ನನಗೆ ನನ್ನ ಮೇಲೆ ನಂಬಿಕೆ ಬರುವ ಹಾಗೆ ಮಾಡಿ ಪ್ಲೀಸ್..

By Suvarna NewsFirst Published Jan 14, 2020, 1:19 PM IST
Highlights

ಜೀವನವೇ ಹಾಗೆ, ಆತ್ಮ ವಿಶ್ವಾಸ ತುಂಬಿ ತುಳುಕುತ್ತಿದ್ದರೆ ಬಿಂದಾಸ್ ಎನಿಸುತ್ತದೆ. ಅದರ ಕೊರತೆ ಕಾಣಿಸಿಕೊಂಡರೆ ಎಲ್ಲವೂ ಟುಸ್ ಆಗುತ್ತೆ. ಅಷ್ಟಕ್ಕೂ ಆತ್ಮ ವಿಶ್ವಾಸ ಕಳೆದುಕೊಂಡವರಿಗೆ ತಜ್ಞರು ಸಾಂತ್ವಾನ ಹೇಳುತ್ತಾರೆ ಹೇಗೆ?

ನಾನು ಸೆಕೆಂಡ್ ಇಯರ್ ಡಿಗ್ರಿ ಓದ್ತಿದ್ದೀನಿ. ನಮ್ಮ ಮನೆಯವರು ಮರ್ಯಾದೆಗೆ ತುಂಬಾ ಬೆಲೆ ಕೊಡುತ್ತಾರೆ. ನಾನು ಒಂಚೂರು ಈ ಕಾಲದ ಡ್ರೆಸ್ ಹಾಕಿದರೆ, ಥೂ, ನೋಡಿದವರು ಏನಂತಾರೆ ಈ ರೀತಿ ಡ್ರೆಸ್ ಮಾಡಿದ್ರೆ ಅಂತ ಬೈತಾರೆ, ಹೀಗೆ ಬೆಳೆದದ್ದಕ್ಕೋ ಏನೋ ನನಗೆ ಯಾವಾಗಲೂ ನನ್ನ ಬಗ್ಗೆ ನಂಬಿಕೆ ಇಲ್ಲ. ಯಾವಾಗ್ಲೂ ಬೇರೆಯವ್ರು ಏನು ಹೇಳ್ತಾರೆ ಅಂತಲೇ ಯೋಚನೆ ಮಾಡುತ್ತಿರುತ್ತೇನೆ. ಫ್ರೆಂಡ್ಸ್ ನಾನು ಹಾಕ್ಕೊಂಡಿರೋ ಡ್ರೆಸ್ ಚೆನ್ನಾಗಿದೆ ಅಂದರೆ ಖುಷಿಯಾಗುತ್ತೆ. ಯಾರಾದರೂ ನನ್ನ ಬಗ್ಗೆ ಕೆಟ್ಟದಾಗಿ ಮಾತಾಡಿದರೆ ನೋವಾಗುತ್ತೆ. ಎಲ್ಲರೆದುರು ಓಡಾಡಲೂ ಮುಜುಗರವಾಗುತ್ತೆ. ಇದೆಲ್ಲದರಿಂದ ಬೇಸತ್ತಿದ್ದೇನೆ. ನಾನ್ಯಾವಾಗ ಗಟ್ಟಿಯಾಗೋದು? ಬೇರೆಯವರ ಮಾತಿಗೆ ಬೆಲೆ ಕೊಡದೇ ನನ್ನದೇ ವ್ಯಕ್ತಿತ್ವ ರೂಪಿಸುವುದು? ನನ್ನ ಬಗ್ಗೆಯೇ ನನಗೆ ಗಿಲ್ಟ್ ಆಗ್ತಿದೆ. ದಯವಿಟ್ಟು ನನಗೆ ನನ್ನ ಮೇಲೆ ನಂಬಿಕೆ ಬರುವ ಹಾಗೆ ಮಾಡಿ, ನನ್ನ ಕೆಲವು ಫ್ರೆಂಡ್ಸ್ ಥರ ನಾನೂ ಕಾನ್ಫಿಡೆಂಟ್ ಆಗಿ ಬದುಕ್ಬೇಕು ಅಂತ ಆಸೆ, ಪ್ಲೀಸ್ ಹೆಲ್ಪ್ ಮಾಡಿ.
- ಕಾವೇರಿ, ಮಡಿಕೇರಿ

ವೀರ್ಯಸ್ಖಲನವಾದ್ರೆ ಸಮಸ್ಯೆ ಇಲ್ಲವೇ?

ಉತ್ತರ: ನೋಡು ಮಗೂ, ಈ ಸಮಸ್ಯೆ ನಿನ್ನ ಒಬ್ಬಳದ್ದೇ ಅಲ್ಲ. ಪ್ರತಿಯೊಬ್ಬರಿಗೂ ಅವ್ರನ್ನು ಹೊಗಳಿದ್ರೆ ಒಳಗೊಳಗೇ ಖುಷಿಯಾಗುತ್ತೆ, ಕೆಲವರು ತೋರಿಸಿಕೊಳ್ತಾರೆ, ಕೆಲವರು ತೋರಿಸಿಕೊಳ್ಳಲ್ಲ ಅಷ್ಟೇ. ಆದರೆ ನಿನ್ನ ಸಮಸ್ಯೆ ಇದಲ್ಲ, ನಿನ್ನ ಮೇಲೆ ಇನ್ನೊಬ್ಬರ ಇನ್‌ಫ್ಲುಯೆನ್ಸ್ ಹೆಚ್ಚು ಅನಿಸುತ್ತೆ. ಅದಕ್ಕೆ ನೀನು ಬೆಳೆದ ವಾತಾವರಣವೂ ಕಾರಣ ಇರಬಹುದು. ಓಶೋ ಒಂದು ಕತೆ ಹೇಳ್ತಾರೆ. ಅದು ಮೇರಿ ಸ್ಟೀವನ್ ಅವರದ್ದು. ಆಕೆ ಒಮ್ಮೆ ತನ್ನ ಸ್ನೇಹಿತೆಯ ಮನೆಗೆ ಹೋಗುತ್ತಾಳೆ. ಸ್ನೇಹಿತೆಗೊಬ್ಬ ಮಗಳಿದ್ದಾಳೆ, ಅವಳಿಗೆ ಕಣ್ಣು ಕಾಣೋದಿಲ್ಲ. ಆದರೆ ಅವಳ ಮಾತು ಕೇಳಿ ಮೇರಿ ಸ್ಟೀವನ್‌ಗೆ ಆಶ್ಚರ್ಯ ಆಗುತ್ತಿತ್ತು. ಅವಳು ಹೇಳುತ್ತಿದ್ದಳು, 'ಅವನು ಚೆಂದ ಇಲ್ಲ. ಇವನ ಡ್ರೆಸ್ ಗಲೀಜಾಗಿದೆ, ಅವಳ್ಯಾಕೆ ಅಷ್ಟು ಕೆಟ್ಟದಾಗಿ ಮುಖ ತಿರುವುತ್ತಾಳೆ..'

'ಇದೆಲ್ಲ ನಿನಗೆ ಹೇಗೆ ಗೊತ್ತಾಗುತ್ತೆ?' ಮೇರಿ ಕೇಳ್ತಾಳೆ. 'ನನ್ನ ಅಕ್ಕಂದಿರು ನನಗೆ ಹೀಗೆ ಹೇಳ್ತಾರೆ' ಅಂತಾಳೆ ಅವಳು. ಇದಕ್ಕೆ 'ಎರವಲು ಜ್ಞಾನ' ಅಂತಾಳೆ ಮೇರಿ. ಅಂದರೆ ನಮ್ಮ ವಿವೇಕವನ್ನು ಉಪಯೋಗಿಸದೇ ಇತರರು ಹೇಳಿದ್ದನ್ನಷ್ಟೇ ಕೇಳಿ ಅದೇ ಸರಿ ಅನ್ನೋದು. ಅವಳಿಗೆ ಕಣ್ಣು ಕಾಣೋದಿಲ್ಲ. ಕಣ್ಣು ಕಾಣೋರ ಅಭಿಪ್ರಾಯವೂ ಇದಕ್ಕಿಂತ ಭಿನ್ನ ಇರೋದಿಲ್ಲ. ಸ್ವಂತ ಯೋಚಿಸೋದು, ಚಿಂತಿಸೋದಕ್ಕಿಂತ ಹೆಚ್ಚು ಸುಲಭ ಈ ಎರವಲು ಜ್ಞಾನ ಪಡೆದು, ಅದರಂತೆ ನಡೆಯೋದು.

ಕುಡಿತಕ್ಕೂ ಇದೆ ಮದ್ದು

ಆದರೆ ನೀನಿನ್ನೂ ಚಿಕ್ಕ ಹುಡುಗಿ. ನಿನ್ನ ಯೋಚನೆಗಳನ್ನು ಪ್ರಜ್ಞಾಪೂರ್ವಕವಾಗಿ ಬದಲಾಯಿಸಲು ಪ್ರಯತ್ನಿಸು, ಪ್ರತಿದಿನವೂ ಧ್ಯಾನ ಮಾಡೋದರಿಂದ ಮನಸ್ಸಿನ ಗೊಂದಲಗಳು ಕಡಿಮೆಯಾಗುತ್ತವೆ, ವಿವೇಕ ಜಾಗೃತವಾಗುತ್ತದೆ. ನಿತ್ಯ ಧ್ಯಾನ ಮಾಡು, ವ್ಯಾಯಾಮ ಮಾಡು, ಆಗ ದೇಹ ನಿನ್ನ ನಿಯಂತ್ರಣಕ್ಕೆ ಬರುತ್ತದೆ. ನನ್ನ ಸಮಸ್ಯೆಗೂ ಇದಕ್ಕೂ ಏನು ಸಂಬಂಧ ಅಂತ ನಿನಗೆ ಅನಿಸಬಹುದು. ಆದರೆ ಮನಸ್ಸು, ದೇಹ ಚುರುಕಾಗಿದ್ದರೆ ಮನಸ್ಸು ಫ್ರೆಶ್ ಆಗುತ್ತೆ. ಆಗ ಸ್ವತಂತ್ರ ಚಿಂತನೆಗಳು ಬರುತ್ತವೆ. ಇದಾದ ಮೇಲೆ ಮೊದಲ ಹಂತ ಇನ್ನೊಬ್ಬರ ಅಭಿಪ್ರಾಯವನ್ನು ಎರಡೆರಡು ಸಲ ನಿನ್ನೊಳಗೇ ಪ್ರಶ್ನಿಸಿಕೋ, ಯೋಚಿಸು, ಕೊನೆಯಲ್ಲಿ ನಿನ್ನ ಮನಸ್ಸು ಹೇಗೆ ಹೇಳುತ್ತದೋ ಹಾಗೆ ಮಾಡು. ಇನ್ನೊಬ್ರು ಚೆನ್ನಾಗಿಲ್ಲ ಅಂದ ನಿನ್ನ ಡ್ರೆಸ್ ಅನ್ನು ನೀನೇ ಒಮ್ಮೆ ಹಾಕಿಕೊಂಡು ಕನ್ನಡಿ ಮುಂದೆ ನಿಂತು ನೋಡಿಕೋ.. ಏನನಿಸುತ್ತೆ? ಪರ್ವಾಗಿಲ್ಲ, ಇದು ಕ್ಯೂಟ್ ಇದೆ ಅನಿಸಿದ್ರೆ ಹಾಕ್ಕೊಂಡು ಹೋಗು. ಇನ್ನೊಬ್ಬರ ಟೀಕೆಗಳನ್ನು ಮೊದಲ ಹಂತದಲ್ಲಿ ನಿರ್ಲಕ್ಷಿಸು. ಕ್ರಮೇಣ ಏನು ಮಾಡಬೇಕು ಅನ್ನೋದು ನಿನಗೇ ಗೊತ್ತಾಗುತ್ತೆ. ಈ ಪೂರ್ವಾಗ್ರಹ ಅಥವಾ ಪ್ರಿಜುಡಿ ಅನ್ನೋದಿದೆಯಲ್ಲಾ, ಅದು ಬಹಳ ಕೆಟ್ಟದ್ದು, ನಿನ್ನ ಯೋಚನೆಯನ್ನು, ಕ್ರಿಯೇಟಿವಿಟಿಯನ್ನೇ ಕಟ್ಟಿ ಹಾಕುತ್ತೆ. ಓದೋ ಹುಡುಗಿ ನೀನು, ಈಗಷ್ಟೇ ಅರಳುತ್ತಿದ್ದೀಯಾ, ನಿನ್ನಲ್ಲಿ ಸ್ವತಂತ್ರಚಿಂತನೆಯ ಬಗೆಗಿನ ಮೊಳಕೆ ಈಗಾಗಲೇ ಚಿಗುರಲು ರೆಡಿಯಾಗಿ ಕೂತಿದೆ. ಆ ಮೊಳಕೆಯನ್ನು ಚಿವುಟದೇ ಬೆಳೆಯಲು ಬಿಡು. ಮುಂದೆ ಮನಸ್ಸು ಸ್ವತಂತ್ರ ಯೋಚನೆಗಳ ಹೆಮ್ಮರವಾಗಲಿ, ಆಲ್ ದಿ ಬೆಸ್ಟ್.

ನಿಮ್ಮ ಸಮಸ್ಯೆಗಳನ್ನು suvarnanewsindia@gmail.com ಗೆ ಬರೆದು ಕಳುಹಿಸಿ. ಎಂಥದ್ದೇ ಸಮಸ್ಯೆಗಳಿಗೂ ತಜ್ಞರು ಉತ್ತರಿಸುತ್ತಾರೆ.
 

click me!