
ಕರೆಂಟ್ ಶಾಕ್ ಹೊಡೆಯೋಕೆ ನೀವು ಕರೆಂಟ್ ಸ್ವಿಚ್ ಅಥವಾ ಕರೆಂಟ್ ಗೆ ಸಂಬಂಧಿಸಿದ ಯಾವುದೇ ವಸ್ತು ಮುಟ್ಟಬೇಕು ಎಂದಿಲ್ಲ. ಅನೇಕ ಬಾರಿ ನೀವು ಬೇರೆ ವ್ಯಕ್ತಿಯನ್ನು ಟಚ್ ಮಾಡಿದ್ರೂ ಚಟ್ ಎನ್ನುವ ಶಬ್ಧ ಬರೋದಲ್ದೆ ನಿಮಗೆ ಶಾಕ್ ಹೊಡೆದ ಅನುಭವವಾಗುತ್ತೆ. ಚಳಿಗಾಲದಲ್ಲಿ ಈ ಶಾಕ್ ಸಮಸ್ಯೆ ಹೆಚ್ಚು. ಅಪರೂಪಕ್ಕೆ ಶಾಕ್ ಹೊಡೆದ್ರೆ ಓಕೆ, ಆಗಾಗ ಹೊಡೆಯುತ್ತಿದ್ರೆ ಟೆನ್ಷನ್ ಆಗೋದು ಸಾಮಾನ್ಯ. ವಿಜ್ಞಾನದಲ್ಲಿ ಇದನ್ನು ಸ್ಟ್ಯಾಟಿಕ್ ಶಾಕ್ ಎಂದು ಕರೆಯಲಾಗುತ್ತದೆ.
ನಾವು ನಡೆಯುವಾಗ ಅಥವಾ ಬಟ್ಟೆಗಳು ದೇಹಕ್ಕೆ ಉಜ್ಜಿದಾಗ ದೇಹದ ಮೇಲ್ಮೈಯಲ್ಲಿ ಹೆಚ್ಚುವರಿ ಎಲೆಕ್ಟ್ರಾನ್ಗಳು, ಅಂದರೆ ನೆಗೆಟಿವ್ ಚಾರ್ಜ್, ಸಂಗ್ರಹವಾಗುತ್ತದೆ. ನಂತರ ನಾವು ಮತ್ತೊಂದು ವಸ್ತು ಅಥವಾ ವ್ಯಕ್ತಿಯನ್ನು ಮುಟ್ಟಿದಾಗ ಈ ಚಾರ್ಜ್ ದೇಹದಿಂದ ವೇಗವಾಗಿ ಮತ್ತೊಂದು ವಸ್ತುವಿಗೆ ವರ್ಗಾವಣೆಯಾಗುತ್ತದೆ. ಈ ಚಾರ್ಜ್ ವೇಗವಾಗಿ ವರ್ಗಾವಣೆಯಾಗುವಾಗ ನಮಗೆ ಸಣ್ಣದಾಗಿ ಕರೆಂಟ್ ಹೊಡೆದಂತೆ ಅಥವಾ ಶಾಕ್ ಆದಂತೆ ಅನುಭವವಾಗುತ್ತದೆ. ಚಳಿಗಾಲದಲ್ಲಿ ಗಾಳಿಯಲ್ಲಿ ತೇವಾಂಶ ಕಡಿಮೆ ಇರುವುದರಿಂದ ಈ ಸ್ಟ್ಯಾಟಿಕ್ ಚಾರ್ಜ್ ಹೆಚ್ಚು ಸಮಯ ದೇಹದ ಮೇಲೆ ಉಳಿಯುತ್ತವೆ.
ಸಾಮಾನ್ಯವಾಗಿ ಇಂತಹ ಸ್ಟ್ಯಾಟಿಕ್ ಶಾಕ್ಗಳು ತುಂಬಾ ಸಣ್ಣ ಪ್ರಮಾಣದಲ್ಲಿರುತ್ತವೆ. ಅದರಿಂದ ಸ್ವಲ್ಪ ಚಕಿತರಾಗಬಹುದು ಅಥವಾ ಸಣ್ಣದಾಗಿ ಚುಚ್ಚಿದಂತಾಗಬಹುದು. ಆದರೆ ಸಾಮಾನ್ಯ ಸ್ಟ್ಯಾಟಿಕ್ ಶಾಕ್ಗಳಿಂದ ದೇಹಕ್ಕೆ ಗಂಭೀರ ಹಾನಿಯಾಗುವುದಿಲ್ಲ.
ಈ ಶಾಕ್‌ನಿಂದ ರಕ್ಷಣೆ ಹೇಗೆ?
ಕೆಲವು ಸರಳ ಕ್ರಮಗಳನ್ನು ಅನುಸರಿಸುವ ಮೂಲಕ ಇವುಗಳನ್ನು ಕಡಿಮೆ ಮಾಡಬಹುದು. ಚಳಿಗಾಲದಲ್ಲಿ ಕೈಗಳು ಮತ್ತು ಚರ್ಮ ಒಣಗುವುದರಿಂದ ಸ್ಟ್ಯಾಟಿಕ್ ಚಾರ್ಜ್ ಸುಲಭವಾಗಿ ಸಂಗ್ರಹವಾಗಬಹುದು. ಹಾಗಾಗಿ ಕೈಗಳಿಗೆ ಮಾಯಿಶ್ಚರೈಸರ್ ಹಚ್ಚುವುದರಿಂದ ಚರ್ಮದ ಒಣತನ ಕಡಿಮೆಯಾಗುತ್ತದೆ. ನೈಲಾನ್, ಪಾಲಿಯೆಸ್ಟರ್ನಂತಹ ಸಿಂಥೆಟಿಕ್ ಬಟ್ಟೆಗಳಲ್ಲಿ ಘರ್ಷಣೆಯಿಂದ ಸ್ಟ್ಯಾಟಿಕ್ ಚಾರ್ಜ್ ಹೆಚ್ಚಾಗಿ ಉಂಟಾಗಬಹುದು. ಸಾಧ್ಯವಾದಷ್ಟು ಹತ್ತಿ ಅಥವಾ ಇತರ ನೈಸರ್ಗಿಕ ಫೈಬರ್ಗಳ ಬಟ್ಟೆಗಳನ್ನು ಧರಿಸುವುದು ಸಹಾಯ ಮಾಡಬಹುದು.
ಕೀಲಿ ಅಥವಾ ಬೇರೆ ಲೋಹದ ವಸ್ತುವನ್ನು ಮುಟ್ಟುವುದರಿಂದ ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಸ್ಟ್ಯಾಟಿಕ್ ಚಾರ್ಜ್ ಹೊರಹೋಗಲು ಸಹಾಯವಾಗುತ್ತದೆ. ಹೀಗಾಗಿ ಚಳಿಗಾಲದಲ್ಲಿ ಪದೇಪದೇ ಸಣ್ಣದಾಗಿ ಕರೆಂಟ್ ಹೊಡೆಯುತ್ತಿದ್ದರೆ ಗಾಬರಿಯಾಗಬೇಕಿಲ್ಲ. ಇದು ಸಾಮಾನ್ಯವಾಗಿ ದೇಹದಲ್ಲಿ ಸಂಗ್ರಹವಾಗುವ ಸ್ಟ್ಯಾಟಿಕ್ ಚಾರ್ಜ್ನಿಂದ ಉಂಟಾಗುವ ಸಣ್ಣ ಶಾಕ್ ಅಷ್ಟೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.