
ನಮಗೆ ಇರುವವನು ಒಬ್ಬನೇ ಮಗ. ಹಾಗಾಗಿ ಮೊದಲಿನಿಂದಲೂ ಮುದ್ದು ಮಾಡಿ ಬೆಳೆಸಿದೆವು. ಅವನ ಪ್ರತಿ ಹೆಜ್ಜೆಯನ್ನೂ ಹಿಂದೆ ನಿಂತು ಗಮನಿಸುತ್ತಿದ್ದೆವು. ಈಗ ಅವನು ಬೆಳೆದು ನಿಂತಿದ್ದಾನೆ. ಒಂದು ಹುಡುಗಿಯ ಜೊತೆ ಅವನಿಗೆ ಪ್ರೀತಿಯಾಗಿದೆ ಎಂದು ಒಂದು ವರ್ಷದ ಹಿಂದೆಯೇ ನನಗೆ ಗೊತ್ತಾಯಿತು. ಈಗ ಹದಿನೈದು ದಿನಗಳ ಹಿಂದಷ್ಟೇ ಅವನಿಗೆ ಮತ್ತೊಂದು ಹುಡುಗಿಯ ಜೊತೆಗೂ ಕ್ರಶ್ ಆಗಿದೆ ಎನ್ನಿಸಿತು.
ಸೂಕ್ಷ್ಮವಾಗಿ ಗಮನಿಸಿದಾಗ ಅದು ನಿಜವೂ ಆಗಿತ್ತು. ಇದನ್ನು ನೇರವಾಗಿ ಅವನೊಂದಿಗೆ ಪ್ರಶ್ನೆ ಮಾಡಲು ಆಗುವುದಿಲ್ಲ. ಮಾಡದೆಯೂ ಇರಲಾಗುವುದಿಲ್ಲ. ಅವನು ಮಾಡುತ್ತಿರುವುದು ತಪ್ಪು. ಇದನ್ನು ಅವನಿಗೆ ಹೇಗೆ ಮನದಟ್ಟು ಮಾಡಿಸಲಿ. ಪ್ಲೀಸ್ ಏನಾದರೂ ಸಲಹೆ ಕೊಡಿ ಎಂದು ಕೇಳಿದ್ದ ಗೋಪಾಲಕೃಷ್ಣ, ಬೆಂಗಳೂರು ಅವರ ಪ್ರಶ್ನೆಗೆ ಬಂದ ಉತ್ತರಗಳು ಇಲ್ಲಿವೆ.
ಸಮಸ್ಯೆಯ ಮೂಲ ಅರಿಯಿರಿ
ನಿಮ್ಮ ಮಗನ ಬಗ್ಗೆ ನಿಮಗೆ ಅಪಾರ ಕಾಳಜಿ ಇರುವುದು ಸ್ವಾಗತಾರ್ಹ. ಅದರಿಂದಲೇ ನೀವು ಇಂದು ಹೆಚ್ಚಾಗಿ ತಲೆ ಕೆಡಿಸಿಕೊಂಡಿದ್ದೀರಿ ಅನ್ನಿಸುತ್ತದೆ. ಮಕ್ಕಳು ವಯಸ್ಸಿಗೆ ಬಂದಾಗ ಇದೆಲ್ಲವೂ ಸಹಜ. ಹಾಗಂತ ಸುಮ್ಮನೆ ಬಿಟ್ಟು ನೋಡುತ್ತಾ ಕೂರುವುದೂ ಸರಿಯಲ್ಲ. ನೀವು ಸೂಕ್ಷ್ಮವಾಗಿ ನಿಮ್ಮ ಮಗನ ಜೊತೆಗೆ ಮಾತನಾಡಿ, ಅವನ ಮನಸ್ಸಿನಲ್ಲಿ ಏನಿದೆ ಎನ್ನುವುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿ. ಮೊದಲ ಪೀತಿಯ ಬಗ್ಗೆ ಒಂದು ವರ್ಷದ ಹಿಂದೆಯೇ ಗೊತ್ತಿತ್ತು ಎನ್ನುವುದಾದರೆ ನೀವು ಅದಕ್ಕೆ ಪರೋಕ್ಷ ಸಮ್ಮತಿ ನೀಡಿದ್ದೀರಿ ಎಂದೇ ಅರ್ಥ. ಹಾಗಾಗಿ ಆ ಹುಡುಗಿಯ ಮನಸ್ಥಿತಿಯನ್ನೂ ತಿಳಿದುಕೊಂಡು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿರ್ವಹಿಸಿ.
- ಸೌಜನ್ಯ ಬೆಳಗಾವಿ
ಸಲುಗೆ ಉಳ್ಳವರಿಂದ ಅರಿವು ಮೂಡಿಸಿ
ನಿಮ್ಮ ಮಗನ ಜೊತೆಗೆ ಹೇಗೆ ಮಾತನಾಡಲಿ, ಅವನ ತಪ್ಪನ್ನು ಅವನಿಗೆ ಹೇಗೆ ತಿಳಿಸಲಿ ಎಂದು ಚಿಂತಿಸುವುದು ಬೇಡ. ಏಕಾಂತದ ಸ್ಥಳದಲ್ಲಿ ಒಮ್ಮೆ ನೇರವಾಗಿ ಅವನೊಂದಿಗೆ ಮಾತನಾಡಿ. ಅದಕ್ಕೂ ಮೊದಲು ಅವನ ಹತ್ತಿರದ ಸ್ನೇಹಿತರು, ಹಳೆಯ ಗೆಳತಿ, ಹೊಸ ಗೆಳತಿಯ ಬಗ್ಗೆಯೂ ಸ್ವಲ್ಪ ಗಮನ ಹರಿಸಿ. ಸಾಧ್ಯವಾದರೆ ಒಮ್ಮೆ ಮಾತನಾಡಿ. ಆಗ ವಾಸ್ತವ ಸ್ವಲ್ಪ ಅರಿವಾಗುತ್ತದೆ. ಮಗ ಮಾಡುತ್ತಿರುವುದು ತಪ್ಪು ಎಂದು ಗೊತ್ತಿದೆ. ಆದರೆ ಅದನ್ನು ನೇರವಾಗಿ ಅವನ ಮೇಲೆ ಆರೋಪಿಸಬೇಡಿ. ನಯವಾಗಿ ಮಾತನಾಡಿ ಸಮಸ್ಯೆ ಪರಿಹರಿಸಿಕೊಳ್ಳಿ. ಅಥವಾ ಅವನು ಯಾರೊಂದಿಗೆ ಹೆಚ್ಚು ಸಲುಗೆಯಿಂದ ಇದ್ದಾನೋ ಅವರಿಂದಲೇ ಮಾತನಾಡಿಸುವ ಪ್ರಯತ್ನ ಮಾಡಿ.
- ಸುರೇಂದ್ರನಾಥ್ ಮಂಗಳೂರು
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.