
ಒಳ್ಳೆಯ ಸಂಬಳ, ಗೌರವದ ಪ್ರೊಫೆಸರ್ ಹುದ್ದೆ ಇದ್ದರೂ ಕೆಲವರು ತಮ್ಮದೇ ಉದ್ಯಮ ಕಟ್ಟುವ ಕನಸು ಕಾಣುತ್ತಾರೆ. ಆದರೆ ಸ್ಥಿರವಾದ ಉದ್ಯೋಗವನ್ನೇ ಬಿಟ್ಟು ಹೊಸ ಬಿಸಿನೆಸ್ ಶುರು ಮಾಡುವುದು ಅಷ್ಟು ಸುಲಭವಲ್ಲ. ತಮಿಳುನಾಡಿನ ಪ್ರೊಫೆಸರ್ ಸುಭದ್ರ ಅವರು ಇದೇ ರೀತಿ ತಮ್ಮ ಉದ್ಯೋಗಕ್ಕೆ ಗುಡ್‌ಬೈ ಹೇಳಿ ಸಿರಿಧಾನ್ಯ ಆಧಾರಿತ ಆಹಾರ ಉದ್ಯಮಕ್ಕೆ ಕಾಲಿಟ್ಟರು. ಇಂದು ಅವರ ಕಂಪನಿ ವರ್ಷಕ್ಕೆ ಸುಮಾರು ₹3 ಕೋಟಿ ಆದಾಯ ಗಳಿಸುತ್ತಿದೆ.
ಊಟಿಯ Emerald Heights College for Womenನಲ್ಲಿ ವೈಸ್ ಪ್ರಿನ್ಸಿಪಲ್ ಆಗಿದ್ದ ಸುಭದ್ರ ಅವರು 2015ರಲ್ಲಿ ತಮ್ಮ ಬೋಧನಾ ವೃತ್ತಿಗೆ ರಾಜೀನಾಮೆ ನೀಡಿದರು. ವಿದ್ಯಾರ್ಥಿಗಳಿಗೆ ಕೇವಲ ಉದ್ಯೋಗ ಹುಡುಕುವವರಾಗುವುದಕ್ಕಿಂತ ಉದ್ಯೋಗ ಸೃಷ್ಟಿಸುವವರಾಗಬೇಕು ಎಂದು ಅವರು ಹೇಳುತ್ತಿದ್ದರು. ತಾವು ಹೇಳಿದ್ದನ್ನು ತಾವೇ ಕಾರ್ಯರೂಪಕ್ಕೆ ತರಬೇಕು ಎಂಬ ಉದ್ದೇಶದಿಂದ ಉದ್ಯಮದತ್ತ ಹೆಜ್ಜೆ ಇಟ್ಟರು. ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸುವುದು ಮತ್ತು ಆರೋಗ್ಯಕರ ಆಹಾರವನ್ನು ಜನರಿಗೆ ತಲುಪಿಸುವುದು ಕೂಡ ಅವರ ಗುರಿಯಾಗಿತ್ತು.
ಬಿಸಿನೆಸ್ ಆರಂಭಿಸುವ ಮುನ್ನ ಸುಭದ್ರ ಅವರು ಮೈಸೂರಿನ Central Food Technological Research Institute (CFTRI) ಗೆ ತೆರಳಿ ಸಿರಿಧಾನ್ಯಗಳ ಸಂಸ್ಕರಣೆ ಕುರಿತು ಸಂಶೋಧನೆ ನಡೆಸಿದರು. ಸಿರಿಧಾನ್ಯ ಆಧಾರಿತ ಆಹಾರ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿರುವುದನ್ನು ಗಮನಿಸಿ, ಅದನ್ನೇ ಉದ್ಯಮವನ್ನಾಗಿ ಮಾಡಲು ನಿರ್ಧರಿಸಿದರು. ಆದರೆ ಆರಂಭದಲ್ಲೇ ಅವರಿಗೆ ದೊಡ್ಡ ಸವಾಲು ಎದುರಾಯಿತು.
ಸುಭದ್ರ ಅವರು ಸುಮಾರು ₹20 ಲಕ್ಷ ಹೂಡಿಕೆ ಮಾಡಿ 4,000 ಚದರ ಅಡಿ ಘಟಕವನ್ನು ಸ್ಥಾಪಿಸಿದರು. ಸಿರಿಧಾನ್ಯಗಳನ್ನು ವಿಂಗಡಿಸುವುದು, ಗ್ರೇಡಿಂಗ್, ನೆನೆಸುವುದು, ರುಬ್ಬುವುದು ಹಾಗೂ ಪ್ಯಾಕಿಂಗ್ ಮಾಡುವುದಕ್ಕಾಗಿ ಯಂತ್ರೋಪಕರಣಗಳನ್ನು ಸಿದ್ಧಪಡಿಸಿದರು. ಆರಂಭದಲ್ಲಿ ದಿನಕ್ಕೆ ಸುಮಾರು 1,000 ಕೆಜಿ ಪ್ಯಾಕ್‌ಗಳ ಉತ್ಪಾದನಾ ಸಾಮರ್ಥ್ಯ ಹೊಂದಿದ್ದರೂ, ದಿನಕ್ಕೆ 50 ಪ್ಯಾಕ್‌ಗಳನ್ನೂ ಮಾರಾಟ ಮಾಡಲು ಸಾಧ್ಯವಾಗಲಿಲ್ಲ. ಮೊದಲ ಹಂತದಲ್ಲಿ ತಯಾರಿಸಿದ 200 ಪ್ಯಾಕ್‌ಗಳು ಮಾರಾಟವಾಗದೆ ಉಳಿದಿದ್ದವು. ವಿಶೇಷವಾಗಿ ಸಿರಿಧಾನ್ಯ ಬ್ಯಾಟರ್ ಬಿಳಿ ಬಣ್ಣದಲ್ಲಿರದ ಕಾರಣ ಕೋಯಮತ್ತೂರಿನ ಹಲವು ರಿಟೇಲ್ ಅಂಗಡಿಗಳು ಅವುಗಳನ್ನು ಮಾರಾಟ ಮಾಡಲು ಆಸಕ್ತಿ ತೋರಲಿಲ್ಲ.
ಮಾರುಕಟ್ಟೆಯಲ್ಲಿ ಉತ್ಪನ್ನದ ಬಗ್ಗೆ ಜನರಿಗೆ ಪರಿಚಯವೇ ಇರಲಿಲ್ಲ. ಹೀಗಾಗಿ ಸುಭದ್ರ ಅವರು ಜನರಿಗೆ ಉಚಿತ ಸ್ಯಾಂಪಲ್‌ಗಳನ್ನು ನೀಡಲು ಆರಂಭಿಸಿದರು. ಜನರು ಉತ್ಪನ್ನಗಳನ್ನು ಬಳಸಲು ಆರಂಭಿಸಿದ ಬಳಿಕ ನಿಧಾನವಾಗಿ ಅದರ ಬಗ್ಗೆ ಮಾತು ಹರಡಿತು. ನಂತರ ಮಾರಾಟವೂ ಹೆಚ್ಚಾಗತೊಡಗಿತು. ಸಣ್ಣ ಮಟ್ಟದಲ್ಲಿ ಆರಂಭವಾದ ಪ್ರಯತ್ನ ಕ್ರಮೇಣ ದೊಡ್ಡ ಬ್ರ್ಯಾಂಡ್ ಆಗಿ ಬೆಳೆದಿದೆ.
ಸುಭದ್ರ ಅವರ PVR Foods ಇದೀಗ ಬರೋಬ್ಬರಿ 83 ರೆಡಿ-ಟು-ಕುಕ್ ಸಿರಿಧಾನ್ಯ ಉತ್ಪನ್ನಗಳನ್ನು ನೀಡುತ್ತಿದೆ. ಇವುಗಳಲ್ಲಿ ಸಿರಿಧಾನ್ಯ ಬ್ಯಾಟರ್, ಹಿಟ್ಟು, ನೂಡಲ್ಸ್, ಪೊಂಗಲ್ ಹಾಗೂ ವಿವಿಧ ಹೆಲ್ತ್ ಮಿಕ್ಸ್‌ಗಳು ಸೇರಿವೆ. ಈ ಉತ್ಪನ್ನಗಳು ಅಂಗಡಿಗಳು, ಆಸ್ಪತ್ರೆಗಳು, ಕಚೇರಿಗಳು ಹಾಗೂ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ದೇಶದ ವಿವಿಧ ಭಾಗಗಳಲ್ಲಿ ಮಾರಾಟವಾಗುತ್ತಿವೆ.
PVR Foodsಗೆ ತಮಿಳುನಾಡು ಕೃಷಿ ವಿಶ್ವವಿದ್ಯಾಲಯದ ಮೂಲಕ ಇಂಕ್ಯುಬೇಷನ್ ಸಹಾಯ ದೊರೆಯಿತು. ಅಲ್ಲದೆ Startup TN ಅಡಿಯಲ್ಲಿ ₹15 ಲಕ್ಷ ಸೀಡ್ ಫಂಡಿಂಗ್ ಮತ್ತು ಕೇಂದ್ರ ಕೃಷಿ ಸಚಿವಾಲಯದ Rashtriya Krishi Vikas Yojna ಯೋಜನೆಯಡಿ ₹23 ಲಕ್ಷ ಅನುದಾನ ದೊರೆತಿದೆ. ಒಟ್ಟಿನಲ್ಲಿ ₹38 ಲಕ್ಷದ ಸರ್ಕಾರಿ ನೆರವು ಸಂಸ್ಥೆಯ ಬೆಳವಣಿಗೆಗೆ ಸಹಾಯ ಮಾಡಿದೆ.
ಒಮ್ಮೆ ದಿನಕ್ಕೆ 50 ಪ್ಯಾಕ್‌ಗಳನ್ನೂ ಮಾರಾಟ ಮಾಡಲು ಕಷ್ಟಪಡುತ್ತಿದ್ದ ಉದ್ಯಮ ಇಂದು ದೊಡ್ಡ ಮಟ್ಟಕ್ಕೆ ಬೆಳೆದಿದೆ.
ವರದಿಯ ಪ್ರಕಾರ, PVR Foods ಈಗ ವರ್ಷಕ್ಕೆ ಸುಮಾರು ₹3 ಕೋಟಿ ಆದಾಯ ಗಳಿಸುತ್ತಿದೆ. ಪ್ರೊಫೆಸರ್ ಹುದ್ದೆಯಿಂದ ಉದ್ಯಮಿಯಾಗಿ ಬದಲಾಗಿದ ಶೂಭದ್ರಾ ಅವರ ಈ ಪ್ರಯಾಣ, ಹೊಸ ಉದ್ಯಮ ಆರಂಭಿಸಲು ಬಯಸುವವರಿಗೆ ಪ್ರೇರಣೆಯಾಗುವಂತಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.