
ಕೆಲವೊಮ್ಮೆ ತೀರಾ ಸಣ್ಣ ವಿಷಯಗಳೂ ಸಹ ವ್ಯಕ್ತಿಯೊಬ್ಬರ ಜೀವನದಲ್ಲಿ ಊಹಿಸಲಾಗದ ದೊಡ್ಡ ಬದಲಾವಣೆಯನ್ನು ತಂದು ಕೊಡುತ್ತದೆ. ಅಮೆರಿಕದ ಇಂಡಿಯಾನಾ ವಿಶ್ವವಿದ್ಯಾಲಯದ ಮಾಜಿ ಫುಟ್‌ಬಾಲ್ ಆಟಗಾರ ಸ್ಯಾಂಪ್ಸನ್ ಜೇಮ್ಸ್ (Sampson James) ಅವರ ಜೀವನದಲ್ಲಿ ಕೂಡ ಇದೇ ರೀತಿ ನಡೆದಿದೆ. ಸುಮಾರು ಎಂಟು ತಿಂಗಳಿನಿಂದ ನಿರಾಶ್ರಿತರಾಗಿ ಟೆಕ್ಸಾಸ್‌ನ ಆಸ್ಟಿನ್ ಬೀದಿಗಳಲ್ಲಿ ವಾಸಿಸುತ್ತಿದ್ದ ಈ ಮಾಜಿ ಕ್ರೀಡಾಪಟುವಿಗೆ, ಕೇವಲ ಒಂದು ಬ್ಯಾಗ್ ಅವರ ಕತ್ತಲೆಯಾಗಿದ್ದ ಜೀವನದಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ.
ಅಂದು ಆಸ್ಟಿನ್ ನಗರದ ರಸ್ತೆಯಲ್ಲಿ ಸಾಗುತ್ತಿದ್ದ ಇತ್ತೀಚೆಗಷ್ಟೇ ಇಂಡಿಯಾನಾ ವಿಶ್ವವಿದ್ಯಾಲಯದಿಂದ ಪದವಿ ಪಡೆದ ಜಾಸ್ಪರ್ ಸ್ಟೈನ್ಮೆಟ್ಜ್ (Jasper Steinmetz), ನಿರಾಶ್ರಿತ ವ್ಯಕ್ತಿಯೊಬ್ಬನ ಬಳಿ ಇದ್ದ ಕೆಂಪು ಬಣ್ಣದ ಐಯು ಅಥ್ಲೆಟಿಕ್ ಬ್ಯಾಗ್ ಅನ್ನು ನೋಡಿದರು. ತಮ್ಮದೇ ವಿಶ್ವವಿದ್ಯಾಲಯದ ಲೋಗೋ ಹೊಂದಿದ್ದ ಆ ಬ್ಯಾಗ್ ನೋಡಿ ಕುತೂಹಲಗೊಂಡ ಜಾಸ್ಪರ್, ಆ ವ್ಯಕ್ತಿಯನ್ನು ಮಾತನಾಡಿಸಲು ಮುಂದಾದರು.
ಅವರ ಮಾತುಕತೆ ವೇಳೆ ಜಾಸ್ಪರ್ ಅವರಿಗೆ ಶಾಕಿಂಗ್ ಸತ್ಯವೊಂದು ಗೊತ್ತಾಯ್ತು. ತಮ್ಮೆದುರು ನಿಂತಿದ್ದ ಆ ನಿರಾಶ್ರಿತ ವ್ಯಕ್ತಿ ಬೇರಾರೂ ಅಲ್ಲ, ಒಂದು ಕಾಲದಲ್ಲಿ ಇಂಡಿಯಾನಾ ಫುಟ್‌ಬಾಲ್ ತಂಡದ ಅಪ್ರತಿಮ ಆಟಗಾರನಾಗಿದ್ದ ಸ್ಯಾಂಪ್ಸನ್ ಜೇಮ್ಸ್ ಎಂಬುದು ಅವರಿಗೆ ತಿಳಿಯಿತು.
ಇಂಡಿಯಾನಾದ ಏವನ್ ಹೈಸ್ಕೂಲ್‌ನಿಂದ 'ಫೋರ್-ಸ್ಟಾರ್' ಆಟಗಾರನಾಗಿ ಹೊರಹೊಮ್ಮಿದ್ದ ಜೇಮ್ಸ್, 2019 ರಲ್ಲಿ ದೊಡ್ಡ ಕನಸುಗಳೊಂದಿಗೆ ಇಂಡಿಯಾನಾ ವಿಶ್ವವಿದ್ಯಾಲಯದ ಫುಟ್‌ಬಾಲ್ ತಂಡವನ್ನು 'ರನ್ನಿಂಗ್ ಬ್ಯಾಕ್' ಆಗಿ ಸೇರಿಕೊಂಡಿದ್ದರು. ಆದರೆ, ಕ್ರೀಡಾ ಜೀವನದ ಉತ್ತುಂಗದಲ್ಲಿದ್ದಾಗಲೇ ಅವರಿಗೆ ಎದುರಾದ ತೀವ್ರ ಸ್ವರೂಪದ ಮೊಣಕಾಲು ಗಾಯ ಅವರ ವೃತ್ತಿಜೀವನಕ್ಕೆ ಕಂಟಕವಾಯಿತು.
ಇದರ ಬೆನ್ನಲ್ಲೇ ಅವರಿಗೆ 'ಬೈಪೋಲಾರ್ ಡಿಸಾರ್ಡರ್' (Bipolar Disorder) ಎಂಬ ಮಾನಸಿಕ ಆರೋಗ್ಯ ಸಮಸ್ಯೆ ಇರುವುದು ತಿಳಿದುಬಂತು. ದೈಹಿಕ ಹಾಗೂ ಮಾನಸಿಕ ಸವಾಲುಗಳನ್ನು ತಡೆಯಲಾಗದೆ ಜೇಮ್ಸ್ 2023 ರಲ್ಲಿ ಶಿಕ್ಷಣವನ್ನು ಅರ್ಧಕ್ಕೇ ಮೊಟಕುಗೊಳಿಸುವ ಅನಿವಾರ್ಯತೆ ಎದುರಾಯ್ತು. ಮಾತ್ರವಲ್ಲ ಅವನ ಸಹೋದರ ಅವನನ್ನು ಹೂಸ್ಟನ್‌ನಲ್ಲಿನಲ್ಲಿರುವ ಮನೆಯಿಂದ ಹೊರ ಹಾಕಿದ. ಆತನ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಕೆಲಸವೂ ಹೋಯ್ತು. ಆಶ್ರಯವಿಲ್ಲದೆ, ಕ್ರೀಡಾ ಕನಸುಗಳೆಲ್ಲ ನುಚ್ಚುನೂರಾಗಿ ಅಂತಿಮವಾಗಿ ಆಸ್ಟಿನ್ ಬೀದಿಗಳಲ್ಲಿ ನಿರಾಶ್ರಿತರಾಗಿ ಬಿಕ್ಷೆ ಬೇಡಲು ಆರಂಭಿಸಿದ್ದರು. ಎಲ್ಲವನ್ನು ಕಳೆದುಕೊಂಡ ಅವರ ಜೊತೆ ಉಳಿದಿದ್ದು ಆ ಕೆಂಪು ಬ್ಯಾಗ್ ಮಾತ್ರ.
ಜೇಮ್ಸ್ ಅವರ ದುರಂತ ಕಥೆಯನ್ನು ತಿಳಿದ ಜಾಸ್ಪರ್ ಸ್ಟೈನ್ಮೆಟ್ಜ್ ಸುಮ್ಮನೆ ಕುಳಿತುಕೊಳ್ಳಲಿಲ್ಲ. ತಮ್ಮ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗೆ ಸಹಾಯ ಮಾಡಲು ಆನ್‌ಲೈನ್‌ನಲ್ಲಿ ನಿಧಿಸಂಗ್ರಹಣೆ ಅಭಿಯಾನವನ್ನು ಪ್ರಾರಂಭಿಸಿದರು. ಕ್ರೀಡಾಭಿಮಾನಿಗಳು ಹಾಗೂ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ದೊರೆತು, ಕೆಲವೇ ದಿನಗಳಲ್ಲಿ ಸುಮಾರು ಅಂದಾಜು ₹14 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹವಾಯಿತು. ಸಂಗ್ರಹವಾದ ಹಣದಿಂದ ಜಾಸ್ಪರ್ ಅವರು ಜೇಮ್ಸ್‌ಗೆ ಹೊಸ ಅಪಾರ್ಟ್‌ಮೆಂಟ್ ಬಾಡಿಗೆಗೆ ಕೊಡಿಸಿ, ಮನೆಗೆ ಅಗತ್ಯವಿದ್ದ ಎಲ್ಲಾ ವಸ್ತುಗಳನ್ನು ಖರೀದಿಸಿಕೊಟ್ಟರು. ಅವನಿಗೆ ವಾಸಿಸಲು ಒಂದು ಸ್ಥಳ ಮಾತ್ರವಲ್ಲ ಉದ್ಯೋಗ ಸಿಗುವಂತೆ ನಾವು ಸಹಾಯ ಮಾಡಲಿದ್ದೇವೆ. ಆತ ಈಗ ಚೆನ್ನಾಗಿದ್ದಾನೆ. ಪದವಿ ಇದೆ. ಅವನು ಯಾವುದೇ ದುರಾಭ್ಯಾಸಗಳನ್ನು ಕೂಡ ಹೊಂದಿಲ್ಲ ಎಂದು ಜಾಸ್ಪರ್ ತಮ್ಮ ವಿಡಿಯೋದಲ್ಲಿ ಹೇಳಿದ್ದಾರೆ. ಜೊತೆಗೆ ಜೇಮ್ಸ್ ಬಾಡಿಗೆ ಮನೆಯನ್ನು ನೋಡಿ ಅತ್ಯಂತ ಖುಷಿ ಪಟ್ಟಿದ್ದಾರೆ.
ವರ್ಷಗಳ ಕಾಲ ನಿರಾಶ್ರಿತರಾಗಿ ಭವಿಷ್ಯವೇ ಇಲ್ಲದೆ ಬಳಲುತ್ತಿದ್ದ ಸ್ಯಾಂಪ್ಸನ್ ಜೇಮ್ಸ್‌ಗೆ ಈಗ ಸ್ವಂತ ಮನೆಯಿದೆ, ಅವರನ್ನು ಪ್ರೀತಿಸುವ ಮತ್ತು ಬೆಂಬಲಿಸುವ ಜನರಿದ್ದಾರೆ. ನನ್ನ ಮೇಲೆ ನಂಬಿಕೆಯಿಟ್ಟು ಸಹಾಯ ಮಾಡಿದ ಜನರನ್ನು ನಾನು ಎಂದಿಗೂ ನಿರಾಸೆಗೊಳಿಸುವುದಿಲ್ಲ ಎಂದು ಜೇಮ್ಸ್ ಭರವಸೆಯಿಂದ ಹೇಳುತ್ತಾರೆ. ಒಂದು ಸಣ್ಣ ಬೆನ್ನಿನ ಬ್ಯಾಗ್‌ನಿಂದ ಆರಂಭವಾದ ಈ ಆಕಸ್ಮಿಕ ಸಂಭಾಷಣೆ, ಕತ್ತಲಲ್ಲಿ ಕಳೆದುಹೋಗಿದ್ದ ಜೀವನಕ್ಕೀಗ ಎರಡನೇ ಅವಕಾಶವನ್ನು ನೀಡಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.