ತೆಳ್ಳಗಾಗಲು, ದಪ್ಪಗಾಗಲು, ಚೆಂದವಾಗಲು, ಆರೋಗ್ಯಕ್ಕಾಗಿ ಎಂದು ನಾವು ಈ ಭೂಮಿ ಮೇಲೆ ಸಿಗುವ ಯಾವುದನ್ನೂ ಬಿಡುವುದಿಲ್ಲ ಎಂಬುದಕ್ಕೆ ಇದು ಮತ್ತೊಂದು ಹೊಸ ಉದಾಹರಣೆ. ಬ್ರೊಕೋಲಿ ಲಟ್ಟೆ ಆಯಿತು, ಅಣಬೆಯ ಕಾಫಿಯೂ ಆಯಿತು, ಇದೀಗ ಹೊಸದಾಗಿ ತೂಕ ಇಳಿಸೋದಾಗಿ ಹೇಳಿ ಟ್ರೆಂಡ್ ಆಗುತ್ತಿರುವುದು ಕ್ಲೋರೋಫಿಲ್ ವಾಟರ್.
ಶಾಲೆಯಲ್ಲಿದ್ದಾಗ ಸಾಮಾನ್ಯವಾಗಿ ಪ್ರತಿ ವಿಜ್ಞಾನ ಪರೀಕ್ಷೆಯಲ್ಲಿ ಬರುತ್ತಿದ್ದ ಪ್ರಶ್ನೆ, ಸಸ್ಯಗಳು ಹಸಿರು ಬಣ್ಣದಲ್ಲಿರಲು ಕಾರಣವೇನು? ಅದಕ್ಕೆ ಯಾವಾಗಲೂ ಅಂಕ ತಂದುಕೊಡುತ್ತಿದ್ದ ಸಿಂಪಲ್ ಉತ್ತರ ಪತ್ರಹರಿತ್ತು. ಈ ಪತ್ರಹರಿತ್ತು ಮೇಲೆ ಡಯಟಿಶಿಯನ್‌ಗಳ ಕಣ್ಣು ಹರಿದಿದೆ. ಆರೋಗ್ಯ ಮತ್ತು ತೂಕ ಇಳಿಕೆಯ ಹೊಸ ಮಂತ್ರವಾಗಿ ಕ್ಲೋರೋಫಿಲ್ (ಪತ್ರಹರಿತ್ತು) ವಾಟರ್ ಗಮನ ಸೆಳೆಯುತ್ತಿದೆ.
ತೂಕ ಇಳಿಸಲು ಕೊತ್ತಂಬರಿಯಂಥ ಸೊಪ್ಪಿದು...!
ಈ ಕ್ಲೋರೋಫಿಲ್ ವಾಟರ್‌ನಿಂದ ಆರೋಗ್ಯ ಪ್ಲಸ್ ಪ್ಲಸ್ ಪ್ಲಸ್, ತೂಕ ಮೈನಸ್ ಎನ್ನುತ್ತಿದ್ದಾರೆ ಡಯಟ್ ಸ್ಪೆಶಲಿಸ್ಟ್ಸ್. ಈ ಗ್ರಹದ ಹಸಿರಿನ ಮೂಲ, ಇಂದು ಸಪ್ಲಿಮೆಂಟ್ ರೂಪದಲ್ಲಿ ಜನಪ್ರಿಯವಾಗುತ್ತಿದೆ. ಈ ಸಪ್ಲಿಮೆಂಟ್‌ಗಳು ಮಾತ್ರೆ, ಆಯಿಂಟ್‌ಮೆಂಟ್, ಸ್ಪ್ರೇ ಹಾಗೂ ಲಿಕ್ವಿಡ್ ರೂಪದಲ್ಲಿ ಸಿಗುತ್ತವೆ. ಆದರೆ, ನಾವು ಸೊಪ್ಪುಸದೆಗಳ ರೂಪದಲ್ಲಿ ಸೇವಿಸುವುದೂ ಕ್ಲೋರೋಫಿಲ್ಲನ್ನೇ ಅಲ್ಲವೇ?
ಏನಿದು ಕ್ಲೋರೋಫಿಲ್?
ಸಸ್ಯಗಳು ಫೋಟೋಸಿಂಥೆಸಿಸ್ ಮೂಲಕ ಆಹಾರ ತಯಾರಿಸಿಕೊಳ್ಳುತ್ತವೆ ಎಂಬುದು ಎಲ್ಲರಿಗೂ ಗೊತ್ತು. ಹೀಗೆ ತಯಾರಿಸುವಾಗ ಸೂರ್ಯನ ಬೆಳಕನ್ನು ಹೀರಿಕೊಂಡು, ಅದರಿಂದ ಆಹಾರ ತಯಾರಿಸಿ ಎನರ್ಜಿ ಗಳಿಸುತ್ತವೆ. ಹಾಗೆ ಸೂರ್ಯನ ಬೆಳಕನ್ನು ಹೀರಲು ನೆರವಾಗುವುದೇ ಕ್ಲೋರೋಫಿಲ್.
ಬೇಕೆಂದಷ್ಟು ತಿಂದೂ ತೂಕ ಇಳಿಸುವ ಆಸೆಯೇ? ಹಾಗಿದ್ರೆ ಈ ಡಯಟ್ ಮಾಡಿ
ಕ್ಲೋರೋಫಿಲ್ ವಾಟರ್
ಈ ಜ್ಯೂಸ್‌ನ ಮುಖ್ಯ ವಸ್ತು ಕ್ಲೋರೋಫಿಲಿನ್. ಕ್ಲೋರೋಫಿಲ್‌ನಿಂದ ಪಡೆದ ಉಪ್ಪುಗಳ ಮಿಕ್ಸ್‌ಚರ್ ಇದು. ಕಾಪರ್ ಹೊಂದಿರುತ್ತದೆ. ಇದು ನೀರಿನಲ್ಲಿ ಕರಗುವ ಸಪ್ಲಿಮೆಂಟ್ ಆಗಿದ್ದು, ಮೈಕ್ರೋನ್ಯೂಟ್ರಿಯೆಂಟ್ಸ್ ಹಾಗೂ ಆ್ಯಂಟಿಆಕ್ಸಿಡೆಂಟ್ಸ್‌ಗಳ ಕಣಜ ಎನ್ನಲಾಗುತ್ತಿದೆ. ಕ್ಲೋರೋಫಿಲ್ ಬೆರೆಸಿದ ಆಹಾರಕ್ಕಿಂತ ಕ್ಲೋರೋಫಿಲ್ ವಾಟರ್ ಹೆಚ್ಚು ಬೇಗ ಫಲಿತಾಂಶ ನೀಡುತ್ತದೆ. ಜಗತ್ತಿನ ಹಲವು ಜ್ಯೂಸ್ ಬಾರ್‌ಗಳಲ್ಲಿ ಇದು ಈಗಾಗಲೇ ಹಾಟ್ ಟ್ರೆಂಡ್ ಆಗಿದೆ.
ತೂಕ ಇಳಿಕೆ
ಕ್ಲೋರೋಫಿಲ್ ವಾಟರನ್ನು ಪ್ರತಿ ದಿನ ಸೇವಿಸುವುದರಿಂದ ಬೇಗ ತೂಕ ಇಳಿಯುವುದಲ್ಲದೆ ಜಂಕ್ ಆಹಾರ ತಿನ್ನುವ ಆಸೆ ಕೂಡಾ ಇಳಿಯುತ್ತದಂತೆ. ಅಷ್ಟೇ ಅಲ್ಲ, ದೇಹದಲ್ಲಿ ಕೆಟ್ಟ ಕೊಲೆಸ್ಟೆರಾಲ್ ಮಟ್ಟ ಕೂಡಾ ಕಡಿಮೆಯಾಗುತ್ತದೆ ಎನ್ನಲಾಗುತ್ತಿದೆ.
ಚರ್ಮ ಕಾಯಿಲೆಗಳಿಗೆ ಬೈಬೈ
ತಜ್ಞರ ಪ್ರಕಾರ, ಪ್ರತಿದಿನ ಕ್ಲೋರೋಫಿಲ್ ನೀರನ್ನು ಕುಡಿಯುವುದರಿಂದ ಚರ್ಮದ ಉರಿ, ತುರಿಕೆ, ಅಲರ್ಜಿಗಳನ್ನು ತಡೆಯಬಹುದು. ಇದರ ಆ್ಯಂಟಿ ಇನ್ಫ್ಲಮೇಟರ್ ಹಾಗೂ ಆ್ಯಂಟಿ ಬ್ಯಾಕ್ಟೀರಿಯಲ್ ಗುಣ ಚರ್ಮ ಸಮಸ್ಯೆ ಇರುವವರಿಗೆ ಔಷಧದಂತೆ ಕೆಲಸ ಮಾಡುತ್ತದೆ.
ತೂಕ ಇಳಿಸಿಕೊಳ್ಳೋದು ಕಷ್ಟ ಎನ್ನೋರಿಗೆ ಇಲ್ಲಿವೆ ಟಿಪ್ಸ್...
ಕೆಂಪು ರಕ್ತಕಣಗಳ ಹೆಚ್ಚಳ
2004ರಲ್ಲಿ ಪ್ರಕಟವಾದ ಅಧ್ಯಯನವು, ಶೇಖಡಾ ಸುಮಾರು 70ರಷ್ಟು ಕ್ಲೋರೋಫಿಲ್ ತುಂಬಿದ ವೀಟ್‌ಗ್ರಾಸ್‌ನಂಥ ಆಹಾರವು ದೇಹದಲ್ಲಿ ಕೆಂಪುರಕ್ತಕಣಗಳನ್ನು ಹೆಚ್ಚಿಸುವುದಾಗಿ ತಿಳಿಸಿದೆ.
ಡಿಟಾಕ್ಸ್ ಡ್ರಿಂಕ್
ಪ್ರತಿ ಬೆಳಗ್ಗೆ ಎದ್ದ ಕೂಡಲೇ ಕ್ಲೋರೋಫಿಲ್ ವಾಟರ್ ಕುಡಿಯುವುದರಿಂದ ದೇಹದಲ್ಲಿರುವ ಕಲ್ಮಶಗಳು, ವಿಷಪದಾರ್ಥಗಳು ಹೊರ ಹೋಗುವುದಲ್ಲದೆ, ದೇಹದಿಂದ ಮೆಟಲ್‌ನ್ನು ಕೂಡಾ ಹೊರ ಹಾಕುವ ಶಕ್ತಿಯಿದೆ ಎಂದು ಹೇಳಲಾಗುತ್ತದೆ. ಇದರಲ್ಲಿ ಹೇರಳವಾಗಿರುವ ಮೆಗ್ನೀಶಿಯಂ ಪರಿಣಾಮಕಾರಿ ಕ್ಲೆನ್ಸರ್‌ನಂತೆ ಕೆಲಸ ಮಾಡುತ್ತದೆ.
ಟ್ಯೂಮರ್ ನಿಯಂತ್ರಣ
ಲಿಕ್ವಿಡ್ ಕ್ಲೋರೋಫಿಲ್ ಸೇವನೆಯಿಂದ ದೇಹದಲ್ಲಿ ಟ್ಯೂಮರ್ ಬೆಳವಣಿಗೆ ನಿಯಂತ್ರಣಕ್ಕೆ ಬರುತ್ತದೆ ಎಂಬುದನ್ನು ಅಧ್ಯಯನವೊಂದು ದೃಢಪಡಿಸಿದೆ.