ಥೈರಾಯ್ಡ್ ನಿಭಾಯಿಸಲು ಸರ್ವಾಂಗಾಸನ ಬೆಸ್ಟ್ ಎನ್ನುತ್ತದೆ ಆಯುರ್ವೇದ !

By Web Desk  |  First Published Jun 22, 2019, 3:47 PM IST

ರೋಗ ನಿರೋಧಕ ಶಕ್ತಿ ಹಾಗೂ ಉತ್ತಮ ಆರೋಗ್ಯದ ಆಯುರ್ವೇದಿಕ್ ಅಸ್ತಿತ್ವ ಓಜಸ್ ದೇಹದಲ್ಲಿ ಕಡಿಮೆಯಾದಾಗ ಥೈರಾಯ್ಡ್ ಏರುಪೇರಾಗುತ್ತದೆ ಎನ್ನುತ್ತದೆ ಆಯುರ್ವೇದ. ಓಜಸ್ ವೃದ್ಧಿಗೆ ಏನು ಮಾಡಬಹುದು?


ಥೈರಾಯ್ಡ್ ಸಮಸ್ಯೆ ಈಗೀಗ ಬಹಳ ಸಾಮಾನ್ಯವಾದದ್ದು. ಪ್ರತಿಯೊಬ್ಬರ ಪರಿಚಯಸ್ಥರಲ್ಲೂ ಇಬ್ಬರಿಗಾದರೂ ಥೈರಾಯ್ಡ್ ಇರದೇ ಇರದು. ಇದೇ ಕಾರಣಕ್ಕೆ ತೂಕ ಹೆಚ್ಚಳ ಇಲ್ಲವೇ ತೂಕ ಹೆಚ್ಚಾಗದೇ ಇರುವ ಸಮಸ್ಯೆಯಿಂದ ಜನ ಬಾಧೆ ಪಡುತ್ತಾರೆ. ಥೈರಾಯ್ಡ್ ಗ್ರಂಥಿ ದೇಹದ ಚಯಾಪಚಯ ಕ್ರಿಯೆ, ಉಷ್ಣತೆ ಹಾಗೂ ನಾಡಿಬಡಿತವನ್ನು ನಿಯಂತ್ರಿಸುತ್ತಿರುತ್ತದೆ. ಯಾವಾಗ ದೇಹದಲ್ಲಿ ಥೈರಾಯ್ಡ್ ಹಾರ್ಮೋನ್ ಬಿಡುಗಡೆಯಲ್ಲಿ ಹೆಚ್ಚು ಕಡಿಮೆಯಾಗುತ್ತದೋ ಆಗ ಥೈರಾಯ್ಡ್ ಸಮಸ್ಯೆ ಉದ್ಭವಿಸುತ್ತದೆ. ಹೆಚ್ಚಿನ ಬಾರಿ ಇದಕ್ಕೆ ನಮ್ಮ ಜೀವನಕ್ರಮ, ಅನುವಂಶಿಕತೆ ಹಾಗೂ ಅನುಚಿತ ಆಹಾರ ಕ್ರಮವೇ ಕಾರಣವಾಗಿರುತ್ತದೆ. 

ಥೈರಾಯ್ಡ್ ಸಮಸ್ಯೆ ಇದ್ದೋರು ಜೀವನದಲ್ಲಿ ಈ ಬದಲಾವಣೆ ತನ್ನಿ..

ಓಜಸ್ ದೇಹದಲ್ಲಿ ಕಡಿಮೆಯಾದಾಗ ಥೈರಾಯ್ಡ್ ಏರುಪೇರಾಗುತ್ತದೆ ಎಂದು ಆಯುರ್ವೇದದಲ್ಲಿ ಹೇಳಲಾಗುತ್ತದೆ. ಪರಿಣಾಮವಾಗಿ, ಅತಿಯಾದ ಬಳಲಿಕೆ, ಡಲ್‌ನೆಸ್, ರೋಗ ನಿರೋಧಕ ಶಕ್ತಿ ಕೊರತೆ ಕಾಣಿಸಿಕೊಳ್ಳಬಹುದು. ಅಲ್ಲದೆ ಕೆಮ್ಮು, ಕಫವೂ ಸಾಮಾನ್ಯವಾಗಿ ಬಿಡುತ್ತದೆ. ಕೆಲವು ಅಧ್ಯಯನಗಳ ಪ್ರಕಾರ 800 ಮಕ್ಕಳಲ್ಲಿ ಶೇ.79 ರಷ್ಟು ಮಕ್ಕಳು ಥೈರಾಯ್ಡ್ ಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದಾರೆ. ಅಂದರೆ ಈ ಸಮಸ್ಯೆ ಎಷ್ಟು ವ್ಯಾಪಕವಾಗಿ ಹಬ್ಬಿದೆ ಎಂಬುದು ಗಣನೆಗೆ ದೊರಕುತ್ತದೆ. 

ಥೈರಾಯ್ಡ್‌ನಲ್ಲಿ ಹೈಪೋಥೈರಾಯ್ಡ್ ಹಾಗೂ ಹೈಪರ್ಥೈರಾಯ್ಡಿಸಂ ಎಂಬ ಎರಡು ರೀತಿಯ ಸಮಸ್ಯೆಗಳನ್ನು ಕಾಣಬಹುದು. 

ಹೈಪೋಥೈರಾಯ್ಡಿಸಂ 

Latest Videos

undefined

ಥೈರಾಯ್ಡ್ ಗ್ರಂಥಿಯು ಅಗತ್ಯವಿರುವಷ್ಟು ಹಾರ್ಮೋನುಗಳನ್ನು ಸ್ರವಿಸದೆ ಹೋದಾಗ ಹೈಪೋಥೈರಾಯ್ಡಿಸಂ ಕಾಣಿಸಿಕೊಳ್ಳುತ್ತದೆ. ಇದರಿಂದ ಚಯಾಪಚಯ ಕ್ರಿಯೆ ಕುಗ್ಗುತ್ತದೆ, ಡ್ರೈ ಸ್ಕಿನ್, ದೈಹಿಕ ಹಾಗೂ ಮಾನಸಿಕ ಚಟುವಟಿಕೆ ಕುಗ್ಗುವುದು, ಅನೋರೆಕ್ಸಿಯಾ, ಅನೀಮಿಯಾ, ಸರಿಯಾಗಿ ಋತುಸ್ರಾವ ಆಗದಿರುವುದು, ಮಲಬದ್ಧತೆ ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದಕ್ಕೆ ಪೂರ್ಣ ಗುಣಪಡಿಸುವ ಮದ್ದಿಲ್ಲವಾದರೂ ಜೀವನಶೈಲಿ ಹಾಗೂ ಡಯಟ್‌ನಿಂದ ಒಂದು ಮಟ್ಟಿಗೆ ನಿಯಂತ್ರಿಸಬಹುದು. 

ಕೊಬ್ಬು ಏರುತ್ತಿದೆ, ತೂಕ ಇಳಿಯುತ್ತಿಲ್ಲ!

ಹೈಪರ್ಥೈರಾಯ್ಡಿಸಂ

ಥೈರಾಡ್ ಗ್ರಂಥಿಯು ಥೈರಾಕ್ಸಿನ್ ಹಾರ್ಮೋನನ್ನು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಿದಾಗ ಹೈಪರ್ಥೈರಾಯ್ಡಿಸಂ ಕಂಡುಬರುತ್ತದೆ. ಅತಿಯಾದ ಚಯಾಪಚಯ ಕ್ರಿಯೆಯಿಂದ ತೂಕ ಕಳೆದುಕೊಂಡು ನಡುಕ, ಕೈ ಬೆವರುವುದು, ಏಕಾಗ್ರತೆ ಸಮಸ್ಯೆ ಕಾಣಿಸಿಕೊಳ್ಳಬಹುದು. 

ಥೈರಾಯ್ಡ್‌ಗೆ ಆಯುರ್ವೇದಿಕೆ ಮನೆಮದ್ದುಗಳು ಇಲ್ಲಿವೆ;

- ಜಲಕುಂಭಿ ಹಾಗೂ ನುಗ್ಗೇಕಾಯಿಗಳು ದೇಹದಲ್ಲಿ ಐಯೋಡಿನ್ ಪ್ರಮಾಣ ಹೆಚ್ಚಿಸಲು ಸಹಾಯ ಮಾಡುತ್ತವೆ.

- ಧನಿಯಾ ಹಾಗೂ ಜೀರಿಗೆ ಪುಡಿಯ ಕಷಾಯ ಥೈರಾಯ್ಡ್‌ನಿಂದ ಉಂಟಾಗುವ ಬಾವನ್ನು ಹೋಗಲಾಡಿಸುತ್ತದೆ.

- ತರಕಾರಿ ಮತ್ತು ಕಾಳುಗಳನ್ನು ಹಸಿಯಾಗಿ ತಿನ್ನಬೇಡಿ. ಅದರಲ್ಲೂ ಮೊಳಕೆಕಾಳುಗಳು, ಬ್ರೊಕೋಲಿ, ಹೂಕೋಸು ಇವುಗಳನ್ನು ಬೇಯಿಸದೆ ಸೇವಿಸಬೇಡಿ.

- ವಿಟಮಿನ್ ಡಿ ಕೊರತೆಯಿಂದಲೂ ಥೈರಾಯ್ಡ್ ಸಮಸ್ಯೆ ಕಾಣಿಸಿಕೊಳ್ಳಬಹುದು. ಹೀಗಾಗಿ, ಬೆಳಗಿನ ಬಿಸಿಲಿಗೆ ದೇಹವನ್ನು ಒಡ್ಡಲು ಅಭ್ಯಾಸ ಮಾಡಿಕೊಳ್ಳಿ. ಬೆಳಗಿನ ಹೊತ್ತು ಹೊರಾಂಗಣ ಕ್ರೀಡೆಗಳಲ್ಲಿ ತೊಡಗಿಕೊಳ್ಳುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿ ಥೈರಾಯ್ಡ್ ಗ್ರಂಥಿಗಳು ಸರಿಯಾಗಿ ಕೆಲಸ ಮಾಡಲಾರಂಭಿಸುತ್ತವೆ. 

- ಎಲ್ಲ ರೀತಿಯ ಪ್ರೊಸೆಸ್ಡ್ ಶುಗರ್‌ನ್ನು ದೂರವಿಡಿ. ಆಹಾರವು ಪ್ರಾಕೃತಿಕವಾಗಿಯೇ ಹೆಚ್ಚು ಸಿಹಿಯಾಗಿದ್ದರೂ ಅವನ್ನು ದೂರವಿಡುವುದು ಒಳ್ಳೆಯದು.

- ವಿಟಮಿನ್ ಎ ಹೆಚ್ಚಿರುವ ಸೊಪ್ಪು, ಹಸಿರು ತರಕಾರಿಗಳನ್ನು ಹೆಚ್ಚು ಸೇವಿಸಿ. ಸೇಬು, ಬಾಳೆಹಣ್ಣು ಕೂಡಾ ಒಳ್ಳೆಯದು.

- ಥೈರಾಯ್ಡ್‌ಗೆ ಶುಂಠಿ ಒಳ್ಳೆಯದು. ಶುಂಠಿಯನ್ನು ನೀರಿನಲ್ಲಿ ಕುದಿಸಿ, ಆ ನೀರನ್ನು ಟೀಯಂತೆ ಸೇವಿಸಿ. 

- ಚೆನ್ನಾಗಿ ಹಾಲು ಕುಡಿಯುವವರಿಗೆ ಗ್ವಾಯ್ಟರ್ ಬರದು ಎಂದಿದ್ದಾರೆ ಚರಕ. ಹೀಗಾಗಿ, ಚೆನ್ನಾಗಿ ಹಾಲು ಸೇವಿಸಿ. ಜೊತೆಗೆ ತಂಗಳನ್ನ, ಬಾರ್ಲಿ, ಬೇಳೆಕಾಳುಗಳು, ಸೌತೆಕಾಯಿ ಒಳ್ಳೆಯದು.

- ಯೋಗದಲ್ಲಿ ಸರ್ವಾಂಗಾಸನವು ಥೈರಾಯ್ಡ್ ಸಮಸ್ಯೆ ಇರುವವರು ಮಾಡಲೇಬೇಕಾದ ಆಸನ. ಇದು ಥೈರಾಯ್ಡ್ ಗ್ರಂಥಿ ಸರಿಯಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುತ್ತದೆ. ಹಾಲಾಸನ ಹಾಗೂ ಮತ್ಸಾಸನ ಕೂಡಾ ಒಳ್ಳೆಯದು. 

- ಉಜ್ಜಯಿ ಪ್ರಾಣಾಯಾಮವು ಥೈರಾಯ್ಡ್‌ಗೆ ಉತ್ತಮವಾದುದು. 

click me!