ಅಡುಗೆಮನೆ ಅಥವಾ ಬಾತ್‌ರೂಮ್ ಸಿಂಕ್‌ನಿಂದ ನೀರು ಮೊದಲಿನಂತೆ ವೇಗವಾಗಿ ಹರಿದು ಹೋಗದೆ ನಿಧಾನವಾಗುತ್ತಿದ್ದರೆ, ಅದನ್ನು ಸಣ್ಣ ಸಮಸ್ಯೆ ಎಂದು ನಿರ್ಲಕ್ಷಿಸಬೇಡಿ. ಆರಂಭದಲ್ಲಿ ನೀರು ಕೊಂಚ ನಿಧಾನವಾಗಿ ಹೋದರೂ, ದಿನ ಕಳೆದಂತೆ ಪೈಪ್ ಸಂಪೂರ್ಣವಾಗಿ ಬ್ಲಾಕ್ ಆಗಬಹುದು. ಜೊತೆಗೆ ಸಿಂಕ್‌ನಿಂದ ಕೆಟ್ಟ ದುರ್ವಾಸನೆ ಬರಲು ಆರಂಭವಾಗುತ್ತದೆ. ಸಿಂಕ್‌ನಲ್ಲಿ ನೀರು ನಿಧಾನವಾಗಿ ಇಳಿಯಲು ಪ್ರಮುಖ ಕಾರಣಗಳು ಹಾಗೂ ಅದಕ್ಕೆ ಸುಲಭ ಪರಿಹಾರಗಳು ಇಲ್ಲಿವೆ..
ಬಾತ್‌ರೂಮ್ ಸಿಂಕ್‌ಗಳಲ್ಲಿ ಉದುರುವ ಕೂದಲು ಡ್ರೈನ್ ಸುತ್ತಲೂ ಸಿಲುಕಿಕೊಳ್ಳುತ್ತದೆ. ಅದಕ್ಕೆ ಸಾಬೂನಿನ ನೊರೆ ಮತ್ತು ಜಿಡ್ಡು ಅಂಟಿಕೊಂಡು ದಪ್ಪನೆಯ ಪದರ ಸೃಷ್ಟಿಯಾಗುತ್ತದೆ. ಇದರಿಂದ ನೀರು ಸರಾಗವಾಗಿ ಹರಿಯಲು ಜಾಗವಿಲ್ಲದೆ ನಿಧಾನವಾಗುತ್ತದೆ.
ಬಿಸಿ ಎಣ್ಣೆ ಅಥವಾ ತುಪ್ಪವನ್ನು ಸಿಂಕ್‌ಗೆ ಸುರಿದಾಗ ಅದು ಪೈಪ್ ಒಳಗೆ ಸುಲಭವಾಗಿ ಹೋಗಬಹುದು. ಆದರೆ ಅದು ತಣ್ಣಗಾದ ನಂತರ ಪೈಪಿನ ಒಳಭಾಗದಲ್ಲಿ ಗಟ್ಟಿಯಾಗಿ ಅಂಟಿಕೊಳ್ಳುತ್ತದೆ. ಪಾತ್ರೆ ತೊಳೆಯುವಾಗ ಬರುವ ಸಣ್ಣಪುಟ್ಟ ಅನ್ನ, ತರಕಾರಿ ತುಣುಕುಗಳು ಈ ಜಿಡ್ಡಿಗೆ ಅಂಟಿಕೊಂಡು ಪೈಪ್ ಮಾರ್ಗವನ್ನು ಕಿರಿದಾಗಿಸುತ್ತವೆ.
ಸಿಂಕ್ ಕೆಳಗೆ ‘U’ ಆಕಾರದ ಬೆಂಡ್ (ಟ್ರ್ಯಾಪ್) ಇರುತ್ತದೆ. ಇದು ದುರ್ವಾಸನೆ ಬರದಂತೆ ತಡೆಯಲು ಮತ್ತು ಕಸವನ್ನು ಹಿಡಿದಿಟ್ಟುಕೊಳ್ಳಲು ವಿನ್ಯಾಸಗೊಂಡಿರುತ್ತದೆ. ಆದರೆ ದೀರ್ಘಕಾಲದವರೆಗೆ ಇದನ್ನು ಸ್ವಚ್ಛಗೊಳಿಸದಿದ್ದರೆ ಕಸ ತುಂಬಿಕೊಂಡು ನೀರು ಹರಿಯುವುದು ನಿಲ್ಲುತ್ತದೆ.
ನೀರು ಸರಿಯಾಗಿ ಹರಿಯಲು ಪೈಪ್‌ನಲ್ಲಿ ಗಾಳಿಯ ಒತ್ತಡ ಸರಿಯಾಗಿರಬೇಕು. ಪ್ಲಂಬಿಂಗ್ ವೆಂಟಿಲೇಶನ್ ಪೈಪ್ ಬ್ಲಾಕ್ ಆಗಿದ್ದರೂ ಸಹ ಸಿಂಕ್‌ನಲ್ಲಿ ನೀರು ಸರಿಯಾಗಿ ಇಳಿಯುವುದಿಲ್ಲ.
ಹಳೆಯ ಮನೆಗಳಲ್ಲಿನ ಪೈಪ್‌ಗಳ ಒಳಮೈ ಕಾಲಕ್ರಮೇಣ ತುಕ್ಕು ಹಿಡಿದು ಒರಟಾಗಿರುತ್ತದೆ. ಅಂತಹ ಒರಟು ಮೇಲ್ಮೈಗೆ ಕೊಳೆ, ಜಿಡ್ಡು ಬೇಗನೆ ಅಂಟಿಕೊಳ್ಳುತ್ತದೆ. ಇದರಿಂದಾಗಿ ಪದೇಪದೇ ಸಿಂಕ್ ಕಟ್ಟಿಕೊಳ್ಳುವ ಸಮಸ್ಯೆ ಎದುರಾಗುತ್ತದೆ.
ನೀರು ಇಳಿಯುವಾಗ ಪೈಪ್‌ನಿಂದ ಗುಳುಗುಳು (ಬುಡಬುಡ) ಶಬ್ದ ಬರುವುದು.
ಸಿಂಕ್‌ನಲ್ಲಿ ನೀರು ದೀರ್ಘಕಾಲ ನಿಲ್ಲುವುದು.
ಸಿಂಕ್‌ನಿಂದ ನಿರಂತರವಾಗಿ ಕೆಟ್ಟ ವಾಸನೆ ಬರುವುದು.
ಮನೆಯ ಒಂದಕ್ಕಿಂತ ಹೆಚ್ಚು ಸಿಂಕ್‌ಗಳಲ್ಲಿ ಇದೇ ಸಮಸ್ಯೆ ಕಾಣಿಸಿಕೊಂಡರೆ, ಮುಖ್ಯ ಪೈಪ್‌ಲೈನ್‌ನಲ್ಲೇ ಬ್ಲಾಕ್ ಆಗಿದೆ ಎಂದರ್ಥ.
ಕಸ ತೆಗೆಯಿರಿ: ಮೊದಲಿಗೆ ಸಿಂಕ್ ಜಾಲರಿಯನ್ನು (Drain cover) ತೆಗೆದು ಅಲ್ಲಿ ಸಿಲುಕಿರುವ ಕೂದಲು ಅಥವಾ ಆಹಾರದ ಕಣಗಳನ್ನು ಸ್ವಚ್ಛಗೊಳಿಸಿ.
ಕುದಿಯುವ ಬಿಸಿ ನೀರು: ವಾರಕ್ಕೊಮ್ಮೆ ಅಥವಾ ಎರಡು ಬಾರಿ ಸಿಂಕ್‌ಗೆ ನೇರವಾಗಿ ಕುದಿಯುವ ಬಿಸಿ ನೀರನ್ನು ನಿಧಾನವಾಗಿ ಸುರಿಯಿರಿ. ಇದು ಪೈಪ್ ಒಳಗೆ ಅಂಟಿಕೊಂಡಿರುವ ಜಿಡ್ಡು ಹಾಗೂ ಸಾಬೂನನ್ನು ಕರಗಿಸಲು ಸಹಾಯ ಮಾಡುತ್ತದೆ.
ಪ್ಲಂಜರ್ (Plunger) ಬಳಸಿ: ಸಿಂಕ್‌ನಲ್ಲಿ ಸ್ವಲ್ಪ ನೀರು ನಿಲ್ಲಿಸಿ, ಪ್ಲಂಜರ್ ಮೂಲಕ ಒತ್ತಡ (Vaccum) ಹಾಕಿ ಪಂಪ್ ಮಾಡಿದರೆ ಒಳಗಿರುವ ಸಣ್ಣಪುಟ್ಟ ಅಡೆತಡೆಗಳು ಸುಲಭವಾಗಿ ಕ್ಲಿಯರ್ ಆಗುತ್ತವೆ.
ಯು-ಬೆಂಡ್ ಕ್ಲೀನ್ ಮಾಡಿ: ಸಿಂಕ್ ಕೆಳಗಿರುವ ಯು-ಬೆಂಡ್ ಸ್ಕ್ರೂ ತೆರೆಯಲು ಸಾಧ್ಯವಿದ್ದರೆ, ಕೆಳಗೆ ಬಕೆಟ್ ಇಟ್ಟು ಅದನ್ನು ಕಳಚಿ ಒಳಗಿರುವ ಕೊಳೆಯನ್ನು ಬ್ರಷ್‌ನಿಂದ ಸ್ವಚ್ಛಗೊಳಿಸಿ ಮತ್ತೆ ಜೋಡಿಸಿ.
ರಾಸಾಯನಿಕಗಳಿಂದ ದೂರವಿರಿ: ಅಂಗಡಿಗಳಲ್ಲಿ ಸಿಗುವ ಅತಿಯಾದ ಕಟು ರಾಸಾಯನಿಕಯುಕ್ತ ಡ್ರೈನ್ ಕ್ಲೀನರ್‌ಗಳನ್ನು ಪದೇಪದೇ ಬಳಸಬೇಡಿ. ಇವು ಪೈಪ್‌ಗಳನ್ನು, ಅವುಗಳ ಜಾಯಿಂಟ್‌ಗಳನ್ನು ಹಾಳುಮಾಡಬಹುದು. ಬದಲಿಗೆ ಅಡುಗೆ ಸೋಡಾ ಮತ್ತು ವಿನೆಗರ್ ಮಿಶ್ರಣವನ್ನು ಬಳಸುವುದು ಸುರಕ್ಷಿತ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.