
ಇತ್ತೀಚೆಗೆ ಲಖನೌ ಮೆಟ್ರೋ ಉದ್ಘಾಟನೆಗೊಂಡಿತು. ಉತ್ತರಪ್ರದೇಶದಲ್ಲಿ ಪಾನ್ ತಿನ್ನುವುದು ಬಲು ಮಾಮೂಲಿ. ಮೆಟ್ರೋ ಆರಂಭವಾದ ದಿನವೇ ರೈಲಿನಲ್ಲಿ, ನಿಲ್ದಾಣದಲ್ಲಿ ಪಾನ್ ಉಗುಳಿದ ಕಲೆಗಳು ಪತ್ತೆಯಾಗಿ ಯೋಗಿ ಆದಿತ್ಯನಾಥ ಸರ್ಕಾರಕ್ಕೆ ಮುಜುಗರ ಆಗಿತ್ತು.
ಆದರೆ ಈಗ ಇನ್ನೆರಡು ವಿಡಿಯೋಗಳು ಹರಿದಾಡತೊಡಗಿವೆ. ಅವೆಂದರೆ ಮೆಟ್ರೋದಲ್ಲಿ ಕೆಲ ವಯಸ್ಕ ಮಹಿಳೆಯರು ಸಾಂಪ್ರದಾಯಿಕ ನೃತ್ಯ ಮಾಡುತ್ತಿರುವುದು. ಇನ್ನೊಂದು ವೃದ್ಧನೊಬ್ಬ ರೈಲಿನಲ್ಲಿ ಮೂತ್ರ ಮಾಡುತ್ತಿರುವುದು. ಈ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆಯೇ ಅವು ನಿಜವೇ ಅಥವಾ ನಕಲಿಯೇ ಎಂಬ ಗುಮಾನಿ ಅನೇಕರಲ್ಲಿ ಮೂಡಿತು. ಹಾಗಿದ್ದಾಗ ಇವುಗಳ ಅಸಲಿತನ ಬಹಿರಂಗಪಡಿಸಲು ಲಖನೌ ಮೆಟ್ರೋದ ಮುಖ್ಯಸ್ಥರನ್ನೇ ಪತ್ರಕರ್ತರು ‘ಭೇಟಿ ಮಾಡಿದರು. ಮೊಬೈಲ್ ನಲ್ಲಿ ಯಾರೋ ಹಾಕಿದ ವಿಡಿಯೋಗಳ ಅಸಲಿತನ ಬಯಲಾಗಬೇಕೆಂದರೆ ಮೆಟ್ರೋದಲ್ಲಿನ ಸೀಸಿ ಕ್ಯಾಮರಾಗಳನ್ನು ಪರಿಶೀಲಿಸಿ ಎಂದು ಮುಖ್ಯಸ್ಥರನ್ನು ಪತ್ರಕರ್ತರು ಕೋರಿದರು.
ಆದರೆ ಇವುಗಳ ಅಸಲಿತನ ಪರಿಶೀಲಿಸಹೊರಟಾಗ ಮಹಿಳೆಯರ ನೃತ್ಯದ ವಿಡಿಯೋ ದಿಲ್ಲಿ ಮೆಟ್ರೋದ್ದು ಎಂದು ಸಾಬೀತಾಯಿತು. 10 ತಿಂಗಳ ಹಿಂದೆಯೇ ಬಿಡುಗಡೆಯಾಗಿದ್ದ ವಿಡಿಯೋದಲ್ಲಿ ಕುತುಬ್ ಮಿನಾರ್ ನಿಲ್ದಾಣ ಎಂಬ ಬರಹ ಕಾಣುತ್ತದೆ. ಹೀಗಾಗಿ ಇದು ಲಖನೌದಲ್ಲಿ ಎಂದು ತಿಳಿದುಬಂತು. ಇನ್ನು ಸಿಸಿಟೀವಿಗಳನ್ನು ಪರಿಶೀಲಿಸಿದಾಗ ವೃದ್ಧ ಮೂತ್ರ ಮಾಡುತ್ತಿರುವ ಯಾವುದೇ ದೃಶ್ಯ ಕ್ಯಾಮರಾದಲ್ಲಿ ದಾಖಲಾಗಿದ್ದು ಕಂಡುಬರಲಿಲ್ಲ. ಹೀಗಾಗಿ ಕೆಲ ಕುತಂತ್ರಿಗಳು ಮೆಟ್ರೋಗೆ ಕೆಟ್ಟ ಹೆಸರು ತರಲು ಇಂಥ ಕುಚೋದ್ಯ ಮಾಡಿದ್ದು ರುಜುವಾತಾಯಿತು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.