World Record Alert: ಬರೋಬ್ಬರಿ 8 ಅಡಿ 10 ಇಂಚು ಉದ್ದದ ಕೂದಲು ಬೆಳೆಸಿ ವಿಶ್ವದಾಖಲೆ; ಉಕ್ರೇನ್ ಮಹಿಳೆಯ ದಾಖಲೆ ಮುರಿದ 'ಭಾರತ ನಾರಿ'

Published : Aug 08, 2026, 03:00 PM IST
longest hair

ಸಾರಾಂಶ

ಉತ್ತರಾಖಂಡದ ರೇಣು ಧರಿಯಾಲ್, 8 ಅಡಿ 10 ಇಂಚು ಉದ್ದದ ಕೂದಲಿನೊಂದಿಗೆ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಉಕ್ರೇನ್ ಮಹಿಳೆಯ ಹಿಂದಿನ ದಾಖಲೆಯನ್ನು ಮುರಿದಿರುವ ಇವರು, ಕಳೆದ 10 ವರ್ಷಗಳಿಂದ ಕೂದಲು ಕತ್ತರಿಸಿಲ್ಲ.

ಬಹುತೇಕ ಮಹಿಳೆಯರು ಉದ್ದ ಜಡೆ ಬೆಳೆಸಬೇಕು ಅಂತ ಆಸೆಪಡುತ್ತಾರೆ. ತಮ್ಮ ತಲೆ ಕೂದಲು ಸೊಂಟಕ್ಕಿಂತ ಕೆಳಗೆ ಇರ್ಬೇಕು ಅಂತ ವಿವಿಧ ರೀತಿಯ ಶಾಂಪು, ಎಣ್ಣೆ, ಸಿರಮ್‌ಗಳನ್ನು ಬಳಕೆ ಮಾಡುತ್ತಾರೆ. ಎಷ್ಟೇ ಮಾಡಿದರೂ ಕೆಲವರಿಗೆ ಉದ್ದ ಕೂದಲು ಬೆಳೆಸಲು ಆಗೋದಿಲ್ಲ. ಆದರೆ ಕೆಲವರಿಗೆ ನೈಸರ್ಗಿಕವಾಗಿ ಕೂದಲು ಉದ್ದವಾಗಿ ಬೆಳೆಯುತ್ತದೆ. ಇಂತಹವರು ಸ್ನಾನ ಮಾಡಿದ ತಲೆ ಬೇಗ ಒಣಗುತ್ತಿಲ್ಲ, ಪ್ರತಿದನ ತಲೆಬಾಚುವುದು ಸವಾಲಿನ ಕೆಲಸ ಆಗುತ್ತಿದೆ ಅಂತ ಸಮಸ್ಯೆಗಳ ಪಟ್ಟಿ ಮಾಡುತ್ತಾರೆ. ಕೆಲವರು ತಮ್ಮ ಕೂದಲಿಗೆ ಕತ್ತರಿ ಪ್ರಯೋಗ ಕೂಡ ಮಾಡುತ್ತಾರೆ. ಆದರೆ ಇಲ್ಲಿ ಮಹಿಳೆಯೊಬ್ಬರು, ತಮ್ಮ ಉದ್ದದ ತಲೆ ಕೂದಲಿನ ಕಾರಣದಿಂದಲೇ 'ಗಿನ್ನಿಸ್ ವರ್ಲ್ಡ್ ರೆಕಾರ್ಡ್' ಮಾಡಿದ್ದಾರೆ. ಇವರ ಜಡೆಯ ಉದ್ದ ಬರೋಬ್ಬರಿ 271.5 ಸೆಂಟಿ ಮೀಟರ್ ಅಂದರೆ 8 ಅಡಿ 10 ಇಂಚು ಇರೋದು ವಿಶೇಷ ಸಂಗತಿಯಾಗಿದೆ.

ಉಕ್ರೇನ್ ಮಹಿಳೆಯ ಈ ಹಿಂದಿನ ದಾಖಲೆ ಬ್ರೇಕ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಹಲ್ದ್ವಾನಿ ನಿವಾಸಿಯಾಗಿರುವ ರೇಣು ಧರಿಯಾಲ್ ಅವರ ಕೂಲಿನ ಉದ್ದವನ್ನು ಗಿನ್ನಿಸ್ ಸಂಸ್ಥೆಯ ಪ್ರತಿನಿಧಿಗಳು, ಅಧಿಕೃತವಾಗಿ ದಾಖಲು ಮಾಡಿದ್ದಾರೆ. ಈ ಹಿಂದೆ ಉಕ್ರೇನ್ ದೇಶದ ಮಹಿಳೆಯ ಹೆಸರಿನಲ್ಲಿದ್ದ 8 ಅಡಿ 5 ಇಂಚಿನ ದಾಖಲೆಯನ್ನು ರೇಣು ಬ್ರೇಕ್ ಮಾಡಿದ್ದಾರೆ.

2015ರಲ್ಲಿ ಕೂದಲು ಕಟ್ ಮಾಡೋದನ್ನು ನಿಲ್ಲಿಸಿದೆ. ಕಳೆದ 10 ವರ್ಷಗಳಿಂದ ನಾನು ಕೂದಲು ಕಟ್ ಮಾಡಿಲ್ಲ. ಈಗ ಅದು ವಿಶ್ವದಾಖಲೆಯಾಗಿದೆ. ಭಾರತ ದೇಶದಲ್ಲಿ ಉದ್ದ ಕೂದಲು ಕೇಲ ಸೌಂದರ್ಯ ಮಾತ್ರವಲ್ಲದೆ ಸಂಸ್ಕೃತಿ, ಗುರುತಿಗೆ ಪ್ರತೀಕವಾಗಿ ನೋಡುತ್ತಾರೆ. ಇದೇ ನನಗೆ ಸ್ಫೂರ್ತಿ ನೀಡಿತ್ತು. ದಿನನಿತ್ಯದ ಕೆಲಸ ಮಾಡುವ ಸಂದರ್ಭದಲ್ಲಿ ಸ್ವಲ್ಪ ಸಮಸ್ಯೆ ಆದರೂ, ಕೂದಲು ಹೆಣೆದುಕೊಂಡು ಇರುವುದರಿಂದ ಹೆಚ್ಚು ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೀನಿ ಎಂದು ರೇಣು ಹೇಳಿದ್ದಾರೆ. ಗಿನ್ನಿಸ್ ಸಂಸ್ಥೆಯೂ ಪೋಸ್ಟ್ ಮಾಡಿರುವ ಫೋಟೋದಲ್ಲಿ ಆಕೆಯ ತಲೆ ಕೂದಲು ನೆಲಕ್ಕೆ ಮುಟ್ಟಿರೋದನ್ನು ಕಾಣಹುದು.

ಉದ್ದ ಕೂದಲಿನ ಸೀಕ್ರೆಟ್ ಏನು?

ಇಷ್ಟು ಉದ್ದನೆಯ ಕೂದಲು ಬೆಳೆಯುವ ಹಿಂದಿನ ಸೀಕ್ರೆಟ್ ತಿಳಿಸಿರುವ ರೇಣು, ಕೂದಲಿನ ಸಂರಕ್ಷಣೆಗೆ ನಾನು ಯಾವುದೇ ದುಬಾರಿ ವಸ್ತುಗಳನ್ನು ಬಳಕೆ ಮಾಡೋದಿಲ್ಲ. ಯಾವುದೇ ಚಿಕಿತ್ಸೆಯನ್ನು ತೆಗೆದುಕೊಂಡಿಲ್ಲ. ರಾಸಾಯನಿಕ ಪದಾರ್ಥಗಳು ಇರುವ ವಸ್ತುಗಳನ್ನು ದೂರ ಇಟ್ಟು, ಮನೆಯಲ್ಲಿ ತಯಾರಿಸಿದ ಎಣ್ಣೆ ಮತ್ತು ಶಾಂಪು ಬಳಕೆ ಮಾಡ್ತೇನೆ ಎಂದು ತಿಳಿಸಿದ್ದಾರೆ.

ಇನ್ನು, ರೇಣು ಅವರು ಸ್ವತಃ ಒಂದು ಯೂಟ್ಯೂಬ್ ಚಾನೆಲ್ ಕೂಡ ಹೊಂದಿದ್ದು, ಅದರಲ್ಲಿ ತಮ್ಮ ಉದ್ದ ಕೂದಲಿನ ರಕ್ಷಣೆಗೆ ಏನೆಲ್ಲಾ ಮಾಡ್ತಾರೆ ಅನ್ನೋದನ್ನು ವಿವರಿಸಿದ್ದಾರೆ. ತಲೆಕೂದಲು ಕ್ಲೀನ್ ಮಾಡಿಕೊಳ್ಳುವುದು, ಬಾಚಿಕೊಳ್ಳುವುದಕ್ಕೆ ಹೆಚ್ಚು ಸಮಯ ಬೇಕು. ಇದಕ್ಕೆ ನಮಗೆ ಸಂಯಮ ಬಹಳ ಮುಖ್ಯವಾಗುತ್ತದೆ ಎಂದಿದ್ದಾರೆ.

ಗಿನ್ನಿಸ್ ಸಂಸ್ಥೆಯೂ ದಾಖಲೆಯ ಬಗ್ಗೆ ಪೋಸ್ಟ್ ಮಾಡುತ್ತಿದ್ದರಂತೆ, ನೆಟ್ಟಿಗರು ರೇಣು ಅವರಿಗೆ ಶುಭಾಶಯ ತಿಳಿಸಿ ಬೆಂಬಲ ಸೂಚಿಸಿದ್ದಾರೆ. ಅಲ್ಲದೇ ನೆಟ್ಟಿಗರು ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸಿ ಕಾಮೆಂಟ್ ಮಾಡುತ್ತಿದ್ದು, 'ನನಗೆ ತಲೆ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿದೆ. ಆದರೆ ಇವರು ತಲೆಯ ಮೇಲೆ ತಲೆಕೂದಲಿನ ಸ್ಟೋರ್ ಆರಂಭಿಸಿದ್ದಾರೆ' ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೋರ್ವ ನೆಟ್ಟಿಗ, 'ಭಾರತ ಗ್ರಾಮಗಳಲ್ಲಿ ಇಂತಹ ಅದೆಷ್ಟೋ ಬೆಳಕಿಗೆ ಬಾರದ ದಾಖಲೆ ಇರುತ್ತದೆ' ಎಂದು ಹೇಳಿದ್ದಾರೆ. ಹಲವರು ಕೂದಲಿನ ಸಂರಕ್ಷಣೆಗೆ ಪ್ರತಿದಿನ ಎಷ್ಟು ಸಮಯ ಮೀಸಲಿಡುತ್ತಾರೆ ಅಂತ ಪ್ರಶ್ನಿಸಿದ್ದಾರೆ. ನಮ್ಮ ಉದ್ದೇಶ ಸರಿಯಾಗಿದ್ದರೆ ಸಣ್ಣ ಸಣ್ಣ ಪ್ರಯತ್ನಗಳು ದೊಡ್ಡ ಫಲಿತಾಂಶಗಳನ್ನು ನೀಡುತ್ತವೆ ಎಂಬುವುದಕ್ಕೆ ಗಿನ್ನಿಸ್ ದಾಖಲೆ ನಿರ್ಮಿಸಿರುವ ರೇಣು ಧರಿಯಾಲ್ ಸಾಕ್ಷಿಯಾಗಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

‘50% OFF’ ಅಂತ ನೋಡಿದ ತಕ್ಷಣ ಶಾಪಿಂಗ್ ಮಾಡ್ತೀರಾ? ನಿಮ್ಮ ಮೆದುಳು ಹೀಗೆ ಯಾಕೆ ಕೆಲಸ ಮಾಡುತ್ತೆ ಗೊತ್ತಾ?
ಗಾಳಿ ಇಲ್ಲದಿದ್ರೂ, ಎಣ್ಣೆ,ಬತ್ತಿ ಸರಿಯಾಗಿದ್ರೂ ದೀಪ ಆರುತ್ತಿದೆಯಾ? ಇದು ಯಾವುದರ ಮುನ್ಸೂಚನೆ ಗೊತ್ತಾ?