ಚಳಿಯಿಂದ ತಪ್ಪಿಸಿಕೊಳ್ಳಲು ಮನೆಗೆ ನುಗ್ಗುವ 2 ಹಾವುಗಳಿವು.. ಈ 4 ಜಾಗದಲ್ಲಿ ಪಕ್ಕಾ ಇರುತ್ತವೆ ಹುಷಾರ್!

Published : Nov 14, 2026, 11:52 AM IST
Snake hiding spots in winter

ಸಾರಾಂಶ

Snake hiding spots in winter: ಚಳಿಗಾಲ ಶುರುವಾಗ್ತಿದ್ದಂತೆ ಬೆಚ್ಚಗಿನ ಜಾಗ ಹುಡುಕಿಕೊಂಡು ಈ ಹಾವುಗಳು ನೇರವಾಗಿ ಮನೆಗಳಿಗೇ ನುಗ್ಗುತ್ತವೆ! ಮನೆಯ ಯಾವ 4 ಜಾಗಗಳಲ್ಲಿ ಇವು ಸೈಲೆಂಟ್ ಆಗಿ ಅಡಗಿ ಕೂರುತ್ತವೆ ಮತ್ತು ಇವುಗಳಿಂದ ಬಚಾವಾಗೋದು ಹೇಗೆ? ತಪ್ಪದೇ ಈ ಮಾಹಿತಿ ತಿಳಿದುಕೊಳ್ಳಿ.

ಸಾಮಾನ್ಯವಾಗಿ ಚಳಿಗಾಲದಲ್ಲಿ ಹಾವುಗಳು ಕಾಣಿಸುವುದಿಲ್ಲ, ಅವು ಚಳಿಯ ನಿದ್ರೆಗೆ (ಹೈಬರ್ನೇಶನ್) ಜಾರುತ್ತವೆ ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಆದರೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ ಸುಮಾರು 1.20 ಲಕ್ಷಕ್ಕೂ ಹೆಚ್ಚು ಜನರಿಗೆ ಹಾವು ಕಚ್ಚುತ್ತಿದ್ದು, ಇದರಲ್ಲಿ 50 ರಿಂದ 60 ಸಾವಿರ ಜನರು ಸಾವನ್ನಪ್ಪುತ್ತಿದ್ದಾರೆ. ಚಳಿಗಾಲದಲ್ಲೂ ಹಾವು ಕಡಿತದ ಪ್ರಮಾಣ ಕಡಿಮೆಯಾಗಿಲ್ಲ!

ಶೀತಲ ರಕ್ತದ ಪ್ರಾಣಿಗಳಾದ ಹಾವುಗಳು, ಚಳಿಯಿಂದ ತಪ್ಪಿಸಿಕೊಳ್ಳಲು ಬೆಚ್ಚಗಿನ ಸ್ಥಳಗಳನ್ನು ಹುಡುಕಿಕೊಂಡು ಜನರ ಮನೆ ಅಥವಾ ಮನೆಯ ಆವರಣಕ್ಕೆ ನುಸುಳುತ್ತವೆ. ಮುಖ್ಯವಾಗಿ ಭಾರತದಲ್ಲಿ ಅತಿ ಹೆಚ್ಚು ಸಾವುಗಳಿಗೆ ಕಾರಣವಾಗುವ 2 ಅತ್ಯಂತ ವಿಷಕಾರಿ ಹಾವುಗಳು ಚಳಿಗಾಲದಲ್ಲಿ ಮನೆಯ ಯಾವ ಮೂಲೆಗಳಲ್ಲಿ ಅವಿತುಕೊಳ್ಳುತ್ತವೆ? ಅವುಗಳಿಂದ ಪಾರಾಗುವುದು ಹೇಗೆ? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಚಳಿಗಾಲದಲ್ಲಿ ಮನೆಗೆ ನುಗ್ಗುವ ಆ 2 ಅಪಾಯಕಾರಿ ಹಾವುಗಳು

ಕಪ್ಪು ನಾಗರಹಾವು (Spectacled Cobra) 
ಭಾರತದಲ್ಲಿ ಅತಿ ಹೆಚ್ಚು ಹಾವು ಕಡಿತದ ಸಾವುಗಳಿಗೆ ನಾಗರಹಾವೇ ಕಾರಣ. ಚಳಿಗಾಲದಲ್ಲಿ ಇಲಿಗಳ ಬಿಲ ಸಿಗದಿದ್ದಾಗ, ಇದು ಬೆಚ್ಚಗಿನ ವಾತಾವರಣ ಹುಡುಕಿಕೊಂಡು ಮನೆಗಳ ಮೂಲೆ ಸೇರುತ್ತದೆ.

ಕಟ್ಟುಹಾವು (Common Krait) 
ಇದು ಭಾರತದ ಅತ್ಯಂತ ಅಪಾಯಕಾರಿ ವಿಷಕಾರಿ ಹಾವು. ಇದು ಸಾಮಾನ್ಯವಾಗಿ ರಾತ್ರಿ ವೇಳೆ ಸದ್ದಿಲ್ಲದೆ ದಾಳಿ ಮಾಡುತ್ತದೆ. ನಿರ್ಜನ ಪ್ರದೇಶ, ಹಳೆಯ ಕಟ್ಟಡ ಅಥವಾ ಪಾಳುಬಿದ್ದ ಜಾಗಗಳಲ್ಲಿ ಇದು ಹೆಚ್ಚಾಗಿ ನೆಲೆ ಕಂಡುಕೊಳ್ಳುತ್ತದೆ.

ಚಳಿಗಾಲದಲ್ಲಿ ಈ ಹಾವುಗಳು ಅವಿತುಕೊಳ್ಳುವ ಮನೆಯ 4 ಪ್ರಮುಖ ಸ್ಥಳಗಳು

1. ಛಾವಣಿ (ಟೆರೇಸ್) ಮೇಲಿರುವ ಹಳೆಯ ವಸ್ತುಗಳ ರಾಶಿ
ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಮನೆಯ ಛಾವಣಿ ಅಥವಾ ಅಟ್ಟದ ಮೇಲೆ ಹಳೆಯ ಪ್ಲಾಸ್ಟಿಕ್, ರದ್ದಿ ಪೇಪರ್, ಹಳೆಯ ಬಟ್ಟೆ ಅಥವಾ ಮರದ ಸಾಮಾನುಗಳನ್ನು ರಾಶಿ ಹಾಕಿರುತ್ತಾರೆ. ಈ ಜಾಗದಲ್ಲಿ ಜನ ಸಂಚಾರ ಕಡಿಮೆ ಇರುವುದರಿಂದ ಮತ್ತು ಅಲ್ಲಿ ಹೆಚ್ಚು ಬೆಚ್ಚಗಿರುವುದರಿಂದ ನಾಗರಹಾವು ಹಾಗೂ ಕಟ್ಟುಹಾವುಗಳು ಇಲ್ಲಿ ಸುಲಭವಾಗಿ ಗೂಡು ಕಟ್ಟಿಕೊಳ್ಳುತ್ತವೆ.

2. ಸೌದೆ ಮತ್ತು ಒಣ ಬೆರಣಿಗಳ ರಾಶಿ
ಮನೆಯ ಹಿತ್ತಲಿನಲ್ಲಿ ಅಥವಾ ಅಡುಗೆಮನೆಯ ಪಕ್ಕದಲ್ಲಿ ಒಟ್ಟಲಾಗಿ ಇಡುವ ಒಣ ಸೌದೆ ಹಾಗೂ ಬೆರಣಿಯ ರಾಶಿಯು ಹಾವುಗಳಿಗೆ ಹೇಳಿಮಾಡಿಸಿದ ಸ್ಥಳ. ಇಲ್ಲಿ ಹಾವುಗಳಿಗೆ ಬೆಚ್ಚಗಿನ ಆಶ್ರಯ ಸಿಗುವುದಷ್ಟೇ ಅಲ್ಲದೆ, ಅವುಗಳ ಆಹಾರವಾದ ಕೀಟಗಳು, ಜಿರಳೆ ಹಾಗೂ ಇಲಿಗಳು ಸುಲಭವಾಗಿ ಸಿಗುತ್ತವೆ.

3. ಇಟ್ಟಿಗೆ, ಸಿಮೆಂಟ್ ಬ್ಲಾಕ್ ಹಾಗೂ ಕಲ್ಲುಗಳ ರಾಶಿ
ಮನೆ ನಿರ್ಮಾಣದ ನಂತರ ಉಳಿದ ಇಟ್ಟಿಗೆ ಅಥವಾ ಕಲ್ಲುಗಳನ್ನು ತಿಂಗಳುಗಟ್ಟಲೆ ಹಾಗೆಯೇ ಬಿಟ್ಟಿರುತ್ತಾರೆ. ಇಟ್ಟಿಗೆಗಳ ಸಂದಿಗಳಲ್ಲಿ ಚಳಿಗಾಲದಲ್ಲಿ ಅತ್ಯಂತ ಹಿತವಾದ ಬೆಚ್ಚಗಿನ ವಾತಾವರಣವಿರುತ್ತದೆ. ಹಾವುಗಳು ಯಾವುದೇ ಸದ್ದಿಲ್ಲದೆ ಈ ಬಿರುಕುಗಳಲ್ಲಿ ವಾಸವಾಗಿರುತ್ತವೆ.

4. ಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಸುತ್ತಮುತ್ತ
ನೀರು ಹರಿದುಹೋಗುವ ಚರಂಡಿಯ ಮೂಲೆಗಳು, ಹಳೆಯ ಪೈಪ್‌ಗಳು ಹಾಗೂ ಸೆಪ್ಟಿಕ್ ಟ್ಯಾಂಕ್ ಬಳಿಯ ಜಾಗಗಳಲ್ಲಿ ತೇವಾಂಶ ಮತ್ತು ಆಂತರಿಕ ಶಾಖವಿರುತ್ತದೆ. ಜನ ಸಂಚಾರ ವಿರಳವಾಗಿರುವ ಇಂತಹ ಸ್ಥಳಗಳಲ್ಲಿ ಇಲಿ ಮತ್ತು ಕಪ್ಪೆಗಳನ್ನು ಬೇಟೆಯಾಡಲು ಹಾವುಗಳು ಅವಿತುಕೊಂಡಿರುತ್ತವೆ.

ನೀವು ವಹಿಸಬೇಕಾದ ಮುನ್ನೆಚ್ಚರಿಕೆಗಳು

ರಾಶಿ ಹಾಕಬೇಡಿ: ಮನೆಯ ಛಾವಣಿ, ಅಂಗಳ ಅಥವಾ ಮನೆಯ ಒಳಗಡೆ ಯಾವುದೇ ಕಾರಣಕ್ಕೂ ಹಳೆಯ ವಸ್ತುಗಳು, ಮುರಿದ ಪೀಠೋಪಕರಣಗಳ ರಾಶಿ ಹಾಕಬೇಡಿ.

ಸೌದೆ ಮುಟ್ಟುವಾಗ ಎಚ್ಚರ: ಉರುವಲು ಸೌದೆಯನ್ನು ನೆಲದ ಮೇಲೆ ರಾಶಿ ಹಾಕುವ ಬದಲು ನೆಲದಿಂದ ಕೊಂಚ ಎತ್ತರದಲ್ಲಿರಿಸಿ. ಸೌದೆ ತೆಗೆಯುವಾಗ ಟಾರ್ಚ್ ಬಳಸಿ ಮತ್ತು ಕೋಲಿನಿಂದ ಬಡಿದು ಪರೀಕ್ಷಿಸಿ.

ಕಲ್ಲು-ಇಟ್ಟಿಗೆಗಳ ಸ್ವಚ್ಛತೆ: ಮನೆಯ ಪಕ್ಕದಲ್ಲಿ ಇಟ್ಟಿಗೆ-ಕಲ್ಲುಗಳು ಬಿದ್ದಿದ್ದರೆ ಕೂಡಲೇ ತೆರವುಗೊಳಿಸಿ ಅಥವಾ ಆ ಜಾಗವನ್ನು ಸ್ವಚ್ಛವಾಗಿಡಿ.

ಲೈಟ್ ಬಳಸಿ: ರಾತ್ರಿ ವೇಳೆ ಮನೆಯ ಸುತ್ತಮುತ್ತ, ಹಿತ್ತಲಿಗೆ ಅಥವಾ ಬಾತ್‌ರೂಮ್‌ಗೆ ಹೋಗುವಾಗ ಕತ್ತಲಲ್ಲಿ ನಡೆಯದೆ ಟಾರ್ಚ್ ಲೈಟ್ ಕಡ್ಡಾಯವಾಗಿ ಬಳಸಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಫ್ರಿಡ್ಜ್‌ನಲ್ಲಿ ಪೇಪರ್ ರೋಲ್ ಇರಿಸೋ ಸೂಪರ್ ಟ್ರಿಕ್ಸ್; ಕಠಿಣ ಕೆಲಸ ಈಗ ತುಂಬಾ ಸರಳ
Bigg Boss ಇತಿಹಾಸದಲ್ಲೇ ಮೊದಲು! ದೊಡ್ಮನೆಯಲ್ಲಿಯೇ ಸ್ಪರ್ಧಿಗಳ ಎಂಗೇಜ್​ಮೆಂಟ್​ - ಜೋಡಿಗಳ ಮಿಲನ