ವೈದ್ಯರ ಯಶಸ್ವಿ ಸಾಧನೆ: ಶಸ್ತ್ರ ಚಿಕಿತ್ಸೆ ನಂತರ ಬೆಳೆದ ಕಾಲು!

By Web DeskFirst Published Sep 8, 2018, 3:27 PM IST
Highlights

ಮೂರು ಬಾರಿ ಶಸ್ತ್ರ ಚಿಕಿತ್ಸೆಯಾಗಿದ್ದರೂ ಮುರಿದ ಮೂಳೆ ಕೂಡಲಿಲ್ಲ. ಬೆಳವಣಿಗೆ ಆದಂತೆಲ್ಲ ಮೂಳೆ 20 ಸೆ.ಮೀ. ಕಡಿಮೆ ಬೆಳೆಯಿತು. ಇದನ್ನು ಗಮನಿಸಿ ಇಲಿಜಿರೋನ್ ಶಸ್ತ್ರ ಚಿಕಿತ್ಸೆ ಮಾಡಿ ಮೂಳೆ ಜೋಡಿಸಿ 20 ಸೆ.ಮೀ. ಬೆಳೆಯುವಂತೆ ಮಾಡಲಾಯಿತು

ಮೈಸೂರು[ಸೆ.08]: ನಗರದ ಮಾನಸ ಕೀಲುಮೂಳೆ ಆಸ್ಪತ್ರೆಯ ಡಾ. ಟಿ. ಮಂಜುನಾಥ್ ಮತ್ತು ಡಾ. ಎಸ್. ರಘುನಂದನ್ ಅವರು ಅಂಗವಿಕಲನಾಗಿದ್ದ ವ್ಯಕ್ತಿಯೊಬ್ಬರ ಬಲಗಾಲಿನ ತೊಡೆ ಮೂಳೆಯನ್ನು ಇಲಿಜಿರೋನ್ ತಂತ್ರಜ್ಞಾನ ಬಳಸಿ 20 ಸೆ.ಮೀ. ಉದ್ದ ಬೆಳೆಯುವಂತೆ ಶಸ್ತ್ರ ಚಿಕಿತ್ಸೆ ಪೂರೈಸಿದ್ದಾರೆ.

ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೈದ್ಯ ಡಾ. ಟಿ. ಮಂಜುನಾಥ್, ಕೆ. ಆರ್. ಸಾಗರದ ನಾರ್ಥ್ ಬ್ಯಾಂಕ್ ವಾಸಿಯಾಗಿರುವ 17 ವರ್ಷದ ಪವನ್‌ಕುಮಾರ್ 5 ವರ್ಷವವನಿದ್ದಾಗ ಬಿದ್ದು ಬಲಗಾಲಿನ ತೊಡೆ ಮೂಳೆ ಮುರಿದಿತ್ತು. ಮೂರು ಬಾರಿ ಶಸ್ತ್ರ ಚಿಕಿತ್ಸೆಯಾಗಿದ್ದರೂ ಮುರಿದ ಮೂಳೆ ಕೂಡಲಿಲ್ಲ. ಬೆಳವಣಿಗೆ ಆದಂತೆಲ್ಲ ಮೂಳೆ 20 ಸೆ.ಮೀ. ಕಡಿಮೆ ಬೆಳೆಯಿತು. ಇದನ್ನು ಗಮನಿಸಿ ಇಲಿಜಿರೋನ್ ಶಸ್ತ್ರ ಚಿಕಿತ್ಸೆ ಮಾಡಿ ಮೂಳೆ ಜೋಡಿಸಿ 20 ಸೆ.ಮೀ. ಬೆಳೆಯುವಂತೆ ಮಾಡಿದೆವು ಎಂದರು.

ಮುರಿದಿದ್ದ ಪ್ಲೇಟು ಮತ್ತು ಸ್ಥೂಲಗಳನ್ನು ತೆಗೆದು ಮೂಳೆ ಕೂಡದ ಜಾಗವನ್ನು ಸರಿಯಾಗಿ ಕೂರಿಸಿ, 180 ಎಂ.ಎಂ ಅಳತೆಯ ವೃತ್ತಾಕಾರದ 4 ಬಳೆಗಳನ್ನು ಬಳಸಿ 1.8 ಎಂಎಂ ತಂತಿಗಳಿಂದ ಬಲಗಾಲಿನ ತೊಡೆಯ ಮೂಳೆಗೆ ಬಂಧಿಸಿದೆವು. ತದನಂತರ ತೊಡೆಯ ಮೂಳೆಯ ಮೇಲ್ಭಾಗದಲ್ಲಿ ಮೂಳೆಯನ್ನು ತುಂಡರಿಸಿ ಶಸ್ತ್ರ ಚಿಕಿತ್ಸೆ ಮಾಡಿ ಪ್ರತಿದಿನ 1 ಎಂಎಂ ನಷ್ಟು ಮೂಳೆಯನ್ನು ಹಿಗ್ಗಿಸುತ್ತ ಸುಮಾರು 120 ದಿನದಲ್ಲಿ 20 ಸೆ.ಮೀ. ಮೂಳೆ ಬೆಳೆಸಿ ಎಡಗಾಲಿನ ಸಮಕ್ಕೆ ಮಾಡಿದೆವು ಎಂದು ಹೇಳಿದರು.

ಶಸ್ತ್ರ ಚಿಕಿತ್ಸೆಗೆ ಒಳಗಾದ ಪವನ್‌ಕುಮಾರ್ ಮಾತನಾಡಿ, ಎಸ್ಸೆಸ್ಸೆಲ್ಸಿವರೆಗೆ ಓದಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗಿದ್ದೇನೆ. ಈಗ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಸಾಮಾನ್ಯರಂತೆ ಓಡಾಡಿಕೊಂಡಿದ್ದೇನೆ ಎಂದರು. ಡಾ. ಎಸ್. ರಘುನಂದನ, ಪವನ್‌ಕುಮಾರ್ ತಾಯಿ ಸುನಂದಾ ಇದ್ದರು.

click me!