿಯನ್ನು ಕಳೆದುಕೊಂಡರು. ತಂದೆ ನಂದ್ ಸಾಧೂ (ಕರತಾರ್‌ಸಿಂಗ್‌) ಸ್ವತಃ ಕವಿಯಾಗಿದ್ದು ಮಗಳಿಗೂ ಕವಿತೆ ಕಟ್ಟಲು ಪ್ರೋತ್ಸಾಹಿಸುತ್ತಿದ್ದರಂತೆ. ಅದೆಲ್ಲ ದೇವರ ಕೀರ್ತನೆ, ಧಾರ್ಮಿಕ ಭಾವದವು. ನಂದ ಸಾಧು ಅವರ ಕಟ್ಟಾ ಸಾಂಪ್ರದಾಯಿಕ ಹಾಗೂ ಧಾರ್ಮಿಕ ನಿಗರಾನಿಯಲ್ಲಿ ತುಂಬಾ ಕಟ್ಟುನಿಟ್ಟಿನಲ್ಲಿ ಬಾಲ್ಯ ಕಳೆದ ಅಮೃತಾ ಮುಂದೆ ತಮ್ಮ ಬದುಕನ್ನು ಯಾವುದೇ ಧಾರ್ಮಿಕ ಕಟ್ಟುಪಾಡುಗಳಲ್ಲಿ ಕಟ್ಟಿಹಾಕಿ ಕೊಳ್ಳದೇತನಗೆ ಒಳಿತೆನಿಸಿದ ಅಸಾಂಪ್ರದಾಯಿಕ ಹಾದಿಯನ್ನು ಆರಿಸಿಕೊಂಡಿದ್ದು ಅವರ ದಿಟ್ಟತನಕ್ಕೆ ಸಾಕ್ಷಿಯಾಗಿದೆ.

ಜೀವನವೆಂದರೆ ಪ್ರೀತಿಯ ಹುಡುಕಾಟ ! ನಿರಂತರ ಅನ್ವೇಷಣೆ ! ಹತ್ತು ವರ್ಷಕ್ಕೇ ತಾಯಿಯನ್ನು ಕಳೆದುಕೊಂಡ ಅಮೃತಾ ಇಮ್ರೋಜ್ ಅವರ ಬದುಕಿನಲ್ಲಿ ಬರುವವರೆಗೂ ಹಿಡಿ ಪ್ರೀತಿಗಾಗಿ ತಹತಹಿಸುತ್ತಿದ್ದರು. ಸಾಹಿರ್

ಜತೆಗಿನ ವಿಫಲ ಪ್ರೇಮ ಅವರನ್ನು ಖಿನ್ನತೆಗೆ ತಳ್ಳಿತ್ತು. ಪತಿ ಪ್ರೀತಂ ಸಿಂಗ್ ಅವರೊಂದಿಗೆ ಮನಸ್ಸು ಬೆಸಗೊಳ್ಳಲೇ ಇಲ್ಲ. ಕೆಲವರು ಹೇಳುವಂತೆ ಅಮೃತಾ ಸಾಹಿರ್‌ಗೋಸ್ಕರವೇ ಪತಿಯೊಂದಿಗೆ ವಿಚ್ಚೇದನ ಪಡೆದರೆಂದು, ಆದರೆ ಅದು ನಿಜವಲ್ಲ. ಇಮ್ರೋಜ್ ಕೂಡ ಈ ಮಾತನ್ನು ಒಪ್ಪುವುದಿಲ್ಲ.

ತಮ್ಮ ಪತಿ ಪ್ರೀತಂ ಸಿಂಗ್‌ರನ್ನು ತೊರೆದುಇಮ್ರೋಜ್ ಹಾಗೂ ಅಮೃತಾ ಯಾವ ಬಂಧನದಲ್ಲೂ ತಮ್ಮನ್ನು ಕಟ್ಟಿಕೊಳ್ಳದೇ ಸ್ನೇಹಿತರಂತೆ ಜೊತೆಯಾಗಿ ಒಂದೇ ಮನೆಯಲ್ಲಿರತೊಡಗಿದಾಗ ಮಕ್ಕಳು ಮೊದ ಮೊದಲು ಒಪ್ಪಲಿಲ್ಲವಂತೆ. ಇಮ್ರೋಜ್ ಪ್ರೀತಿಯಿಂದ ಮಕ್ಕಳ ಮನಸ್ಸನ್ನೂ ಗೆದ್ದರು. ಪಟೇಲ್‌ ನಗರದಲ್ಲಿ ಅಮೃತಾ ಮನೆ ಹತ್ತಿರವೇ ಇಮ್ರೋಜ್ ಕೂಡ ಒಂದು ಬಾಡಿಗೆ ಕೋಣೆಯಲ್ಲಿರುತ್ತಿದ್ದರು. ಉರ್ದು ಪತ್ರಿಕೆ 'ಶಮಾ'ದಲ್ಲಿ ವಿನ್ಯಾಸಕಾರರಾಗಿದ್ದರು. ಅಮೃತಾ ಪತಿ ಪ್ರೀತಂಸಿಂಗ್‌ರೊಂದಿಗೆ ಇದ್ದಾಗಲೂ ಇಮ್ರೋಜ್ ತಾವೇ ಮಕ್ಕಳ ಸ್ಕೂಲ್ ಬಿಟ್ಟನಂತರ ತಮ್ಮ ಕಛೇರಿಯಿಂದ ಹೋಗಿ ಸ್ಕೂಟರ್‌ಮೇಲೆ ಕೂರಿಸಿಕೊಂಡು ಮನೆಗೆ ತಂದು ಬಿಡುತ್ತಿದ್ದರಂತೆ. ಅವರಿಗೆ ಯಾರೂ ನೀನು ಈ ಕೆಲಸ ವಹಿಸಿಕೋ ಎಂದು ಹೇಳಲಿಲ್ಲ. ಅವರೇ ಖುದ್ದಾಗಿ ಮಕ್ಕಳನ್ನು ಕರೆತರುವ ಕೆಲಸವನ್ನು ಮಾಡತೊಡಗಿದ್ದರು. ಅಲ್ಲಿವರೆಗೆ ಅಮೃತಾ ಯಾವತ್ತೂ ಮನೆಯಲ್ಲಿ ಅಡುಗೆ ಮಾಡುತ್ತಿರಲಿಲ್ಲ. ಮನೆಯ ನೌಕರ ಅಡುಗೆ ಮಾಡುತ್ತಿದ್ದ. ಇಮ್ರೋಜ್ ಮಕ್ಕಳನ್ನು ಕರೆತರುವ ಕೆಲಸ ವಹಿಸಿಕೊಂಡ ಮೇಲೆ ಅಮೃತಾ ತಾವೇ ಅಡುಗೆ ಮಾಡತೊಡಗಿದರು. ಇಸ್ರೋಜ್ ಮಕ್ಕಳನ್ನು ಬಿಟ್ಟು ಊಟ ಮಾಡಿ ಮತ್ತೆ ಕಚೇರಿಗೆ ಹೋಗುತ್ತಿದ್ದರಂತೆ. ಆಗೆಲ್ಲ ಅಮೃತಾ ಆಗ್ರಹಪಡಿಸಿ ಊಟಕ್ಕೆ ನಿಲ್ಲಿಸಿಕೊಳ್ಳುತ್ತಿದ್ದರಂತೆ,

ಒಮ್ಮೊಮ್ಮೆ ಪ್ರೀತಂಸಿಂಗರೂ ನಿನ್ನಿಂದಾಗಿ ಅಮೃತಾ ಕೈಊಟ ಸಿಗುತ್ತಿದೆ, ಊಟ ಮಾಡು ಎನ್ನುತ್ತಿದ್ದರಂತೆ. ಅಮೃತಾ ಇಮ್ರಜರೊಂದಿಗೆ ನಾಲ್ಕು ದಶಕಗಳ ಕಾಲ ಬಾಳಿದರೂ ಪತಿಯ ಹೆಸರನ್ನು ತಮ್ಮ ಹೆಸರಿನೊಂದಿಗೆ ಉಳಿಸಿಕೊಂಡರು. ಪತಿಯ ಬಗ್ಗೆ ಎಲ್ಲೂ ಅಸಮಾಧಾನದ ಶಬ್ದಗಳನ್ನು ಬಳಸಲಿಲ್ಲ, ಪ್ರೀತಂ ಸಿಂಗ್ ಕೊನೆಗಾಲದಲ್ಲಿ ತುಂಬಾ ಅನಾರೋಗ್ಯದಲ್ಲಿದ್ದಾಗ ಅಮೃತಾ -ಇಮರೋಜ್ ಅವರನ್ನು ತಮ್ಮ ಹೌಸ್‌ಖಾಸ್ ಮನೆಗೆ ಕರೆತಂದು ಆರೈಕೆ ಮಾಡಿದ್ದನ್ನು ಇಮ್ರೋಜ್ ಈಗಲೂ ನೆನಪಿಸಿಕೊಳ್ಳುತ್ತಾರೆ.

ಪಟೇಲ್ ನಗರದಲ್ಲಿದ್ದಾಗ ಅಮೃತಾ ಆಗ ರೇಡಿಯೋದಲ್ಲಿ ಪಂಜಾಬಿ ಉದ್ವೇಷಕಿಯಾಗಿ ಕೆಲಸಮಾಡುತ್ತಿದ್ದರು. ಸಂಬಳ ಕೇವಲ 5 ರೂಪಾಯಿ ! ಆಗಲೂ ಇಮ್ರೋಜ್ ಅವರೇ ಸ್ಕೂಟರಿನಲ್ಲಿ ಅವರನ್ನು ಆಕಾಶವಾಣಿಗೆ

ಇಂದು

ಅಮೃತಾ ಪ್ರೀತಮ್ ಜನ್ಮದಿನ ನೆನಪು

ಬಿಡುತ್ತಿದ್ದರು. 1960 ರಲ್ಲಿ ಪ್ರೀತಂಸಿಂಗರಿಂದ ದೂರವಾಗಿ ಇಬ್ಬರೂ ಒಟ್ಟಿಗೆ ಇರತೊಡಗಿದಾಗ ಮಕ್ಕಳೂ ಬದಲಾವಣೆಯನ್ನು ಒಪ್ಪಿಕೊಂಡರು.

ಅಮೃತಾ ಯಾವತ್ತೂ ತಮ್ಮ ಶರತ್ತುಗಳ ಪ್ರಕಾರ ಬದುಕಿದರು. ಆಕೆ ಚಿಕ್ಕವಳಿದ್ದಾಗಿನ ಒಂದು ಘಟನೆಯನ್ನು 'ರಸೀದಿ ಟಿಕೇಟ್'ನಲ್ಲಿ ಹೇಳುತ್ತಾರೆ.

ಬಹಳಷ್ಟು ಸ್ಟೀಲ್ ಗ್ಲಾಸುಗಳನ್ನು ಅಜ್ಜಿ ತೊಳೆದು, ಒರೆಸಿ ಶೆಲ್ಲಿನ ಮೇಲೆ ಜೋಡಿಸುತ್ತಿದ್ದಳಂತೆ. ಮೂರು ಗ್ಲಾಸುಗಳು ಮಾತ್ರ ಅಡುಗೆ ಕೋಣೆಯ ಹೂರಗೆ ಅನಾಥ ಮಕ್ಕಳಂತೆ ಕೂತಿರುತ್ತಿದ್ದವು, ಪುಟ್ಟ ಹುಡುಗಿ ಅಮೃತಾ ಅಜ್ಜಿಗೆ ಕೇಳುತ್ತಾಳೆ, ಈ ಮೂರು ಗ್ಲಾಸುಗಳು ಇಲ್ಲಾಕೆ ಇಟ್ಟಿದ್ದೀ, ಅವೇಕೆ ಒಳಗಿಲ್ಲ ? ಅಂತಾ. ಅಜ್ಜಿ ಹೇಳುತ್ತಾಳೆ, ಇವು ಮನೆಗೆ ಬರುವ ಮುಸ್ಲಿಮರಿಗೆ ಚಹ ಮತ್ತು ಲಸ್ಸಿ ಕುಡಿಯಲು ಕೊಡೋಕೆ ಇಟ್ಟದ್ದು ಅಂತಾ. ಆ ಮಾತು ಅಮೃತಾರಿಗೆ ಚೂರು ಹಿಡಿಸುವುದಿಲ್ಲ. ಆಕೆ ಅಜ್ಜಿಯೊಂದಿಗೆ ಜಗಳ ಕಾದು, ಉಪವಾಸ ಹೂಡಿ, ಮನೆಯಲ್ಲಿ 'ಹಿಂದೂ' ಗ್ಲಾಸು, 'ಮುಸ್ಲಿಂ' ಗ್ಲಾಸು ಅಂತಾ ಬೇರೆ ಬೇರೆ ಇರಕೂಡದು ಎಂದು ಹಠಹಿಡಿಯುತ್ತಾರೆ. ಕೊನೆಗೆ ಅಜ್ಜಿ ಸೋತು, ಮೊಮ್ಮಗಳು ಗೆಲ್ಲುತ್ತಾಳೆ. ಆಗ ಬಹುಶಃ ಅಜ್ಜಿಗೂ ಗೊತ್ತಿರಲಿಕ್ಕಿಲ್ಲ ಮೊಮ್ಮಗಳು ಮುಂದೆ ಮುಸ್ಲಿಮನೊಬ್ಬನ ಪ್ರೇಮದಲ್ಲಿ ಬೀಳುತ್ತಾಳೆಂದು.

ಅಮೃತಾ - ಇಮ್ರೋಜ್ ಇಬ್ಬರೂ ಸಮಾಜ, ಜಾತಿ- ಧರ್ಮ ಇತ್ಯಾದಿಗಳ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಅಮೃತಾ ಅವರಿಗೆ ಸಿಕ್ಕಾಗ ಆಕೆ ಎರಡು ಮಕ್ಕಳ ತಾಯಿ, ಪ್ರೀತ್‌ಸಿಂಗರ ಪತ್ನಿ, ಸಾಹಿರ್‌ಪ್ರೇಯಸಿ! ಲಾಹೋರಿನಲ್ಲಿ ಸಾಹಿರ್‌ಗೆ ಮನಸ್ಸು ಕೊಟ್ಟ ಅಮೃತಾ ಅವರನ್ನು ಹದ್ದು ಮೀರಿ ಹುಚ್ಚಳಂತೆ ಪ್ರೀತಿಸುತ್ತಿದ್ದಳು. ಸಾಹಿರ್‌ ಸೇದಿ ಬಿಟ್ಟ ಸಿಗರೇಟ್ ತುಂಡುಗಳನ್ನು ಎತ್ತಿಟ್ಟುಕೊಂಡು ತಮ್ಮಏಕಾಂತದಲ್ಲಿ ಕೂತು ಆ ತುಂಡುಗಳನ್ನು ಸೇದುತ್ತಿದ್ದಳಂತೆ. ಸಾಹಿರ್ ಮಿತಭಾಷಿ, ಗಂಟೆಗಟ್ಟಲೆ ಇಬ್ಬರೂ ಮಾತಿಲ್ಲದೇ ಮೌನದಲ್ಲಿ ಕೂತಿರುತ್ತಿದ್ದರು. ಅಮೃತಾ ಮಾತಾಡು ಮಾತಾಡು ಎಂದರೂ ಹೆಚ್ಚು ಮಾತಾಡುತ್ತಿರಲಿಲ್ಲವಂತೆ. 'ರೋಶನೀ ಮೇ ಮೈ ಬಾತ್ ನಹೀ ಕರ್‌ಸಕತಾ ಅಂತಿದ್ದರಂತೆ. ಆಗ ಅಮೃತಾ ರೋಸಿಹೋಗಿ 'ಈ ಸೂರ್ಯನನ್ನೇ ಬಚ್ಚಿಡಬೇಕು ಆಗಲಾದರೂ ನೀನು ಮಾತನಾಡುತ್ತೀ' ಅನ್ನೋ ಪದ್ಯ ಬರೆದರು. ಸಾಹಿರ್‌ಗಾಗಿ ಬಹಳಷ್ಟು ಪದ್ಯಗಳನ್ನು ಬರೆದರು. ನೋವು- ಹತಾಶೆಯಲ್ಲಿ ಖಿನ್ನತೆ ಅವರನ್ನು ಸಾಯಿಸುತ್ತಿತ್ತು.

ಸಿಗರೇಟಿನಂತೆ ನಾನು ಮೌನವಾಗಿ ನೋವನ್ನು ಕುಡಿಯುತ್ತಿದ್ದೆ ಸಿಡಿಸಿದ ಬೂದಿಯಿಂದ ಕೆಲವು ಕವಿತೆಗಳು ಉದುರಿದವು !

ಸಾಹಿರ್ 'ಚಲೋ ಇಕ ಬಾರ್‌ಫಿರ್‌ ಅಜನಬೀ ಬನ್ ಜಾಯೇ ಹಂ ದೋನೋ' ಗೀತೆಯನ್ನು ಬರೆದಾಗ ಅಮೃತಾ ನೋವಿನಲ್ಲಿ ಹಿಂಡಿ ಹೋಗಿದ್ದರು. ಸಂಬಂಧ ಹೊರೆಯಾದಾಗ ಅದನ್ನು ಕಳಚಿಕೊಳ್ಳುವುದೇ ಒಳಿತು... ಇಲ್ಲಾ ಅದಕ್ಕೊಂದು ಸುಂದರವಾದ ತಿರುವನ್ನು ಕೊಟ್ಟು ಬಿಡುವುದೇ ಒಳಿತು.' ಅವರಿಬ್ಬರ ಪ್ರೇಮ ಮುರಿದು ಹೋಯಿತು...

ಅಮೃತಾ ಬರೆಯುತ್ತಾರೆ..

ಆಯುಷ್ಯದ ಸಿಗರೇಟು ಉರಿದುಹೋಯಿತು 

ನನ್ನ ಪ್ರೇಮದ ಗಂಧ ಒಂದಿಷ್ಟು ನಿನ್ನುಸಿರಲ್ಲಿ 

ಒಂದಿಷ್ಟು ಗ ಗಾಳಿಯಲ್ಲಿ ಬೆರೆಯಿತು !

ಅಮೃತಾಗೆ ಸಾಹಿರ್‌ಪ್ರೀತಿ ಸಿಗಲಿಲ್ಲ! ಇಮ್ರೋಜ್ಕರಾರುವಾಕ್ಕಾಗಿ ಹೇಳುತ್ತಾರೆ-ಸಾಹಿರ್‌ಅಮೃತಾ ಕೋ ಕಭೀ ನಹೀ ಮಿಲತಾ ! ಕಾಲ ಕ್ರಮೇಣ ಸಾಹಿರ್‌ಬಗೆಗಿನ ಮೋಹವೇನೂ ಬಿಟ್ಟಿತು ಆದರೆ ಸಿಗರೇಟ್ ಸೇದುವ ಚಟ ಅಮೃತಾಳನ್ನು ಕಚ್ಚಿ ಹಿಡಿಯಿತು.

ಇಮ್ರೋಜ್ ಅಮೃತಾರಿಗೆ ನನ್ನ ಸಮಾಜ ನೀನು, ನಿನ್ನ ಸಮಾಜ ನಾನು. ನಮ್ಮ ಲೋಕದಲ್ಲಿ ನಾವಿರೋಣ ಎಂದು ಮುನ್ನಡೆಸಿದರು. ಇಬ್ಬರಲ್ಲಿನ ಧೃಡವಾದ ಪ್ರೀತಿ, ಅಚಲವಾದ ನಂಬಿಕೆ, ಶರತ್ತುಗಳಿರದ ನಿರ್ವಾಜ್ಯ ಪ್ರೀತಿ ಹಾಗೂ ಸಮರ್ಪಣಾ ಭಾವಗಳೇ ಅವರನ್ನು ಬಾಳಿಸಿದವು.

ನಮ್ಮ ಗೂಡೀಗ ನಲವತ್ತು ವರ್ಷದ್ದಾಯಿತು, 

ನೀನೂ ಹಾರುವ ತಯಾರಿಯಲ್ಲಿದ್ದೀಯಾ ಈ ಮನೆಯ ಕಣಕಣವೂ

ನಿನ್ನ ಹೆಜ್ಜೆ ಸದ್ದಿಗೂ ಪುಳಕಗೊಂಡು

ಎಷ್ಟು ಅಕರಾಸ್ತೆಯಿಂದ ಎದುರುಗೊಳುತಿತ್ತು. 

ಇಂದು ಈ ಹಾರುವಿಕೆಗೂ

ಈ ಹೋಗುವಿಕೆಗೂ

ಈ ಮನೆಯ ಕಣಕಣವೂ 

ನಿನಗೆ ವಿದಾಯ ಹೇಳುತ್ತಿದೆ....

ಇಮ್ರಜರ ಈ ಸಾಲುಗಳನ್ನು ಓದುವಾಗ ಕಣ್ಣು ಮಂಜಾಗುತ್ತವೆ.

ಬದುಕಿನ ಎಲ್ಲಾ ಸ್ತರಗಳಲ್ಲೂ ಅವರ ಅದಮ್ಯವಾದ ಜೀವನ ಪ್ರೀತಿ, ಸಂಘರ್ಷ, ಹಿಡಿ ಪ್ರೀತಿಗಾಗಿ ತಹತಹಿಸಿದ ಯಾತನೆಗಳೆಲ್ಲವೂ ಎಲ್ಲೋ ಒಂದು ಕಡೆ ನಮ್ಮೆಲ್ಲರದೂ ಆಗಿಬಿಡುವ ಅನನ್ಯತೆಯಲ್ಲೇ ಅಮೃತಾ ಆಪ್ತವಾಗುತ್ತಾರೆ. ನಾಲ್ಕು ದಶಕಗಳ ಕಾಲ ಬರೆದ ಅವರ ಬರಹಗಳು ಕೇವಲ ಒಂದು ಕಾಲಗಟ್ಟಕ್ಕೆ, ಒಂದು ಸಮುದಾಯಕ್ಕೆ, ಒಂದು ವರ್ಗಕ್ಕೆ, ಒಂದು ಭಾಷೆಗೆ ಬದ್ಧವಾಗಿದ್ದರೂ ಅಷ್ಟಕ್ಕೆ ಸೀಮಿತವಾಗದೇ ಕಾಲಾತೀತವಾಗುವುದರಿಂದಲೇ ಈಗಲೂ ಅಮೃತಾ ಪ್ರೀತಂ ಪ್ರಸ್ತುತರಾಗುತ್ತಾರೆ.

“ಅವಳು ಶರೀರ ತ್ಯಜಿಸಿದ್ದಾಳೆ, ಸಾಂಗತ್ಯವನ್ನಲ್ಲ' ! ಎನ್ನುವ ಇಮರೋಜರ ಮುಖ ನೆನಪಾಗಿ ಕಣ್ಣು ಮಂಜಾಗತೊಡಗುತ್ತವೆ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಂಗಳೂರು ಮತ್ತೊಂದು ಲವ್ ಜಿಹಾದ್ ಕೇಸ್; ಇಸ್ಲಾಂಗೆ ಮತಾಂತರ ಆಗದಿದ್ರೆ ಹುಡುಗಿಯನ್ನ 32 ಪೀಸ್ ಮಾಡೋದಾಗಿ ಬೆದರಿಕೆ!
ಪುರುಷರ ಈ ವರ್ತನೆ ಬಗ್ಗೆ ಹೆಣ್ಣಿಗೆ ಮಾತ್ರವಲ್ಲ ಮನೆಯ ಸಾಕು ಬೆಕ್ಕಿಗೂ ಗೊತ್ತು....!