30ಕ್ಕೂ ಹೆಚ್ಚು ದೇಶದಲ್ಲಿ ಟೆರೇಸ್ ಮೇಲೆ ಪ್ಲಾಸ್ಟಿಕ್ ನೀರಿನ ಬಾಟಲಿ ಇಡುತ್ತಿರುವುದೇಕೆ?

Published : Sep 10, 2026, 02:43 PM IST
Moser lamp

ಸಾರಾಂಶ

Eco friendly lighting: ಬೆಳಕಿಲ್ಲದ ಕೋಣೆಗೆ ಬೆಳಕು ತರಲು ನಾವೇನು ಮಾಡುತ್ತೇವೆ? ಸ್ವಿಚ್ ಆನ್ ಮಾಡಿ ಬಲ್ಬ್ ಹಚ್ಚುತ್ತೇವೆ. ಆದರೆ, ಹಗಲು ಹೊತ್ತಿನಲ್ಲಿ ವಿದ್ಯುತ್ ಇಲ್ಲದೆಯೂ, ಬಿಲ್ ಕಟ್ಟದೆಯೂ ಕೋಣೆಯನ್ನು ಫಳಫಳನೆ ಬೆಳಗಿಸಬಹುದು ಅಂದರೆ ನೀವು ನಂಬುತ್ತೀರಾ? ಹೌದು, ಒಂದು ಖಾಲಿ ಪ್ಲಾಸ್ಟಿಕ್ ಬಾಟಲ್ ಮತ್ತು ಸ್ವಲ್ಪ ನೀರಿದ್ದರೆ ಸಾಕು!

ಗಲಿನಲ್ಲಿ ವಿದ್ಯುತ್ ದೀಪಗಳನ್ನು ಬಳಸುವುದನ್ನು ತಪ್ಪಿಸಲು ಜಗತ್ತಿನ 30ಕ್ಕೂ ಹೆಚ್ಚು ದೇಶಗಳಲ್ಲಿ ಲಕ್ಷಾಂತರ ಜನರು ಈ ಅದ್ಭುತ ಐಡಿಯಾವನ್ನು ಬಳಸುತ್ತಿದ್ದಾರೆ. ಇದಕ್ಕೆ ‘ಮೋಸರ್ ಲ್ಯಾಂಪ್’ (Moser Lamp) ಎಂದು ಕರೆಯಲಾಗುತ್ತದೆ.

ಏನಿದು 'ಮೋಸರ್ ಲ್ಯಾಂಪ್'? ಹುಟ್ಟಿದ್ದು ಎಲ್ಲಿ?

ಈ ಸರಳ ತಂತ್ರಜ್ಞಾನವನ್ನು 2002 ರಲ್ಲಿ ಬ್ರೆಜಿಲ್‌ನ ಮೆಕ್ಯಾನಿಕ್ ಆಗಿದ್ದ ಆಲ್ಫ್ರೆಡೋ ಮೋಸರ್ (Alfredo Moser) ಎಂಬುವವರು ಆವಿಷ್ಕರಿಸಿದರು. ಆ ಸಮಯದಲ್ಲಿ ಬ್ರೆಜಿಲ್‌ನಲ್ಲಿ ತೀವ್ರ ವಿದ್ಯುತ್ ಕೊರತೆ ಮತ್ತು ಲೋಡ್‌ಶೆಡ್ಡಿಂಗ್ ಇತ್ತು. ಕಿಟಕಿಗಳಿಲ್ಲದ ತಮ್ಮ ವರ್ಕ್‌ಶಾಪ್‌ನಲ್ಲಿ ಕತ್ತಲನ್ನು ಹೋಗಲಾಡಿಸಲು ಅವರು ಈ ಬಾಟಲ್ ದೀಪವನ್ನು ಕಂಡುಹಿಡಿದರು. ಅವರ ಹೆಸರಿನಿಂದಲೇ ಇದು 'ಮೋಸರ್ ಲ್ಯಾಂಪ್' ಎಂದು ಪ್ರಸಿದ್ಧಿಯಾಯಿತು.

ನಂತರ 2011 ರಲ್ಲಿ, ಫಿಲಿಪೈನ್ಸ್‌ನ 'ಮೈ ಶೆಲ್ಟರ್ ಫೌಂಡೇಶನ್' (MyShelter Foundation) ಈ ಐಡಿಯಾವನ್ನು ‘ಲಿಟರ್ ಆಫ್ ಲೈಟ್’ (Liter of Light) ಎಂಬ ಅಭಿಯಾನದ ಮೂಲಕ ಜಗತ್ತಿಗೆ ಪರಿಚಯಿಸಿತು. ಕೆಲವೇ ತಿಂಗಳುಗಳಲ್ಲಿ 15 ದೇಶಗಳ ಸುಮಾರು 3.5 ಲಕ್ಷ ಮನೆಗಳಿಗೆ ಇದು ಬೆಳಕು ನೀಡಿತು. ನಂತರ ಯುನೆಸ್ಕೋ (UNESCO) ವರದಿಗಳ ಪ್ರಕಾರ, ಇದು ವಿಶ್ವದ 30ಕ್ಕೂ ಹೆಚ್ಚು ಬಡ ಮತ್ತು ಹಿಂದುಳಿದ ದೇಶಗಳಿಗೆ ವಿಸ್ತರಿಸಿತು.

ಇದು ಹೇಗೆ ಕೆಲಸ ಮಾಡುತ್ತದೆ? (ವೈಜ್ಞಾನಿಕ ತತ್ವ)

ಇದೊಂದು ನೈಸರ್ಗಿಕ ಸೋಲಾರ್ ಬಲ್ಬ್‌ನಂತೆ ಕೆಲಸ ಮಾಡುತ್ತೆ. ಛಾವಣಿಯ (ಮೇಲ್ಛಾವಣಿ/ಶೀಟ್) ಮೇಲೆ ತೂತು ಮಾಡಿ, ನೀರು ತುಂಬಿದ ಪಾರದರ್ಶಕ ಪ್ಲಾಸ್ಟಿಕ್ ಬಾಟಲಿಯನ್ನು ಅರ್ಧ ಹೊರಗೆ ಮತ್ತು ಅರ್ಧ ಒಳಗೆ ಇರುವಂತೆ ಕೂರಿಸಲಾಗುತ್ತದೆ. ಸೂರ್ಯನ ಬೆಳಕು ಬಾಟಲಿಯ ಹೊರಭಾಗದ ಮೇಲೆ ಬಿದ್ದಾಗ, ಬೆಳಕಿನ ಕಿರಣಗಳು ನೀರನ್ನು ಹಾದುಹೋಗುತ್ತವೆ. ಇಲ್ಲಿ ‘ಬೆಳಕಿನ ವಕ್ರೀಭವನ’ (Refraction) ಕ್ರಿಯೆ ನಡೆಯುತ್ತದೆ. ನೀರು ಬೆಳಕನ್ನು ಒಂದೇ ಕಡೆ ಕೇಂದ್ರೀಕರಿಸದೆ, ಕೋಣೆಯ ನಾಲಕ್ಕು ಮೂಲೆಗೂ 360 ಡಿಗ್ರಿಯಲ್ಲಿ ಚದುರಿಸುತ್ತದೆ (Diffuse).

ಇದು ಸುಮಾರು 40 ರಿಂದ 60 ವ್ಯಾಟ್ ಸಾಮರ್ಥ್ಯದ ವಿದ್ಯುತ್ ಬಲ್ಬ್‌ನಷ್ಟೇ ಪ್ರಕಾಶಮಾನವಾದ ಬೆಳಕನ್ನು ಕೋಣೆಗೆ ನೀಡುತ್ತದೆ!

ಇದನ್ನು ಸರಿಯಾಗಿ ಅಳವಡಿಸುವುದು ಹೇಗೆ?

ಸ್ವಚ್ಛವಾದ ಪ್ಲಾಸ್ಟಿಕ್ ಬಾಟಲ್: ಪಾರದರ್ಶಕವಾದ 1.5 ಅಥವಾ 2 ಲೀಟರ್‌ನ PET ಬಾಟಲಿಯನ್ನು ಬಳಸಬೇಕು.

ಬ್ಲೀಚ್ / ಕ್ಲೋರಿನ್ ಬಳಕೆ: ನೀರು ತುಂಬುವಾಗ ಅದಕ್ಕೆ 2-3 ಮುಚ್ಚಳದಷ್ಟು ಬ್ಲೀಚ್ (Bleach) ಅಥವಾ ಕ್ಲೋರಿನ್ ಹಾಕಬೇಕು. ಇದರಿಂದ ನೀರಿನಲ್ಲಿ ಪಾಚಿ (Algae) ಕಟ್ಟುವುದಿಲ್ಲ ಮತ್ತು ನೀರು ವರ್ಷಗಟ್ಟಲೆ ಸ್ವಚ್ಛವಾಗಿ ಉಳಿಯುತ್ತದೆ.

ಸೀಲಿಂಗ್ ಅತ್ಯಗತ್ಯ: ಛಾವಣಿಗೆ ರಂಧ್ರ ಕೊರೆದು ಬಾಟಲ್ ಕೂರಿಸಿದ ನಂತರ, ಮಳೆ ನೀರು ಒಳಗೆ ಬರದಂತೆ ಸುತ್ತಲೂ ಸಿಲಿಕಾನ್ ಅಥವಾ ವಾಟರ್‌ಪ್ರೂಫ್ ಅಂಟು (Sealant) ಹಾಕಿ ಭದ್ರಪಡಿಸಬೇಕು.

ಇದು ಜಗತ್ತಿನಾದ್ಯಂತ ಇಷ್ಟೊಂದು ಜನಪ್ರಿಯವಾಗಲು ಕಾರಣವೇನು?

ಶೂನ್ಯ ಖರ್ಚು: ಕಸಕ್ಕೆ ಎಸೆಯುವ ಪ್ಲಾಸ್ಟಿಕ್ ಬಾಟಲಿಗಳ ಮರುಬಳಕೆಯಾಗುತ್ತದೆ.

ವಿದ್ಯುತ್ ಉಳಿತಾಯ: ಹಗಲಿನಲ್ಲಿ ಬಲ್ಬ್ ಹಾಕುವ ಅಗತ್ಯವೇ ಇರುವುದಿಲ್ಲ, ಕರೆಂಟ್ ಬಿಲ್ ಉಳಿಯುತ್ತದೆ.

ಪರಿಸರ ಸ್ನೇಹಿ: ಯಾವುದೇ ಇಂಧನ ಅಥವಾ ಕಾರ್ಬನ್ ಹೊರಸೂಸುವಿಕೆ ಇರುವುದಿಲ್ಲ.

ಸುಲಭ ಬಳಕೆ: ಕಡಿಮೆ ಆದಾಯದ ಕುಟುಂಬಗಳು ಅಥವಾ ಕಿಟಕಿಗಳಿಲ್ಲದ ಗೋದಾಮು, ಕೊಳೆಗೇರಿ (Slum) ಪ್ರದೇಶದ ಸಣ್ಣ ಮನೆಗಳಿಗೆ ಇದು ಸಂಜೀವಿನಿಯಾಗಿದೆ.

ಯಾವುದೇ ಸಂಕೀರ್ಣ ತಂತ್ರಜ್ಞಾನವಿಲ್ಲದೆ, ಕೇವಲ ಸೂರ್ಯನ ಬೆಳಕು ಮತ್ತು ಒಂದು ಬಾಟಲ್ ನೀರಿನಿಂದ ಬಡವರ ಮನೆಗಳಲ್ಲಿ ಬೆಳಕು ಚೆಲ್ಲಿದ ಈ ಆವಿಷ್ಕಾರ ಇಂದಿಗೂ ವಿಶ್ವದ ಅತ್ಯಂತ ಯಶಸ್ವಿ 'ಜುಗಾಡ್' ಅಥವಾ ಗ್ರಾಮೀಣ ತಂತ್ರಜ್ಞಾನಗಳಲ್ಲಿ ಒಂದಾಗಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

​ಬಾಯಲ್ಲಿಟ್ಟರೆ ಕರಗುವಂತಹ ನೀರಿನ ದೋಸೆ ಬೇಕಾ? ಈ 5 ಟಿಪ್ಸ್ ಫಾಲೋ ಮಾಡಿದ್ರೆ ಸಾಕು
ಗಂಡೋ? ಹೆಣ್ಣೋ? ಬದನೆಕಾಯಿ, ಕ್ಯಾಪ್ಸಿಕಂ, ಕಲ್ಲಂಗಡಿ ಖರೀದಿಸುವ ಮುನ್ನ ಈ ವಿಷ್ಯ ಗೊತ್ತಾದ್ರೆ ಮೋಸ ಹೋಗಲ್ಲ