
ನಮ್ಮ ಸಮಾಜದಲ್ಲಿ ಹಾವುಗಳ ಬಗ್ಗೆ ಹಲವಾರು ಕುತೂಹಲಕಾರಿ ನಂಬಿಕೆಗಳು ಮತ್ತು ತಪ್ಪು ಕಲ್ಪನೆಗಳು ಹರಡಿವೆ. ಒಂದು ಕಡೆ ಹಾವುಗಳನ್ನು ದೇವರಂತೆ ಪೂಜಿಸಲಾಗುತ್ತದೆ, ಮತ್ತೊಂದೆಡೆ ಅವುಗಳು ಅಪಾಯಕಾರಿಯೆಂದು ಭಯಗೊಳ್ಳುತ್ತಾರೆ. ಇವುಗಳಲ್ಲಿ ಅತ್ಯಂತ ಜನಪ್ರಿಯ ನಂಬಿಕೆಯೆಂದರೆ, ಹಾವುಗಳು ಗರ್ಭಿಣಿ ಮಹಿಳೆಯನ್ನು ಕಚ್ಚುವುದಿಲ್ಲ, ಮತ್ತು ಅವರನ್ನು ನೋಡಿದರೆ ಕುರುಡಾಗುತ್ತವೆ! ಎನ್ನುವುದು.
ಈ ನಂಬಿಕೆಯ ಹಿಂದಿನ ರಹಸ್ಯವೇನು?
ಹಾವುಗಳು ಗರ್ಭಿಣಿ ಮಹಿಳೆಯನ್ನು ಕಚ್ಚುವುದಿಲ್ಲವೇ? ಗರ್ಭಿಣಿಯರನ್ನ ನೋಡಿದರೆ ಕುರುಡಾಗುವುದು ನಿಜವೇ? ಇಲ್ಲವೇ ಇದು ಕೇವಲ ಜಾನಪದ ಕತೆಯೇ? ಬನ್ನಿ, ಈ ಕುತೂಹಲಕಾರಿ ವಿಷಯದ ಅಸಲಿ ಸತ್ಯವೇನೆಂದು ತಿಳಿಯೋಣ.
ಪುರಾಣದ ಕತೆ:ಶಾಪದಿಂದ ಹುಟ್ಟಿದ ನಂಬಿಕೆ:
ಬ್ರಹ್ಮವೈವರ್ತ ಪುರಾಣದ ಒಂದು ಕಥೆಯ ಪ್ರಕಾರ, ಒಬ್ಬ ಗರ್ಭಿಣಿ ಮಹಿಳೆ ಶಿವನ ದೇವಾಲಯದಲ್ಲಿ ಧ್ಯಾನಮಗ್ನಳಾಗಿದ್ದಳು. ಆಗ ಎರಡು ಹಾವುಗಳು ಅವಳನ್ನು ಕಿರಿಕಿರಿಗೊಳಿಸಿ, ಧ್ಯಾನಕ್ಕೆ ಭಂಗ ತಂದವು. ಕೋಪಗೊಂಡ ಆ ಗರ್ಭಿಣಿಯ ಗರ್ಭದಲ್ಲಿರುವ ಮಗು ಸರ್ಪ ವಂಶಕ್ಕೆ ಶಾಪವಿತ್ತಿತು ಅದೇನೆಂದರೆ, 'ಗರ್ಭಿಣಿ ಮಹಿಳೆಯ ಬಳಿಗೆ ಬಂದ ಯಾವುದೇ ಹಾವು ಕುರುಡಾಗಲಿ' ಎಂದು! ಈ ಕತೆಯಿಂದ ಉದ್ಭವವಾದ ನಂಬಿಕೆಯಂತೆ, ಹಾವುಗಳು ಗರ್ಭಿಣಿಯರನ್ನು ನೋಡಿದ ತಕ್ಷಣ ತಮ್ಮ ಮಾರ್ಗ ಬದಲಾಯಿಸುತ್ತವೆ, ಇಲ್ಲವಾದರೆ ಕುರುಡಾಗುತ್ತವೆ ಎಂದು ಹಿಂದೂ ಧರ್ಮದಲ್ಲಿ ಹೇಳಲಾಗುತ್ತದೆ.
ವೈಜ್ಞಾನಿಕ ಆಧಾರವಿದೆಯೇ?
ಈ ಕತೆ ಜನರ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ, ಆದರೆ ಇದಕ್ಕೆ ವೈಜ್ಞಾನಿಕ ಆಧಾರವಿದೆಯೇ? ವಿಜ್ಞಾನ ಏನು ಹೇಳುತ್ತದೆ? ವೈಜ್ಞಾನಿಕವಾಗಿ, 'ಹಾವುಗಳು ಗರ್ಭಿಣಿಯರನ್ನು ಕಚ್ಚುವುದಿಲ್ಲ' ಎಂಬ ನಂಬಿಕೆಗೆ ಯಾವುದೇ ಪುರಾವೆ ಇಲ್ಲ. ಹಾವುಗಳು ತಮಗೆ ಬೆದರಿಕೆ ಎನಿಸಿದಾಗ ಅಥವಾ ತಮ್ಮ ಸುರಕ್ಷತೆಗೆ ಧಕ್ಕೆ ಉಂಟಾದಾಗ ಮಾತ್ರ ಕಚ್ಚುತ್ತವೆ. ಮತ್ತಿದು ಗರ್ಭಿಣಿಯರಿಗೂ, ಇತರರಿಗೂ ಸಮಾನವಾಗಿ ಅನ್ವಯಿಸುತ್ತದೆ. ಗರ್ಭಿಣಿಯರಿಂದ ಹಾವುಗಳು ಕುರುಡಾಗುತ್ತವೆ ಎಂಬುದು ಕೇವಲ ಜಾನಪದ ಕತೆಯಾಗಿದ್ದು, ಯಾವುದೇ ತರ್ಕ ಅಥವಾ ಸಾಕ್ಷ್ಯದಿಂದ ಸಾಬೀತಾಗಿಲ್ಲ. ಬದಲಿಗೆ, ವಿಜ್ಞಾನವು ಗರ್ಭಿಣಿಯರಿಗೆ ಹಾವಿನ ಕಡಿತವು ಇತರರಿಗಿಂತ ಹೆಚ್ಚು ಅಪಾಯಕಾರಿ ಎಂದು ಎಚ್ಚರಿಸುತ್ತದೆ. ಹಾವಿನ ವಿಷವು ತಾಯಿಯ ದೇಹದ ಮೂಲಕ ಭ್ರೂಣವನ್ನು ತಲುಪಿ, ಗಂಭೀರ ಅಪಾಯ ಉಂಟುಮಾಡಬಹುದು, ಇದರಿಂದ ತಾಯಿ ಮತ್ತು ಮಗು ಇಬ್ಬರ ಆರೋಗ್ಯಕ್ಕೂ ಹಾನಿಯಾಗಬಹುದು. ಆದ್ದರಿಂದ, ಗರ್ಭಿಣಿಯರು ಹಾವುಗಳು ವಾಸಿಸುವ ಪ್ರದೇಶಗಳಲ್ಲಿ ವಿಶೇಷ ಜಾಗರೂಕತೆ ವಹಿಸಬೇಕು.
ಹಾವುಗಳಿದ್ದಲ್ಲಿ ಗರ್ಭಿಣಿಯರು ಹೇಗೆ ಎಚ್ಚರಿಕೆ ವಹಿಸಬೇಕು?
ಗರ್ಭಿಣಿಯರು, ವಿಶೇಷವಾಗಿ ಗ್ರಾಮೀಣ ಅಥವಾ ಹಾವುಗಳಿರುವ ಪ್ರದೇಶಗಳಲ್ಲಿ ವಾಸಿಸುವವರು, ಈ ಕೆಳಗಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಹಾವುಗಳಿರಬಹುದಾದ ಸ್ಥಳಗಳಿಂದ ದೂರವಿರುವುದು, ಕಾಡು, ಕೃಷಿ ಭೂಮಿ, ಅಥವಾ ಕಸಕಡ್ಡಿಗಳ ಸಮೀಪವಿರುವ ಪ್ರದೇಶಗಳಲ್ಲಿ ಎಚ್ಚರಿಕೆಯಿಂದ ಇರಬೇಕು. ಇದರ ಜೊತೆಗೆ ರಕ್ಷಣಾತ್ಮಕ ಉಡುಪುಗಳಾದ ಉದ್ದವಾದ ಬೂಟುಗಳು ಮತ್ತು ಸೂಕ್ತ ಉಡುಪು ಧರಿಸಿ ಕೆಲಸ ಮಾಡುವುದು, ಒಂದು ವೇಳೆ ಹಾವು ಕಚ್ಚಿದರೆ ಗರ್ಭಿಣಿಯರಿಗೆ ಕಚ್ಚಿದರೆ ಏನಾಗಲ್ಲ ಎಂಬ ಅಲಕ್ಷ್ಯ ಬೇಡ, ಕಚ್ಚಿದ ತಕ್ಷಣವೇ ತಡಮಾಡದೆ ಹತ್ತಿರದ ಆಸ್ಪತ್ರೆಗೆ ತೆರಳಿ. ವಿಷಕಾರಿ ಹಾವಿನ ಕಡಿತಕ್ಕೆ ಆಂಟಿವೆನಮ್ ಚಿಕಿತ್ಸೆ ಪಡೆಯಬೇಕು.
ಒಟ್ಟಿನಲ್ಲಿ 'ಹಾವುಗಳು ಗರ್ಭಿಣಿಯರನ್ನು ಕಚ್ಚುವುದಿಲ್ಲ' ಎಂಬುದು ಜಾನಪದ ಕತೆಯಾಗಿದ್ದರೂ, ಇದು ಕೇವಲ ಮಿಥ್ಯೆಯಷ್ಟೇ. ವಿಜ್ಞಾನವು ಈ ನಂಬಿಕೆಯನ್ನು ಒಪ್ಪುವುದಿಲ್ಲ. ಗರ್ಭಿಣಿಯರು ಹಾವಿನ ಕಡಿತದಿಂದ ಇತರರಂತೆಯೇ ಅಪಾಯಕ್ಕೆ ಒಳಗಾಗುತ್ತಾರೆ. ಆದ್ದರಿಂದ, ಈ ನಂಬಿಕೆಯ ಮೇಲೆ ಭರವಸೆ ಇಡದೆ, ಜಾಗರೂಕರಾಗಿರಿ ಮತ್ತು ಸುರಕ್ಷಿತವಾಗಿರಿ.
ಗರ್ಭಿಣಿಯರಿಗೆ ಒಂದು ಸಂದೇಶ: ಪುರಾಣದ ಕತೆಗಳು ಆಸಕ್ತಿಕರವಾಗಿರಬಹುದು, ಆದರೆ ನಿಮ್ಮ ಮತ್ತು ನಿಮ್ಮ ಮಗುವಿನ ಸುರಕ್ಷತೆಗೆ ವಿಜ್ಞಾನದ ಮಾರ್ಗದರ್ಶನವನ್ನು ಅನುಸರಿಸಿ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.