ನೀತಾ ಅಂಬಾನಿ ಕುಡಿಯುವ ನೀರಿನ ಬಾಟಲಿ ಬೆಲೆ ₹50 ಲಕ್ಷನಾ? ಅಕ್ವಾ ಡಿ ಕ್ರಿಸ್ಟಲ್ಲೊ ನೀರಿನ ಬೆಲೆ ಅಷ್ಟೊಂದು ಕಾಸ್ಟ್ಲಿ ಯಾಕೆ?

Published : Nov 03, 2026, 03:00 PM IST
Nita Ambani water

ಸಾರಾಂಶ

ವಿಶ್ವದ ಅತ್ಯಂತ ದುಬಾರಿ 'ಅಕ್ವಾ ಡಿ ಕ್ರಿಸ್ಟಲ್ಲೊ' ನೀರಿನ ಬಾಟಲಿಯ ಬೆಲೆ ಬರೋಬ್ಬರಿ 50 ಲಕ್ಷ ರೂಪಾಯಿ. ಈ ನೀರನ್ನು ನೀತಾ ಅಂಬಾನಿ ಕುಡಿಯುತ್ತಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಇದು ಕೇವಲ ಎಡಿಟ್ ಮಾಡಿದ ಫೋಟೋಗಳಾಗಿದ್ದು, ಈ ಬಗ್ಗೆ ಯಾವುದೇ ಅಧಿಕೃತ ಪುರಾವೆಗಳಿಲ್ಲ.

ಬೆಂಗಳೂರು(ನ.03): ನಾವು ಹೊರಗೆ ಹೋದಾಗ ಸಾಮಾನ್ಯವಾಗಿ ₹10 ಅಥವಾ ₹20 ಕೊಟ್ಟು ನೀರಿನ ಬಾಟಲಿ ಖರೀದಿಸುತ್ತೇವೆ. ಐಷಾರಾಮಿ ಹೋಟೆಲ್‌ಗಳಲ್ಲಿ ಇದೇ ಬಾಟಲಿಗೆ ₹100 ಅಥವಾ ಅದಕ್ಕಿಂತ ಹೆಚ್ಚಿನ ಬೆಲೆ ಇರಬಹುದು. ಆದರೆ ಒಂದು ನೀರಿನ ಬಾಟಲಿಯ ಬೆಲೆ ಬರೋಬ್ಬರಿ ₹45ರಿಂದ ₹50 ಲಕ್ಷ ಎಂದರೆ ನಂಬುತ್ತೀರಾ? 

ಹೌದು, 'ಅಕ್ವಾ ಡಿ ಕ್ರಿಸ್ಟಲ್ಲೊ ಟ್ರಿಬ್ಯೂಟೊ ಎ ಮೊಡಿಗ್ಲಿಯಾನಿ' (Acqua di Cristallo Tributo a Modigliani) ಹೆಸರಿನ ಸೀಮಿತ ಆವೃತ್ತಿಯ ನೀರಿನ ಬಾಟಲಿ ಇಷ್ಟೊಂದು ದುಬಾರಿ ಬೆಲೆಗೆ ಮಾರಾಟವಾಗಿದೆ ಎನ್ನಲಾಗಿದೆ. ಹಾಗಾದರೆ ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಖೇಶ್‌ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ನಿಜವಾಗಿಯೂ ಈ ನೀರನ್ನು ಕುಡಿಯುತ್ತಾರಾ? ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿಯ ಹಿಂದಿನ ಸತ್ಯವೇನು? ನೋಡೋಣ ಬನ್ನಿ

₹50 ಲಕ್ಷ ಬೆಲೆಯ ನೀರಿನ ಬಾಟಲಿಯ ವಿಶೇಷತೆ ಏನು?

ಈ ವಿಶೇಷ ನೀರಿನ ಬಾಟಲಿಯ ಬೆಲೆ ಬರೋಬ್ಬರಿ 60,000 ಡಾಲರ್‌. ಭಾರತೀಯ ರೂಪಾಯಿ ಮೌಲ್ಯದಲ್ಲಿ ಇದು ಸುಮಾರು ₹50 ಲಕ್ಷವಾಗುತ್ತದೆ. 2010ರಲ್ಲಿ ನಡೆದ ಹರಾಜಿನಲ್ಲಿ 'ಅಕ್ವಾ ಡಿ ಕ್ರಿಸ್ಟಲ್ಲೊ ಟ್ರಿಬ್ಯೂಟೊ ಎ ಮೊಡಿಗ್ಲಿಯಾನಿ' ಸೀಮಿತ ಆವೃತ್ತಿಯ ಬಾಟಲಿ ಈ ದಾಖಲೆಯ ಬೆಲೆಗೆ ಮಾರಾಟವಾಗಿತ್ತು ಎಂದು ವರದಿಯಾಗಿವೆ.

ಇಷ್ಟೊಂದು ದುಬಾರಿ ಬೆಲೆ ಹೊಂದಿರುವ ಈ ನೀರಿನ ವಿಶೇಷತೆಯೇನು ಎಂಬ ಕುತೂಹಲ ಸಹಜವಾಗಿ ಎಲ್ಲರಲ್ಲೂ ಇರುತ್ತದೆ. ಈ ನೀರನ್ನು ಮೂರು ವಿಭಿನ್ನ ಮೂಲಗಳಿಂದ ಸಂಗ್ರಹಿಸಲಾಗುತ್ತದೆ ಎನ್ನಲಾಗಿದೆ. ಫಿಜಿ ಮತ್ತು ಫ್ರಾನ್ಸ್‌ನ ನೈಸರ್ಗಿಕ ಚಿಲುಮೆಗಳ ನೀರಿನೊಂದಿಗೆ ಐಸ್‌ಲ್ಯಾಂಡ್‌ನ ಹಿಮನದಿಯ ನೀರನ್ನು ಮಿಶ್ರಣ ಮಾಡಲಾಗುತ್ತದೆ. ಅಷ್ಟೇ ಅಲ್ಲ, ಇದಕ್ಕೆ 24 ಕ್ಯಾರೆಟ್‌ ಚಿನ್ನದ ಸುಮಾರು 5 ಮಿಲಿಗ್ರಾಂ ಚೂರುಗಳನ್ನೂ ಸೇರಿಸಲಾಗುತ್ತದೆ ಎಂದು ಹೇಳಲಾಗಿದೆ.

ಬಾಟಲಿಯೇ 24 ಕ್ಯಾರೆಟ್‌ ಚಿನ್ನದಿಂದ ತಯಾರಾಗಿದೆ!

ಈ ಬಾಟಲಿಯ ವಿನ್ಯಾಸಕ್ಕೆ ಪ್ರಸಿದ್ಧ ಕಲಾವಿದ ಅಮೆಡಿಯೊ ಮೊಡಿಗ್ಲಿಯಾನಿ ಅವರ ಕಲಾಕೃತಿಗಳು ಪ್ರೇರಣೆಯಾಗಿವೆ. ಬಾಟಲಿಯನ್ನು 24 ಕ್ಯಾರೆಟ್‌ ಶುದ್ಧ ಚಿನ್ನದಿಂದ ತಯಾರಿಸಲಾಗಿದೆ ಎಂದು ಉತ್ಪಾದಕರು ಹೇಳಿಕೊಂಡಿದ್ದಾರೆ. ನೀರಿನಲ್ಲಿರುವ ಹೆಚ್ಚಿನ ಕ್ಷಾರೀಯ ಅಂಶವು ಚರ್ಮವನ್ನು ತೇವಾಂಶದಿಂದ ಕೂಡಿರುವಂತೆ ಹಾಗೂ ಕಾಂತಿಯುತವಾಗಿಡಲು ನೆರವಾಗುತ್ತದೆ ಎಂಬುದೂ ಕಂಪನಿಯ ಪ್ರಚಾರ ನಡೆಸಿದೆ. ಆದರೆ, ಇಂತಹ ಆರೋಗ್ಯ ಮತ್ತು ಸೌಂದರ್ಯಕ್ಕೆ ಸಂಬಂಧಿಸಿದ ಪ್ರಯೋಜನಗಳಿಗೆ ಬಲವಾದ ವೈಜ್ಞಾನಿಕ ಆಧಾರವಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಇವುಗಳಲ್ಲಿ ಬಹುತೇಕ ಅಂಶಗಳು ಉತ್ಪನ್ನದ ಮಾರುಕಟ್ಟೆ ಪ್ರಚಾರಕ್ಕೆ ಸಂಬಂಧಿಸಿವೆ ಎಂಬ ಅಭಿಪ್ರಾಯಗಳೂ ಇವೆ.

ನೀತಾ ಅಂಬಾನಿ ನಿಜವಾಗಿಯೂ ₹50 ಲಕ್ಷದ ನೀರು ಕುಡಿಯುತ್ತಾರಾ?

ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ಹರಿದಾಡುವ ಸುದ್ದಿಯೊಂದರ ಪ್ರಕಾರ, ಮುಖೇಶ್‌ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಪ್ರತಿದಿನ ಈ ₹50 ಲಕ್ಷದ ನೀರನ್ನು ಕುಡಿಯುತ್ತಾರಂತೆ. ಕ್ರಿಕೆಟ್‌ ಪಂದ್ಯಗಳ ವೇಳೆ ನೀತಾ ಅಂಬಾನಿ ಕಾಣಿಸಿಕೊಂಡಿರುವ ಸಾಮಾನ್ಯ ಫೋಟೊಗಳನ್ನು ಬಳಸಿಕೊಂಡು, ಅವರ ಕೈಯಲ್ಲಿರುವ ನೀರಿನ ಬಾಟಲಿಯ ಜಾಗದಲ್ಲಿ ಅಕ್ವಾ ಡಿ ಕ್ರಿಸ್ಟಲ್ಲೊ ಬಾಟಲಿಯ ಚಿತ್ರವನ್ನು ಎಡಿಟ್‌ ಮಾಡಿ ಹಂಚಿಕೊಳ್ಳಲಾಗಿದೆ.

ಆದರೆ, ನೀತಾ ಅಂಬಾನಿ ನಿಜವಾಗಿಯೂ ಈ ನಿರ್ದಿಷ್ಟ ಬ್ರ್ಯಾಂಡ್‌ನ ನೀರನ್ನು ಕುಡಿಯುತ್ತಾರೆ ಎಂಬುದಕ್ಕೆ ಯಾವುದೇ ಅಧಿಕೃತ ಮಾಹಿತಿ ಅಥವಾ ವಿಶ್ವಾಸಾರ್ಹ ಪುರಾವೆ ಲಭ್ಯವಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಸುದ್ದಿಯನ್ನು ಸತ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ.

ಶ್ರೀಮಂತ ಗ್ರಾಹಕರಿಗಾಗಿ ರೂಪಿಸಲಾದ ಐಷಾರಾಮಿ ಬಾಟಲಿ

ಈ ದುಬಾರಿ ನೀರಿನ ಬಾಟಲಿಯನ್ನು ಸಾಮಾನ್ಯ ಗ್ರಾಹಕರಿಗಾಗಿ ತಯಾರಿಸಲಾಗಿಲ್ಲ. ಐಷಾರಾಮಿ ಜೀವನಶೈಲಿಯನ್ನು ಇಷ್ಟಪಡುವ ಶ್ರೀಮಂತರು ಮತ್ತು ಅಪರೂಪದ ವಸ್ತುಗಳನ್ನು ಸಂಗ್ರಹಿಸುವ ಆಸಕ್ತರಿಗಾಗಿ ಇದನ್ನು ರೂಪಿಸಲಾಗಿದೆ ಎನ್ನಲಾಗಿದೆ. ಗಿನ್ನೆಸ್‌ ವಿಶ್ವ ದಾಖಲೆಗಳ ಪ್ರಕಾರ, ಅಕ್ವಾ ಡಿ ಕ್ರಿಸ್ಟಲ್ಲೊ ಟ್ರಿಬ್ಯೂಟೊ ಎ ಮೊಡಿಗ್ಲಿಯಾನಿ ವಿಶ್ವದ ಅತ್ಯಂತ ದುಬಾರಿ ನೀರಿನ ಬಾಟಲಿ ಎಂಬ ದಾಖಲೆಯನ್ನು ಹೊಂದಿದೆ. ಬಾಟಲಿಯ ನಿರ್ಮಾಣಕ್ಕೆ ಬಳಸಿರುವ ಚಿನ್ನ, ವಿಶಿಷ್ಟ ವಿನ್ಯಾಸ ಮತ್ತು ತಯಾರಿಕಾ ಪ್ರಕ್ರಿಯೆಯೇ ಅದರ ದುಬಾರಿ ಬೆಲೆಗೆ ಪ್ರಮುಖ ಕಾರಣಗಳಾಗಿವೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Palm Jaggery: ಸಾಮಾನ್ಯ ಬೆಲ್ಲಕ್ಕಿಂತ ತಾಳೆ ಬೆಲ್ಲ ಎಷ್ಟು ಹೆಚ್ಚು ಉತ್ತಮ? ಇದನ್ನು ಆಹಾರದಲ್ಲಿ ಹೇಗೆ ಬಳಸಬಹುದು?
ತಾಯಿಯಾಗುತ್ತಿದ್ದಾರೆ ಲವ್‌ ಮಾಕ್‌ಟೇಲ್‌-3 ನಟಿ: ಪ್ರೆಗ್ನೆನ್ಸಿ ಫೋಟೋಶೂಟ್ ಹಂಚಿಕೊಂಡು ಸಿಹಿ ಸುದ್ದಿ ನೀಡಿದ ಮೈಸೂರು ಬೆಡಗಿ!