ಡಿಪ್ರೆಷನ್ ಇದೆ ಎನ್ನೋದು ಗೊತ್ತಾಗೋದು ಹೇಗೆ?

By Web Desk  |  First Published Jun 22, 2019, 3:36 PM IST

ಡಿಪ್ರೆಶನ್ ಎಂದರೆ ಯಾವಾಗಲೂ ಅಳುತ್ತಲೇ ಇರಬೇಕಿಂದಿಲ್ಲ. ಸದಾ ಅಸಂತೋಷದಿಂದಿರುವುದೂ ಒಂದೇ ಸೈನ್ ಅಲ್ಲ. ಸಣ್ಣ ಸಣ್ಣ ಕೆಲವು ಸಂಗತಿಗಳೂ ನಿಮ್ಮ ಮೂಡ್ ಡಿಸಾರ್ಡರ್ ಬಗ್ಗೆ ಹೇಳುತ್ತಿರುತ್ತವೆ.


ನೀವು ಬಹುಶಃ ಚಿಪ್ಪಿನೊಳಗಣ ಖಿನ್ನ ವ್ಯಕ್ತಿಯಾಗಿರಬಹುದು. ಹೊರಗಿನಿಂದ ಎಲ್ಲವೂ ಸರಿಯಾಗಿರುವಂತೆ ಕಾಣಬಹುದು. ಆದರೆ, ಕೆಲವು ಫೀಲಿಂಗ್ಸ್‌ ಒಳಗೇ ತಳ್ಳಿದ್ದೀರಿ. ಅವುಗಳ ಬಗ್ಗೆ ಮಾತನಾಡುವುದು ಹೋಗಲಿ, ಯೋಚಿಸುವುದೂ ನಿಮಗಿಷ್ಟವಿಲ್ಲ. ಆದರೆ, ಯಾರಾದರೂ ಹತ್ತಿರದವರು ಸಮಾಧಾನದಿಂದ ಕುಳಿತು ನಿಮ್ಮ ಮನಸ್ಸಿನ ಮೇಲಿನ ಲೇಯರ್ ಸ್ಕ್ರ್ಯಾಚ್ ಮಾಡಿದರೆ ಒಳಗಿನ ಖಿನ್ನತೆ ಗಮನಕ್ಕೆ ಬರಬಹುದು. ಆ ಬಗ್ಗೆ ಮಾತನಾಡಿದರೆ ಎಲ್ಲಿ ಅತ್ತು ಬಿಡುತ್ತೀನೋ, ರೇಗುತ್ತೀನೋ ಎಂಬೆಲ್ಲ ಭಯಕ್ಕೆ ಎಲ್ಲವನ್ನೂ ಮೂಟೆ ಕಟ್ಟಿ ಒಳತಳ್ಳಿದ್ದೀರಿ. ಆದರೆ, ಖಿನ್ನತೆ ನಿಮ್ಮನ್ನು ಆವರಿಸಿದೆ ಎಂದು ತಿಳಿಯಲು ಬಾಯಿ ಬಿಡದೆಯೇ ಕೆಲ ವರ್ತನೆ ಹಾಗೂ ಯೋಚನೆಗಳನ್ನು ಗಮನಿಸಿದರೂ ಆಗುತ್ತದೆ. 

ಬಾಣಂತಿ ಖಿನ್ನತೆ ಬಗ್ಗೆ ಎಚ್ಚರ

Tap to resize

Latest Videos

- ನಿಮಗೆ ನೀವು ಖುಷಿಯಾಗಿದ್ದೀರೋ ಇಲ್ಲವೋ ಎಂದು ನಿರ್ಧರಿಸಲು ಆಗದಾದಾಗ
ಒಬ್ಬರು ಖಿನ್ನರಾಗಿದ್ದರೆ ಅಸಂತೋಷವನ್ನು ಮುಚ್ಚಿ ಹಾಕಲು ಅವರು ತಮ್ಮೆಲ್ಲ ಎಮೋಶನ್ಸ್ ಮೇಲೆ ಗೊತ್ತಿಲ್ಲದೆಯೇ ಆಫ್ ಬಟನ್ ಒತ್ತಿ ಬಿಡಬಹುದು. ಹೀಗಾಗಿ, ಅವರು ಖುಷಿಯೂ ಅಲ್ಲದ, ದುಃಖವೂ ಅಲ್ಲದ ಭಾವನಾರಹಿತ ಹಂತಕ್ಕೆ ಹೋಗಿರಬಹುದು. 

- ಬೇಕೆಂದೇ ಬ್ಯುಸಿ ಲೈಫ್ ಅಪ್ಪಿಕೊಂಡಾಗ
ದುಃಖದ ಫೀಲಿಂಗ್ಸ್‌ನಿಂದ ದೂರ ಉಳಿಯುವ ಸಲುವಾಗಿ ವ್ಯಕ್ತಿಯು ಬೇಕೆಂದೇ ವರ್ಕೋಹಾಲಿಕ್ ಆಗಿರಬಹುದು. ಮಕ್ಕಳು ಕೆಲಸ, ವಾಕಿಂಗ್ ಎಂದು ಇಡೀ ದಿನ ಕೆಲಸ ಮಾಡುತ್ತಲೇ ಇರಬಹುದು. ಆದರೆ, ಇದು ಒಂದು ರೀತಿಯಲ್ಲಿ ಖಿನ್ನತೆಯಿಂದ ಹೊರತರಲು ಅವರಿಗೆ ಸಹಾಯಕವಾಗಬಹುದು.

- ಸಣ್ಣ ಸಣ್ಣ ವಿಷಯಕ್ಕೂ ಸಿಟ್ಟು
ಸಾಮಾನ್ಯವಾಗಿ ಖಿನ್ನತೆಯೆಂದರೆ ಅಳು, ಬೇಜಾರು, ಒಂಟಿತನ ಎಂದು ಹಲವರು ಎಂದುಕೊಂಡಿರುತ್ತಾರೆ. ಆದರೆ, ಸಿಟ್ಟೂ ಖಿನ್ನತೆಯಿಂದ ಬರಬಹುದು. ಅದರಲ್ಲೂ ಗಂಡಸರು ಖಿನ್ನತೆಯನ್ನು ಸಿಟ್ಟಿನ ಮೂಲಕ ವ್ಯಕ್ತಪಡಿಸುತ್ತಿರಬಹುದು. ಬಹುಶಃ ಅಳುವುದಕ್ಕಿಂತ ಸಿಟ್ಟನ್ನು ಸಮಾಜ ಒಪ್ಪಿಕೊಳ್ಳುತ್ತದೆ ಎಂಬ ಕಾರಣಕ್ಕಿರಬಹುದು. ಇತ್ತೀಚೆಗಷ್ಟೇ ವಿಚ್ಛೇದನ ಪಡೆದ ವ್ಯಕ್ತಿಯು ಮಕ್ಕಳ ಮೇಲೆ ವಿನಾ ಕಾರಣ ಪದೇ ಪದೇ ಸಿಟ್ಟಾಗಬಹುದು. ಕಚೇರಿಯಲ್ಲಿ ಸಣ್ಣಪುಟ್ಟದ್ದಕ್ಕೂ ಕಿರಿಕಿರಿ ಮಾಡಿಕೊಳ್ಳಬಹುದು. ಆದರೆ, ಅದು ಅವರೊಳಗಿನ ನೋವಿನ ವ್ಯಕ್ತ ಭಾಷೆಯಾಗಿರಬಹುದು. 

40ರ ಹೆಂಗಸು ಈ ಟೆಸ್ಟ್ ಮಾಡಿಸಿಕೊಳ್ಳಬೇಕು

- ಹುಚ್ಚಾಟ
ವಿಶೇಷವಾಗಿ ಪುರುಷರಲ್ಲಿ ಖಿನ್ನತೆಯು ಹುಚ್ಚಾಟಗಳಿಂದ ವ್ಯಕ್ತವಾಗಬಹುದು. ಹುಚ್ಚಾಪಟ್ಟೆ ವೇಗದಲ್ಲಿ ಕಾರು ಓಡಿಸುವುದು, ಅಪಾಯಕಾರಿ ಸಾಹಸಗಳಲ್ಲಿ ತೊಡಗಿಸಿಕೊಳ್ಳುವುದು, ಸೆಕ್ಸ್, ಗ್ಯಾಂಬ್ಲಿಂಗ್, ಕುಡಿತ ಇತರೆ ಚಟ ಬೆಳೆಸಿಕೊಳ್ಳುವದೂ ಖಿನ್ನತೆಯನ್ನು ಸೂಚಿಸುತ್ತಿರಬಹುದು. ಉದಾಹರಣೆಗೆ ಲವ್ ಫೇಲ್ಯೂರ್ ಆದ ಯುವಕರು ಕುಡಿತ, ಡ್ರಗ್ಸ್ ವ್ಯಸನಿಗಳಾಗುವುದು ಸಾಮಾನ್ಯ. ನೋವನ್ನು ಮರೆಯಲು ಅಡ್ಡದಾರಿ ಹಿಡಿಯುತ್ತಾರೆ ಅವರು. ಇಲ್ಲಿ ನೋವಿಗೆ, ದುಃಖಕ್ಕೆ ಪರಿಹಾರ, ಸಮಾಧಾನ ಸಿಕ್ಕರೆ ಚಟವೂ ದೂರಾಗಬಹುದು. 

ಖಿನ್ನತೆಗೆ ತಳ್ಳಬಹುದು ಕುಡಿತವೆಂಬ ರೋಗ

- ಯೋಚನೆಯಲ್ಲಿ ಗೊಂದಲ
ಮನಸ್ಸು ಯೋಚಿಸಲು ಅಸಹಕಾರ ತೋರುವುದೂ ಖಿನ್ನತೆಯನ್ನು ಸೂಚಿಸುತ್ತಿರಬಹುದು. ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲಾಗದಿರುವುದು, ಯಾವ ವಿಷಯವನ್ನೂ ಸ್ಪಷ್ಟವಾಗಿ ಯೋಚಿಸಲಾಗದಿರುವುದು, ಸುಲಭದ ಕೆಲಸಕ್ಕೂ ಫೋಕಸ್ ಮಾಡಲಾಗದಿರುವುದು ಎಲ್ಲವೂ ಒಳಗಿನ ನೋವಿನ ಫಲಿತಾಂಶವಾಗಿರಬಹುದು.

- ಹಿಂದೆ ಎಂಜಾಯ್ ಮಾಡುತ್ತಿದ್ದ ಚಟುವಟಿಕೆಗಳು ಈಗ ಸೆಳೆಯದಾದಾಗ
ಹಿಂದೆ ಪ್ರತಿದಿನ ತಪ್ಪಿಸದೆ ಜಿಮ್‌ಗೆ ಹೋಗುತ್ತಿರುತ್ತೀರಿ. ಕೇರಮ್ ಆಡುತ್ತಿರುತ್ತೀರಿ. ಬ್ಯಾಡ್ಮಿಂಟನ್ ನಿಮಗೆ ಖುಷಿ ಕೊಡುತ್ತಿರುತ್ತದೆ. ಗೆಳೆಯರೊಂದಿಗೆ ಸಮಯ ಕಳೆಯುವಷ್ಟು ಸಂತೋಷದ ವಿಷಯ ಇನ್ನೊಂದಿಲ್ಲ ಎಂದಾಗಿರುತ್ತದೆ. ಈಗ ಆ ಯಾವ ಚಟುವಟಿಕೆಯಲ್ಲೂ ಆಸಕ್ತಿಯಿಲ್ಲದಿರುವುದು ಅಥವಾ ಬಹಳ ಒತ್ತಾಯಪೂರ್ವಕವಾಗಿ ಆ ಕೆಲಸಗಳನ್ನು ಮಾಡಬೇಕಾಗಿ ಬರುವುದು ಖಿನ್ನತೆಯ ಪರಿಣಾಮ ಇರಬಹುದು. 

- ತಪ್ಪಿನ ಕುರಿತು ಪಶ್ಚಾತ್ತಾಪ
ಖಿನ್ನತೆಯು ನಿಮ್ಮನ್ನು ಇತರರ ಬಗ್ಗೆ ಯೋಚಿಸುವುದನ್ನು ಬಿಟ್ಟು ಪೂರ್ಣ ನಿಮ್ಮ ಬಗ್ಗೆಯೇ ಯೋಚಿಸುವಂತೆ ಮಾಡುತ್ತದೆ. ಈ ಬದಲಾವಣೆಯು ನಿಮ್ಮಲ್ಲಿ ತಪ್ಪಿತಸ್ಥ ಭಾವನೆ ತರಬಹುದು. ಸಾಮಾನ್ಯವಾಗಿ ಖಿನ್ನತೆಯಲ್ಲಿರುವವರು ತಮ್ಮ ಮಕ್ಕಳು, ಸಂಗಾತಿ ಬಗ್ಗೆ ತಾನು ಗಮನ ಹರಿಸುತ್ತಿಲ್ಲ ಎಂದು ದುಃಖಿಸುವುದನ್ನು ಕಾಣಬಹುದು. ಅವರಿಗೆ ತಾವು ಇನ್ನೊಬ್ಬರ ಬಗ್ಗೆ ಕಾಳಜಿ ತೋರುತ್ತಿಲ್ಲ ಎಂದು ಗೊತ್ತಿದ್ದರೂ, ಆ ನಿಟ್ಟಿನಲ್ಲಿ ಬದಲಾವಣೆ ಸಾಧ್ಯವಾಗುವುದಿಲ್ಲ. 


 

click me!