ಸಮೋಸಾ ಮತ್ತು ಬರ್ಗರ್ ಎರಡೂ ಹೈ ಕ್ಯಾಲೋರಿ ಫುಡ್ ಆದರೂ ಬರ್ಗರ್‌ಗಿಂತ ಸಮೋಸಾ ಎಷ್ಟೋ ವಾಸಿ ಎಂದಿದೆ ವಿಜ್ಞಾನ ಮತ್ತು ಪರಿಸರ ಕೇಂದ್ರದ ಈಚಿನ ವರದಿ. ಯಾಕೆ ಅಂತ ತಿಳ್ಕೋಬೇಕೆಂದರೆ ಮುಂದೆ ಓದಿ.
ಫುಡ್ ಬಾಕ್ಸಿಂಗ್‌ನಲ್ಲಿ ಭಾರತದ ಸಮೋಸಾ, ಅಮೆರಿಕಾದ ಬರ್ಗರ್ ಅನ್ನು ಹೆಗೆಲಿಗೆತ್ತಿ ಗರಗರ ತಿರುಗಿಸಿ ರಿಂಗ್‌ನಿಂದ ಆಚೆಗೆ ಎಸೆದಿದೆ. ಹೌದು, ಬರ್ಗರ್ ಮತ್ತು ಸಮೋಸಾ ನಡುವಿನ ಸೆಣೆಸಾಟದಲ್ಲಿ ಸಮೋಸಾ ಜಯಶಾಲಿಯಾಗಿದೆ.
ವಿಜ್ಞಾನ ಮತ್ತು ಪರಿಸರ ಕೇಂದ್ರ (ಸಿಎಸ್ಇ)ವು ಈ ಕುರಿತ ವರದಿಯನ್ನು ಬಿಡುಗಡೆ ಮಾಡಿದ್ದು, ಅದರಂತೆ ಸಮೋಸಾ ಬರ್ಗರ್‌ಗಿಂತ ಆರೋಗ್ಯಯುತ ಆಹಾರ ಎಂದಿದೆ. ಏಕೆಂದರೆ, ಸಮೋಸಾವನ್ನು ಫ್ರೆಶ್ ಆಹಾರ ಸಾಮಗ್ರಿಗಳಿಂದ ತಯಾರಿಸಲಾಗುತ್ತದೆ. ಆದರೆ, ಬರ್ಗರ್ ಹಳಸಲು ಹಳವಂಡ.
ನಿಜವೆಂದರೆ ಇವೆರಡೂ ಜಂಕ್ ಆಹಾರವೇ. ಎರಡೂ ಆರೋಗ್ಯಕ್ಕೆ ಅಷ್ಟೇನೂ ಒಳ್ಳೆಯದಲ್ಲ. ಆದರೆ, ಅವೆರಡನ್ನೂ ಒಂದೇ ತಕ್ಕಡಿಗೆ ಹಾಕಿ ತೂಗಿ, ಹೋಲಿಸಿ ನೋಡಿದಾಗ ಮಾತ್ರ ಸಮೋಸಾ ಒಂದು ಕೈ ಮೇಲು ಎನಿಸಿಕೊಂಡಿದೆ.
ಹಿಟ್ಟನ್ನು ಕಲೆಸಿ, ನಾದಿ, ಆಲೂವನ್ನು ಬೇಯಿಸಿ ಹಿಟ್ಟಿನೊಳಗೆ ತುಂಬಿಸಿ ಕರಿದು, ಕಡಾಯಿಯಿಂದ ಸೀದಾ ಬಾಯಿಗೆ ಜಿಗಿಯುವ ಸಮೋಸಾದಲ್ಲಿ ಎಲ್ಲ ಸಾಮಗ್ರಿಗಳೂ ಫ್ರೆಶ್ ಫ್ರೆಶ್. ಯಾವುದೇ ಅಡಿಟಿವ್ಸ್, ಫ್ಲೇವರಿಂಗ್, ಪ್ರಿಸರ್ವೇಟಿವ್ಸ್ ಹಂಗಿಲ್ಲದೆ ರುಚಿ ಬೀರುವ ತಿಂಡಿ ಸಮೋಸಾ. ಆದರೆ ಬರ್ಗರ್‌ನಲ್ಲಿ ಪ್ರಿಸರ್ವೇಟಿವ್ಸ್, ಅಸಿಡಿಟಿ ರೆಗ್ಯುಲೇಟರ್ಸ್, ಎಮಲ್ಸಿಫೈಯರ್ಸ್, ಫ್ರೋಜನ್ ಪ್ಯಾಟಿಸ್, ಬನ್ಸ್‌ನಲ್ಲಿ ಆ್ಯಂಟಿಆಕ್ಸಿಡೆಂಟ್ಸ್, ಸಾಸ್, ಸಕ್ಕರೆ, ಎಡಿಬಲ್ ವೆಜಿಟೇಬಲ್ ಆಯಿಲ್ ಎಲ್ಲವನ್ನೂ ಸೇರಿಸಿ, ಅಲ್ಟ್ರಾ ಪ್ರೊಸೆಸ್ ಮಾಡಿಡಲಾಗುತ್ತದೆ ಎನ್ನುತ್ತದೆ ವರದಿ.
ಸಮೋಸಾದಲ್ಲಿ ಕ್ಯಾಲೋರಿ ಹೆಚ್ಚಿರಬಹುದು. ಆದರೆ ಇಷ್ಟೊಂದು ಕೆಮಿಕಲ್ಸ್ ಹೊಂದಿರುವ ಆಹಾರದ ಎದುರು ಭಾರತದ ಫೇವರೇಟ್ ಟಾಯ್ ಟೈಂ ಸ್ನ್ಯಾಕ್ಸ್ ಸಮೋಸಾವನ್ನು ಹೋಲಿಸಿ ನೋಡುವುದೇ ತಪ್ಪು. ಏನಂತೀರಾ?
ಇನ್ನು ಈ ವರದಿಯು ಅವಲಕ್ಕಿ, ಫ್ರೂಟ್ ಜ್ಯೂಸ್‌ನಂಥ ಆಹಾರಗಳು ಥಿಕನರ್ಸ್, ಹ್ಯುಮೆಕ್ಟ್ಯಂಟ್ಸ್, ಸಿಂಥೆಟಿಕ್ ಫುಡ್ ಕಲರ್ಸ್, ಆ್ಯಡೆಡ್ ಫ್ಲೇವರ್ಸ್ ಹೊಂದಿರುವ ನೂಡಲ್ಸ್ ಹಾಗೂ ಕ್ಯಾನ್ಡ್ ಜ್ಯೂಸ್‌ಗಿಂತ ನೂರು ಪಟ್ಟು ಬೆಸ್ಟು ಎಂದಿದೆ. 'ಅಲ್ಟ್ರಾ ಪ್ರೊಸೆಸ್ಡ್ ಫುಡ್‌ನಲ್ಲಿರುವ ಯಾವುದೇ ಕೆಮಿಕಲ್‌ಗಳು ಫ್ರೆಶ್ ಫುಡ್‌ನಲ್ಲಿರುವುದಿಲ್ಲ' ಎಂದು ವರದಿ ಹೇಳಿದೆ.
ಹೃದ್ರೋಗಕ್ಕೆ ಮೊಳಕೆ ಕಾಳೆಂಬ ಮದ್ದು
ಇಷ್ಟೇ ಅಲ್ಲದೆ ನೋ ಯುವರ್ ಡಯಟ್ ಎಂಬ ಹೆಸರಿನಲ್ಲಿ ಸಿಎಸ್ಇ ನಡೆಸಿದ ಸರ್ವೆಯಲ್ಲಿ ದೇಶದ 15 ರಾಜ್ಯಗಳ 9-17 ವರ್ಷದ ಸುಮಾರು 13,000 ಮಕ್ಕಳು ಭಾಗಿಯಾಗಿದ್ದರು. ಅದರ ಫಲಿತಾಂಶದಂತೆ ಸಕ್ಕರೆ ಹಾಗೂ ಉಪ್ಪನ್ನು ಹೊಂದಿರುವ ಹೈ ಫ್ಯಾಟ್ ಪ್ಯಾಕೇಜ್ಡ್ ಫುಡ್ ಸೇವಿಸುವುದು ಈಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ವಯಸ್ಸು ಹೆಚ್ಚಿದಂತೆಲ್ಲ ಈ ಪ್ಯಾಕೇಜ್ಡ್ ಆಹಾರ ಸೇವನೆಯೂ ಹೆಚ್ಚು ಎಂದು ತಿಳಿದುಬಂದಿದೆ. ಅಂಥ ಆಹಾರಗಳೂ ಖಂಡಿತಾ ದೇಹಕ್ಕೆ ಹಾನಿಕರವಾಗಿದ್ದು, ಪೋಷಕರು ಮಕ್ಕಳಿಂದ ಇದನ್ನು ದೂರವಿರಿಸಬೇಕು ಎಂದು ವರದಿ ಹೇಳಿದೆ.