ರೈತರೇ ಗಮನಿಸಿ, ಹೊಸ ಅಡಿಕೆ ತೋಟ ಮಾಡುವ ಮುನ್ನ ಎಚ್ಚರ.. ಹೆಸರು ನೋಡಿ ಸಸಿ ತಂದರೆ ನಷ್ಟ ಗ್ಯಾರಂಟಿ

Published : Oct 24, 2026, 04:22 PM IST
Arecanut

ಸಾರಾಂಶ

Arecanut varieties in Karnataka: "ಯಾವ ಅಡಿಕೆ ತಳಿ ಹೆಚ್ಚು ಇಳುವರಿ ಕೊಡುತ್ತೆ?” ಅನ್ನೋದಕ್ಕಿಂತ “ನಮ್ಮ ಜಮೀನಿಗೆ ಯಾವ ತಳಿ ಹೊಂದುತ್ತೆ?” ಅನ್ನೋದು ಮುಖ್ಯ. ನರ್ಸರಿಗಳಿಗೆ ಹೋಗುವ ಮುನ್ನ ಕರಾವಳಿ, ಮಲೆನಾಡು ಮತ್ತು ಬಯಲುಸೀಮೆಗೆ ತಜ್ಞರು ಶಿಫಾರಸು ಮಾಡಿರುವ ಅಸಲಿ ತಳಿಗಳ ಲೆಕ್ಕಾಚಾರ ಇಲ್ಲಿದೆ.

ರಾಜ್ಯದಲ್ಲಿ ಅಡಿಕೆ ಬೆಳೆಯುವ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನರ್ಸರಿಗಳಲ್ಲಿ ಸಸಿಗಳ ವ್ಯಾಪಾರ ಭರ್ಜರಿಯಾಗಿ ಸಾಗಿದೆ. "ಮರಕ್ಕೆ 5 ಕೆಜಿ ಫಸಲು ಕೊಡುತ್ತೆ", "ಇದು ಒರಿಜಿನಲ್ ತೀರ್ಥಹಳ್ಳಿ ತಳಿ" ಎಂಬ ಮಾತುಗಳನ್ನು ನಂಬಿ ರೈತರು ಮುಗಿಬಿದ್ದು ಸಸಿ ಖರೀದಿಸುತ್ತಿದ್ದಾರೆ. ಆದರೆ, ಕಣ್ಣುಮುಚ್ಚಿ ಸಸಿ ತಂದರೆ ಮುಂದಿನ 30 ವರ್ಷ ಕೈಸುಟ್ಟುಕೊಳ್ಳುವುದು ಗ್ಯಾರಂಟಿ ಎಂದು ಕೃಷಿ ವಿಜ್ಞಾನಿಗಳು ಮತ್ತು ಸಿಪಿಸಿಆರ್‌ಐ (CPCRI) ತಜ್ಞರು ಎಚ್ಚರಿಸಿದ್ದಾರೆ.

ಅಡಿಕೆ ಸಸಿ ಆಯ್ಕೆಗೆ ತಜ್ಞರು ನೀಡಿರುವ ಗ್ರೌಂಡ್ ರಿಯಾಲಿಟಿ ವರದಿ ಇಲ್ಲಿದೆ..

ನಿಮ್ಮ ಊರಿಗೆ ಯಾವ ತಳಿ ಫಿಟ್?

ಕರಾವಳಿ ಭಾಗ (ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ)
ಇಲ್ಲಿ ‘ಚಾಲಿ ಅಡಿಕೆ’ಗೆ ಮಾರುಕಟ್ಟೆ ಹೆಚ್ಚು. ಸಿಪಿಸಿಆರ್‌ಐ ಶಿಫಾರಸಿನ ಪ್ರಕಾರ ಮಂಗಳ, ಸುಮಂಗಳ, ಶ್ರೀಮಂಗಳ ಮತ್ತು ಮೋಹಿತ್‌ನಗರ ತಳಿಗಳು ಇಲ್ಲಿನ ಮಣ್ಣು ಮತ್ತು ಹವಾಮಾನಕ್ಕೆ ಹೇಳಿಮಾಡಿಸಿದಂತಿವೆ.

ಮಲೆನಾಡು (ತೀರ್ಥಹಳ್ಳಿ, ಸಾಗರ, ಹೊಸನಗರ, ಶಿರಸಿ)
ಎಳೆಯ ಕಾಯಿ ಕೊಯ್ದು ಬೇಯಿಸಿ ‘ಕೆಂಪಡಿಕೆ’ (ರಾಶಿ/ಬೆಟ್ಟೆ) ಮಾಡುವ ಜಾಗವಿದು. ಇದಕ್ಕೆ ತೀರ್ಥಹಳ್ಳಿ ಲೋಕಲ್, ಸಾಗರ, ಶಿರಸಿ ಹಾಗೂ ತರೀಕೆರೆ ಲೋಕಲ್ ತಳಿಗಳೇ ಬೆಸ್ಟ್. ಆದರೆ ಬೋರ್ಡ್ ನೋಡಿ ನಂಬಬೇಡಿ, ಆ ಸಸಿಯ ತಾಯಿ ಮರದ ಇತಿಹಾಸ ತಿಳಿದು ಕೊಳ್ಳಿ.

ಬಯಲುಸೀಮೆ / ನೀರಾವರಿ ಪ್ರದೇಶ (ಚನ್ನಗಿರಿ, ಹೊನ್ನಾಳಿ, ದಾವಣಗೆರೆ, ಶಿಕಾರಿಪುರ)
ಇಲ್ಲಿ ತಳಿಯ ಹೆಸರಿಗಿಂತ ಬೇಸಿಗೆ ನೀರಿನ ಲಭ್ಯತೆ ಮುಖ್ಯ. "ಕಡಿಮೆ ನೀರಿದ್ದರೂ ಈ ತಳಿ ಬೆಳೆಯುತ್ತೆ" ಎಂದು ನರ್ಸರಿಯವರು ಹೇಳಿದರೆ ನಂಬಬೇಡಿ. ಅಡಿಕೆಗೆ ಬೇಸಿಗೆಯಲ್ಲಿ ದಿನಕ್ಕೆ ಗಿಡಕ್ಕೆ ಕನಿಷ್ಠ 15-20 ಲೀಟರ್ ನೀರು ಬೇಕೇಬೇಕು.

ಸಿಪಿಸಿಆರ್‌ಐ ಮಾನ್ಯತೆ ಪಡೆದ ಪ್ರಮುಖ ತಳಿಗಳು
ಸ್ವರ್ಣಮಂಗಳ & ನಲ್ಬಾರಿ: ಅಧಿಕ ಇಳುವರಿ, ಚಾಲಿ ಅಡಿಕೆಗೆ ಹೇಳಿಮಾಡಿಸಿದ ತಳಿ.
ಮಧುರಮಂಗಳ & ಶತಮಂಗಳ: ಚಾಲಿ ಮತ್ತು ಕೆಂಪಡಿಕೆ—ಎರಡೂ ಸಂಸ್ಕರಣೆಗೂ ಸೈ.
ವಿಟಿಎಲ್‌ಎಎಚ್-1, ವಿಟಿಎಲ್‌ಎಎಚ್-2: ಅಧಿಕೃತವಾಗಿ ಬಿಡುಗಡೆಯಾದ ಕುಬ್ಜ ಮಿಶ್ರತಳಿಗಳು.

‘ಕುಬ್ಜ ತಳಿ’ಗಳ ಬಗ್ಗೆ ರೈತರಲ್ಲಿದೆ ದೊಡ್ಡ ಭ್ರಮೆ!

"ಗಿಡ ಗಿಡ್ಡ ಇರುತ್ತೆ, ರೋಗ ಬರಲ್ಲ, ನೀರೇ ಬೇಡ" ಎಂದು ನರ್ಸರಿಗಳು ಹೇಳಿದರೆ ನಂಬಬೇಡಿ. ವಿಟಿಎಲ್‌ಎಎಚ್-1 ಮತ್ತು 2 ಹೈಬ್ರಿಡ್ ತಳಿಗಳಷ್ಟೇ. ಇವುಗಳಿಗೂ ನೀರು, ಗೊಬ್ಬರ ಅಷ್ಟೇ ಬೇಕು. ಅಸಲಿ ಮೂಲದ ಸಸಿಗಳಲ್ಲದಿದ್ದರೆ ಇಳುವರಿ ಕುಸಿಯುವುದು ಖಚಿತ.

‘ಇಳುವರಿ’ ಲೆಕ್ಕದಲ್ಲಿ ಮೋಸ ಹೋಗಬೇಡಿ!

ನರ್ಸರಿಯವರು "ಮರಕ್ಕೆ 4 ಕೆಜಿ ಗ್ಯಾರಂಟಿ" ಎಂದಾಗ ರೈತರು ಕೇಳಬೇಕಾದ ಮೊದಲ ಪ್ರಶ್ನೆ “ಇದು ಹಸಿ ಕಾಯಿಯ ತೂಕವೋ? ಒಣ ಚಾಲಿಯ ತೂಕವೋ? ಅಥವಾ ಬೇಯಿಸಿದ ಕೆಂಪಡಿಕೆಯ ತೂಕವೋ?” ಏಕೆಂದರೆ, 4 ಕೆಜಿ ಹಸಿ ಕಾಯಿ ಸುಲಿದರೆ ಸಿಗುವುದು ಕೇವಲ 800 ಗ್ರಾಂನಿಂದ 1 ಕೆಜಿ ಅಡಿಕೆ ಮಾತ್ರ!

ಸಸಿ ಕೊಳ್ಳುವ ಮುನ್ನ ನರ್ಸರಿಗೆ ಈ 5 ಪ್ರಶ್ನೆ ಕೇಳಿ

ಸಸಿ ತಂದ ತಾಯಿ ಮರಕ್ಕೆ (Mother Tree) ಎಷ್ಟು ವರ್ಷ ವಯಸ್ಸು?
ಇದು ಚಾಲಿಗೆ ಸೂಕ್ತವೋ ಅಥವಾ ಕೆಂಪಡಿಕೆಗೋ?
ನಿಮ್ಮ ಸಸಿ ನೆಟ್ಟು ಫಲ ಕೊಡುತ್ತಿರುವ ಪಕ್ಕದ ತೋಟ ಯಾವುದು ತೋರಿಸಿ?
ಹೇಳುತ್ತಿರುವ ಇಳುವರಿ ಒಣ ಅಡಿಕೆಯದ್ದೋ, ಹಸಿಕಾಯಿಯದ್ದೋ?
ತಳಿಯ ಹೆಸರು ನಮೂದಿಸಿದ ಅಧಿಕೃತ ಬಿಲ್ ಕೊಡ್ತೀರಾ?

ಕೊನೆಯದಾಗಿ..

ಅಡಿಕೆ ತೋಟವೆಂದರೆ ಇಡೀ ತಲೆಮಾರಿನ ಹೂಡಿಕೆ. ಸಸಿ ತರುವ ಮುನ್ನ ಸ್ಥಳೀಯ ತೋಟಗಾರಿಕಾ ಇಲಾಖೆ ಅಥವಾ ಕೃಷಿ ವಿಜ್ಞಾನ ಕೇಂದ್ರ (KVK) ಅಧಿಕಾರಿಗಳ ಅಭಿಪ್ರಾಯ ಪಡೆಯುವುದು ಜಾಣತನ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಕ್ಕರೆಗೆ ಗುಡ್‌ಬೈ ಹೇಳಿದ ಸಚಿನ್ ತೆಂಡೂಲ್ಕರ್! 53ರ ವಯಸ್ಸಿನಲ್ಲೂ ಫಿಟ್ ಆಗಿರಲು ಅನುಸರಿಸುವ ಸೂತ್ರವೇನು?
ನೂತನ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸುತ್ತಲೇ ಮಾಂಸಾಹಾರ ಬ್ಯಾನ್? ಭಾರಿ ವಿವಾದ- ರಾಜಭವನ ಹೇಳಿದ್ದೇನು