
ಅಂತಾರಾಷ್ಟ್ರೀಯ ವನ್ಯಜೀವಿ ಸಂರಕ್ಷಣೆಯ ಇತಿಹಾಸದಲ್ಲೇ ಭಾರತ ಸರ್ಕಾರ ಅತ್ಯಂತ ಮಹತ್ವದ ಹಾಗೂ ಹೆಮ್ಮೆಯ ಮೈಲಿಗಲ್ಲೊಂದನ್ನು ಸ್ಥಾಪಿಸಿದೆ. ಮಹಾರಾಷ್ಟ್ರದಲ್ಲಿ ಕಳ್ಳಸಾಗಣೆದಾರರ (Wildlife Smugglers) ಕಪಿಮುಷ್ಠಿಯಿಂದ ರಕ್ಷಿಸಲಾಗಿದ್ದ 3 ವರ್ಷದ ಮುದ್ದಾದ ಗಂಡು ‘ಒರಾಂಗುಟಾನ್’ (Orangutan) ಅನ್ನು ವಿಶೇಷ ಚಾರ್ಟರ್ಡ್ ವಿಮಾನದ ಮೂಲಕ ಅದರ ತಾಯ್ನಾಡಾದ ಇಂಡೋನೇಷ್ಯಾಕ್ಕೆ ಸುರಕ್ಷಿತವಾಗಿ ಕಳುಹಿಸಿಕೊಡಲಾಗಿದೆ. ಭಾರತದಲ್ಲಿ ಅಕ್ರಮವಾಗಿ ತರಲಾಗಿದ್ದ ವಿದೇಶಿ ವನ್ಯಜೀವಿಯೊಂದನ್ನು ರಕ್ಷಿಸಿ, ಉಪಚರಿಸಿ, ಮರಳಿ ಅದರ ಮೂಲ ದೇಶಕ್ಕೆ ಗೌರವಯುತವಾಗಿ ಹಸ್ತಾಂತರಿಸುತ್ತಿರುವುದು ದೇಶದ ಇತಿಹಾಸದಲ್ಲೇ ಇದು ಮೊದಲ ಬಾರಿಯಾಗಿದೆ.
ಮಹಾರಾಷ್ಟ್ರದ ಥಾಣೆ ಅರಣ್ಯ ವಿಭಾಗದ ಅಧಿಕಾರಿಗಳಿಗೆ ಸಿಕ್ಕ ಖಚಿತ ಮಾಹಿತಿಯ ಮೇರೆಗೆ ಡೊಂಬಿವಿಲಿಯ ವಸತಿ ಕಟ್ಟಡವೊಂದರ ಮೇಲೆ ದಾಳಿ ನಡೆಸಿದಾಗ ಈ ಕಳ್ಳಸಾಗಣೆ ಜಾಲ ಬೆಳಕಿಗೆ ಬಂದಿತ್ತು. ಅಲ್ಲಿನ ಸಣ್ಣ ಕತ್ತಲೆಯ ಪಂಜರದಲ್ಲಿ ಈ ಮೂರು ವರ್ಷದ ಅಸಹಾಯಕ ಒರಾಂಗುಟಾನ್ ಪತ್ತೆಯಾಗಿತ್ತು. ಅಧಿಕಾರಿಗಳು ಇದನ್ನು ರಕ್ಷಿಸಿ ಮೊದಲು ನಾಗ್ಪುರದ ಜೂಲಾಜಿಕಲ್ ಪಾರ್ಕ್‌ಗೆ ಕೊಂಡೊಯ್ದರು. ನಂತರ ಸರ್ವೋಚ್ಚ ನ್ಯಾಯಾಲಯದ (Supreme Court) ಉನ್ನತಾಧಿಕಾರ ಸಮಿತಿಯ ನಿರ್ದೇಶನದ ಮೇರೆಗೆ, ಉತ್ತಮ ಆರೈಕೆ ಮತ್ತು ಚಿಕಿತ್ಸೆಗಾಗಿ ಗುಜರಾತ್‌ನ ಜಾಮ್‌ನಗರದಲ್ಲಿರುವ ಖ್ಯಾತ ವನ್ಯಜೀವಿ ಪುನರ್ವಸತಿ ಕೇಂದ್ರ 'ವಂತಾರಾ' (Vantara) ಗೆ ಸ್ಥಳಾಂತರಿಸಲಾಯಿತು. ಅಲ್ಲಿ ಪರಿಣಿತ ವೈದ್ಯರು ಈ ಒರಾಂಗುಟಾನ್‌ಗೆ ಪ್ರೀತಿಯಿಂದ ಅಗತ್ಯ ಪೌಷ್ಟಿಕ ಆಹಾರ ಹಾಗೂ ವೈದ್ಯಕೀಯ ನೆರವು ನೀಡಿ ಸುಧಾರಿಸಿಕೊಂಡರು.
ಒರಾಂಗುಟಾನ್ ಸಂಪೂರ್ಣ ಚೇತರಿಸಿಕೊಂಡ ಬಳಿಕ ಅದನ್ನು ತಾಯ್ನಾಡಿಗೆ ಕಳುಹಿಸಲು ಸಿದ್ಧತೆ ಮಾಡಿಕೊಳ್ಳಲಾಯಿತು. ಭಾರತದ ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋ (WCCB), ವಂತಾರಾ ಸಂಸ್ಥೆಯ ಪಶುವೈದ್ಯರ ತಂಡ ಹಾಗೂ ಇಂಡೋನೇಷ್ಯಾ ರಾಯಭಾರ ಕಚೇರಿಯ ಸಮನ್ವಯದೊಂದಿಗೆ ಅಹಮದಾಬಾದ್‌ನಿಂದ ಇಂಡೋನೇಷ್ಯಾದ ಮೇದಾನ್ (Medan) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಶೇಷ ಚಾರ್ಟರ್ಡ್ ವಿಮಾನದಲ್ಲಿ ಹಾರಿಸಲಾಯಿತು. ವಿಮಾನ ನಿಲ್ದಾಣದಲ್ಲಿ ಇಂಡೋನೇಷ್ಯಾದ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಹಾಗೂ ಅಲ್ಲಿನ ಅರಣ್ಯ ಸಚಿವಾಲಯದ ಪ್ರತಿನಿಧಿಗಳು ಈ ಅತಿಥಿಯನ್ನು ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡರು.
ಈ ಇಡೀ ಕಾರ್ಯಾಚರಣೆಯಲ್ಲಿ ಭಾರತ ತೋರಿದ ಮಾನವೀಯತೆ ಜಾಗತಿಕ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ಈ ಒರಾಂಗುಟಾನ್‌ನ ರಕ್ಷಣೆ, ವರ್ಷಗಳ ಕಾಲ ನೀಡಿದ ಚಿಕಿತ್ಸೆ, ಆಹಾರ, ಆರೈಕೆ ಹಾಗೂ ವಿಶೇಷ ವಿಮಾನದ ಸಾಗಾಟದ ಸಂಪೂರ್ಣ ವೆಚ್ಚವನ್ನು ಭಾರತ ಸರ್ಕಾರವೇ ಭರಿಸಿದೆ. ಇಂಡೋನೇಷ್ಯಾದಿಂದ ಇದಕ್ಕಾಗಿ ನಯಾಪೈಸೆ ಹಣವನ್ನೂ ಪಡೆದಿಲ್ಲ.
ಸದ್ಯ ಇಂಡೋನೇಷ್ಯಾದಲ್ಲಿ ತಾತ್ಕಾಲಿಕ ಕ್ವಾರಂಟೈನ್‌ನಲ್ಲಿರುವ ಈ ಮುದ್ದಾದ ಒರಾಂಗುಟಾನ್, ಕೆಲವೇ ದಿನಗಳಲ್ಲಿ ಉತ್ತರ ಸುಮಾತ್ರಾದ ನೈಸರ್ಗಿಕ ಸಂರಕ್ಷಣಾ ತಾಣದಲ್ಲಿ ನಳನಳಿಸಲಿರುವ ಕಾಡಿಗೆ ಮರಳಲಿದೆ. ಭಾರತದ ಈ ಮಾದರಿ ಕ್ರಮವು ಪ್ರಾಣಿ ಪ್ರೇಮಿಗಳ ಹೃದಯ ಗೆದ್ದಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.