ಮನದ ಗೋಡೆಯನ್ನು ಕೊಳಕು ಮಾಡಿಕೊಳ್ಳಬೇಡಿ

Published : Aug 20, 2018, 12:35 PM ISTUpdated : Sep 09, 2018, 10:06 PM IST
ಮನದ ಗೋಡೆಯನ್ನು ಕೊಳಕು ಮಾಡಿಕೊಳ್ಳಬೇಡಿ

ಸಾರಾಂಶ

ಹಳೆಯದೊಂದು ಇಂಗ್ಲಿಷ್ ಕತೆಯಿದೆ. ಅದರಲ್ಲಿ ಬರುವ ಪಾತ್ರವೊಂದು ನನಗೆ ವಯಸ್ಸಾಗಬಾರದು ಅಂತ ದೇವರಲ್ಲಿ ಬೇಡಿಕೊಳ್ಳುತ್ತದೆ.

ದೇವರು ಅದೆಲ್ಲ ಆಗುವುದಿಲ್ಲ, ಮನುಷ್ಯನಾಗಿ ಹುಟ್ಟಿದ ಮೇಲೆ ವಯಸ್ಸಾಗುವುದು ಸಹಜ ಅನ್ನುತ್ತಾನೆ. ಈಗ ಮತ್ತೂ ಒತ್ತಾಯ ಮಾಡಿದಾಗ ದೇವರು ಒಂದು ಉಪಾಯ ಹೇಳುತ್ತಾನೆ. ನಿನ್ನದೊಂದು ಸುಂದರವಾದ ಚಿತ್ರ ಬಿಡಿಸಲು ಯಾರಿಗಾದರೂ ಹೇಳು. ಆ ಚಿತ್ರವನ್ನು ಜೋಪಾನವಾಗಿಟ್ಟುಕೋ. ನಿನ್ನಲ್ಲಿ ಆಗುವ ಬದಲಾವಣೆ ಆ ಚಿತ್ರಕ್ಕೆ ಆಗುವಂತೆ ಮಾಡಬಲ್ಲೆ. ಅದೇ ರೀತಿ ಆತ ತನ್ನ ಯೌವನದ ಚಿತ್ರವೊಂದನ್ನು ಕಲಾವಿದನಿಗೆ ರಚಿಸುವಂತೆ ಹೇಳುತ್ತಾನೆ. ಆ ಚಿತ್ರವನ್ನು ಮನೆಯೊಳಗೆ ಜೋಪಾನವಾಗಿ ಇಟ್ಟುಕೊಳ್ಳುತ್ತಾನೆ. ತಾನು ಯೌವನವಂತವಾಗಿ ಅದೆಷ್ಟೋ ವರ್ಷಗಳನ್ನು ಕಳೆಯುತ್ತಾನೆ.

ಎಷ್ಟೋ ವರ್ಷಗಳ ನಂತರ ಅವನು ತನ್ನ ಚಿತ್ರವನ್ನು ತೆಗೆದು ನೋಡಿದಾಗ, ಅದು ಕುರೂಪಗೊಂಡಿರುತ್ತದೆ. ಅವನು ಮಾಡಿದ ಪಾಪ, ಅವನ ವಯಸ್ಸು ಎಲ್ಲವೂ ಅದರಲ್ಲಿ ಪ್ರತಿಬಿಂಬಿತವಾಗಿರುತ್ತದೆ. ಅದನ್ನು ನೋಡುತ್ತಿದ್ದಂತೆಯೇ ಆತ ಹೌಹಾರಿಹೋಗುತ್ತಾನೆ. ತಾನು ಹಾಗೆ ಕಾಣಿಸುತ್ತಿದ್ದೇನೆ ಅನ್ನಿಸತೊಡಗುತ್ತದೆ. ತನ್ನ ಒಳಗಿನ ವಿಕಾರ ಅವನಿಗೆ ಗೊತ್ತಾಗುತ್ತದೆ.

ನಾವೂ ಅಷ್ಟೇ. ನಮ್ಮ ಒಳಗಿನ ಚಿತ್ರ ಕುರೂಪಗೊಳ್ಳುತ್ತಿರುವುದು ನಮಗೆ ಗೊತ್ತಾಗುವುದೇ ಇಲ್ಲ. ನಾವು ಸುಂದರವಾಗಿದ್ದೇವೆ ಅಂತಲೇ ಭ್ರಮಿಸುತ್ತಿರುತ್ತೇವೆ. ನಮಗೇನೂ ಆಗಿಲ್ಲ, ವಯಸ್ಸಾಗಿಲ್ಲ, ನಮ್ಮ ಸಣ್ಣತನ, ಕ್ರೌರ್ಯ ಮತ್ತು ನೀಚತನಗಳ ಮುದ್ರೆ ನಮ್ಮ ಮುಖದ ಮೇಲೆ ಬಿದ್ದಿಲ್ಲ ಅಂತ ಭಾವಿಸುತ್ತೇವೆ. ಒಳಗೊಳಗೇ ಮಾಡಿದ ಕೆಲಸ ಹೊರಗೆ ಕಾಣಿಸುವುದಿಲ್ಲ ಎಂದು ಭಾವಿಸುತ್ತೇವೆ. ಆದರೆ ನಿಜವಾಗಿಯೂ ಹಾಗಿರುವುದಿಲ್ಲ. ಇನ್ನೊಬ್ಬರ ಚಿತ್ತದಲ್ಲಿ ಮೂಡಿದ ನಮ್ಮ ಚಿತ್ರ ಕ್ರಮೇಣ ಕುರೂಪಗೊಳ್ಳುತ್ತಾ ಹೋಗುವುದು ನಮ್ಮ ಗಮನಕ್ಕೇ ಬರುವುದಿಲ್ಲ.

ನಾವು ಬಾಲ್ಯದಲ್ಲಿ ನೋಡಿದ, ಮತ್ತೆಂದೂ ಭೇಟಿಯಾಗದ ಕೆಲವರ ಮುಖ ಮಾತ್ರ ನಮ್ಮ ಮನಸ್ಸಿನಲ್ಲಿ ಸುಂದರವಾಗಿರುತ್ತದೆ. ಉದಾಹರಣೆಗೆ ಒಂದನೇ ತರಗತಿಯಲ್ಲಿ ಅಕ್ಷರ ಕಲಿಸಿದ ಮೇಷ್ಟ್ರು, ಮೊದಲು ಸೈಕಲ್ ಕಲಿಸಿದ ಊರಿನ ಯಾರೋ ಹುಡುಗ, ಜತೆಗೆ ಓದಿದ ಹುಡುಗಿ- ಹೀಗೆ ಕೆಲವು ಮುಖಗಳಷ್ಟೇ ನಮ್ಮೊಳಗೆ ಸುಂದರವಾಗಿ ಉಳಿದಿರುತ್ತವೆ. ಆನಂತರದ ದಿನಗಳಲ್ಲಿ ನಮಗೆ ಎದುರಾಗುವ ಮುಖಗಳು ಕ್ರಮೇಣ ಕುರೂಪಗೊಳ್ಳುತ್ತಾ ಹೋಗುತ್ತವೆ.

ಅವು ಹಾಗೆ ಕುರೂಪಗೊಳ್ಳುವುದಕ್ಕೆ ನಾವಷ್ಟೇ ಕಾರಣವಲ್ಲ. ನಮ್ಮ ಸುತ್ತಲಿನ ಮಂದಿ, ಮಾಧ್ಯಮ, ಟೀಕೆ, ಭಿನ್ನಾಭಿಪ್ರಾಯಗಳೂ ಒಂದು ಮುಖವನ್ನು ಕುರೂಪಗೊಳಿಸುತ್ತಾ ಹೋಗುತ್ತವೆ. ನೀವು ತುಂಬ ಒಳ್ಳೆಯ ಗಾಯಕ ಅಂದುಕೊಂಡವನ ಬಗ್ಗೆ ಯಾರೋ ಏನೋ ಸಣ್ಣ ಮಾತಾಡುತ್ತಾರೆ. ನೀವು ಅದನ್ನು ಎಷ್ಟೇ ನಿರಾಕರಿಸಿದರೂ ಅದರ ಚೂರೊಂದು ಮನಸ್ಸಿನಲ್ಲಿ ಉಳಿದೇ ಉಳಿಯುತ್ತದೆ. ಎಷ್ಟೇ ಚೆನ್ನಾಗಿ ಒರೆಸಿದರೂ ಕನ್ನಡಕದಲ್ಲಿ ಉಳಿದೇ ಉಳಿಯುವ ಧೂಳಿನಂತೆ, ಕಲೆಯಂತೆ.

ನಮ್ಮ ಮನದೊಳಗಿನ ಚಿತ್ರಗಳನ್ನು ವಿರೂಪಗೊಳಿಸಿದಷ್ಟೂ ನಮ್ಮ ಮನದ ಗೋಡೆ ಕೊಳಕಾಗುತ್ತಾ ಹೋಗುತ್ತದೆ. ಅದೇ ಕಾರಣಕ್ಕೆ ನಾವು ಮೆಚ್ಚುವವರು  ಯಾರು ಅನ್ನುವುದನ್ನು ಗುಟ್ಟಾಗಿಯೇ ಇಟ್ಟುಕೊಳ್ಳಬೇಕು. ನಮ್ಮ ಆತ್ಮಕ್ಕೆ ಮುದ ನೀಡುವ ಯಾವುದನ್ನೂ ಸಾರ್ವಜನಿಕವಾಗಿ ಚರ್ಚಿಸಲೇಬಾರದು. ಹೀಗೆ ಯಾರ ಕಣ್ಣಿಗೂ ಬೀಳದೇ ಉಳಿದ ನಮ್ಮ ಆಳದಲ್ಲಿ ಜೋಪಾನವಾಗಿರುವ ವ್ಯಕ್ತಿಗಳು, ಘಟನೆಗಳು, ನೆನಪುಗಳೇ ನಮ್ಮನ್ನು ಸಂತೋಷವಾಗಿಡುತ್ತವೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹಸಿ ಬೆಳ್ಳುಳ್ಳಿಯ ಶಕ್ತಿ.. ಬೆಳಗ್ಗೆ ಮೊದಲು ಈ ಕೆಲಸ ಮಾಡಿ ಅದೆಂಥದ್ದೇ ಕಾಯಿಲೆಯಾದ್ರೂ ಹಿಮ್ಮೆಟ್ಟುತ್ತೆ
ರಾತ್ರಿ ಮಲಗುವ ಮುನ್ನ ನೀರು ಕುಡಿಯುತ್ತೀರಾ?, ಈ ವಿಷಯಗಳನ್ನು ನೀವು ತಿಳಿದಿರಲೇಬೇಕು