ಸಂಕ್ರಾಂತಿಯಂದು ಗಾಳಿಪಟ ಹಾರಿಸದಿದ್ರೆ ಹಬ್ಬದ ಆಚರಣೆ ಪೂರ್ಣಗೊಳ್ಳುವುದಾದರೂ ಹೇಗೆ? ಇದು ಮಕ್ಕಳಾಟವಾಗಿ ಕಂಡರೂ ಇದರಿಂದ ಆರೋಗ್ಯಕ್ಕಾಗುವ ಲಾಭಗಳ ಬಗ್ಗೆ ತಿಳಿದರೆ, ನೀವು ಪ್ರತಿದಿನ ಗಾಳಿಪಟ ಹಿಡಿದು ಹಾರಿಸುತ್ತೀರಿ ಅಷ್ಟೆ.
ಮಕರ ಸಂಕ್ರಾಂತಿ ಎಂದ ತಕ್ಷಣ ನೆನಪಿಗೆ ಬರುವುದು ಎಳ್ಳು-ಬೆಲ್ಲ. ಈ ಹಬ್ಬ ಅನೇಕ ವಿಶೇಷತೆ, ಆಚರಣೆಗಳನ್ನೊಳಗೊಂಡಿದೆ. ಅಂಥ ಆಚರಣೆಗಳಲ್ಲಿ ಬೆಳಗ್ಗಿನ ಎಳೆ ಬಿಸಿಲಿನಲ್ಲಿ ಮಕ್ಕಳು, ದೊಡ್ಡವರು ಎಂಬ ಬೇಧ ಭಾವವಿಲ್ಲದೆ ಎಲ್ಲರೂ ಸೇರಿ ಗಾಳಿಪಟ ಹಾರಿಸುವುದು ಕೂಡ ಒಂದು. ವಸಂತ ಕಾಲದ ಆಗಮನವನ್ನು ಸಾರುವ ಮಕರ ಸಂಕ್ರಾಂತಿ ರೈತರಿಗೆ ಹೊಸ ಬೆಳೆಯ ಸಂತಸವನ್ನು ಹೊತ್ತು ತರುವ ಹಬ್ಬ. ಈ ದಿನದಂದು ಗಾಳಿಪಟ ಹಾರಿಸುವುದು ಅನಾದಿ ಕಾಲದಿಂದಲೂ ನಡೆದು ಬಂದ ಸಂಪ್ರದಾಯವಾಗಿದ್ದರೂ ಅದರ ಹಿಂದೆ ವೈಜ್ಞಾನಿಕ ಕಾರಣವೂ ಅಡಗಿದೆ. ನಿಮಗೆಲ್ಲ ತಿಳಿದಿರುವಂತೆ ಸೂರ್ಯನ ಎಳೆ ಬಿಸಿಲಿನಲ್ಲಿ ವಿಟಮಿನ್ ಡಿ ಹೇರಳವಾಗಿರುತ್ತದೆ. ಗಾಳಿಪಟ ಹಾರಿಸುವುದರಿಂದ ದೇಹಕ್ಕೆ ವಿಟಮಿನ್ ಡಿ ಅಗತ್ಯ ಪ್ರಮಾಣದಲ್ಲಿ ದೊರೆಯುತ್ತದೆ. ಚಳಿಗಾಳಿಯಿಂದ ಉಂಟಾಗುವ ಸೋಂಕು ಹಾಗೂ ಕಾಯಿಲೆಗಳ ವಿರುದ್ಧ ಹೋರಾಡಲು ವಿಟಮಿನ್ ಡಿ ಶಕ್ತಿ ಒದಗಿಸುವ ಜೊತೆಗೆ ಚಳಿಗಾಲದಲ್ಲಿ ಕಾಡುವ ಅನೇಕ ಚರ್ಮ ಸಮಸ್ಯೆಗಳನ್ನುದೂರವಾಗಿಸುತ್ತದೆ.
ಇದು ಮಕ್ಕಳಾಟವಲ್ಲ, ಕೊಬ್ಬು ಕರಗಿಸುವ ವರ್ಕ್ ಔಟ್
ಗಾಳಿಪಟದಲ್ಲಿ ಅಡಗಿದೆ ಆರೋಗ್ಯದ ಗುಟ್ಟು: ಗಾಳಿಪಟವನ್ನು ಮಕ್ಕಳಾಟವೆಂದು ತಳ್ಳಿಹಾಕುವಂತಿಲ್ಲ. ಈ ಆಟದಿಂದ ಆರೋಗ್ಯಕ್ಕೆ ಎಷ್ಟೊಂದು ಪ್ರಯೋಜನಗಳಿವೆ ಗೊತ್ತಾ?
1.ಒಳ್ಳೆಯ ವ್ಯಾಯಾಮ: ಗಾಳಿಪಟ ಹಾರಿಸುವುದರಿಂದ ದೇಹಕ್ಕೆ ಉತ್ತಮ ವ್ಯಾಯಾಮ ಸಿಗುತ್ತದೆ. ಅದರಲ್ಲೂ ತೋಳಿನ ಭಾಗಕ್ಕೆ ಹೆಚ್ಚಿನ ವ್ಯಾಯಾಮ ಸಿಗುತ್ತದೆ. ಗಾಳಿಪಟವನ್ನು ಎತ್ತರಕ್ಕೆ ಹಾರಿಸಿಕೊಂಡು ಹೋಗುವ ಕೆಲಸವನ್ನು ಗಾಳಿ ಮಾಡಿದರೂ ನೀವು ಕೆಳಗಿನಿಂದ ಆ ಕಡೆ ಈ ಕಡೆ ಓಡುತ್ತ ಈ ಆಟಕ್ಕೆ ಜೋಶ್ ತುಂಬಬಹುದು. ಇದರಿಂದ ನಿಮ್ಮ ಹೃದಯ ಬಡಿತದ ವೇಗ ಹೆಚ್ಚುವ ಜೊತೆಗೆ ಬೆವರೂ ಸುರಿಯುತ್ತದೆ. ಪರಿಣಾಮ ದೇಹದಲ್ಲಿನ
ಕೊಬ್ಬು ಕರಗುತ್ತದೆ.
2.ಖಿನ್ನತೆ, ಉದ್ವೇಗ ತಗ್ಗುತ್ತದೆ: ಗಾಳಿಪಟ ಹಾರಿಸುವಾಗ ನಿಮ್ಮ ಗಮನವೆಲ್ಲ ಅದರೆಡೆಗೇ ಇರುತ್ತದೆ. ಸುತ್ತಲಿನ ಆಗುಹೋಗುಗಳ ಬಗ್ಗೆ ನೀವು ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಜೊತೆಗೆ ಮನಸ್ಸಿನಲ್ಲಿ ಆ ಕ್ಷಣಕ್ಕೆ ಬೇರೆ ಯಾವುದೇ ಯೋಚನೆಗಳು ಸುಳಿಯುವುದಿಲ್ಲ. ಇದರಿಂದ ಮನಸ್ಸಿನಲ್ಲಿರುವ ಆತಂಕಗಳೆಲ್ಲವೂ ದೂರವಾಗಿ ನಿರಾಳತೆ ಒದಗುತ್ತದೆ. ಪರಿಣಾಮ ಸಹಜವಾಗಿಯೇ ನಿಮ್ಮ ಮನಸ್ಸಿನಲ್ಲಿ ಮನೆ ಮಾಡಿದ್ದ ಉದ್ವೇಗ, ಖಿನ್ನತೆ ತಗ್ಗುತ್ತದೆ.
3.ಕಣ್ಣಿನ ಆರೋಗ್ಯಕ್ಕೂ ಉತ್ತಮ: ನೀಲಿ ಆಕಾಶದಲ್ಲಿ ತೇಲುತ್ತಿರುವ ಗಾಳಿಪಟವನ್ನು ದಿಟ್ಟಿಸುವುದರಿಂದ ಕಣ್ಣಿನ ಸ್ನಾಯು ಹಾಗೂ ನರಗಳಿಗೆ ವ್ಯಾಯಾಮ ಸಿಗುತ್ತದೆ. ಇದರಿಂದ ಕಣ್ಣಿನ ಆಯಾಸ ತಗ್ಗುವ ಜೊತೆಗೆ ಸಮೀಪ ದೃಷ್ಟಿದೋಷ ಕಾಡದಂತೆ ತಡೆಯಲು ನೆರವಾಗುತ್ತದೆ.
4.ಕುತ್ತಿಗೆ ನೋವು ಮಂಗಮಾಯ: ಗಾಳಿಪಟ ಹಾರಿಸುವಾಗ ನಾವು ಕುತ್ತಿಗೆಯನ್ನು ಮೇಲಕ್ಕೆತ್ತಿ ನೋಡುತ್ತೇವೆ. ಇದರಿಂದ ಕುತ್ತಿಗೆ ಮತ್ತು ಅದರ ಸುತ್ತಮುತ್ತಲಿನ ಸ್ನಾಯುಗಳಿಗೆ ವ್ಯಾಯಾಮ ಸಿಗುವ ಜೊತೆಗೆ ಅವುಗಳ ಮೇಲಿನ ಒತ್ತಡ ತಗ್ಗುತ್ತದೆ. ದಿನವಿಡೀ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವವರಿಗೆ ಕುತ್ತಿಗೆ ಸಂಬಂಧಿ ಕಾಯಿಲೆಗಳು ಬಾಧಿಸುವ ಸಾಧ್ಯತೆ ಹೆಚ್ಚಿರುತ್ತದೆ. ಇಂಥವರು ಗಾಳಿಪಟ ಹಾರಿಸುವುದರಿಂದ ಕುತ್ತಿಗೆಯ ಸುತ್ತಲಿನ ಅಸ್ಥಿರಜ್ಜುಗಳು ಹಾಗೂ ಸಂಧಿಗಳಿಗೆ ವ್ಯಾಯಾಮ ಸಿಕ್ಕಿ, ಬಲಗೊಳ್ಳುತ್ತವೆ.
5.ಸೃಜನಶೀಲತೆಗೆ ಉತ್ತೇಜನ: ಗಾಳಿಪಟ ಹಾರಿಸುವುದರಿಂದ ನಮ್ಮೊಳಗಿನ ಸೃಜನಶೀಲತೆಗೆ ಉತ್ತೇಜನ ಸಿಗುತ್ತದೆ. ಗಾಳಿಪಟ ಸಿದ್ಧಪಡಿಸುವಾಗ, ಅದನ್ನು ಹಾರಿಸುವಾಗ ಹಾಗೂ ನಿಯಂತ್ರಿಸುವಾಗ ನಾವು ಸೃಜನಾತ್ಮಕವಾಗಿ ಯೋಚಿಸುವುದರಿಂದ ಮಿದುಳಿನ ಸೃಜನಾತ್ಮಕ ಯೋಚನಾ ಪ್ರದೇಶ ಚುರುಕುಗೊಳ್ಳುತ್ತದೆ.
6.ಒತ್ತಡ ಬಳಿ ಸುಳಿಯದು: ಗಾಳಿಪಟ ಹಾರಿಸುವುದರಿಂದ ದೇಹದಲ್ಲಿ ಹೊಸ ಚೈತನ್ಯ ಮೂಡುತ್ತದೆ. ದೈನಂದಿನ ಬದುಕಿನ ಒತ್ತಡ ಹಾಗೂ ಆತಂಕವನ್ನು ದೂರ ಮಾಡಲು ಇದು ಅತ್ಯುತ್ತಮ ಮಾರ್ಗವೂ ಹೌದು. ಬಾನಂಗಳದಲ್ಲಿ ಹಕ್ಕಿಯಂತೆ ಹಾರುವ ಗಾಳಿಪಟವನ್ನು ಕಣ್ತುಂಬಿಕೊಳ್ಳುತ್ತಿದ್ದರೆ ಮನಸ್ಸು ಕೂಡ ಹಗುರವಾಗಿ ಆಕಾಶದೆತ್ತರಕ್ಕೆ ಜಿಗಿದ ಅನುಭವವಾಗುತ್ತದೆ. ಆ ಕ್ಷಣಕ್ಕೆ ಹಿಂದಿನ ಜಂಜಾಟಗಳು, ನಾಳೆಯ ಡೆಡ್‍ಲೈನ್‍ಗಳು ಯಾವುವೂ ನೆನಪಾಗುವುದಿಲ್ಲ.
7.ನಿಮ್ಮತನದ ಅಭಿವ್ಯಕ್ತಿ: ನಿಮ್ಮೊಳಗಿನ ಕಲಾತ್ಮಕತೆ, ಪ್ರತಿಭೆಯನ್ನು ಅಭಿವ್ಯಕ್ತಿಗೊಳಿಸಲು ಗಾಳಿಪಟ ನೆರವು ನೀಡುತ್ತದೆ. ಗಾಳಿಪಟ ಮಾಡುವಾಗ ನೀವು ರೂಪಿಸುವ ವಿನ್ಯಾಸ, ಬಣ್ಣಗಳು ನಿಮ್ಮ ಆಸಕ್ತಿ, ಇಷ್ಟಗಳನ್ನು ಬಿಂಬಿಸುತ್ತವೆ. ನಿಮ್ಮೊಳಗಿನ ಕಲಾಗಾರನಿಗೆ ಜೀವ ನೀಡಲು ಗಾಳಿಪಟ ನೆರವು ನೀಡುತ್ತದೆ.
8.ಎಲ್ಲರೊಂದಿಗೆ ಬೆರೆಯುವ ಅವಕಾಶ: ಗಾಳಿಪಟವನ್ನು ಗುಂಪಿನಲ್ಲಿ ಹಾರಿಸುವಾಗ ಹಲವು ಜನರು ನಿಮ್ಮ ಸಂಪರ್ಕಕ್ಕೆ ಬರುತ್ತಾರೆ. ಇದರಲ್ಲಿ ನಿಮ್ಮ ಕುಟುಂಬ ಸದಸ್ಯರು, ಆತ್ಮೀಯರೂ ಇರುತ್ತಾರೆ. ಕೆಲವೊಮ್ಮೆ ಅಕ್ಕಪಕ್ಕದ ಮನೆಯವರೂ ನಿಮ್ಮೊಂದಿಗೆ ಸೇರಬಹುದು. ಮನೆಯಿಂದ ದೂರದಲ್ಲಿರುವ ಮೈದಾನಗಳಲ್ಲಿ ಗಾಳಿಪಟ ಹಾರಿಸಲು ಹೋದರೆ ಅಪರಿಚಿತ ವ್ಯಕ್ತಿಗಳು ಕೂಡ ಸಿಗಬಹುದು. ಅವರೆಲ್ಲರೊಂದಿಗೆ ಬೆರೆಯುವ ಅವಕಾಶವೂ ಸಿಗುತ್ತದೆ.
9.ಪ್ರಕೃತಿ ಜೊತೆಗೆ ಕಲೆತರೆ ಮನಸ್ಸು ಹಗುರ: ಮೈದಾನ, ಕಡಲತೀರ, ಬೆಟ್ಟ….ಹೀಗೆ ನೀವು ಪ್ರಕೃತಿಯ ಮಡಿಲಲ್ಲಿ ಗಾಳಿಪಟ ಹಾರಿಸುತ್ತಿದ್ದರೆ ಮನಸ್ಸು ಮಗುವಾಗುತ್ತದೆ. ಪ್ರಕೃತಿಯಲ್ಲಿ ಮನಸ್ಸು ಕಳೆದು ಹೋದಾಗ ಸಹಜವಾಗಿ ಬೇಸರ ದೂರವಾಗುತ್ತದೆ.