ಹಳದಿ ಹಲ್ಲಿಗೆ ನೀಡಿ ಮುಕ್ತಿ, ಪಡೆಯಿರಿ ಬಿಳಿ ದಂತಪಂಕ್ತಿ

By Web DeskFirst Published Jul 10, 2019, 5:04 PM IST
Highlights
ಕಲೆಗಳನ್ನು ತೆಗೆದು ಹಲ್ಲುಗಳನ್ನು ಬಿಳಿಯಾಗಿಸುವ ಸುಲಭ ವಿಧಾನಗಳನ್ನು ಮನೆಯಲ್ಲೇ ಟ್ರೈ ಮಾಡಬಹುದು. ಇವು ಪರಿಣಾಮಕಾರಿಯಷ್ಟೇ ಅಲ್ಲ, ಅಡ್ಡಪರಿಣಾಮಗಳೂ ಇಲ್ಲ. ಸ್ವಚ್ಛ, ಸುಂದರ ಶ್ವೇತ ದಂತಪಂಕ್ತಿ ಬೇಕೆಂದರೆ ಹೀಗೆ ಮಾಡಿ...
ಪಾಚಿಗಟ್ಟಿದ ಹಳದಿ ಹಲ್ಲುಗಳು ಕಾಣುವ ಭಯಕ್ಕೆ ನಗುವನ್ನೇ ಅಡಗಿಸುತ್ತಿದ್ದೀರಾ? ಹಲ್ಲಿದ್ದೂ ಬಳಸಲಾಗದೆ ಮುಚ್ಚಿದ ಬಾಯಲ್ಲೇ ನಗುವುದನ್ನು ಅಭ್ಯಾಸ ಮಾಡಿಕೊಂಡಿದ್ದೀರಾ? ದಂತವೈದ್ಯರಿಗೆ ಸಾವಿರಾರು ರೂಪಾಯಿ ಸುರಿಯುವ ಮನಸ್ಸಿಲ್ಲದೆ ಹಳದಿ ಹಲ್ಲೇ ನನ್ನ ನಲ್ಲೆ ಎಂದು ಒಪ್ಪಿಕೊಂಡುಬಿಟ್ಟಿದ್ದೀರಾ? ವೈಟನಿಂಗ್ ಪ್ರಾಡಕ್ಟ್‌ಗಳ ಬಳಸೋಕೆ ಕೆಮಿಕಲ್ಸ್ ಭಯವೇ? ಮನೆಯಲ್ಲೇ ಮದ್ದಿಟ್ಟುಕೊಂಡು ಇಷ್ಟೆಲ್ಲ ಮುಜುಗರ ಅನುಭವಿಸುವುದೇಕೆ? ಹೌದು, ಈ ಔಷಧಗಳು ಹಣ ಉಳಿಸುತ್ತವೆ, ಖಂಡಿತಾ ನಿಮ್ಮ ಮುಖದಲ್ಲಿ ಮತ್ತೆ ನಗು ತರಿಸುತ್ತವೆ. 

ಉಪ್ಪು ಮತ್ತು ನಿಂಬೆ
ಒಂದು ಚಮಚ ಉಪ್ಪನ್ನು ಬಟ್ಟಲಿಗೆ ಹಾಕಿ. ಇದಕ್ಕೆ ಎರಡು ಚಮಚ ನಿಂಬೆರಸ ಸೇರಿಸಿ. ಚೆನ್ನಾಗಿ ಮಿಕ್ಸ್ ಮಾಡಿ. ನಿಮ್ಮ ಬ್ರಶ್ ತೆಗೆದುಕೊಂಡು ಈ ಮಿಶ್ರಣ ಹಾಕಿಕೊಂಡು ಕನಿಷ್ಠ 5 ನಿಮಿಷ ಚೆನ್ನಾಗಿ ಹಲ್ಲುಗಳನ್ನು ತಿಕ್ಕಿ. ನೀರಿನಲ್ಲಿ ತೊಳೆಯಿರಿ. ಪ್ರತಿ ಎರಡು ದಿನಗಳಿಗೊಮ್ಮೆ ಮಾಡಿ ನೀವೇ ಫಲಿತಾಂಶ ಕಂಡುಕೊಳ್ಳಿ.
ನಿಂಬೆರಸದ ಬ್ಲೀಚಿಂಗ್ ಗುಣ ಹಾಗೂ ಉಪ್ಪಿನಲ್ಲಿರುವ ಎಕ್ಸ್‌ಫೋಲಿಯೇಶನ್ ಗುಣ ಸೇರಿ ಹಲ್ಲಿನಿಂದ ಹಳದಿ ಬಣ್ಣ ತೆಗೆದು ಬಿಳಿಯಾಗಿಸುತ್ತವೆ.


ಬೇಕಿಂಗ್ ಸೋಡಾ ಮತ್ತು ನಿಂಬೆರಸ
ಬೇಕಿಂಗ್ ಸೋಡಾ 1 ಚಮಚ ಬಟ್ಟಲಿಗೆ ಹಾಕಿ ಅದಕ್ಕೆ 1 ಚಮಚ ನಿಂಬೆರಸ ಸೇರಿಸಿ. ಚೆನ್ನಾಗಿ ಬೆರೆಸಿ. ಈಗ ನಿಮ್ಮ ಟೂತ್‌ಬ್ರಶ್ಶನ್ನು ಇದಕ್ಕೆ ಅದ್ದಿ 3ರಿಂದ  5 ನಿಮಿಷಗಳ ಹಲ್ಲನ್ನು ಚೆನ್ನಾಗಿ  ತಿಕ್ಕಿ. ಹೆಚ್ಚು ಸಮಯ ತಿಕ್ಕಿದಷ್ಟೂ ಬೇಗ ಫಲಿತಾಂಶ ಕಾಣಬಹುದು. ಒಳ್ಳೆಯ ನೀರಿನಿಂದ ಬಾಯಿ ತೊಳೆಯಿರಿ. ಆರಂಭದಲ್ಲಿ ವಾರಕ್ಕೆರಡು ದಿನದಂತೆಇದನ್ನು ಮಾಡಿ. ನಿಧಾನವಾಗಿ 10 ದಿನಗಳಿಗೊಮ್ಮೆ ಮಾಡಿದರೂ ಸಾಕು.
ಈ ಬೇಕಿಂಗ್ ಸೋಡಾ ಪೇಸ್ಟ್‌ನ ಆ್ಯಂಟಿಸೆಪ್ಟಿಕ್ ಗುಣವು ಹಲ್ಲುಗಳಿಂದ ಸೂಕ್ಷ್ಮಾಣುಗಳನ್ನು ದೂರವಿಡುತ್ತದೆ. ನಿಂಬೆರಸದ ಬ್ಲೀಚಿಂಗ್ ಗುಣ ಹಲ್ಲನ್ನು ಬಿಳಿಯಾಗಿಸುತ್ತದೆ.
 

ವಿಸ್ಡಮ್ ಟೂತ್ ತೆಗೆಸಿಕೊಳ್ಳದಿದ್ದಲ್ಲಿ ಬುದ್ಧಿ ಕಡಿಮೆಯಾಗುತ್ತಾ?
ಆ್ಯಪಲ್ ಸೈಡರ್ ವಿನೆಗರ್
ಒಂದು ಲೋಟ ನೀರಿಗೆ ಅರ್ಧ ಚಮಚ ಆ್ಯಪಲ್ ಸೈಡರ್ ವಿನೆಗರ್ ಹಾಕಿ. ಚಮಚದಿಂದ ಚೆನ್ನಾಗಿ ಬೆರೆಸಿ. ಈ ನೀರಿನಿಂದ  ಬಾಯಿಯನ್ನು ಚೆನ್ನಾಗಿ ಮುಕ್ಕಳಿಸಿ. ಅರ್ಧ ಗಂಟೆ ಬಳಿಕ ನಿಮ್ಮ ಟೂತ್‌ಪೇಸ್ಟ್‌ನಿಂದ ಹಲ್ಲನ್ನು ತಿಕ್ಕಿ ತೊಳೆಯಿರಿ. ಪ್ರತಿ ಎರಡು ದಿನಗಳಿಗೊಮ್ಮೆ ಹೀಗೆ ಗಾರ್ಗಲ್ ಮಾಡಿ.
ಈ ಮಿಶ್ರಣವು ಅಸಿಡಿಕ್ ಗುಣ ಹೊಂದಿರುವುದರಿಂದ ಹಲ್ಲಿನಿಂದ ಹಳದಿ ಕಲೆ, ಕೊಳೆ ಹಾಗೂ ಹುಳುಗಳನ್ನು ತೆಗೆಯುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.


ಮೌತ್‌ವಾಷ್ ಬಳಸೋದು ಹೇಗೆ?

ಆರ್ಗ್ಯಾನಿಕ್ ಕೊಬ್ಬರಿ ಎಣ್ಣೆ
ಆರ್ಗ್ಯಾನಿಕ್ ಕೊಬ್ಬರಿ ಎಣ್ಣೆಯನ್ನು ಕೈಯ್ಯಲ್ಲಿ ತೆಗೆದುಕೊಂಡು ನಿಮ್ಮ ಹಲ್ಲುಗಳಿಗೆ ಚೆನ್ನಾಗಿ ಸವರಿ. ಕೆಲ ನಿಮಿಷಗಳವರೆಗೆ ಬೆರಳಿನಿಂದ ತಿಕ್ಕಿ. ನುಂಗದಿರುವಂತೆ ಎಚ್ಚರ ವಹಿಸಿ. ನಂತರ ನೀರಿನಿಂದ ಬಾಯಿ  ಮುಕ್ಕಳಿಸಿ. ಬಳಿಕ ನಿಮ್ಮ ರೆಗುಲರ್ ಟೂತ್‌ಪೇಸ್ಟ್‌ನಿಂದ ಹಲ್ಲು ತಿಕ್ಕಿ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ಪ್ರತಿದಿನ ಕೊಬ್ಬರಿಎಣ್ಣೆ ಬಳಸಬಹುದು.
ಆರ್ಗ್ಯಾನಿಕ್ ಕೊಬ್ಬರಿ ಎಣ್ಣೆಯಲ್ಲಿ ಲಾರಿಕ್ ಆ್ಯಸಿಡ್ ಇದ್ದು, ಇದು ಹಲ್ಲನ್ನು ಹಳದಿ ಮಾಡುವ ಕೀಟಾಣುಗಳನ್ನು ಕೊಲ್ಲುತ್ತದೆ. ಆ ಮೂಲಕ ನಿಮ್ಮ ಉಸಿರನ್ನು ಫ್ರೆಶ್ ಆಗಿಸಿ, ಹಲ್ಲುಗಳನ್ನು ಬೆಳ್ಳಗಾಗಿಸುತ್ತದೆ.


ಬಾಳೆಹಣ್ಣಿನ ಸಿಪ್ಪೆ
ಬಾಳೆಹಣ್ಣು ತೆಗೆದುಕೊಂಡು ಸಿಪ್ಪೆ ಬಿಡಿಸಿ ಹಣ್ಣನ್ನು ತಿಂದು ಬಿಡಿ. ಈಗ ಉಳಿದ ಸಿಪ್ಪೆಯ ಒಳಗಿನ ಭಾಗದಿಂದ ಹಲ್ಲುಗಳನ್ನು ಚೆನ್ನಾಗಿ ತಿಕ್ಕಿ. ಸ್ವಚ್ಛ ನೀರಿನಿಂದ ಬಾಯಿ ಮುಕ್ಕಳಿಸಿ. 
ಬಾಳೆಹಣ್ಣಿನ ಸಿಪ್ಪೆಯಲ್ಲಿ ಪೊಟ್ಯಾಶಿಯಂ ಹಾಗೂ ಮ್ಯಾಂಗನೀಸ್ ಹೇರಳವಾಗಿದ್ದು, ಅದು ನೈಸರ್ಗಿಕವಾಗಿ ಹಲ್ಲುಗಳನ್ನು ಬಿಳಿಯಾಗಿಸುತ್ತದೆ. 


ಸ್ಟ್ರಾಬೆರಿ
ಸ್ಟ್ರಾಬೆರಿ ಹಣ್ಣನ್ನು ಹೆಚ್ಚಿ ಅದನ್ನು ಬೇಕಿಂಗ್ ಸೋಡಾದಲ್ಲಿ ಅದ್ದಿ. ಇದನ್ನು ಎಲ್ಲ ಹಲ್ಲುಗಳ ಮೇಲೂ ಚೆನ್ನಾಗಿ ಮಸಾಜ್ ಮಾಡಿ. ಬಳಿಕ ಸ್ವಚ್ಛ ನೀರಿನಿಂದ ಬಾಯಿ ಮುಕ್ಕಳಿಸಿ.
ಸ್ಟ್ರಾಬೆರಿ ಹಣ್ಣಿನಲ್ಲಿರುವ ಮಾಲಿಕ್ ಆ್ಯಸಿಡ್ ಹಲ್ಲಿನ ಮಾಸಿದ ಬಣ್ಣವನ್ನು ಸರಿಪಡಿಸುತ್ತದೆ. ಬೇಕಿಂಗ್ ಸೋಡಾ ಎಕ್ಸ್‌ಫೋಲಿಯೇಟ್ ಮಾಡುತ್ತದೆ. 
ಇಷ್ಟೇ ಅಲ್ಲದೆ, ಭವಿಷ್ಯದಲ್ಲಿ ಹಲ್ಲುಗಳು ಬಣ್ಣ ಕಳೆದುಕೊಳ್ಳದಂತೆ ನೋಡಿಕೊಳ್ಳಲು ಕಾಫಿ, ಟೀ, ಸಕ್ಕರೆ, ವೈನ್, ತಂಬಾಕು ಹಾಗೂ ಸೋಡಾ ಸೇವನೆ ಮಿತಿಗೊಳಿಸಿ. ಕ್ಯಾಲ್ಶಿಯಂಭರಿತ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಿ. ದಿನಕ್ಕೆರಡು ಬಾರಿ ಹಲ್ಲನ್ನು ಬ್ರಶ್ ಮಾಡುವುದು ತಪ್ಪಿಸಬೇಡಿ.

click me!