
ಅಬ್ಬಬ್ಬಾ ಈ ಜನಗಳಿಗೆ ಮತ್ತೊಬ್ಬರಿಗೆ ಸಲಹೆ ಕೊಡುವುದೆಂದರೆ ಅದೇನು ಖುಷಿಯೋ... ತಮ್ಮ ಬದುಕಿನ ಬಗ್ಗೆ ನಿಗಾ ಇಲ್ಲದಿದ್ದರೂ ಸರಿ, ಮತ್ತೊಬ್ಬರ ಬದುಕು ಹೇಗೆ ಬದುಕಬೇಕೆಂದು ಸಲಹೆಗಳನ್ನು ಕೊಡುತ್ತಲೇ ಇರುತ್ತಾರೆ. ಅದರಲ್ಲೂ ವಿವಾಹದ ಕುರಿತು ನೀವೇನಾದರೂ ಸಮಸ್ಯೆ ಹೇಳಿಕೊಂಡರೆ ಅದೆಷ್ಟೋ ತಲೆಬುಡವಿಲ್ಲದ ಸಲಹೆಗಳು ಪುಂಖಾನುಪುಂಖವಾಗಿ ಹೊರಬರುತ್ತವೆ. ಆದರೆ, ಜಗತ್ತಿನಲ್ಲೇ ಅತ್ಯುತ್ತಮ ಸಲಹೆ ಎಂದರೆ ಸಲಹೆಗಳನ್ನು ಕೊಡುವುದನ್ನು ಬಿಡಿ ಎಂಬುದು! ಅದನ್ನೇ ಹೇಳಿ ಬೇಕಾದಂತೆ ಬಾಳಿ. ವಿವಾಹ ಸಂಬಂಧಿ ಸಾಮಾನ್ಯವಾಗಿ ಕೇಳಿಬರುವ ಈ ಸಲಹೆಗಳಿಗೆ ಕಿವಿಗೊಡಬೇಡಿ.
'ಸೆಕ್ಸ್ ಇಲ್ಲವೆಂದರೆ ಏನೂ ಪರವಾಗಿಲ್ಲ'
ಸೀರಿಯಸ್ಲಿ? ಇಂಥ ಮಾತು ನಿಮ್ಮ ವೆಲ್ ವಿಶರ್‌ಗಳಿಂದ ಬಂದಾಗ ಮನಸ್ಸಿನಲ್ಲೇ ಅವರಿಗೊಂದು ಡಿಚ್ಚಿ ಕೊಡಿ. ಸೆಕ್ಸ್ ಲೈಫ್ ವೈವಾಹಿಕ ಜೀವನದಲ್ಲಿ ಹಲವು ರೀತಿಯಲ್ಲಿ ಮುಖ್ಯವಾಗುತ್ತದೆ. ಇದು ಸರಿಯಿರದಿದ್ದರೆ ಹತ್ತು ಹಲವು ಸಮಸ್ಯೆಗಳು ಎದುರಾಗಬಹುದು. ಸೆಕ್ಸ್ ಲೈಫ್ ಚೆನ್ನಾಗಿದ್ದಾಗ ಸಂಗಾತಿಯೊಂದಿಗೆ ಮಾನಸಿಕ ಸಾಮೀಪ್ಯತೆಯೂ ಹೆಚ್ಚಿರುತ್ತದೆ. ನಿಮ್ಮ ಸಂಬಂಧದಲ್ಲಿ ಸೆಕ್ಸ್ ಲೈಫ್ ಸರಿಯಾಗುತ್ತಿಲ್ಲವೆಂದರೆ ಇತರರ ಬಳಿ ಹೇಳಿಕೊಳ್ಳುವ ಬದಲು ನಿಮ್ಮ ಸಂಗಾತಿಯೊಂದಿಗೆ ಹೇಳಿಕೊಳ್ಳಿ. ಈ ಬಗ್ಗೆ ಏನು ಮಾಡಬಹುದೆಂದು ಇಬ್ಬರೂ ಕುಳಿತು ಮಾತನಾಡಿ. ಸಣ್ಣ ಪುಟ್ಟ ಸಮಸ್ಯೆಗಳಿದ್ದಾಗ ಕೌನ್ಸೆಲರನ್ನು ಭೇಟಿಯಾಗಿ.
'ನೀವಿಬ್ಬರೂ ಜೊತೆಗೆ ಕಳೆವ ಕ್ಷಣಗಳನ್ನು ವಿಶೇಷವಾಗಿಸಿ'
ನೀವಿಬ್ಬರೂ ಜೊತೆಯಾಗಿದ್ದಾಗೆಲ್ಲ ಏನಾದರೂ ವಿಶೇಷವಾದದ್ದನ್ನೇ ಮಾಡಬೇಕೆಂಬ ಸಲಹೆ ತಲೆಯ ಮೇಲೆ ಸದಾ ಬೇತಾಳ ಹತ್ತಿ ಕೂತಂತೆ ಭಾರ ಹೊರಿಸುತ್ತದೆ. ಕ್ಯಾಂಡಲ್ ಲೈಟ್ ಡಿನ್ನರ್ ಮಾಡಿ, ಆಗಾಗ ಸರ್ಪ್ರೈಸ್ ಕೊಡಿ, ಹೀಗೆ ಸದಾ ಮ್ಯಾಜಿಕಲ್ ಆಗಿರುವುದನ್ನೇ ಮಾಡಬೇಕೆನ್ನುವುದು ಸ್ವಲ್ಪವೇ ಸಮಯದಲ್ಲಿ ಒತ್ತಡವೆನಿಸತೊಡಗುತ್ತದೆ. ಅದಕ್ಕಿಂತ ನಿಮಗೆ ವಿಶೇಷವಾದ ಸಂಗಾತಿಯೊಂದಿಗಿರುವುದೇ ಎಲ್ಲಕ್ಕಿಂತ ಮುಖ್ಯ ಎಂದುಕೊಂಡರೆ ಸರಳವಾಗಿ ಸಮಸ್ಯೆಗಳು ಪರಿಹಾರ ಕಾಣುತ್ತವೆ. ಪ್ರೀತಿಯಿದ್ದಾಗ ಇಬ್ಬರೂ ಸೇರಿ ಕೆಲಸ ಹಂಚಿಕೊಂಡು ಮಾಡುವುದು, ವಾಕ್ ಹೋಗುವುದು- ಇವೆಲ್ಲವೂ ವಿಶೇಷವೆನಿಸುತ್ತವೆ. ಬೇಕಿದ್ದರೆ ತಿಂಗಳಿಗೊಮ್ಮೆ ಮೂವಿ, ಟ್ರಿಪ್ ಏನಾದರೂ ಪ್ಲ್ಯಾನ್ ಮಾಡಬಹುದು.
ಈ ವಿಷ್ಯದಲ್ಲಿ ಬಡಪಾಯಿ ಹುಡುಗರನ್ನು ಅರ್ಥ ಮಾಡಿಕೊಳ್ಳೋದು ಕಷ್ಟ
'ಒಂದು ಮಗುವಾದರೆ ಎಲ್ಲ ಸರಿಯಾಗುತ್ತದೆ'
ಇದಂತೂ ಬುಲ್‌ಶಿಟ್. ಇದಕ್ಕಿಂತ ದಾರಿ ತಪ್ಪಿಸುವ ಸಲಹೆ ಮತ್ತೊಂದಿರಲಿಕ್ಕಿಲ್ಲ. ಸಂಬಂಧದಲ್ಲಿ ಗಂಭೀರ ಸಮಸ್ಯೆಗಳಿದ್ದರೆ ಅವನ್ನು ಬಗೆಹರಿಸಿಕೊಳ್ಳದೆ ಮಗುವಿನತ್ತ ಗಮನ ಹರಿಸಲೇಬೇಡಿ. ಒಂದು ವೇಳೆ ಪರಿಹಾರವೆಂದು ಮಗು ಮಾಡಿಕೊಂಡರೆ ಸಮಸ್ಯೆ ಮತ್ತಷ್ಟು ಹೆಚ್ಚಿ ಬಿಡಿಸಲಾರದ ಕಗ್ಗಂಟಾದೀತು. ಮಗುವೆಂಬುದು ದೊಡ್ಡ ಜವಾಬ್ದಾರಿ. ನಿಮ್ಮ ಜವಾಬ್ದಾರಿ ಸಮಸ್ಯೆಗಳನ್ನೇ ನಿಮ್ಮಿಂದ ನಿಭಾಯಿಸಲಾಗದಿದ್ದರೆ ಮತ್ತೊಂದು ಜೀವದ ಬೇಕುಬೇಡಗಳನ್ನು ಪೂರ್ತಿ ಸಮಯ ಕೊಟ್ಟು ನೋಡಿಕೊಳ್ಳಬಲ್ಲಿರೇ? ಸಮಸ್ಯೆ ಬಹಳಷ್ಟು ದೊಡ್ಡದೇ ಆಗಿದ್ದರೆ ನೀವಿಬ್ಬರೂ ಒಟ್ಟಿರಬೇಕೇ ಬೇಡವೇ ಎಂದು ಯೋಚಿಸಬೇಕೇ ಹೊರತು ಮಗುವಿನ ಕುರಿತಲ್ಲ.
ಮುಲಾಜಿಗೆಲ್ಲ ಮದ್ವೆ ಆಗ್ಬೇಡಿ
'ಕೌನ್ಸೆಲರ್‌ಗಳಿಂದ ಏನೂ ಪ್ರಯೋಜನವಿಲ್ಲ'
ತಮ್ಮನ್ನು ತಾವೇ ಕೌನ್ಸೆಲರ್‌ಗಳೆಂದು ತಿಳಿದು ಬಿಟ್ಟಿ ಸಲಹೆ ನೀಡುವವರು ಇಂಥ ಸಲಹೆಗಳನ್ನು ನೀಡುವುದ ಹೇಗೆ ಒಪ್ಪಲಾಗುತ್ತದೆ ಅಲ್ಲವೇ? ನೀವಿಬ್ಬರೂ ನಿಮ್ಮದೇ ಮೂಗಿನ ನೇರಕ್ಕೆ ಯೋಚಿಸುವಾಗ ಕೌನ್ಸೆಲರ್ ಇಬ್ಬರಿಗೂ ಮತ್ತೊಂದು ದಿಕ್ಕಿನಿಂದಲೂ ನೋಡಲು ಸಹಾಯ ಮಾಡುತ್ತಾರೆ. ಸಮಸ್ಯೆಯನ್ನು ಎಲ್ಲ ದಿಕ್ಕಿನಿಂದ ನೋಡಿದಾಗಲೇ ಸರಿಯಾದ ಪರಿಹಾರ ಸಾಧ್ಯ. ಇಬ್ಬರಿಗೂ ಸಮಸ್ಯೆ ಪರಿಹರಿಸಿಕೊಳ್ಳುವ ಮನಸ್ಸಿರಬೇಕಷ್ಟೇ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.