ಅಡುಗೆ ಮನೆಯೊಳಗೆ ಹೊಕ್ಕು ಅಲ್ಲಿರುವ ಡಬ್ಬಗಳನ್ನೆಲ್ಲ ತೆರೆದು ನೋಡಿ. ಮೆಣಸಿನ ಪುಡಿ, ಖಾರದ ಪುಡಿಯಂಥವುಗಳನ್ನು ಬಿಟ್ಟು ಉಳಿದ ಹೆಚ್ಚಿನವೆಲ್ಲ ನಿಮ್ಮ ಚೆಂದ ಹೆಚ್ಚಿಸಬಲ್ಲವು.
ಹುಡುಗಿಯರಿಗೆ:
- ಕೊತ್ತಂಬರಿ ಬೀಜ
ಮೇಕಪ್ ತೆಗೆಯಲು ಬಳಸುವ ಕ್ಲೆನ್ಸಿಂಗ್‌ಗಿಂತ ಇದು ಹೆಚ್ಚು ಪರಿಣಾಮಕಾರಿ. ಒಂದು ಸ್ಪೂನ್ ಕೊತ್ತಂಬರಿ ಕಾಳನ್ನು ತೊಳೆದು ರಾತ್ರಿ ಸ್ವಲ್ಪ ನೀರಲ್ಲಿ ನೆನೆಹಾಕಿ. ಬೆಳಗ್ಗೆ ಆ ನೀರಲ್ಲಿ ಮುಖ ತೊಳೆಯಿರಿ. ಆಮೇಲೆ ಮುಖ ಒರೆಸದೇ ಹಾಗೇ ಆರಲು ಬಿಡಿ. ಅರ್ಧ ಗಂಟೆ ಬಿಟ್ಟು ಮುಖ ತೊಳೆಯಿರಿ. ಮುಖಕ್ಕೆ ಗ್ಲೋ ಬರುತ್ತೆ.
ಅರಿಶಿನ
ವಯಸ್ಸಾದ್ರೂ ಆದಂಗೆ ಕಾಣಬಾರ್ದು ಅಂತಿರೋರು ಹಸಿ ಅರಶಿನದ ಕೋಡನ್ನು ತೇಯ್ದು ಜೇನಿನ ಜೊತೆಗೆ ಬೆರೆಸಿ ಮುಖಕ್ಕೆ ಹಚ್ಚಿ. ಬಂಗಾರದ ಹೊಳಪಿನ ಕಲೆಮುಕ್ತ ಚೆಂದದ ಮುಖ ನಿಮ್ಮದಾಗುತ್ತೆ. ಇದರಲ್ಲಿ ಆ್ಯಂಟಿ ಏಜಿಂಗ್, ಆ್ಯಂಟಿ ಬಯಾಟಿಕ್ ಮತ್ತು ಆ್ಯಂಟಿಸೆಫ್ಟಿಕ್ ಈ ಮೂರು ಗುಣಗಳಿವೆ.
ಕಾಳು ಮೆಣಸು
ಟೀನೇಜ್ ಹುಡುಗೀರ ಸಮಸ್ಯೆ ಮೊಡವೆ. ಕೆಲವರಿಗೆ ಕೊನೆವರೆಗೂ ಇರುತ್ತೆ. ಕಾಳುಮೆಣಸಿನ ಪೌಡರ್‌ಗೆ ಸ್ವಲ್ಪ ಮೊಸರು ಮಿಕ್ಸ್ ಮಾಡಿ ಮೊಡವೆ, ಕಲೆ ಇರುವ ಕಡೆ ಹಚ್ಚಿ. ಬಹಳ ಬೇಗ ರಿಸಲ್ಟ್ ಬರುತ್ತೆ. ಕಾಳು ಮೆಣಸು ಖಾರ ಅಲ್ವಾ, ಉರಿಯಬಹುದು ಅನ್ನುವ ಚಿಂತೆ ಬೇಡ. ಇದರ ರುಚಿಯಷ್ಟೇ ಖಾರ, ಗುಣ ತಂಪು. ಶುಂಠಿಯ ಪೇಸ್ಟ್ ಹಚ್ಚಿದರೂ ಕಲೆ ಮಾಯವಾಗುತ್ತೆ.
ಮೇಯನೇಸ್
ಇದು ಕೋಲ್ಡ್ ಸಾಸ್. ನೀವಿದನ್ನು ಮನೆಯಲ್ಲೂ ತಯಾರಿಸಬಹುದು. ಮೊಟ್ಟೆ, ಎಣ್ಣೆ, ನಿಂಬೆರಸ ಇತ್ಯಾದಿಗಳನ್ನು ಒಂದು ಬೌಲ್‌ಗೆ ಹಾಕಿ ನಿಧಾನಕ್ಕೆ ತಿರುವುತ್ತ ಬಂದರೆ ಮೇಯನೇಸ್ ರೆಡಿಯಾಗುತ್ತೆ. ಇದನ್ನು ಕೂದಲಿಗೆ ಮಾಸ್ಕ್‌ನಂತೆ ಹಾಕಿ, 1 ಗಂಟೆ ಬಿಟ್ಟು ತಲೆಸ್ನಾನ ಮಾಡಿ. ಇದು ಕಂಡೀಶನರ್‌ನಂತೆ ಕೆಲಸ ಮಾಡುತ್ತೆ.
ಹುಡುಗರಿಗೆ
ಓಟ್‌ಮೀಲ್, ಜೇನುತುಪ್ಪ, ನಿಂಬೆರಸ/ ಹಾಲು
ಹುಡುಗ್ರು ಮುಖಾನೂ ಸರಿಯಾಗಿ ತೊಳೆಯಲ್ಲ, ಶುದ್ಧ ಸೋಂಬೇರಿಗಳು ಎಂಬ ಕಂಪ್ಲೇಂಟ್ಸ್ ಇದೆ. ಸಂಜೆ ಆಫೀಸ್‌ನಿಂದ ಬಂದ ಮೇಲೊಮ್ಮೆ, ಮಲಗೋ ಮುಂಚೆ ಮತ್ತೊಮ್ಮೆ ಚೆನ್ನಾಗಿ ಮುಖ ತೊಳೆಯಿರಿ. ಆಯ್ಲೀ ಪೇಸ್ ಇರುವವರು ಓಟ್‌ಮೀಲ್, ಜೇನುತುಪ್ಪ, ನಿಂಬೆರಸ ಮಿಕ್ಸ್ ಮಾಡಿ ಅದನ್ನು ಮುಖಕ್ಕೆ ಹಚ್ಚಿ ಮೃದುವಾಗಿ ವೃತ್ತಾಕಾರದಲ್ಲಿ ಮಸಾಜ್ ಮಾಡಿ. ನಂತರ ಮುಖ ತೊಳೆಯಿರಿ. ಎಣ್ಣೆಗಟ್ಟಿದ ಮುಖ ಕ್ಲೀನ್ ಆಗುತ್ತೆ. ಡ್ರೈಸ್ಕಿನ್ ಇರುವವರು ಹತ್ತಿಯನ್ನು ಹಾಲಲ್ಲಿ ಅದ್ದಿ ಮುಖಕ್ಕೆ ಹಚ್ಕೊಳ್ಳಿ. ೨೦ ನಿಮಿಷ ಬಿಟ್ಟು ತೊಳೆಯಿರಿ.
ಗ್ರೀನ್ ಟೀ/ಎಳನೀರು
ಹತ್ತಿಯನ್ನು ಗ್ರೀನ್ ಟೀಯಲ್ಲದ್ದಿ ಮುಖಕ್ಕೆ ಹಚ್ಕೊಳ್ಳಿ. ವಾಶ್ ಮಾಡದೇ, ಒರೆಸದೇ ಹಾಗೇ ಬಿಡಿ. ಸ್ವಲ್ಪ ಹೊತ್ತಿಗೇ ಆ ಫ್ರೆಶ್‌ನೆಸ್ ನಿಮ್ಮರಿವಿಗೆ ಬರುತ್ತೆ. ದಿನಕ್ಕೊಮ್ಮೆ ಈ ರೀತಿ ಮಾಡುತ್ತಿದ್ದರೆ ಮುಖದ ಗ್ಲೋ ಹೆಚ್ಚುತ್ತೆ. ಡ್ರೈ ಸ್ಕಿನ್ ಇರುವವರಿಗೆ ಸುಲಭದ ಪರಿಹಾರ ಒಂದಿದೆ. ಎಳನೀರಿನಲ್ಲಿ ದಿನಕ್ಕೆರಡು ಬಾರಿ ಮುಖ ತೊಳೆಯೋದು. ಅಮ್ಮ ಅಡುಗೆಗೆ ಬಳಸೋ ಕಾಯಿನೀರಾದ್ರೂ ಓ.ಕೆ ಮುಖದ ಗ್ಲೋ ಹೆಚ್ಚುತ್ತೆ.
ಶುಂಠಿ ಅಥವಾ ಈರುಳ್ಳಿ ಅಥವಾ ಬೆಳ್ಳುಳ್ಳಿ ರಸ
ಕೂದಲಿಗೆ ಸಮಸ್ಯೆ ಇರಲಿ ಇಲ್ಲದಿರಲಿ, ನನ್ ಕೂದ್ಲು ಸಖತ್ತಾಗಿ ಕಾಣ್ಬೇಕು ಅನ್ನುವವರು ಶುಂಠಿ ರಸ ಅಥವಾ ಈರುಳ್ಳಿ ರಸ ಅಥವಾ ಬೆಳ್ಳುಳ್ಳಿ ರಸ ತಲೆಬರುಡೆಗೆ ಹಚ್ಚಿ ಮಲಗಿ. ಕೂದಲು ಉದುರೋದು, ನೆತ್ತಿ ಕೂದಲುದುರಿ ಬೋಳಾಗೋದು ಇತ್ಯಾದಿ ಸಮಸ್ಯೆ ಇರಲ್ಲ. ಗ್ರೀನ್ ಟೀಯನ್ನು ತಲೆ ಬುರುಡೆಗೆ ಹಚ್ಚಿ ಮಲಗೋದೂ ಉತ್ತಮ. ಆದಷ್ಟು ತಣ್ಣೀರಲ್ಲಿ ಸ್ನಾನ ಮಾಡಿ.