ಲವ್ ಮ್ಯಾರೇಜ್ ಆದ ಮೇಲೆ.. ಪ್ರೇಮ ವಿವಾಹದಲ್ಲಿ ಕಾಡುವ ಕಹಿ ಸತ್ಯಗಳು ಇವು..

Published : Aug 11, 2026, 08:47 PM IST
Marriage

ಸಾರಾಂಶ

ಪ್ರೀತಿಸಿದವರನ್ನೇ ಮದುವೆಯಾಗುವುದು ಜೀವನದ ದೊಡ್ಡ ಖುಷಿ ಎಂದು ಅನೇಕರು ಭಾವಿಸುತ್ತಾರೆ. ಆದರೆ, ಮದುವೆಗೆ ಮುನ್ನ ಸಿನಿಮೀಯವಾಗಿ ಸುಂದರವಾಗಿ ಕಾಣುವ ಈ ಜೀವನ, ಮದುವೆಯ ನಂತರ ಹೂವಿನ ಹಾಸಿಗೆಯಾಗಿರುವುದಿಲ್ಲ. ಏನೆಲ್ಲ ಸಮಸ್ಯೆ ಎದುರಿಸುತ್ತಾರೆ ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

ಇಂದಿನ ಕಾಲದಲ್ಲಿ ಪ್ರೇಮ ವಿವಾಹಗಳ (Love Marriage) ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಪ್ರೀತಿಸಿದವರನ್ನೇ ಮದುವೆಯಾಗುವುದು ಜೀವನದ ದೊಡ್ಡ ಖುಷಿ ಎಂದು ಅನೇಕರು ಭಾವಿಸುತ್ತಾರೆ. ಮದುವೆಗೆ ಮುನ್ನ ಸಿನಿಮೀಯವಾಗಿ ಸುಂದರವಾಗಿ ಕಾಣುವ ಈ ಜೀವನ ನಂತರ ಹೂವಿನ ಹಾಸಿಗೆಯಾಗಿರುವುದಿಲ್ಲ.

ಪ್ರೀತಿಸಿ ಮದುವೆಯಾದ ಎಷ್ಟೋ ದಂಪತಿ ಕೆಲವೇ ವರ್ಷಗಳಲ್ಲಿ ಒಬ್ಬರಿಗೊಬ್ಬರು ಬೇಸತ್ತು ದೂರವಾಗುವುದನ್ನು ನಾವು ನೋಡಿದ್ದೇವೆ. ಹಾಗಾದರೆ ಪ್ರೇಮ ವಿವಾಹವಾದ ದಂಪತಿ ಎದುರಿಸುವ ಆ ಪ್ರಮುಖ ಸಮಸ್ಯೆಗಳ ವಿವರ ಹೀಗಿದೆ..

ಮನೆಯವರ ಅಸಮಾಧಾನ ಮತ್ತು ವಿರೋಧ

ಹೆಚ್ಚಿನ ಪ್ರೇಮ ವಿವಾಹಗಳು ಮನೆಯವರ ಇಚ್ಛೆಗೆ ವಿರುದ್ಧವಾಗಿ ನಡೆಯುತ್ತವೆ. ಅಂತಹ ಸಂದರ್ಭದಲ್ಲಿ ಅತ್ತೆ-ಮಾವ ಅಥವಾ ಮನೆಯವರು ಸೊಸೆ ಅಥವಾ ಅಳಿಯನನ್ನು ಮನಸಾರೆ ಒಪ್ಪಿಕೊಳ್ಳಲು ಕಷ್ಟಪಡುತ್ತಾರೆ. ಮನೆಯವರ ಈ ಅಸಮಾಧಾನವು ದಂಪತಿ ನಡುವಿನ ನೆಮ್ಮದಿಯನ್ನು ಹಾಳುಮಾಡುತ್ತದೆ. ಸಂಬಂಧವನ್ನು ಸುಧಾರಿಸಲು ದಂಪತಿ ವರ್ಷಗಟ್ಟಲೆ ಹೋರಾಡಬೇಕಾಗುತ್ತದೆ.

ಸಂಗಾತಿಯ ಹವ್ಯಾಸಗಳು ಕಿರಿಕಿರಿ ಎನಿಸುವುದು

ಮದುವೆಗೆ ಮುನ್ನ ಸಂಗಾತಿಯ ಪ್ರತಿಯೊಂದು ಮಾತೂ, ನಡೆಯೂ ಅದ್ಭುತವಾಗಿ ಕಾಣಿಸುತ್ತದೆ. ಆದರೆ ಮದುವೆಯಾಗಿ ಒಂದೇ ಮನೆಯಲ್ಲಿ ವಾಸಿಸಲು ಶುರು ಮಾಡಿದಾಗ ಅವರ ಸಣ್ಣಪುಟ್ಟ ಅಭ್ಯಾಸಗಳೂ (ಉದಾಹರಣೆಗೆ ಮಲಗುವ ರೀತಿ, ಸ್ವಚ್ಛತೆ ಇಲ್ಲದಿರುವುದು) ದೊಡ್ಡ ಜಗಳಕ್ಕೆ ಕಾರಣವಾಗುತ್ತವೆ. ಮದುವೆಯ ನಂತರ ಸಂಗಾತಿ ಬದಲಾಗುತ್ತಾರೆ ಎಂಬ ಅತಿಯಾದ ನಿರೀಕ್ಷೆಯೇ ಇಲ್ಲಿ ಮುಳುವಾಗುತ್ತದೆ.

ಹಣಕಾಸಿನ ಜವಾಬ್ದಾರಿ ಮತ್ತು ಜಗಳ

ಪ್ರೀತಿಯಲ್ಲಿರುವಾಗ ಹಣದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ದಂಪತಿಗೆ ಮದುವೆಯ ನಂತರ ವಾಸ್ತವದ ಅರಿವಾಗುತ್ತದೆ. ಮನೆ ಬಾಡಿಗೆ, ದಿನಸಿ, ಉಳಿತಾಯ ಮತ್ತು ಹೂಡಿಕೆಯಂತಹ ವಿಷಯಗಳಲ್ಲಿ ಇಬ್ಬರ ಆಲೋಚನೆಗಳು ಭಿನ್ನವಾಗಿದ್ದಾಗ ಹಣದ ವಿಚಾರದಲ್ಲಿ ಪದೇ ಪದೇ ಕಿರಿಕಿರಿ ಉಂಟಾಗುತ್ತದೆ. ಒಬ್ಬರು ವಿಪರೀತ ಖರ್ಚು ಮಾಡುವವರಾಗಿದ್ದರೆ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತದೆ.

ಸಂಸ್ಕೃತಿ ಮತ್ತು ಜೀವನಶೈಲಿಯ ವ್ಯತ್ಯಾಸ

ಲವ್ ಮ್ಯಾರೇಜ್‌ನಲ್ಲಿ ದಂಪತಿ ಬೇರೆ ಬೇರೆ ಹಿನ್ನೆಲೆ ಅಥವಾ ಸಂಸ್ಕೃತಿಯಿಂದ ಬಂದಿರುತ್ತಾರೆ. ಆರಂಭದಲ್ಲಿ ಇದು ಆಕರ್ಷಕವಾಗಿ ಕಂಡರೂ ದಿನನಿತ್ಯದ ಬದುಕಿನಲ್ಲಿ ಆಹಾರ ಪದ್ಧತಿ, ಹಬ್ಬಗಳ ಆಚರಣೆ ಮತ್ತು ಸಂಪ್ರದಾಯಗಳ ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಮೂಡುತ್ತವೆ. ಈ ಸಣ್ಣ ಭಿನ್ನಾಭಿಪ್ರಾಯಗಳು ನಂತರ ದೊಡ್ಡ ಮನಸ್ತಾಪಕ್ಕೆ ದಾರಿ ಮಾಡಿಕೊಡುತ್ತವೆ.

ವೈಯಕ್ತಿಕ ಸ್ವಾತಂತ್ರ್ಯದ ಕೊರತೆ

ಬ್ಯಾಚುಲರ್ ಲೈಫ್‌ನಲ್ಲಿ ತಮಗೆ ಇಷ್ಟ ಬಂದಂತೆ ಬದುಕುತ್ತಿದ್ದವರಿಗೆ ಮದುವೆಯ ನಂತರದ ಬಂಧನಗಳು ಕಷ್ಟವೆನಿಸಬಹುದು. ಪ್ರತಿಯೊಂದು ಸಣ್ಣ ನಿರ್ಧಾರಕ್ಕೂ ಸಂಗಾತಿಯನ್ನು ಕೇಳಬೇಕಾದಾಗ ಅಥವಾ ಅವರ ಅನುಮತಿ ಪಡೆಯಬೇಕಾದಾಗ ತಮ್ಮ ಸ್ವಾತಂತ್ರ್ಯ ಕಳೆದುಹೋಗುತ್ತಿದೆ ಎಂಬ ಭಾವನೆ ಮೂಡುತ್ತದೆ. ಇದು ದಾಂಪತ್ಯದಲ್ಲಿ ಉಸಿರುಗಟ್ಟಿಸುವ ವಾತಾವರಣ ನಿರ್ಮಿಸಬಹುದು.

ಸಮಾಜದ ಟೀಕೆಗಳು ಮತ್ತು ಒತ್ತಡ

ನಾವು ಎಷ್ಟೇ ಮುಂದುವರಿದಿದ್ದರೂ ಇಂದಿಗೂ ಸಮಾಜವು ಪ್ರೇಮ ವಿವಾಹಗಳನ್ನು (ವಿಶೇಷವಾಗಿ ಅಂತರ್ಜಾತಿ ಅಥವಾ ಬೇರೆ ಧರ್ಮದ ವಿವಾಹ) ಸಂಶಯದ ದೃಷ್ಟಿಯಿಂದಲೇ ನೋಡುತ್ತದೆ. ದಂಪತಿಗಳ ನಡುವೆ ಏನಾದರೂ ಸಣ್ಣ ಜಗಳವಾದರೂ ನಾವೇ ಹೇಳಿದ್ವಲ್ಲಾ, ಇವರ ಮದುವೆ ಉಳಿಯಲ್ಲ ಅಂತ ಎನ್ನುವ ಜನರ ಮಾತುಗಳು ದಂಪತಿ ಮೇಲೆ ಮಾನಸಿಕ ಒತ್ತಡ ಹೇರುತ್ತವೆ.

ಯಾವುದೇ ಮದುವೆಯಿರಲಿ, ಅದು ಯಶಸ್ವಿಯಾಗಲು ಪರಸ್ಪರ ಗೌರವ, ತಾಳ್ಮೆ ಮತ್ತು ಹೊಂದಾಣಿಕೆ ಬಹಳ ಮುಖ್ಯ. ಸಮಸ್ಯೆಗಳು ಬಂದಾಗ ಒಬ್ಬರನ್ನೊಬ್ಬರು ದೂಷಿಸುವ ಬದಲು, ಮುಕ್ತವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದು ಸುಖೀ ಸಂಸಾರದ ಗುಟ್ಟು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

BGC Hospitals Kannada YouTube ಚಾನೆಲ್‌ಗೆ 1 ಲಕ್ಷ ಸಬ್‌ಸ್ಕ್ರೈಬರ್ಸ್‌; ಜೀರ್ಣಾಂಗ ಆರೋಗ್ಯ ಶಿಕ್ಷಣದಲ್ಲಿ ಐತಿಹಾಸಿಕ ಸಾಧನೆ
ಈ ಸ್ವಾತಂತ್ರ್ಯ ದಿನಕ್ಕೆ ಮಕ್ಕಳಿಗಾಗಿ ಡಿಫರೆಂಟ್​ ಐಡಿಯಾ: ರಸದಿಂದ ರಸ ಮಾಡಿ, ವೆರಿಗುಡ್​ ಎನ್ನಿಸಿಕೊಳ್ಳಿ