ಚಾಕೋಲೇಟ್ ಹೆಸರು ಕೇಳ್ತಿದ್ದಂತೆ ಬಾಯಲ್ಲಿ ನೀರು ಬರುತ್ತೆ. ಸಿಹಿ ಚಾಕೋಲೇಟ್ ಚಪ್ಪರಿಸಿ ತಿನ್ನುವ ನಾವು ಕಹಿಯಿದ್ರೆ ಮುಟ್ತಿರಲಿಲ್ಲ ಅಲ್ವಾ? ಹಿಂದೆ ಈ ಚಾಕೋಲೇಟ್ ಸ್ವಾದ ಕಹಿಯಾಗಿತ್ತು ಅನ್ನೋದು ನಿಮಗೆ ಗೊತ್ತಾ?
ಪ್ರೀತಿಯನ್ನು ಮನಸ್ಸಿನಲ್ಲಿ ಬಚ್ಚಿಟ್ಟುಕೊಂಡ್ರೆ ಪ್ರಯೋಜನವಿಲ್ಲ. ಪ್ರೀತಿಸುವ ವ್ಯಕ್ತಿ ಮುಂದೆ ಇದನ್ನು ವ್ಯಕ್ತಪಡಿಸುವ ಅಗತ್ಯವಿದೆ. ಸಂಗಾತಿಗೆ ನನ್ನ ಭಾವನೆ ಅರ್ಥವಾಗುತ್ತೆ ಅಂತ ಸುಮ್ಮನೆ ಕುಳಿತ್ರೆ ಪ್ರೀತಿ ಕಳೆದು ಹೋಗುವ ಸಂಭವವಿರುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ತನ್ನ ಪ್ರೀತಿಯನ್ನು ಪ್ರೀತಿಸುವ ವ್ಯಕ್ತಿ ಮುಂದೆ ತೋರ್ಪಡಿಸಬೇಕು. ಈ ಪ್ರೀತಿಯನ್ನು ನಾನಾ ರೀತಿಯಲ್ಲಿ ಹೇಳಬಹುದು. ಮಾತಿನ ಮೂಲಕ, ಮುತ್ತಿನ ಮೂಲಕ, ಉಡುಗೊರೆ ಮೂಲಕ, ಪತ್ರದ ಮೂಲಕ ಹಾಗೆಯೇ ಚಾಕೋಲೇಟ್ ಮೂಲಕವೂ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಬಹುದು. ಚಾಕೋಲೇಟ್ ತಿನ್ನದ ವ್ಯಕ್ತಿಗಳಿಲ್ಲ. ಮಕ್ಕಳಿಂದ ಹಿಡಿದು ವೃದ್ಧರಾದಿಯಾಗಿ ಎಲ್ಲರಿಗೂ ಚಾಕೋಲೇಟ್ ಇಷ್ಟವಾಗುತ್ತದೆ. ಊಟವಾದ್ಮೇಲೆ ಒಂದ್ಚೂರು ಸಿಹಿ ಬೇಕು ಎನ್ನಿಸಿದಾಗ ಕೈ ಹೋಗೋದು ಚಾಕೋಲೇಟ್ ಬಳಿ.
ಪ್ರೀತಿ (Love) ಗಳಿಗಾಗಿಯೇ ವ್ಯಾಲೆಂಟೈನ್ (Valentine) ವೀಕ್ ನಡೆಯುತ್ತದೆ. ಅದ್ರಲ್ಲಿ ಚಾಕೋಲೇಟ್ (Chocolate) ಗಾಗಿಯೇ ಒಂದು ದಿನವನ್ನು ಮೀಸಲಿಡಲಾಗಿದೆ. ಫೆಬ್ರವರಿ 9ರಂದು ಚಾಕೋಲೇಟ್ ದಿನವನ್ನು ಆಚರಿಸಲಾಗುತ್ತದೆ. ನೀವೆಲ್ಲ ಈಗಾಗ್ಲೇ ಪ್ರೀತಿಪಾತ್ರರಿಗೆ ಒಂದಿಷ್ಟು ಚಾಕೋಲೇಟ್ ಹಂಚಿರ್ತೀರಾ. ಯಾವುದೇ ಸಿಹಿ ಈ ಚಾಕೋಲೇಟ್ ಸ್ಥಾನ ಪಡೆಯಲು ಸಾಧ್ಯವಿಲ್ಲ. ಕಹಿಯಿಂದ ಶುರುವಾದ ಈ ದಿನ ಸಿಹಿಯ ಚಾಕೋಲೇಟ್ ಆಗಿ ಬದಲಾಗಿದ್ದು ಹೇಗೆ ಎಂಬುದನ್ನು ನಾವಿಂದು ಹೇಳ್ತೆವೆ. ವ್ಯಾಲೆಂಟೈನ್ ಡೇ, ವ್ಯಾಲೆಂಟೈನ್ ವೀಕ್ ಎಲ್ಲವೂ ಈಗ ಶುರುವಾಗಿದ್ದಲ್ಲ. ಅದಕ್ಕೆ ಇತಿಹಾಸವಿದೆ. ಹಾಗೆಯೇ ಚಾಕೋಲೇಟ್ ದಿನಕ್ಕೂ ಇತಿಹಾಸವಿದೆ. ಹಿಂದೆ ಈ ದಿನದಂದು ಕಹಿಯಾದ ಚೀಸ್ ಸೇವನೆ ಮಾಡ್ತಿದ್ದರಂತೆ. 16ನೇ ಶತಮಾನದವರೆಗೂ ಚಾಕೋಲೇಟ್ ಕಹಿಯಾಗಿಯೇ ಇರ್ತಾಯಿತ್ತು. ಈಗ್ಲೂ ಬ್ಲಾಕ್ ಚಾಕೋಲೇಟ್ ಸ್ವಲ್ಪ ಕಹಿಯಿರುತ್ತೆ. ನಂತರದ ದಿನಗಳಲ್ಲಿ ಚಾಕೋಲೇಟ್ ಸ್ವಾದ ಬದಲಾಯ್ತು.
ಚಾಕೋಲೇಟ್ ಪದದ ಅರ್ಥ : ಚಾಕೋಲೇಟ್ ಪದವು ಮಾಯನ್ ಮತ್ತು ಅಜ್ಟೆಕ್ ನಾಗರಿಕತೆಗಳಿಂದ ಬಂದಿದೆ. ಅಜ್ಟೆಕ್ ಭಾಷೆಯಲ್ಲಿ ಚಾಕೊಲೇಟ್ ಎಂದರೆ ಹುಳಿ ಅಥವಾ ಕಹಿ ಎಂದರ್ಥ.
Valentine's day 2023: ಈ 4 ರಾಶಿಯವರು ಪ್ರೀತಿ ಪಡೆಯಲು ಯಾವ ಮಟ್ಟಕ್ಕಾದರೂ ಹೋಗಬಲ್ಲರು!
ಚಾಕೋಲೇಟ್ ರುಚಿ ಬದಲಾಗಿದ್ದು ಹೇಗೆ? : ಚಾಕೋಲೇಟ್ ಇತಿಹಾಸ 4000 ವರ್ಷಗಳಷ್ಟು ಹಿಂದಿನದು ಎನ್ನಲಾಗುತ್ತದೆ. ವರದಿಯೊಂದರ ಪ್ರಕಾರ, 1519ರಲ್ಲಿ ಮೆಕ್ಸಿಕೋದಲ್ಲಿ ಸ್ಪ್ಯಾನಿಷ್ ಪರಿಶೋಧಕ ಹೆರ್ನಾನ್ ಕಾರ್ಟೆಸ್‌ಗೆ ಕುಡಿಯಲು ಚಾಕೊಲೇಟ್ ನೀಡಲಾಗಿತ್ತಂತೆ. ಅದನ್ನು ಆತ ಸ್ಪೇನ್ ಗೆ ತೆಗೆದುಕೊಂಡು ಹೋಗಿದ್ದನಂತೆ. ನಂತ್ರ ಈ ಚಾಕೋಲೇಟ್ ಸ್ವಾದ ಹೆಚ್ಚಿಸಲು ಅದಕ್ಕೆ ವೆನಿಲ್ಲಾ, ಸಕ್ಕರೆ ಮತ್ತು ದಾಲ್ಚಿನ್ನಿ ಸೇರಿಸಿದನಂತೆ. ಇದಾದ ನಂತ್ರ ಚಾಕೋಲೇಟ್ ರುಚಿ ನಿಧಾನವಾಗಿ ಬದಲಾಗ್ತಾ ಹೋಯ್ತು. 1555ರ ಜುಲೈ 7ರಂದು ಯುರೋಪ್ ನಲ್ಲಿ ಮೊದಲ ಬಾರಿ ಚಾಕೋಲೇಟ್ ಡೇ ಆಚರಣೆ ಮಾಡಲಾಯ್ತು. ಇದಾದ ನಂತ್ರ ವಿಶ್ವದ ಅನೇಕ ದೇಶಗಳಲ್ಲಿ ಚಾಕೋಲೇಟ್ ಡೇ ಆಚರಣೆ ಶುರುವಾಯ್ತು. ಚಾಕೋಲೇಟ್ ರುಚಿ ಹೆಚ್ಚಾದಂತೆ ಎಲ್ಲ ದೇಶಗಳು ಚಾಕೋಲೇಟ್ ಡೇ ಆಚರಣೆ ಶುರು ಮಾಡಿದ್ವು.
ಚಾಕೋಲೇಟ್ ದೊಡ್ಡ ಕಂಪನಿ ಶುರುವಾಗಿದ್ದು ಯಾವಾಗ? : 19 ಮತ್ತು 20ನೇ ಶತಮಾನದಲ್ಲಿ ಚಾಕೋಲೇಟ್ ತಯಾರಿಸಲು ದೊಡ್ಡ ಕಂಪನಿಗಳು ತಲೆ ಎತ್ತಿದವು. ಕ್ಯಾಡ್ಬರಿ 1868 ರಲ್ಲಿ ಇಂಗ್ಲೆಂಡ್ನಲ್ಲಿ ಪ್ರಾರಂಭವಾಯಿತು. 25 ವರ್ಷಗಳ ನಂತರ, ಚಿಕಾಗೋದಲ್ಲಿ ನಡೆದ ವರ್ಲ್ಡ್ಸ್ ಕೊಲಂಬಿಯನ್ ಎಕ್ಸ್ ಪೊಸಿಷನ್‌ನಲ್ಲಿ, ಚಾಕೊಲೇಟ್ ಸಂಸ್ಕರಣಾ ಸಾಧನವನ್ನು ಮಿಲ್ಟನ್ ಎಸ್ ಖರೀದಿಸಿದ್ರು. ಈಗ ವಿಶ್ವದ ಅತಿದೊಡ್ಡ ಮತ್ತು ವಿಶ್ವ ಪ್ರಸಿದ್ಧ ಚಾಕೊಲೇಟ್ ಸೃಷ್ಟಿಕರ್ತರಲ್ಲಿ ಒಬ್ಬರಾಗಿದ್ದಾರೆ. ಕಂಪನಿಯು ಚಾಕೊಲೇಟ್ ಲೇಪಿತ ಕ್ಯಾರಮೆಲ್‌ಗಳನ್ನು ಉತ್ಪಾದಿಸುವ ಮೂಲಕ ಉತ್ಪಾದನೆ ಪ್ರಾರಂಭಿಸಿತ್ತು. ನೆಸ್ಲೆ 1860 ರ ದಶಕದಲ್ಲಿ ಪ್ರಾರಂಭವಾಯಿತು. ಈಗ ವಿಶ್ವದ ಅತಿದೊಡ್ಡ ಆಹಾರ ತಯಾರಿಕಾ ಕಂಪನಿಯಲ್ಲಿ ಒಂದಾಗಿದೆ.
Chocolate Day: ಚಾಕೊಲೇಟ್ ಡೇ ವಿಶೇಷತೆಯೇನು ? ಹೆಚ್ಚು ಚಾಕೊಲೇಟ್ ತಿಂದ್ರೆ ಏನಾಗುತ್ತೆ ?
ವ್ಯಾಲಂಟೈನ್ ವೀಕ್ ನಲ್ಲಿ ಚಾಕೋಲೇಟ್ ಡೇ ಮಾತ್ರ ಸ್ವಾದಕ್ಕೆ ಸಂಬಂಧಿಸಿದೆ. ಸಂಗಾತಿ ಜೊತೆ ಖುಷಿಯನ್ನು ಹಂಚಿಕೊಳ್ಳಲು ಈ ಚಾಕೋಲೇಟ್ ಡೇ ಆಚರಣೆ ಮಾಡಲಾಗುತ್ತದೆ. ಕೋಕೋ ಬೀನ್ಸ್ ಚಾಕೊಲೇಟ್ ತಯಾರಿಕೆಯ ಪ್ರಾಥಮಿಕ ಪದಾರ್ಥಗಳಲ್ಲಿ ಒಂದು.